ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ ಪರೀಕ್ಷೆಯ ತಯಾರಿ ಹೇಗೆ? ತಜ್ಞರ ಉತ್ತರ

Last Updated 2 ಜನವರಿ 2023, 0:30 IST
ಅಕ್ಷರ ಗಾತ್ರ

ಕನ್ನಡದಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆಯುವ ನಿಮ್ಮ ಆಲೋಚನೆ ಶ್ಲಾಘನೀಯ. ಕನ್ನಡ ಮಾಧ್ಯಮದಲ್ಲಿ ತರಬೇತಿ ನೀಡುವ ಹಲವಾರು ಕೋಚಿಂಗ್ ಸೆಂಟರ್‌ಗಳಿವೆ; ಯಾವ ಸೆಂಟರ್ ಸೇರಬೇಕೆನ್ನುವ ನಿರ್ಧಾರ ನಿಮ್ಮದು. ಈ ಸಲಹೆಗಳು ನಿಮ್ಮ ಗಮನದಲ್ಲಿರಲಿ:

1. ಸರ್, ನಾನು ಬಿಇ ಪದವಿಯನ್ನು ಮುಗಿಸಿ, ಐಪಿಎಸ್ ಅಧಿಕಾರಿಯಾಗಿ ಸೇವೆ ಮಾಡಬೇಕೆಂದು ಇಚ್ಛಿಸುತ್ತೇನೆ. ಈಗ, ನನಗೆ ಕೆಲಸದ ಅನಿವಾರ್ಯವಿರುವುದರಿಂದ ಯಾವ ಕೆಲಸವನ್ನು ಮಾಡಿದರೆ ಸೂಕ್ತ? ಯುಪಿಎಸ್‌ಸಿ ಪರೀಕ್ಷೆಯ ತಯಾರಿ ಹೇಗೆ?
ಊರು, ಹೆಸರು ತಿಳಿಸಿಲ್ಲ.
2. ನಾನು ಈ ವರ್ಷ ಬಿಕಾಂ ಪದವಿಯನ್ನು ಮುಗಿಸಿದ್ದೇನೆ. ನನಗೆ ಐಪಿಎಸ್ ಅಧಿಕಾರಿಯಾಗುವ ಆಸೆಯಿದೆ. ಕರ್ನಾಟಕದಲ್ಲಿ ಕನ್ನಡ ಮಾಧ್ಯಮದಲ್ಲಿ
ಕೋಚಿಂಗ್ ನೀಡುವ ಸೆಂಟರ್‌ಗಳ ಮಾಹಿತಿಯನ್ನು ತಿಳಿಸುವಿರಾ? ಮತ್ತು ಕನ್ನಡದಲ್ಲಿ ಯುಪಿಎಸ್‌ಸಿ ತಯಾರಿ ಬಗ್ಗೆ ತಿಳಿಸಿ.
ಪ್ರದೀಪ್, ಕೊಪ್ಪಳ.
ಐಪಿಎಸ್ ಅಧಿಕಾರಿಯಾಗಬೇಕೆನ್ನುವ ನಿಮ್ಮ ಆಕಾಂಕ್ಷೆಗೆ ಅಭಿನಂದನೆಗಳು ಮತ್ತು ಶುಭಹಾರೈಕೆಗಳು. ಯುಪಿಎಸ್‌ಸಿ ಆಯೋಜಿಸುವ ಪರೀಕ್ಷೆಯ ಪ್ರಕ್ರಿಯೆಯಲ್ಲಿ ಮೂರು ಹಂತಗಳಿವೆ.
1. ಪೂರ್ವಭಾವಿ (ಬಹು ಆಯ್ಕೆ ಮಾದರಿ-ಇಂಗ್ಲಿಷ್/ಹಿಂದಿ)
2. ಮುಖ್ಯ ಪರೀಕ್ಷೆ (ಕನ್ನಡದಲ್ಲಿ ಬರೆಯಬಹುದು).
3. ಸಂದರ್ಶನ/ವ್ಯಕ್ತಿತ್ವ ಪರೀಕ್ಷೆ (ಕನ್ನಡದಲ್ಲಿ ನೀಡಬಹುದು)
ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು. ಯೂಟ್ಯೂಬಿನಲ್ಲಿ ತಯಾರಿ ಕುರಿತ ಮಾಹಿತಿಯುಳ್ಳ ಉಪಯುಕ್ತ ವಿಡಿಯೋಗಳನ್ನು ವೀಕ್ಷಿಸಿ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಮಗ್ರವಾದ ಮತ್ತು ಆಳವಾದ ಓದುವಿಕೆ, ಏಕಾಗ್ರತೆಯ ಜತೆಗೆ ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ. ಕೆಲಸದ ಅನಿವಾರ್ಯತೆಯಿದ್ದರೆ ಸುಲಭವಾಗಿ ನಿಭಾಯಿಸಬಹುದಾದ ಮತ್ತು ನಿಮ್ಮ ವಿದ್ಯಾರ್ಹತೆಗೆ ಅನುಗುಣವಾದ ವೃತ್ತಿಯನ್ನು ಅರಸಬಹುದು. ಹಾಗೂ, ವೃತ್ತಿಯ ಜೊತೆಗೆ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಮಾಡಬಹುದೇ ಎಂದು ಪರಿಶೀಲಿಸಿ.
ಕನ್ನಡದಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆಯುವ ನಿಮ್ಮ ಆಲೋಚನೆ ಶ್ಲಾಘನೀಯ. ಕನ್ನಡ ಮಾಧ್ಯಮದಲ್ಲಿ ತರಬೇತಿ ನೀಡುವ ಹಲವಾರು ಕೋಚಿಂಗ್ ಸೆಂಟರ್‌ಗಳಿವೆ; ಯಾವ ಸೆಂಟರ್ ಸೇರಬೇಕೆನ್ನುವ ನಿರ್ಧಾರ ನಿಮ್ಮದು. ಈ ಸಲಹೆಗಳು ನಿಮ್ಮ ಗಮನದಲ್ಲಿರಲಿ:
lಅಧ್ಯಯನದ ಮಾಹಿತಿಯನ್ನು (ಸ್ಟಡಿ ಮೆಟೀರಿಯಲ್) ಆದಷ್ಟು ಕನ್ನಡದಲ್ಲಿ ಸಂಗ್ರಹಿಸಿ; ಇಂಗ್ಲಿಷ್ ಮಾಹಿತಿಯಿದ್ದರೆ ಕನ್ನಡಕ್ಕೆ ಅನುವಾದಿಸಿಕೊಂಡು ಓದಬೇಕು.
lವಿಷಯಾನುಸಾರ ಕನ್ನಡದಲ್ಲಿಯೇ ಅಧ್ಯಯನ ಮಾಡಬೇಕು.

lಕನ್ನಡದಲ್ಲಿ ಬರೆಯುವ ವೇಗವನ್ನು ಹೆಚ್ಚಿಸಿಕೊಳ್ಳಿ; ಬರವಣಿಗೆ ಸುಲಭವಾಗಿ ಅರ್ಥವಾಗುವಂತಿರಲಿ.
ಪರಿಣಾಮಕಾರಿ ಓದುವಿಕೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:
https://www.youtube.com/watch?v=3PzmKRaJHmk

3. ನಾನು ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿ. ನನಗೆ ಕೆಎಎಸ್ ಮಾಡುವ ಆಸೆಯಿದೆ. ಆದರೆ, ಎಲ್ಲರೂ ಮೊದಲು ಒಂದು ಕೆಲಸ ನೋಡಿಕೋ; ನಂತರ ಏನಾದರೂ ಮಾಡಬಹುದು ಎನ್ನುತ್ತಿದ್ದಾರೆ. ನಾನು ಈಗಾಗಲೇ ಅಭ್ಯಾಸವನ್ನು ಪ್ರಾರಂಭಿಸಿದ್ದೇನೆ. ನನಗೆ ಮನೆಯವರು ಮದುವೆ ಮಾಡಲು ನಿರ್ಧರಿಸಿದ್ದಾರೆ. ಏನು ಮಾಡಬೇಕು ಎಂದು ನನಗೆ ತಿಳಿಯುತ್ತಿಲ್ಲ ಸಲಹೆ ನೀಡಿ.
ಊರು, ಹೆಸರು ತಿಳಿಸಿಲ್ಲ.

ಬದುಕಿನ ನಿಮ್ಮ ಕನಸುಗಳು, ವೃತ್ತಿಯ ಆಯ್ಕೆ ಮತ್ತು ನಿಮ್ಮ ಸನ್ನದ್ಧತೆಯ ಬಗ್ಗೆ ಮನೆಯವರಿಗೆ ಮನವರಿಕೆ ಮಾಡಿ, ಒಮ್ಮತದ ನಿರ್ಧಾರಕ್ಕೆ ಬರಲು ಪ್ರಯತ್ನಿಸಿ. ಸಾಧನೆಯ ಹಾದಿಯಲ್ಲಿ, ಆಂತರಿಕ ಮತ್ತು ಬಾಹ್ಯ ಪರಿಸರದ ಅಡಚಣೆಗಳು, ತೊಂದರೆಗಳು ಸರ್ವೇಸಾಮಾನ್ಯ. ನಿಮ್ಮ ಕನಸುಗಳು
ಸಾಕಾರವಾಗಬೇಕಾದರೆ, ಸ್ವಯಂಪ್ರೇರಣೆಯೇ ನಿಮ್ಮ ಸಾಧನೆಗೆ ಸಂಜೀವಿನಿಯಾಗಬೇಕು. ಸವಾಲುಗಳನ್ನು ನಿರೀಕ್ಷಿಸಿ, ಮನಸ್ಸು ಸ್ಥಿತಪ್ರಜ್ಞೆಯಿಂದಿದ್ದರೆ ಸೃಜನಶೀಲ ಚಿಂತನೆ ಸಾಧ್ಯವಾಗಿ, ಸಾಧನೆಯ ಹಾದಿ ಸುಗಮವಾಗುತ್ತದೆ. ಹಾಗಾಗಿ, ಇನ್ನೂ ಹೆಚ್ಚಿನ ಏಕಾಗ್ರತೆ, ದೃಢತೆ ಮತ್ತು ಸಮಯದ ನಿರ್ವಹಣೆಯಿಂದ ತಯಾರಾಗಿ, ಕೆಎಎಸ್ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಗಳಿಸಲು ಪ್ರಯತ್ನಿಸಿ. ನಿಮಗೆ ಸಾಧ್ಯವೆನಿಸಿದರೆ, ಕೆಎಎಸ್ ಪರೀಕ್ಷೆಯ ತಯಾರಿಯ ಜೊತೆ ಸೂಕ್ತವಾದ ಅರೆಕಾಲಿಕ/ಪೂರ್ಣಕಾಲಿಕ ಉದ್ಯೋಗವನ್ನು ಮಾಡಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ:
http://www.vpradeepkumar.com/self-motivation/

4. ನಾನು ಬಿಕಾಂ ಪೂರ್ಣಗೊಳಿಸಿದ್ದೇನೆ. ನನಗೆ ಕನ್ನಡ ಶಿಕ್ಷಕಿ ಅಥವಾ ಪ್ರಾಧ್ಯಾಪಕಿ ಆಗಬೇಕೆಂಬ ಆಸೆ ಇದೆ. ನಾನು ಈಗ ಎಂಎ (ಕನ್ನಡ ಸಾಹಿತ್ಯ)
ಮಾಡಬೇಕೆಂದು ಅಂದುಕೊಂಡಿದ್ದೇನೆ. ಎಂಎ ನಂತರ ಉದ್ಯೋಗಾವಕಾಶಗಳು ಇದೆಯೇ?
ಸಂಧ್ಯಾ, ಬೆಂಗಳೂರು.
ಎಂ.ಎ (ಕನ್ನಡ) ಪದವಿಯ ನಂತರ ಅನೇಕ ಉದ್ಯೋಗಾವಕಾಶಗಳಿವೆ. ಉದಾಹರಣೆಗೆ, ಸಹಾಯಕ ಪ್ರಾಧ್ಯಾಪಕರು/ಉಪನ್ಯಾಸಕರು,
ಸಂಶೋಧಕರು, ವಿಷಯ ಬರಹಗಾರರು, ಮಾಡರೇಟರ್/ಅನುವಾದಕರು, ಕನ್ನಡ ಚಿತ್ರಕಥೆಗಾರರು, ಭಾಷಾತಜ್ಞರು, ಸುದ್ದಿ ಸಂಪಾದಕರು/ಪತ್ರಕರ್ತರು, ಪ್ರವಾಸ ಮಾರ್ಗದರ್ಶಿಗಳು, ಧ್ವನಿ- ಕಲಾವಿದರು, ಲೇಖಕರು ಇತ್ಯಾದಿ. ಆಯಾ ವೃತ್ತಿಗೆ ಸಂಬಂಧಿಸಿದಂತೆ, ಹೆಚ್ಚಿನ ತಜ್ಞತೆಗಾಗಿ ಡಿಪ್ಲೊಮಾ/ಸರ್ಟಿಫಿಕೆಟ್ ಕೋರ್ಸ್‌ಗಳನ್ನು ಆನ್‌ಲೈನ್/ದೂರಶಿಕ್ಷಣದ ಮೂಲಕ ಮಾಡುವುದು ಸೂಕ್ತ. ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕಿಯಾಗಲು ವಿಶ್ವವಿದ್ಯಾಲಯ ಅನುದಾನ ಆಯೋಗದ ನಿಯಮಾವಳಿಯಂತೆ ಪಿಎಚ್.ಡಿ ಮಾಡಿರಬೇಕು. ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಅಭಿರುಚಿಯಂತೆ ವೃತ್ತಿಯೋಜನೆಯನ್ನು ಮಾಡಿದರೆ, ಬಿಕಾಂ ನಂತರ ಯಾವ ಕೋರ್ಸ್ ಮಾಡಬಹುದು ಎಂದು ಸ್ಪಷ್ಟವಾಗುತ್ತದೆ. ವೃತ್ತಿಯೋಜನೆ ಮಾಡುವ ಪ್ರಕ್ರಿಯೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/@ExpertCareerConsultantAuthor ⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT