ಮಂಗಳವಾರ, ನವೆಂಬರ್ 29, 2022
29 °C

ನೀಟ್‌ | ಭಯಪಟ್ಟರೆ ಸಾಧನೆ ಮಾಡಲಾಗದು– ರುಚಾ ಪಾವಶೆ

ಸಂತೋಷ ಈ. ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ನೀಟ್‌ನಲ್ಲಿ 715 ಅಂಕ ಪಡೆದಿದ್ದೀರಿ. ಅಭಿನಂದನೆಗಳು. ನಿಮ್ಮ ನಿರೀಕ್ಷೆ ಎಷ್ಟಿತ್ತು?

ಈ ಬಾರಿ ಉತ್ತಮ ರ್‍ಯಾಂಕ್‌ ತೆಗೆದು ಕೊಳ್ಳುತ್ತೇನೆ ಎಂಬ ವಿಶ್ವಾಸವಿತ್ತು. ಆದರೆ, ಮೊದಲ ರ್‍ಯಾಂಕ್‌ ಪಡೆದವರಿಗೆ ಸರಿ ಸಮನಾಗಿ ನಿಲ್ಲುತ್ತೇನೆ ಎಂದು ಊಹಿಸಿರಲಿಲ್ಲ. ಫಲಿತಾಂಶ ನೋಡಿದ ಖುಷಿಯ ಜತೆಗೆ ಅಚ್ಚರಿಯೂ ಆಯಿತು.

ಸಮಾನ ಅಂಕಗಳಿಸಿದರೂ ನಿಮಗೆ ನಾಲ್ಕನೇ ರ್‍ಯಾಂಕ್‌ ಬಂದಿದ್ದು ಏಕೆ?

ಈ ಪರೀಕ್ಷೆಯಲ್ಲಿ 720 ಅಂಕಗಳಿಗೆ ನಾಲ್ವರು 715 ಅಂಕ ಪಡೆದಿದ್ದೇವೆ. ಆದರೆ, ದ್ವಿತೀಯ ಪಿಯು ಪರೀಕ್ಷೆಯ ಜೀವವಿಜ್ಞಾನ ವಿಷಯದಲ್ಲಿ ನನಗೆ ಅಂಕ ತುಸು ಕಡಿಮೆ ಇದ್ದ ಕಾರಣ ‘ಟೈ ಬ್ರೇಕರ್‌’ನಲ್ಲಿ ನಾಲ್ಕನೇ ರ್‍ಯಾಂಕ್‌ ಸಿಕ್ಕಿದೆ.

ಎರಡನೇ ಬಾರಿಗೆ ನೀಟ್‌ ಬರೆಯಲು ಕಾರಣ?

ಕಳೆದ ವರ್ಷದ ನನಗೆ 500ನೇ ರ್‍ಯಾಂಕ್‌ ಬಂದಿದ್ದು, ತೃಪ್ತಿ ನೀಡಲಿಲ್ಲ. ದೆಹಲಿಯ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ (ಏಮ್ಸ್‌)ನಲ್ಲಿ ಪ್ರವೇಶ ಪಡೆಯಬೇಕು ಎಂಬುದು ನನ್ನ ಕನಸು. ಒಂದು ವರ್ಷ ಹೆಚ್ಚು ಸಮಯ ತೆಗೆದುಕೊಂಡರೂ ಚಿಂತೆಯಿಲ್ಲ ಎಂದು ನಿರ್ಧರಿಸಿ, ಎರಡನೇ ಅವಧಿಯಲ್ಲಿ ನಾನು ನನ್ನ ಗುರಿ ಸಾಧಿಸಿದೆ.

ಮೊದಲ ಅವಕಾಶದಲ್ಲಿ ಕಡಿಮೆ ಅಂಕ ಗಳಿಸಲು ಕಾರಣ?

ಪಿಯುಸಿ ಮುಗಿದ ಬಳಿಕ ಸಿಇಟಿ, ನೀಟ್‌ ತಯಾರಿ ಮಾಡಿಕೊಳ್ಳುವುದು ಬಹಳ ಮಂದಿಯ ರೂಢಿ. ಇದು ತಪ್ಪು. ಪ್ರಥಮ ವರ್ಷಕ್ಕೆ ಕಾಲಿಟ್ಟ ದಿನದಿಂದಲೇ ಸ್ಪರ್ಧಾತ್ಮಕ ಓದು ಕೂಡ ರೂಢಿಸಿಕೊಳ್ಳಬೇಕು.

ಮುಂದೆ ಏನಾಗಬೇಕು ಎಂಬುದರಲ್ಲಿ ‘ಬಹು ಆಯ್ಕೆ’ ಇಟ್ಟುಕೊಳ್ಳಬಾರದು. ಅದರಿಂದ ಯಾವುದನ್ನೂ ಪೂರ್ಣವಾಗಿ ಸಾಧಿಸಲು ಆಗುವುದಿಲ್ಲ. ಮೊದಲ ‍ಪ್ರಯತ್ನದಲ್ಲಿ ನನಗೆ ಕಡಿಮೆ ಅಂಕ ಬರಲು ಇದೇ ಕಾರಣ. ಎರಡನೇ ಯತ್ನದಲ್ಲಿ ಆ ತಪ್ಪು ಮಾಡಲಿಲ್ಲ.

ಕೋಚಿಂಗ್‌ ಅನಿವಾರ್ಯವೇ?

ಎಲ್ಲರಿಗೂ ಕೋಚಿಂಗ್‌ ಕಡ್ಡಾಯ ಎಂದೇನಿಲ್ಲ. ನಾನು ‘ಟರ್ನಿಂಗ್‌ ಪಾಯಿಂಟ್‌ ಸೂಪರ್‌–30’ ಎಂಬ ಸಂಸ್ಥೆಯಿಂದ ಆನ್‌ಲೈನ್‌ ಕೋಚಿಂಗ್‌ ಪಡೆದಿದ್ದೆ. ಇದ ರಿಂದ ವಿಷಯದ ಮೇಲೆ ಹಿಡಿತಸಿಗುತ್ತದೆ. ಹಾಗಾಗಿ, ಕೊಚಿಂಗ್‌ ಪಡೆದೆ.

ಯಾವ ಪುಸ್ತಕಗಳು ಹೆಚ್ಚು ಸೂಕ್ತ?

ಎನ್‌ಸಿಇಆರ್‌ಟಿ ಪುಸ್ತಕಗಳನ್ನೇ ನಾನು ಅವಲಂಬಿಸಿದ್ದೆ. ಮೇಲಾಗಿ, ಹಳೆಯ ಪ್ರಶ್ನೆಪತ್ರಿಕೆಗಳನ್ನು ನಿರಂತರವಾಗಿ ಬಿಡಿಸಿದ್ದೇನೆ. ಇನ್ನೊಬ್ಬರ ಕಡೆಯಿಂದ ಅವುಗಳ ಮೌಲ್ಯಮಾಪನ ಮಾಡಿಸಿದ್ದೇನೆ. ಈ ಪ್ರಕ್ರಿಯೆಯಿಂದಿ ನಾವು ಎಲ್ಲಿ ಎಡವ ಬಹುದು ಎಂಬುದು ಮುಂಚಿತವಾಗಿ ತಿಳಿ ಯುತ್ತದೆ. ನಮ್ಮನ್ನು ನಾವೇ ಕಠಿಣ ಪರೀಕ್ಷೆಗೆ ಒಡ್ಡದ ಹೊರತು ಯಶಸ್ಸು ಸಾಧ್ಯವಿಲ್ಲ.

ನೀಟ್‌ ಎಂದರೆ ಭಯ, ಅದನ್ನು ರದ್ದು ಮಾಡಿ ಎಂಬ ಕೂಗು ಬಹಳ ದಿನಗಳಿಂದಲೂ ಇದೆಯಲ್ಲ?

ಚಿಕ್ಕವರಿದ್ದಾಗ ಶಾಲೆ ಎಂದರೇನೇ ಭಯ. ನಂತರ ಇಂಗ್ಲಿಷ್‌– ಗಣಿತ ಅರಗಿಸಿಕೊಳ್ಳಲಾಗದೇ ಭಯ. ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂದರಂತೂ ರಾಕ್ಷಸನನ್ನೇ ಕಂಡಷ್ಟು ಭಯ ಇರುತ್ತಿತ್ತು. ಎಷ್ಟೋ ವಿದ್ಯಾರ್ಥಿಗಳು ಚೆನ್ನಾಗಿ ಓದಿದ್ದರೂ ಭಯದಿಂದಾಗಿಯೇ ಹಿಂದುಳಿದ ಉದಾಹರಣೆಗಳಿವೆ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಯಪಟ್ಟವರು ಸಾಧನೆ ತೋರಲು ಸಾಧ್ಯವಿಲ್ಲ. ಈ ಪರೀಕ್ಷೆಯೇ ನನ್ನ ಬದುಕಿನ ಕೊನೆಯ ಅವಕಾಶ ಎಂದು ಯಾರೂ ಭಾವಿಸಬಾರದು. ಅದರಾಚೆಗೂ ಬದುಕು ಇದೆ, ಅವಕಾಶಗಳ ಸಾಗರವಿದೆ ಎಂದುಕೊಂಡರೆ ಭಯ ನಿವಾರಣೆಯಾಗುತ್ತದೆ.

ಮುಂದಿನ ಗುರಿ ಏನು?

ಎಂಬಿಬಿಎಸ್‌ ಮಾಡುತ್ತೇನೆ. ನನ್ನ ಮುತ್ತಜ್ಜ, ಅಜ್ಜ ವೈದ್ಯರಾಗಿದ್ದರು. ಈಗ ಅಪ್ಪ, ಅಮ್ಮ, ಅಣ್ಣ ಹೀಗೆ ನಾಲ್ಕು ತಲೆಮಾರುಗಳಿಂದಲೂ ನಮ್ಮ ಕುಟುಂಬದಲ್ಲಿ ವೈದ್ಯರೇ ಆಗಿದ್ದಾರೆ. ಆ ಸರಣಿ ಮುಂದುವರಿಸುತ್ತೇನೆ. ⇒v

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು