ಭಾನುವಾರ, ಜುಲೈ 3, 2022
25 °C

ಕೆ.ಎ.ಎಸ್ ಅಧಿಕಾರಿ ಸಂದರ್ಶನ: ಅಧ್ಯಯನ ಸಾಮಗ್ರಿ ಆಯ್ಕೆಗಿರಲಿ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಲತಃ ಬೆಳಗಾವಿ ಜಿಲ್ಲೆ, ರಾಯಬಾಗ್ ತಾಲ್ಲೂಕಿನ ಖನದಾಳ ಗ್ರಾಮದವರಾದ ರಾಘವೇಂದ್ರ ಜಗಲಾಸರ, ಕೆ.ಎ.ಎಸ್ ಅಧಿಕಾರಿಯಾಗಿದ್ದು, ಉಪವಿಭಾಗಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ಧಾರವಾಡ ಜಿಲ್ಲೆ ಕುಂದಗೋಳದಲ್ಲಿ ಪ್ರೊಬೇಷನರಿ ತಹಶೀಲ್ದಾರ್ ಆಗಿ ಸೇವೆಯಲ್ಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನ ಯಾವ ರೀತಿ ಆಗಿರಬೇಕು ಎನ್ನುವ ಕುರಿತು ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

***

* ಶೈಕ್ಷಣಿಕ ಜೀವನ ಹೇಗಿತ್ತು?

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಓದಿದ್ದು, ಸೇಂಟ್‌ ಫಾಲ್ಸ್‌ ಶಾಲೆ– ಬೆಳಗಾವಿ. ಪಿಯು ವಿಜ್ಞಾನ ಓದಿದ್ದು ಬೆಳಗಾವಿಯ ಆರ್.ಎಲ್. ಪಿಯು ಕಾಲೇಜಿನಲ್ಲಿ. ಎಂಜಿನಿಯರಿಂಗ್ ಪದವಿ ಓದಿದ್ದು– ಆರ್‌.ವಿ.ಸಿ.ಇ, ಬೆಂಗಳೂರು. ಎಂಜಿನಿಯರಿಂಗ್ ನಂತರ ‘ಗೇಟ್‌’ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿ, ‘ಸೆಂಟ್ರಲ್ ಪವರ್ ರಿಸರ್ಚ್ ಇನ್‌ಸ್ಟಿಟ್ಯೂಟ್‌’ ನಲ್ಲಿ ಪ್ರಾಜೆಕ್ಟ್‌ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿದೆ. ನಂತರ ಎಂ.ಟೆಕ್. ಅಧ್ಯಯನ ಮಾಡಿದೆ.

* ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಒಲವು ಬೆಳೆದಿದ್ದು ಹೇಗೆ?

ಎಂಜಿನಿಯರಿಂಗ್ ಓದುವಾಗಿನಿಂದಲೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಸಕ್ತಿ ಇತ್ತು. ನಮ್ಮ ಅಣ್ಣ ಲೋಕೇಶ್ (ಪ್ರಸ್ತುತ ಬಾಗಲಕೋಟೆ ಎಸ್ಪಿ) ಯು.ಪಿ.ಎಸ್.ಸಿ ಪರೀಕ್ಷೆ ಪಾಸಾದ ನಂತರ ನನಗೂ ನಾಗರಿಕ ಸೇವಾ ಪರೀಕ್ಷೆಗಳತ್ತ ಒಲವು ಮೂಡಿತು. ನಂತರ ಐಎಎಸ್, ಕೆಎಎಸ್ ಅಧ್ಯಯನ ಆರಂಭಿಸಿದೆ. ಇದಕ್ಕೆ ಪೋಷಕರಿಂದಲೂ ಪ್ರೋತ್ಸಾಹ ಸಿಕ್ಕಿತು.

* ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ಹೇಗಿತ್ತು?

ನಾನು ಎದುರಿಸಬೇಕಾದ ಪರೀಕ್ಷೆಯ ಪಠ್ಯಕ್ರಮಕ್ಕೆ ಅನುಗುಣವಾಗಿ ಅಧ್ಯಯನ ಮಾಡುತ್ತಿದ್ದೆ. ಅಣ್ಣನೂ ಸೇರಿದಂತೆ ಹಲವು ಸಾಧಕರ ಜೊತೆ ಸಮಾಲೋಚನೆ ನಡೆಸಿ, ಅವರು ನೀಡಿದ ಸಲಹೆಯಂತೆ ಸುದ್ದಿಪತ್ರಿಕೆಗಳನ್ನು ಓದಿದೆ. ವಿಷಯ ವಿಶ್ಲೇಷಣೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಂಡೆ.

* ನಿಮ್ಮ ಓದುವ ವೇಳಾಪಟ್ಟಿ ಹೇಗಿತ್ತು?

ಬೆಂಗಳೂರಿನ 24 X 7 ಸೌಲಭ್ಯವಿರುವ ಗ್ರಂಥಾಲಯದಲ್ಲಿ ಓದುತ್ತಿದ್ದೆ. ಬೆಳಿಗ್ಗೆ 9 ರಿಂದ ಗ್ರಂಥಾಲಯದಲ್ಲಿ ಓದುತ್ತ ಕುಳಿತರೆ ಮಧ್ಯಾಹ್ನ 1.30 ರವರೆಗೆ ನಿರಂತರವಾಗಿ ಓದುತ್ತಿದ್ದೆ. ಈ ವೇಳೆಯಲ್ಲಿ ನನ್ನ ಓದು ಪೂರ್ವಭಾವಿ ಪರೀಕ್ಷೆಗೆ ಕೇಂದ್ರೀಕೃತವಾಗಿರುತ್ತಿತ್ತು. ನಂತರ ಮಧ್ಯಾಹ್ನ 2.30 ರಿಂದ 5.30 ರವರೆಗೆ ಮುಖ್ಯ ಪರೀಕ್ಷೆಗಾಗಿ ಓದುತ್ತಿದ್ದೆ. ಸಂಜೆ 6 ರಿಂದ ರಾತ್ರಿ 9 ರವರೆಗೆ ಹಿಂದಿನ ಪ್ರಶ್ನೆಪತ್ರಿಕೆಗಳನ್ನು, ಸ್ಪರ್ಧಾತ್ಮಕ ನಿಯತಕಾಲಿಕೆಗಳನ್ನು ಅವಲೋಕಿಸುತ್ತಿದ್ದೆ. ಓದುತ್ತಿರುವಾಗಲೇ ಲ್ಯಾಪ್‌ಟಾಪ್‌ನಲ್ಲಿ ನೋಟ್ಸ್‌ ಮಾಡಿಕೊಳ್ಳುತ್ತಿದ್ದೆ. ರಾತ್ರಿ 9.30 ರಿಂದ 1.30 ರವರೆಗೆ ಬರವಣಿಗೆ ಕೌಶಲ ವೃದ್ಧಿಗೆ ಆದ್ಯತೆ ನೀಡುತ್ತಿದ್ದೆ. ರೂಢಿಗಾಗಿ 3500 ಕ್ಕೂ ಹೆಚ್ಚು ಪ್ರಬಂಧ ಮಾದರಿಯ ಪ್ರಶ್ನೆಗಳಿಗೆ ನಾನು ಉತ್ತರ ಬರೆದಿರುವೆ. 70 ಕ್ಕೂ ಹೆಚ್ಚು ಪ್ರಬಂಧಗಳನ್ನು ಬರೆದು ರೂಢಿಸಿಕೊಂಡಿರುವೆ. ಈ ಮಾದರಿಯಲ್ಲಿ 5 ವರ್ಷ ನಿರಂತರವಾಗಿ ಸಿದ್ಧತೆ ಮಾಡಿಕೊಂಡೆ. ಯಾವುದೇ ಕೋಚಿಂಗ್ ಪಡೆಯಲಿಲ್ಲ.

* ವೃತ್ತಿ ಜೀವನ ಆರಂಭಿಸಿದ್ದು ಯಾವ ಹುದ್ದೆಯಿಂದ?

ನಾನು ಆರಂಭಿಕವಾಗಿ ಕೆ.ಪಿ.ಟಿಸಿ.ಎಲ್ ಪರೀಕ್ಷೆಗಳನ್ನು ಎದುರಿಸಿದೆ. ಅಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ನಂತರ 2016 ರಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನಿರೀಕ್ಷಕ ಹುದ್ದೆಗೆ ಆಯ್ಕೆಯಾದೆ. ಈ ಹುದ್ದೆಯಲ್ಲಿ ಎರಡೂವರೆ ವರ್ಷ ಸೇವೆ ಸಲ್ಲಿಸಿದೆ. ಇಲ್ಲಿದ್ದುಕೊಂಡೇ 2017 ರಲ್ಲಿ ಕೆ.ಎ.ಎಸ್ ಪರೀಕ್ಷೆ ಎದುರಿಸಿದೆ. ಅದರಲ್ಲಿ ಮೇನ್ಸ್‌ ಪಾಸಾಗಲಿಲ್ಲ. ಅದೇ ವರ್ಷ ಯು.ಪಿ.ಎಸ್‌.ಸಿ ಪರೀಕ್ಷೆ ಬರೆದು ಸಂದರ್ಶನಕ್ಕೂ ಹಾಜರಾದೆ. ನಂತರ 2019 ರಲ್ಲೂ ಮತ್ತೊಮ್ಮೆ ಯು.ಪಿ.ಎಸ್‌.ಸಿ ಸಂದರ್ಶನ ಎದುರಿಸಿದೆ. 2019 ಡಿಸೆಂಬರ್‌ನಲ್ಲಿ 2 ನೇ ಪ್ರಯತ್ನದಲ್ಲಿ ಕೆ.ಎ.ಎಸ್ ಪರೀಕ್ಷೆಯಲ್ಲಿ ಯಶ ಕಂಡು ಕಂದಾಯ ಇಲಾಖೆಯಲ್ಲಿ ಉಪವಿಭಾಗಾಧಿಕಾರಿ ಹುದ್ದೆ ಗಿಟ್ಟಿಸಿಕೊಂಡೆ.

* ಸ್ಪರ್ಧಾರ್ಥಿಗಳಿಗೆ ನಿಮ್ಮ ಕಿವಿ ಮಾತೇನು?

ನಿಮ್ಮ ಆಂತರಿಕ ಪ್ರೇರಣೆಯೇ ಯಶಸ್ಸಿನ ಮೂಲ. ಓದುವವರ ಸಾಂಗತ್ಯದಲ್ಲಿದ್ದರೆ ಲಾಭ ಹೆಚ್ಚು. ಪ್ರತಿ ವಿಷಯಕ್ಕೂ ಅದರದ್ದೇ ಆದ ಪ್ರಮಾಣೀಕೃತ ಆಕರ ಪುಸ್ತಕಗಳಿವೆ. ಅವುಗಳನ್ನು ತಪ್ಪದೇ ಓದಬೇಕು. ನಿಮಗೆ ನಿಖರ ಗುರಿ ಇರಬೇಕು. ಆ ಗುರಿ ಮಟ್ಟಲು ನಿಖರ ಓದಿನ ದಾರಿಯಲ್ಲಿ ಸಾಗುತ್ತಿದ್ದೇನೆ ಎಂಬುದನ್ನು ದೃಢಪಡಿಸಿಕೊಳ್ಳಬೇಕು. ಅಧ್ಯಯನ ಸಾಮಗ್ರಿಗಳ ಆಯ್ಕೆಯಲ್ಲಿ ವಿವೇಚನೆ ಇರಬೇಕು. ಲಘು ವ್ಯಾಯಾಮ, ಧ್ಯಾನ, ಲಘು ಊಟ– ಉಪಾಹಾರ ರೂಢಿಸಿಕೊಳ್ಳಬೇಕು.

ಸಂದರ್ಶನ: ಚನ್ನಬಸಪ್ಪ ರೊಟ್ಟಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು