ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಕ್ನಿಕಲ್ ಬರವಣಿಗೆ: ಅವಕಾಶಗಳ ರಹದಾರಿ

Last Updated 21 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಆನ್‌ಲೈನ್ ಯುಗದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಲು ಆದಾಯದ ಮೂಲಗಳನ್ನಾಗಿ ಪರಿವರ್ತಿಸಬಹುದಾದ ಅನೇಕ ಉದ್ಯೋಗಾವಕಾಶಗಳನ್ನು ನಮ್ಮದಾಗಿಸಿಕೊಳ್ಳಬಹುದು. ಇದಕ್ಕೆ ಉತ್ತಮ ಉದಾಹರಣೆ ಪತ್ರಿಕೋದ್ಯಮದಲ್ಲಿ ಜನಪ್ರಿಯವಾಗಿರುವ ತಾಂತ್ರಿಕ ಬರವಣಿಗೆ (ಟೆಕ್ನಿಕಲ್ ರೈಟಿಂಗ್).

ಸಾಮಾನ್ಯವಾಗಿ ವಿಜ್ಞಾನ- ತಂತ್ರಜ್ಞಾನ ಕ್ಷೇತ್ರದಲ್ಲಿರುವವರೇ ಈ ಬರವಣಿಗೆ ಮಾಡುತ್ತಾರೆ ಎಂಬ ನಂಬಿಕೆ ಇದೆ. ಆದರೆ ತಂತ್ರಜ್ಞಾನದ ಕುರಿತ ಮಾಹಿತಿಯ ಜೊತೆಯಲ್ಲಿ ಕೌಶಲಗಳನ್ನು ಮೈಗೂಡಿಸಿಕೊಂಡಿರುವ ಪ್ರತಿಯೊಬ್ಬರಿಗೂ ಈ ಕ್ಷೇತ್ರ ಕೆಂಪು ಹಾಸಿನ ಸ್ವಾಗತ ನೀಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ತಾಂತ್ರಿಕ ಬರವಣಿಗೆ ಎಂದರೇನು?

ನಿರ್ದಿಷ್ಟವಾದ ವಿಷಯವನ್ನು ಗಮನದಲ್ಲಿಟ್ಟುಕೊಂಡು ಆಯಾ ಉತ್ಪನ್ನ, ಗ್ರಾಹಕರು, ಕಂಪನಿಗಳ ನಿಯಮಾವಳಿಗಳಿಗೆ ತಕ್ಕಂತೆ, ಸಮಯಕ್ಕನುಸಾರವಾಗಿ ನಿಗದಿತ ಅವಧಿಯಲ್ಲಿ ಮತ್ತು ಸ್ಥಳಾವಕಾಶಗಳಿಗೆ ಸೂಕ್ತವಾಗಿ ಬರೆದು ಕೊಡುವ ಬರವಣಿಗೆಯ ಸ್ವರೂಪವನ್ನು ತಾಂತ್ರಿಕ ಬರವಣಿಗೆ ಅಥವಾ ಟೆಕ್ನಿಕಲ್ ರೈಟಿಂಗ್ ಎನ್ನಬಹುದು. ಇತರ ಬರವಣಿಗೆಗಳಿಗಿಂತ ತುಸು ಭಿನ್ನವಾದ ಹಾಗೂ ಸ್ಪಷ್ಟವಾದ ಬರವಣಿಗೆಯಿದು. ತಂತ್ರಜ್ಞಾನ ಆಧಾರಿತ ವಿಷಯಗಳನ್ನು ಸರಳ ಭಾಷೆಯಲ್ಲಿ ಬಳಕೆದಾರರಿಗೆ ಅರ್ಥೈಸುವ ವಿಧ ಎನ್ನಬಹುದು.

ಟೆಕ್ನಿಕಲ್ ರೈಟಿಂಗ್ ಆರಂಭಿಸುವುದು ಹೇಗೆ?

ಮೊದಲು ನಿಮಗಿಷ್ಟವಾದ ಕಂಪನಿಯನ್ನು ಮತ್ತು ಅಲ್ಲಿರುವ ಕೆಲಸದ ವೈಖರಿಯನ್ನು ಗಮನಿಸಿ.

ಅದಕ್ಕೆ ತಕ್ಕಂತೆ ಜ್ಞಾನ ಮತ್ತು ಕೌಶಲಗಳನ್ನು ಕರಗತ ಮಾಡಿಕೊಳ್ಳಿ.

ಮುಖ್ಯವಾಗಿ ಭಾಷೆಯ ಮೇಲೆ ಪ್ರಭುತ್ವ ಸಾಧಿಸಬೇಕು.

ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳನ್ನು ಕರಗತ ಮಾಡಿಕೊಳ್ಳಲು ಹೆಚ್ಚಾಗಿ ವೈಜ್ಞಾನಿಕ ಸಂಶೋಧನಾ ಪೇಪರ್‌ಗಳನ್ನು ಓದಬೇಕು.

ವಿಷಯ ಸಂಗ್ರಹ ಮಾಡಿಕೊಳ್ಳಿ

ಹೊಸ ಪದಗಳನ್ನು ಪಟ್ಟಿ ಮಾಡಿಕೊಳ್ಳಿ.

ಟೆಕ್ನಿಕಲ್ ಕೈಪಿಡಿ (ಮ್ಯಾನುವಲ್‌)ಗಳನ್ನು ಅಭ್ಯಸಿಸಿ.

ಆನ್‌ಲೈನ್‌ನಲ್ಲಿ ಸಿಗುವ ಗ್ರಾಹಕ ಸೇವಾ ಗೈಡ್‌ಗಳನ್ನು, ಟೆಕ್ನಿಕಲ್ ವರದಿಗಳನ್ನು ದಿನವೂ ಓದಿ.

ತಾಂತ್ರಿಕ ಬರವಣಿಗೆ ಕಂಪನಿಗಳ ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗುವ ವಿಷಯಗಳನ್ನು ಪರಿಶೀಲಿಸಿ.

ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಮೇಲಿರುವ ಸೂಚನೆ ಗಳನ್ನು ಗಮನಿಸಿ ಹಾಗೂ ಕೈಪಿಡಿಗಳನ್ನು ಓದಿ.

ಅವಕಾಶಗಳು

ತಾಂತ್ರಿಕ ಬರಹಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ. ಬಳಕೆದಾರರ ಕೈಪಿಡಿ ಬರವಣಿಗೆ, ಸಾಂಪ್ರದಾಯಿಕ ತಾಂತ್ರಿಕ ಬರವಣಿಗೆ ಮತ್ತು ತಂತ್ರಜ್ಞಾನ ಆಧಾರಿತ ಮಾರುಕಟ್ಟೆ ಬರವಣಿಗೆ.

ಇವುಗಳಲ್ಲಿ ನಿಮ್ಮ ಆಯ್ಕೆಯ ವಿಧವನ್ನು ಮೊದಲು ಗುರುತಿಸಿಕೊಳ್ಳಿ. ಕೈಪಿಡಿ ಬರವಣಿಗೆಯಲ್ಲಿ ಬಳಕೆದಾರರಿಗೆ ಉತ್ಪನ್ನವನ್ನು ಹೇಗೆ ಬಳಸಬೇಕೆಂಬ ಮಾಹಿತಿ ನೀಡಬೇಕಾಗುತ್ತದೆ (ಉದಾ: ಮೊಬೈಲ್ ಫೋನ್, ಲ್ಯಾಪ್‌ಟಾಪ್ ಮ್ಯಾನುವಲ್). ಸಾಂಪ್ರದಾಯಿಕ ತಾಂತ್ರಿಕ ಬರವಣಿಗೆಯಲ್ಲಿ ಕೈಗಾರಿಕೆಗಳ ವಾರ್ಷಿಕ ಸಾಧನೆ, ವೈದ್ಯಕೀಯ ಪ್ರಯೋಗಗಳ ಸರಣಿ ಸಾರಾಂಶಗಳನ್ನು ಬರೆಯಬೇಕಾಗುತ್ತದೆ. ಇನ್ನು ಮಾರುಕಟ್ಟೆ ಆಧಾರಿತ ಬರವಣಿಗೆಯಲ್ಲಿ ತಮ್ಮ ಉತ್ಪನ್ನಗಳಿಂದ ಜನಸಾಮಾನ್ಯರಿಗೆ, ದೇಶಕ್ಕೆ ಉಪಯುಕ್ತ ಕೊಡುಗೆ ನೀಡಿರುವುದು, ಕಂಪನಿಯ ಮಾರುಕಟ್ಟೆ ವಿಸ್ತರಣೆ ಕುರಿತು ಬರೆಯುವ ಟಾಸ್ಕ್ ನೀಡಲಾಗಿರುತ್ತದೆ. ಇವುಗಳಲ್ಲಿ ನಮ್ಮ ಕೌಶಲಗಳಿಗೆ ಪೂರಕವಾದ ಶೈಲಿಯನ್ನು ಆಯ್ದುಕೊಂಡು ಬರವಣಿಗೆ ಆರಂಭಿಸಬೇಕು.

ಟೆಕ್ನಿಕಲ್ ಕ್ರಿಯೇಟಿವ್ ರೈಟಿಂಗ್, ಫಿಕ್ಷನ್ ರೈಟಿಂಗ್, ಕಂಟೆಂಟ್ ರೈಟಿಂಗ್, ಮೀಡಿಯಾ ಸೋರ್ಸಿಂಗ್, ಸೋಶಿಯಲ್ ಮೀಡಿಯಾ ಡಾಕ್ಯುಮೆಂಟೇಷನ್, ಪ್ರಾಜೆಕ್ಟ್ ಪ್ರಪೋಸಲ್ ರೈಟಿಂಗ್, ಆನ್‌ಲೈನ್ ಟೆಕ್ನಿಕಲ್ ಡಾಕ್ಯುಮೆಂಟ್ ಎಡಿಟಿಂಗ್ ಹೀಗೆ ಇನ್ನೂ ಅನೇಕ ಮಾದರಿ ಅವಕಾಶಗಳು ಈ ಕ್ಷೇತ್ರದಲ್ಲಿವೆ.

ತಾಂತ್ರಿಕ ಬರಹಗಾರರಿಗೆ ಆರಂಭಿಕ ಹಂತದಲ್ಲಿ ಕನಿಷ್ಠ 5 ಅಂಕಿಗಳ ವೇತನ ಸಿಗುವುದು ಖಚಿತ. ಅಂದರೆ ₹ 50,000 ದಿಂದ ಆರಂಭಿಸಿ ಮುಂದೆ ಎರಡರಿಂದ-ಮೂರು ಲಕ್ಷ ಮಾಸಿಕ ವೇತನ ಪಡೆಯುವ ಅವಕಾಶಗಳಿವೆ.

ಶೈಕ್ಷಣಿಕ ಅರ್ಹತೆ

ತಾಂತ್ರಿಕ ಬರವಣಿಗೆ ಆರಂಭಿಸಲು ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ವಿಸ್ತ್ರತವಾದ ವಿಷಯ ನಿರೂಪಣೆ, ತಂತ್ರಾಂಶದ ಸೊಗಡು ನಮ್ಮಲ್ಲಿದ್ದರೆ ಅದರಿಂದ ಬರವಣಿಗೆಗೆ ಮೆರಗು ನೀಡುವ ಕೆಲಸವನ್ನು ಚೊಕ್ಕವಾಗಿ ಮಾಡಿದರೆ ಆಯಿತು. ಎರಡರಿಂದ ಮೂರು ಭಾಷೆಗಳ ಹಿಡಿತವಿರುವವರು, ಭಾಷಾಂತರ ಕಲೆಯನ್ನು ಕರಗತ ಮಾಡಿಕೊಂಡಿರುವವರು ಸರಳ ನಿರೂಪಣೆ ಮೂಲಕ ಓದುಗರನ್ನು ತಲುಪಲು ಸಾಧ್ಯವಾಗುತ್ತದೆ. ವಿವಿಧ ಕಂಪ್ಯೂಟರ್ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡಿದ್ದರೆ ಪ್ರಭಾವಶಾಲಿಯಾಗಿ ಬರವಣಿಗೆಯನ್ನು ಪ್ರಸ್ತುತಪಡಿಸಬಹುದು. ರಾಜ್ಯದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ ವಿಭಾಗದ ಪಠ್ಯದಲ್ಲಿ ಟೆಕ್ನಿಕಲ್ ರೈಟಿಂಗ್ ಎಂಬ ವಿಷಯವನ್ನು ಪರಿಚಯಿಸಿ ಬೋಧಿಸಲಾಗುತ್ತಿದೆ.

(ಲೇಖಕರು: ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT