ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿವಿಲ್ ಸರ್ವೀಸಸ್‌ ಪರೀಕ್ಷೆ ಪಾಠ–2: ‘ಪ್ರಿಲಿಮ್ಸ್’ ಎಂಬ ನಿರ್ಣಾಯಕ ಸವಾಲು

Last Updated 23 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಹಿಂದಿನ ಸಂಚಿಕೆಯಲ್ಲಿ ತಿಳಿಸಿರುವಂತೆ ಸಿವಿಲ್ ಸರ್ವೀಸಸ್‌ ಪೂರ್ವಭಾವಿ ಪರೀಕ್ಷೆಯಲ್ಲಿ ಸಾಮಾನ್ಯ ಅಧ್ಯಯನ (ಜನರಲ್ ಸ್ಟಡೀಸ್ ) – 1 ಮತ್ತು ಸಾಮಾನ್ಯ ಅಧ್ಯಯನ (ಸಿಎಸ್‌ಎಟಿ) – 2 ಎಂಬ ಎರಡು ಪತ್ರಿಕೆಗಳಿರುತ್ತವೆ. ಎರಡೂ ಪತ್ರಿಕೆಗಳ ಪ್ರಶ್ನೆಗಳು ಬಹು ಆಯ್ಕೆಯ ಮಾದರಿಯಲ್ಲಿರುತ್ತವೆ. ಪೇಪರ್ 1 ಮತ್ತು 2 ಅಂಕಗಳನ್ನು ಒಟ್ಟು ರ‍್ಯಾಂಕಿಂಗ್‌ಗೆ ಪರಿಗಣಿಸಲಾಗುವುದಿಲ್ಲ. ಆದರೆ ಪೇಪರ್ 2 ರಲ್ಲಿ ಶೇ 33ರಷ್ಟು ಅಂಕಗಳನ್ನು ಗಳಿಸಲೇಬೇಕು.

ಎಂದಿನಿಂದ ತಯಾರಿ?

ಪ್ರಿಲಿಮ್ಸ್‌ ಪರೀಕ್ಷೆಗೆ, ಪರೀಕ್ಷೆಯ ದಿನಾಂಕಕ್ಕಿಂತ ಕನಿಷ್ಠ ಒಂದು ವರ್ಷ ಮುಂಚೆಯಿಂದ ಸಿದ್ಧತೆ ಶುರುವಾಗಬೇಕು. ಪ್ರಾರಂಭದಲ್ಲಿ ಮುಖ್ಯ ಪರೀಕ್ಷೆ ಮತ್ತು ಪೂರ್ವಭಾವಿ ಪರೀಕ್ಷೆಗಳೆರಡರಲ್ಲೂ ಬರುವ ವಿಷಯಗಳನ್ನು ಸಮಗ್ರವಾಗಿ ಅಭ್ಯಸಿಸಬೇಕು. ಪರೀಕ್ಷೆಗೆ ಕೊನೆಯ ಮೂರು ತಿಂಗಳಿರುವಾಗ ಕೇವಲ ಪ್ರಿಲಿಮ್ಸ್ ಪೇಪರ್ ಕಡೆ ಗಮನ ಕೇಂದ್ರೀಕರಿಸಬೇಕು. ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಇತಿಹಾಸ, ಪ್ರಚಲಿತ ವಿದ್ಯಮಾನ, ಭೂಗೋಳ ವಿಜ್ಞಾನ, ರಾಜಕೀಯ ಮತ್ತು ಆಡಳಿತ, ಆರ್ಥಿಕತೆ, ಪರಿಸರ ಅಧ್ಯಯನ, ಸಾಮಾನ್ಯ ವಿಜ್ಞಾನ, ಗ್ರಹಣಶಕ್ತಿ ಮತ್ತು ಸಂವಹನ ಕೌಶಲ, ತಾರ್ಕಿಕತೆ ಮತ್ತು ನಿರ್ಣಯಿಸುವಿಕೆ ಹಾಗೂ ಮೂಲಭೂತ ಸಂಖ್ಯಾವಿಜ್ಞಾನ ಮತ್ತು ದತ್ತಾಂಶ ವ್ಯಾಖ್ಯಾನದ ಬಗ್ಗೆ ಪ್ರಶ್ನೆಗಳಿರುತ್ತವೆ.

‘ಸಿಎಸ್‌ಎಟಿ (ಪತ್ರಿಕೆ –2)’ ಬಗ್ಗೆ ಅಲಕ್ಷ್ಯ ಬೇಡ

ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯಲು ಸಿವಿಲ್ ಸರ್ವಿಸಸ್ ಆಪ್ಟಿಟ್ಯೂಡ್ ಟೆಸ್ಟ್‌ನ (CSAT) ಅಂಕಗಳನ್ನು ಪರಿಗಣಿಸುವುದಿಲ್ಲ ಎಂದು ಗೊತ್ತಿರುವ ವಿದ್ಯಾರ್ಥಿಗಳು 80 ಪ್ರಶ್ನೆಗಳ ಪತ್ರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ನೆನಪಿರಲಿ. ಈ ಪತ್ರಿಕೆಯಲ್ಲಿ
ಶೇ 33 ಅಂದರೆ 66 (200 ಅಂಕಗಳಿಗೆ) ಅಂಕಗಳನ್ನು ಗಳಿಸಲೇಬೇಕು. ಎಷ್ಟೋ ಜನ ಪ್ರಥಮ ಪತ್ರಿಕೆಯಲ್ಲಿ ಕಟ್ ಆಫ್ ಅಂಕಕ್ಕೂ ಹೆಚ್ಚಿನ ಅಂಕಗಳಿಸಿರುತ್ತಾರೆ. ಆದರೆ CSATನಲ್ಲಿ ಅನುತ್ತೀರ್ಣರಾಗಿರುತ್ತಾರೆ. ಆಗ ಮುಖ್ಯ ಪರೀಕ್ಷೆಯ ದಾರಿ ಬಂದ್‌ ಆಗುತ್ತದೆ.

ಈ ಪಠ್ಯಕ್ರಮದಲ್ಲಿ ಅಭ್ಯರ್ಥಿಯ ಸಾಮರ್ಥ್ಯ (Aptitute) ಮತ್ತು ತಾರ್ಕಿಕತೆಯ ಕೌಶಲಗಳನ್ನು ಪರೀಕ್ಷಿಸಲಾಗುತ್ತದೆ. ಗಣಿತ, ಎಂಜಿನಿಯರಿಂಗ್ ಮತ್ತು ವಿಜ್ಞಾನ ವಿಷಯಗಳಲ್ಲಿ ಪರಿಣತಿ ಹೊಂದಿದವರಿಗೆ ಇಲ್ಲಿನ ಪ್ರಶ್ನೆಗಳು ಸುಲಭವೆನಿಸುತ್ತವೆ. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದರ ಜೊತೆಗೆ ಮತ್ತು ಕೆಲವು ಅಣಕು (Mock) ಪರೀಕ್ಷೆಗಳನ್ನು ಬರೆಯುವವರು ಇದರಲ್ಲಿ ಯಶಸ್ಸು ಗಳಿಸುತ್ತಾರೆ. ಹಲವು ಸಮಸ್ಯೆಗಳನ್ನು ಬಿಡಿಸುವುದರ ಬದಲಿಗೆ ಪ್ರಶ್ನೆಗಳಿಗೆ ಸಂಬಂಧಿಸಿದ ಪರಿಕಲ್ಪನೆ (Concept) ಗಳನ್ನು ವಿಶೇಷವಾಗಿ ಕಲಿಯಬೇಕು.

ಅಂಕಿ – ಅಂಶಗಳಷ್ಟೇ ಸಾಲದು

ಪ್ರಿಲಿಮ್ಸ್ ಪರೀಕ್ಷೆ ಬರೆಯುವವರು ಸಾಕಷ್ಟು ಅಂಕಿ–ಅಂಶಗಳನ್ನು ನೆನಪಿಟ್ಟುಕೊಳ್ಳಬೇಕು ಎಂಬ ಅಭಿಪ್ರಾಯ ಕೆಲವು ಅಭ್ಯರ್ಥಿಗಳಲ್ಲಿ ಬೇರೂರಿದೆ. ಎಲ್ಲ ಪ್ರಶ್ನೆಗಳ ಉತ್ತರ ಕೇವಲ ಅಂಕಿ - ಸಂಖ್ಯೆಗಳಲ್ಲಿರುವುದಿಲ್ಲ. ಪ್ರತಿ ಪ್ರಶ್ನೆಯನ್ನೂ ಅತ್ಯಂತ ವೇಗವಾಗಿ ವಿಶ್ಲೇಷಿಸಿ ಸರಿಯಾದ ಉತ್ತರ ಆಯ್ಕೆ ಮಾಡಿಕೊಳ್ಳಬೇಕು. 200 ಪ್ರಶ್ನೆಗಳಿಗೆ ಕೇವಲ 120 ನಿಮಿಷಗಳಲ್ಲಿ ಉತ್ತರಿಸಬೇಕು. ಅಂದರೆ ಒಂದು ಪ್ರಶ್ನೆ ಉತ್ತರಿಸಲು ಒಂದು ನಿಮಿಷಕ್ಕಿಂತ ಕಡಿಮೆ ಸಮಯವಿರುತ್ತದೆ.

ಸಮಕಾಲೀನ ವಿದ್ಯಮಾನಗಳೇ ಜೀವಾಳ

ಪ್ರತಿದಿನ ವಿಶ್ವ, ದೇಶ ಹಾಗೂ ರಾಜ್ಯಗಳಲ್ಲಿ ಎಲ್ಲೆಲ್ಲಿ ಏನೇನು ನಡೆಯುತ್ತದೆ ಎಂಬುದರ ಕುರಿತು ಅಭ್ಯರ್ಥಿಗಳು ಮೈಯೆಲ್ಲಾಕಣ್ಣು – ಕಿವಿಯಾಗಿರಬೇಕು. ಅನೇಕ ಪ್ರಶ್ನೆಗಳು ಈ ಪ್ರಚಲಿತವಿರುವ ವಿದ್ಯಮಾನಗಳ ಕುರಿತೇ ಆಗಿರುತ್ತವೆ. ಯಾವುದಾದರೊಂದು ವಿಷಯ ದಿನ ಪತ್ರಿಕೆಯ, ಟಿವಿ ಚಾನಲ್‌ಗಳಲ್ಲಿ ಪದೇ ಪದೇ ಹೆಡಲೈನ್ ಆಗಿ ಪ್ರಕಟಗೊಂಡರೆ ಅಥವಾ ಚರ್ಚೆಯಾದರೆ ಅದರ ಬಗೆಗೆ ಹೆಚ್ಚು ಪ್ರಶ್ನೆಗಳಿರುತ್ತವೆ. ಅಂಥ ಮುಖ್ಯ ವಿಷಯಗಳ ಬಗೆಗೆ ಲಭ್ಯವಿರುವ ಎಲ್ಲ ವಿವರ ಮಾಹಿತಿಯನ್ನು ಸಂಪಾದಿಸಬೇಕು.

ಅಂಕಗಳು

ಯುಪಿಎಸ್‌ಸಿ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುವರು ಸುಮಾರು 10 ಲಕ್ಷ. ಅದರಲ್ಲಿ ಪ್ರಿಲಿಮ್ಸ್‌ಗೆ ಹಾಜರಾಗುವವರು ಕೇವಲ ಐದಾರು ಲಕ್ಷ. ಮುಖ್ಯ ಪರೀಕ್ಷೆಗೆ ಆಯ್ಕೆಯಾಗುವವರು ಕೇವಲ 10 ರಿಂದ 11 ಸಾವಿರ. ಇವರಲ್ಲಿ ಮುಖ್ಯ ಪರೀಕ್ಷೆಯ ಮೊದಲ ಸಾವಿರ ಸ್ಥಾನಗಳನ್ನು ಗಳಿಸುವವರ ಪೈಕಿ ಮುನ್ನೂರು ಜನರಿಗೆ ಐಎಎಸ್, ಐಪಿಎಸ್ ಹುದ್ದೆಗಳು ದೊರಕುತ್ತವೆ. ಪ್ರಿಲಿಮ್ಸ್ ಪರೀಕ್ಷೆ ತೇರ್ಗಡೆಯಾಗಲು ಅಭ್ಯರ್ಥಿಗಳು ಗಳಿಸಬೇಕಾದ ಅಂಕಗಳು 98 ರಿಂದ 100 ಮಾತ್ರ. ಕಳೆದ ಹತ್ತು ವರ್ಷಗಳ ಪ್ರಿಲಿಮ್ಸ್‌ ಫಲಿತಾಂಶದ ಕಟ್ ಆಫ್ ಅಂಕಗಳು 96 ರಿಂದ 98 ರಲ್ಲೇ ಇವೆ. ಅಂದರೆ ಜನರಲ್ ಸ್ಟಡೀಸ್ ಪ್ರಶ್ನೆಪತ್ರಿಕೆ 1 ರಲ್ಲಿ 200 ಅಂಕಗಳಿಗೆ 100 ಹತ್ತಿರ (ನೂರಕ್ಕಿಂತ ಸ್ವಲ್ಪ ಕಡಿಮೆ) ಅಂಕಗಳಿಸಿದವರೆಲ್ಲ ಮುಖ್ಯ ಪರೀಕ್ಷೆಗೆ ಆಯ್ಕೆಯಾಗುತ್ತಾರೆ.

(ಮುಂದಿನ ವಾರ– ಪಾಠ –3 : ಪ್ರಿಲಿಮ್ಸ್‌ ಪರೀಕ್ಷೆಗೆ ಪಠ್ಯಕ್ರಮಗಳೇನು. ಟಿಪ್ಪಣಿ ಮಾಡಿಕೊಳ್ಳುವುದು ಹೇಗೆ. ಅಣಕು ಪರೀಕ್ಷೆಯ ಮಹತ್ವ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT