ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿವಿಲ್‌ ಸರ್ವೀಸಸ್‌ ಪರೀಕ್ಷೆಯ ಪ್ರಾಥಮಿಕ ಪಾಠಗಳು

ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಹುದ್ದೆಗಾಗಿ ಪ್ರಿಲಿಮ್ಸ್‌ ಪರೀಕ್ಷೆ
Last Updated 16 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಸಿವಿಲ್‌ ಸರ್ವೀಸಸ್‌ ಹುದ್ದೆಗಳಿಗಾಗಿ ನಡೆಯುವ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳ ಪ್ರಾಥಮಿಕ ವಿವರ, ಪ್ರಶ್ನೆ ಪತ್ರಿಕೆಗಳು, ಅಂಕಗಳು ಹಾಗೂ ಮೌಲ್ಯಮಾಪನ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.

**

ಸಿವಿಲ್‌ ಸರ್ವೀಸಸ್‌ ಪರೀಕ್ಷೆ (ಐಎಎಸ್‌, ಐಪಿಎಸ್.. ಇತ್ಯಾದಿ) ಪಾಸ್ ಮಾಡುವುದು ಎಂಜಿನಿಯರಿಂಗ್‌, ಮೆಡಿಕಲ್ ಪರೀಕ್ಷೆಗಳನ್ನು ಪಾಸು ಮಾಡಿದಂತಲ್ಲ. ಇದು ಡಿಗ್ರಿ ಪಡೆದ ಯಾರು ಬೇಕಾದರೂ ಬರೆಯಬಹುದಾದ ಪರೀಕ್ಷೆಯಾಗಿದ್ದರೂ, ಪಾಸಾಗುವುದು ಕಠಿಣಾತಿ ಕಠಿಣ. ತೇರ್ಗಡೆ ಎಂದರೆ ಮೊದಲ ಸಾವಿರದಲ್ಲಿ ಸ್ಥಾನಗಳಿಸುವುದು.

ಪ್ರತಿ ವರ್ಷ ಸುಮಾರು 11 ಲಕ್ಷ ಮಂದಿ ಬರೆಯುವ ಈ ಪರೀಕ್ಷೆಯಲ್ಲಿ ಅಂತಿಮ ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆಯುವವರು ಕೇವಲ 1000 ಮಂದಿ. ನಂತರ ಐಎಎಸ್ ಐಪಿಎಸ್ ನಂತಹ ಹುದ್ದೆಗಳಿಗೆ ಆಯ್ಕೆಯಾಗುವವರು ಕೇವಲ 200 ರಿಂದ 300 ಮಂದಿ. ಇಂಥವರಲ್ಲಿ ಅತ್ಯುನ್ನತ ರ‍್ಯಾಂಕ್ ಗಳಿಸುವವರ ತಾಕತ್ತು – ಛಲ ಎಂಥದ್ದಿರಬಹುದು ನೀವೇ ಅಂದಾಜಿಸಿ.

ಯಾರು ಪರೀಕ್ಷೆ ಬರೆಯಬಹುದು?
ಪದವಿ ಶಿಕ್ಷಣ ಪಡೆಯುತ್ತಿರುವ ಅಥವಾ ಪದವಿ ಮುಗಿಸಿದ 21 ವರ್ಷ ವಯಸ್ಸು ಮತ್ತು ನಂತರದ ವಯೋಮಾನದ ಭಾರತೀಯ, ನೇಪಾಳ, ಭೂತಾನ್, ಜನವರಿ 1, 1962 ಕ್ಕೂ ಮುಂಚೆ ಭಾರತಕ್ಕೆ ಬಂದು ಇಲ್ಲಿಯೇ ಶಾಶ್ವತವಾಗಿ ನೆಲೆಸಿರುವ ಟಿಬೆಟಿಯನ್ ನಿರಾಶ್ರಿತರು, ಭಾರತ ಮೂಲದವರಾಗಿದ್ದು ಇಥಿಯೋಪಿಯ, ಕೀನ್ಯಾ, ಮಲಾವಿ, ಮಯನ್ಮಾರ್, ಪಾಕಿಸ್ತಾನ, ಶ್ರೀಲಂಕ, ತಾಂಜೇನಿಯ, ಉಗಾಂಡ, ವಿಯೆಟ್ನಾಂ, ಜಾಯ್ರೆ, ಜಾಂಬಿಯಗಳಿಂದ ವಲಸೆ ಬಂದು ಇಲ್ಲಿಯೇ ಶಾಶ್ವತವಾಗಿ ನೆಲಸುವ ಉದ್ದೇಶ ಹೊಂದಿರುವ ಪ್ರಜೆಗಳು ಈ ಪರೀಕ್ಷೆ ತೆಗೆದುಕೊಳ್ಳಲು ಆರ್ಹರು. ಆದರೆ ಐಎಎಸ್‌, ಐಪಿಎಸ್‌ ಮತ್ತು ಐಎಫ್‌ಎಸ್‌(ಇಂಡಿಯನ್ ಫಾರಿನ್ ಸರ್ವಿಸ್) ಹುದ್ದೆಗಳು ಭಾರತದ ಪ್ರಜೆಗಳಿಗೆ ಮಾತ್ರ ಮೀಸಲು.

ಜನರಲ್ ಮೆರಿಟ್‌ನ ವಿದ್ಯಾರ್ಥಿಗಳು ತಮ್ಮ 32ನೇ ವಯಸ್ಸಿನವರೆಗೆ ಒಟ್ಟು ಆರು ಬಾರಿ ಈ ಸಿವಿಲ್ ಸರ್ವೀಸ್‌ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬಹುದು. ಇತರೆ ಹಿಂದುಳಿದ ವರ್ಗದವರು 35 ನೇ ವಯಸ್ಸಿನವರೆಗೆ 9 ಬಾರಿ ಪರಿಕ್ಷೆ ಬರೆಯಬಹುದು. ಪರಿಶಿಷ್ಟಜಾತಿ/ ಪಂಗಡದವರಿಗೆ ಪರೀಕ್ಷೆ ಬರೆಯಲು ಮಿತಿ ಇಲ್ಲ. ಆದರೆ 37 ನೇ ವಯಸ್ಸಿನ ನಂತರ ಪರೀಕ್ಷೆ ಬರೆಯುವಂತಿಲ್ಲ.

ಪೂರ್ವ ಭಾವಿ ಪರೀಕ್ಷೆ (ಪ್ರಿಲಿಮ್ಸ್)
ಇದು ಮೊದಲ ಹಂತ. ಇದನ್ನು ಫಸ್ಟ್ ಫಿಲ್ಟರ್ ಅಥವಾ ಸ್ಕ್ರೀನಿಂಗ್ ಟೆಸ್ಟ್ ಎನ್ನುತ್ತಾರೆ. ಇದರಲ್ಲಿ ತಲಾ ಎರಡು ತಾಸಿನ ವಸ್ತುನಿಷ್ಠ (objective) ಮಾದರಿಯ ಎರೆಡು ಪತ್ರಿಕೆಗಳಿರುತ್ತವೆ. ಇಲ್ಲಿ ಪಡೆಯುವ ಅಂಕಗಳನ್ನು ಮುಂದಿನ ಹಂತದ ಪರೀಕ್ಷೆಯ ರ‍್ಯಾಂಕಿಂಗ್‌ಗೆ ಪರಿಗಣಿಸುವುದಿಲ್ಲ. ಆದರೂ ಎರಡೂ ಪತ್ರಿಕೆಗಳನ್ನು ಕಡ್ಡಾಯವಾಗಿ ಪಾಸ್ ಮಾಡಲೇಬೇಕು. ಮುಖ್ಯ ಪರೀಕ್ಷೆ (ಮೇನ್ ಎಕ್ಸಾಮ್‌) ವಿಸ್ತೃತದ ಉತ್ತರ ಬರೆಯುವ (ಡಿಸ್ಕ್ರಿಪ್ಟಿವ್‌) ಮಾದರಿಯದಾಗಿದ್ದು ಒಟ್ಟು 9 ಪತ್ರಿಕೆಗಳಿಗೆ ಉತ್ತರಿಸಬೇಕು.

ಪ್ರಿಲಿಮ್ಸ್‌ನ ಮೊದಲ ಪತ್ರಿಕೆ ಜನರಲ್‌ ಸ್ಟಡೀಸ್ ಅಥವಾ ಸಾಮಾನ್ಯ ಅಧ್ಯಯನ.ಎರಡನೆಯದನ್ನು ಸಿಎಸ್‌ಎಟಿ (ಸಿವಿಲ್ ಸರ್ವಿಸಸ್ ಆಪ್ಟಿಟ್ಯೂಡ್ ಟೆಸ್ಟ್) ಎನ್ನುತ್ತಾರೆ. ಎರಡೂ ಪ್ರಶ್ನೆ ಪತ್ರಿಕೆಗಳು ವಸ್ತುನಿಷ್ಠ ಮಾದರಿಯಲ್ಲಿರುತ್ತವೆ. ಒಂದೊಂದೂ ಪತ್ರಿಕೆಯೂ 200 ಅಂಕಗಳದ್ದಾಗಿದ್ದು 2 ಗಂಟೆಯ ಅವಧಿಯಲ್ಲಿ ಉತ್ತರಿಸಬೇಕು. ಜನರಲ್ ಸ್ಟಡೀಸ್‌ನಲ್ಲಿ 2 ಅಂಕಗಳ ನೂರು ಪ್ರಶ್ನೆಗಳಿರುತ್ತವೆ. ಸಿಎಸ್‌ಎಟಿ ಪತ್ರಿಕೆಯಲ್ಲಿ 2.5 ಅಂಕದ 80 ಪ್ರಶ್ನೆಗಳಿರುತ್ತವೆ. ದೃಷ್ಟಿದೋಷವುಳ್ಳ ಅಭ್ಯರ್ಥಿಗಳಿಗೆ 20 ನಿಮಿಷಗಳ ಹೆಚ್ಚಿನ ಕಾಲಾವಕಾಶವಿರುತ್ತದೆ. ಪ್ರಶ್ನೆಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿರುತ್ತವೆ.

ಜನರಲ್ ಸ್ಟಡೀಸ್ ಪತ್ರಿಕೆಗೆ ಕನಿಷ್ಠ ಇಂತಿಷ್ಟು ಅಂಕ ಬರಬೇಕು ಎಂಬುದನ್ನು ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ಆಯಾ ವರ್ಷ ನಿರ್ಧರಿಸುತ್ತದೆ. ಸಿಎಸ್‌ಎಟಿಯಲ್ಲಿ ಕನಿಷ್ಠ 66 (ಶೇ 33) ಅಂಕಗಳನ್ನು ಗಳಿಸಿದವರು ಮಾತ್ರ ಮುಖ್ಯ ಪರೀಕ್ಷೆಗೆ ಹಾಜರಾಗುವ ಆರ್ಹತೆ ಪಡೆಯುತ್ತಾರೆ. ಆಂಗ್ಲ ಭಾಷೆಯ ಕಾಂಪ್ರೆಹೆನ್ಶನ್‌ಗೆ ಸಂಬಂಧಿಸಿದ ಪ್ರಶ್ನೆಯನ್ನು ಇಂಗ್ಲಿಷ್‌ನಲ್ಲೇ ಉತ್ತರಿಸಬೇಕು. ಪ್ರತಿ ಪತ್ರಿಕೆಗೂ ಋಣಾತ್ಮಕ (Negetive) ಮೌಲ್ಯಮಾಪನವಿರುತ್ತದೆ. ಪ್ರತಿಮೂರು ತಪ್ಪು ಉತ್ತರಗಳಿಗೆ 1 ಅಂಕ ಕಡಿಮೆಯಾ ಗುತ್ತದೆ ಅಥವಾ ಒಂದು ತಪ್ಪು ಉತ್ತರಕ್ಕೆ 1/3 ಅಂಕ ಕಡಿತಗೊಳ್ಳುತ್ತದೆ. ಸಿಎಸ್‌ಎಟಿ ಪತ್ರಿಕೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.83 ಅಂಕ ಕಡಿತಗೊಳ್ಳುತ್ತದೆ. ಆದರೆ ಈ ಪ್ರಶ್ನೆಪತ್ರಿಕೆಯ ಪ್ರಶ್ನೆ ಸಂಖ್ಯೆ 74 ರಿಂದ 80ರ ವರೆಗಿನ 8 ಪ್ರಶ್ನೆಗಳು ತೀರ್ಮಾನ ಕೈಗೊಳ್ಳುವಿಕೆಗೆ (Decision Making) ಸಂಬಂಧಿಸಿರುವುದರಿಂದ ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ.

ಮುಖ್ಯ ಪರೀಕ್ಷೆ ಹೇಗಿರುತ್ತದೆ?
ಇದು ಆಫ್‌ಲೈನ್ ಪರೀಕ್ಷೆಯಾಗಿದ್ದು ಒಟ್ಟು 9 ಪತ್ರಿಕೆಗಳಿಗೆ ಉತ್ತರ ಬರೆಯಬೇಕು. ಪ್ರತಿ ಪತ್ರಿಕೆಯೂ 3 ಗಂಟೆ ಅವಧಿಯದಾಗಿದ್ದು ದೃಷ್ಟಿದೋಷದವರಿಗೆ 30 ನಿಮಿಷ ಹೆಚ್ಚು ಕಾಲಾವಕಾಶ ಕಲ್ಪಿಸಲಾಗುತ್ತದೆ. ಇಂಗ್ಲಿಷ್ ಭಾಷೆಯ ಪತ್ರಿಕೆ ಮತ್ತು ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿರುವ (ಭಾಷೆಗಳ ವಿವರಕ್ಕೆ ಬಾಕ್ಸ್‌ ನೋಡಿ) ಯಾವುದಾದರೊಂದು ಭಾಷೆಯ ತಲಾ 300 ಅಂಕಗಳ ಪ್ರಶ್ನೆಪತ್ರಿಕೆಗಳನ್ನು ಅಭ್ಯರ್ಥಿಗಳು ಉತ್ತರಿಸಬೇಕು. ಇಲ್ಲಿ ವಿದ್ಯಾರ್ಥಿಯ ಭಾಷಾ ಪ್ರೌಢಿಮೆ ಮತ್ತು ವಿಶ್ಲೇಷಣಾ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಇದರಲ್ಲಿ ಗಳಿಸುವ ಅಂಕಗಳನ್ನು ರ‍್ಯಾಂಕಿಂಗ್‌ಗೆ ಪರಿಗಣಿಸಲಾಗುವುದಿಲ್ಲ. ಆದರೆ ಇವೆರಡೂ ಪತ್ರಿಕೆಗಳನ್ನು ನಿಗದಿಪಡಿಸಿದ ಕನಿಷ್ಠ ಅಂಕಗಳೊಂದಿಗೆ ಪಾಸ್ ಮಾಡಬೇಕು. ಹೆಚ್ಚಿನ ವಿವರಗಳಿಗಾಗಿ: https://upsc.gov.in

ಶೆಡ್ಯೂಲ್ 8 ರಲ್ಲಿರುವ ಭಾಷೆಗಳು
ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ, ಹಿಂದಿ, ಕೊಂಕಣಿ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯ, ಪಂಜಾಬಿ, ಸಂಸ್ಕೃತ, ಸಿಂಧಿ, ತಮಿಳು, ತೆಲುಗು, ಉರ್ದು, ಬೋಡೊ, ಡೋಗ್ರಿ, ಮೈಥಿಲಿ, ಸಂಥಲಿ, ಕಾಶ್ಮೀರಿ ಮತ್ತು ಇಂಗ್ಲಿಷ್.

(ಮುಂದಿನ ವಾರ ದ ಪಾಠ–2 : ಪ್ರಿಲಿಮ್ಸ್ ಪ್ರಶ್ನೆ ಪತ್ರಿಕೆಗಳನ್ನು ಎದುರಿಸಲು ಬೇಕಾದ ತಯಾರಿ)

‘ಪಾಠ’ಗಳ ಸರಣಿ: ಹೊಸದಾಗಿ ಐಎಎಸ್‌, ಐಪಿಎಸ್‌ನಂತಹ ಸಿವಿಲ್‌ ಸರ್ವೀಸ್‌ ಪರೀಕ್ಷೆ ಬರೆಯುವವರಿಗೆ ಪೂರಕ ಮಾಹಿತಿ ನೀಡುವುದಕ್ಕಾಗಿ ಸಿವಿಲ್‌ ಸರ್ವೀಸಸ್ ಪರೀಕ್ಷೆಯ ‘ಪ್ರಾಥಮಿಕ ಪಾಠ’ಗಳ ಸರಣಿ ಆರಂಭಿಸಲಾಗಿದೆ. ಈ ಸರಣಿಯಲ್ಲಿ ಪರೀಕ್ಷಾ ಸಿದ್ಧತೆ, ಅಧ್ಯಯನ ವಿಷಯಗಳ ಪರಿಚಯ ಸೇರಿದಂತೆ ಹಲವು ಮಾಹಿತಿಗಳನ್ನು ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT