ಬುಧವಾರ, ಅಕ್ಟೋಬರ್ 20, 2021
29 °C

KAS ಅಧಿಕಾರಿ ಶ್ವೇತಾ ಬಿಡಿಕರ್ ಸಂದರ್ಶನ: ಓದಿನ ಮನನ, ಬರವಣಿಗೆಗೆ ಇಲ್ಲಿದೆ ಸಲಹೆ

ಶಿ.ಗು. ಹಿರೇಮಠ Updated:

ಅಕ್ಷರ ಗಾತ್ರ : | |

ಹುನಗುಂದ ತಾಲ್ಲೂಕಿನ ಪ್ರೊಬೇಶನರಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿ ಸದ್ಯ ಬಾಗಲಕೋಟೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ವೇತಾ ಬಿಡಿಕರ್ ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯರು. ಯಾವುದೇ ಸ್ಪರ್ಧಾತ್ಮಕ ಕೇಂದ್ರದಲ್ಲಿ ತರಬೇತಿ ಪಡೆಯದೇ 2017ರಲ್ಲಿ ನಡೆದ ಕೆಎಎಸ್ ಪರೀಕ್ಷೆಯಲ್ಲಿ ಮೂರು ಹಂತಗಳಲ್ಲಿಯೂ ಉತ್ತಮ ಅಂಕ ಪಡೆದು ರಾಜ್ಯಕ್ಕೆ 28ನೇ ರ‍್ಯಾಂಕ್ ಪಡೆದಿದ್ದಾರೆ. ಬಾಹ್ಯವಾಗಿ ಪದವಿ ಪೂರೈಸಿದ್ದಲ್ಲದೇ ಕೇಂದ್ರ ಸರ್ಕಾರಿ ನೌಕರಿ ನಿಭಾಯಿಸುತ್ತಾ ಕೆಎಎಸ್ ಅಧಿಕಾರಿ ಹುದ್ದೆ ಅಲಂಕರಿಸಿದ್ದು ವಿಶೇಷ.

ಅವರು ಕಂದಾಯ ಇಲಾಖೆಯಲ್ಲಿ ಎಸಿ ಹುದ್ದೆಗೆ ಆಯ್ಕೆಯಾದರು. ಯಾವುದೇ ಕೋಚಿಂಗ್ ತೆಗೆದುಕೊಂಡಿಲ್ಲ. ಕೆಎಎಸ್ ಮತ್ತು ಐಎಎಸ್ ತೇರ್ಗಡೆಯಾದವರ ಬಳಿ ಹೋಗಿ ಮಾರ್ಗದರ್ಶನ ಪಡೆದ ಅವರು ತಮ್ಮ ಪಯಣದ ಹಾದಿಯನ್ನು ಇಲ್ಲಿ ತೆರೆದಿಟ್ಟಿದ್ದಾರೆ.

* ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕೆಂಬ ಆಸೆ ಮೂಡಿದ್ದು ಹೇಗೆ?
ಚಿಕ್ಕೋಡಿಯಲ್ಲಿ ಪ್ರೌಢಶಾಲೆ ಓದುವಾಗ ನಿತ್ಯ ಶಾಲೆಗೆ ತೆರಳುವ ಸಂದರ್ಭದಲ್ಲಿ ದಾರಿಯಲ್ಲಿ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಕಚೇರಿ ದಾಟಿಕೊಂಡು ಹೋಗಬೇಕಾಗಿತ್ತು. ಅಲ್ಲಿ ಮೇಲಧಿಕಾರಿಗಳಿಗೆ ಕೊಡುವ ಗೌರವ, ಅವರ ಅಧಿಕಾರದ ಗತ್ತು, ಕಾರ್ಯವೈಖರಿ ನೋಡಿ ನಾನೂ ಕೆಎಎಸ್ ಅಧಿಕಾರಿಯಾಗಬೇಕೆಂಬ ಆಸೆ ಮೂಡಿತು. ನಮ್ಮ ಶಾಲೆಯ ಇಂಗ್ಲಿಷ್‌ ಶಿಕ್ಷಕರಾದ ರಾಘವೇಂದ್ರ ಕುಲಕರ್ಣಿ ಅವರು ಪಾಠ ಮಾಡುವಾಗ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಒಲವನ್ನು ಮೂಡಿಸಿದರು. ಮುಂದೆ ಎಸ್ಸೆಸ್ಸೆಲ್ಸಿಯಲ್ಲಿ ಶೇ 90 ಅಂಕ ಪಡೆದಿದ್ದರಿಂದ ಮನೆಯಲ್ಲಿ ಎಲ್ಲರೂ ವಿಜ್ಞಾನ ವಿಭಾಗಕ್ಕೆ ಸೇರಬೇಕೆಂಬ ಒತ್ತಾಸೆ ಮಾಡಿದರು. ನಾನು ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗಲು ಕಲಾ ವಿಭಾಗ ಆಯ್ಕೆ ಮಾಡಿಕೊಂಡೆ.

* ನಿಮ್ಮ ಶೈಕ್ಷಣಿಕ ಜೀವನ ಹೇಗಿತ್ತು ?
ನಮ್ಮ ತಂದೆ ಎಲ್.ಐ.ಸಿ ಯಲ್ಲಿ ಉದ್ಯೋಗಿಯಾಗಿದ್ದರು. ನಮ್ಮದು ಮಧ್ಯಮ ವರ್ಗದ ಕುಟುಂಬ. ನಮ್ಮ ಅಕ್ಕ ಬಿಎಡ್ ಮಾಡಿದ್ದರಿಂದ ನಾನು ಕೆಎಎಸ್ ಮಾಡಲು ಅನುಕೂಲವಾಯಿತು. ಪಿಯುಸಿಯಲ್ಲಿ ಶೇ 94 ಅಂಕ ಗಳಿಸಿದ್ದರಿಂದ ಅಂಚೆ ಕಚೇರಿಯಲ್ಲಿ ಅಂಚೆ ಸಹಾಯಕಿ ಕೆಲಸಕ್ಕೆ ನೇಮಕಗೊಂಡೆ. ಇದರಿಂದ ಆರ್ಥಿಕವಾಗಿ ಕುಟುಂಬ ನಡೆಸಲು ಸಹಾಯವಾಯಿತು. ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಾ ಬಿಎ ಪದವಿ(ಬಾಹ್ಯ) ಅಧ್ಯಯನ ಹಾಗೂ ಇಂಗ್ಲಿಷ್‌ ಮತ್ತು ಸಾರ್ವಜನಿಕ ಆಡಳಿತ ವಿಷಯದಲ್ಲಿ ಎಂಎ ಪಾಸು ಮಾಡಿಕೊಂಡೆ. ಆಗ ನನಗೆ ಮನೆಯಲ್ಲಿ ಮದುವೆ ಮಾಡುವ ಆಲೋಚನೆ ಮಾಡಿದರು. ನನಗೆ ಉದ್ಯೋಗ ಸಿಕ್ಕಿರಬಹುದು, ಆದರೆ ನನ್ನ ಗುರಿ ಕೆಎಎಸ್ ಎಂದು ತಿಳಿಸಿದಾಗ ಮನೆಯಲ್ಲಿ ಎಲ್ಲರೂ ಸಮ್ಮತಿಸಿದರು.

* ಕರ್ತವ್ಯದ ಜೊತೆಗೆ ಕೆಎಎಸ್ ತಯಾರಿ ಹೇಗಿತ್ತು?
ನಾನು ಅಂಚೆ ಇಲಾಖೆಯಲ್ಲಿ 2008ರಲ್ಲಿ ಕೆಲಸಕ್ಕೆ ಸೇರಿಕೊಂಡಾಗ ನನಗೆ 19 ವರ್ಷ. ಕೆಲಸ ನಿರ್ವಹಿಸುತ್ತಾ ಎರಡು ವರ್ಷ ನನ್ನ ಆಸೆ ತಣ್ಣಗಾಗಿತ್ತು. ಆದರೆ ಗುರಿ ಜೀವಂತವಾಗಿತ್ತು. ಅಂಚೆ ಇಲಾಖೆಯಲ್ಲಿ ನನ್ನ ಜೊತೆ ಕಾರ್ಯನಿರ್ವಸುತ್ತಿದ್ದ ಸಹೋದ್ಯೋಗಿ ಸಂತೋಷ ಕಾಮಗೌಡ ಅವರು ಕೆಎಎಸ್ ಪರೀಕ್ಷೆಗೆ ತಯಾರಿ ನಡೆಸಿದ್ದರು. ಅವರ ಸಹಕಾರ ಮತ್ತು ಪ್ರೋತ್ಸಾಹ ನನಗೆ ದೊರೆಯಿತು. ಮತ್ತೆ ನಾನು ಕೆಎಎಸ್ ಅಧಿಕಾರಿ ಆಗಬೇಕೆಂಬ ಆಸೆಗೆ ಜೀವಂತಿಕೆ ಬಂದಿತು. ಸಂತೋಷ ಅವರು 2014ರಲ್ಲಿ ಕೆಎಎಸ್ ಉತ್ತೀರ್ಣರಾದರು. ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ ನನಗೆ ಮಾರ್ಗದರ್ಶನ ನೀಡಿದರು. ಅವರ ಮಾರ್ಗದರ್ಶನದಿಂದ ನನಗೆ ಹಲವು ಬಹುಮುಖ್ಯ ಅಧ್ಯಯನ ಸಾಮಗ್ರಿಗಳು ದೊರೆತವು. ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದರಿಂದ ಕನ್ನಡ ಸಾಹಿತ್ಯ ಆಯ್ಕೆ ಮಾಡಿಕೊಂಡೆ. ಸಾಹಿತಿ ಸಾ.ಶಿ.ಮರುಳಯ್ಯನವರ ಆಡಿಯೊ ಕ್ಲಿಪಿಂಗ್ ತುಂಬಾ ಸಹಾಯವಾಯಿತು. ಬಿಡುವಿದ್ದಾಗ ನಾನು ಆಡಿಯೊ ಕೇಳುತ್ತಿದ್ದೆ. ನನ್ನ ಕೆಲಸದ ಜೊತೆಗೆ ಆಡಿಯೊ ಉಪಯೋಗಕ್ಕೆ ಬಂತು. ಬೆಳಿಗ್ಗೆ 3 ಗಂಟೆ ಮತ್ತು ಸಂಜೆ 3 ಗಂಟೆ ಅಧ್ಯಯನಕ್ಕೆ ಸಮಯ ಮೀಸಲಿಟ್ಟಿದ್ದೆ.

* ಮುಂದಿನ ತಯಾರಿ ಹೇಗಿತ್ತು?
2011 ಮತ್ತು 14ರಲ್ಲಿ ನಡೆದ ಕೆಎಎಸ್ ಅಂತಿಮ ಪರೀಕ್ಷೆಯಲ್ಲಿ ಎರಡು ಬಾರಿ ವಿಫಲಳಾದೆ. ಆದರೆ ಧೃತಿಗೆಡಲಿಲ್ಲ. ನಿರಂತರ ಅಧ್ಯಯನ ಮುಂದುವರೆಸಿದೆ. ಎರಡು ಸಲ ಸೋತಿದ್ದೇ ಮುಂದಿನ ಸಲ ಪಾಸಾಗಲು ಸ್ಪೂರ್ತಿಯಾಯಿತು. ಮೂರನೇ ಬಾರಿ ಹೆಚ್ಚಿನ ಓದಿಗೆ ಅವಕಾಶ ದೊರೆಯಿತು. 2017ರಲ್ಲಿ ಕೆಎಎಸ್ ಅಂತಿಮ ಪರೀಕ್ಷೆಗೆ ಹೆಚ್ಚಿನ ಅಧ್ಯಯನ ಮಾಡಲು ಮೂರು ತಿಂಗಳು ಕೆಲಸಕ್ಕೆ ರಜೆ ಹಾಕಿದೆ. ದಿನಕ್ಕೆ ಒಂಬತ್ತು ತಾಸು ಅವಕಾಶ ದೊರೆಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಿಂದ ದೂರವಿದ್ದೆ. ದೀರ್ಘವಾಗಿ ಓದಿದ ನಂತರ ಮೂರು ಗಂಟೆ ಬರವಣಿಗೆಯಲ್ಲಿ ತೊಡಗಿಸಿಕೊಂಡೆ. ನಿತ್ಯ ಮೂರು ತಾಸು ಓದಿದ ವಿಷಯವನ್ನು ನೆನಪಿಸಿಕೊಂಡು ಬರೆಯುತ್ತಿದ್ದೆ. ಬರವಣಿಗೆಯಲ್ಲಿ ಪಳಗುವಂತೆ ಸಿದ್ಧಳಾದೆ.

* ಸ್ಪರ್ಧಾರ್ಥಿಗಳಿಗೆ ಕೆಎಎಸ್ ತರಬೇತಿ ಅವಶ್ಯವೆ?
ಯಾರಿಗೆ ಅವಶ್ಯಕತೆ ಇದೆಯೋ ಅವರು ತರಬೇತಿ ಪಡೆಯಬಹುದು. ತರಬೇತಿ ಪಡೆಯದೆಯೂ ಹಲವರು ಯಶಸ್ವಿಯಾಗಿದ್ದಾರೆ. ತರಬೇತಿ ಪಡೆದವರೂ ಉತ್ತೀರ್ಣರಾಗಿದ್ದಾರೆ. ಈಗ ಆನ್‌ಲೈನ್ ತರಬೇತಿಗಳಿವೆ. ಗೂಗಲ್‌ನಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ವೆಬ್‌ಸೈಟ್‌ಗಳಿವೆ. ತರಬೇತಿ ಪಡೆಯಲು ಅಸಾಧ್ಯವಾದರೆ ಮನೆಯಲ್ಲಿದ್ದುಕೊಂಡೇ ಶ್ರಮ ಹಾಕಿದರೆ ಖಂಡಿತ ಯಶಸ್ವಿಯಾಗಬಹುದು. ಗ್ರಂಥಾಲಯಗಳಿಗೆ ಭೇಟಿಕೊಡಬಹುದು.

* ಸ್ಪರ್ಧಾರ್ಥಿಗಳಿಗೆ ನಿಮ್ಮ ಸಲಹೆ ಏನು?
ಎಲ್ಲಕ್ಕಿಂತ ಮುಖ್ಯವಾಗಿ ಒಂದು ತಪಸ್ಸು ಎಂದು ಅದನ್ನು ಪರಿಗಣಿಸಬೇಕು. ಸಾಮಾನ್ಯ ಅಧ್ಯಯನಕ್ಕಾಗಿ ದಿನಾ ಪತ್ರಿಕೆ ಕೊಂಡು ಓದುತ್ತಿದ್ದೆ. ನೋಟ್ಸ್ ಮಾಡಿಟ್ಟುಕೊಳ್ಳುವುದು ನನ್ನ ದಿನನಿತ್ಯದ ಕೆಲಸವಾಗಿತ್ತು. ಕೇವಲ ಓದುತ್ತಾ ಹೋಗುವುದಕ್ಕಿಂತ ಓದಿದ್ದನ್ನು ಮನನ ಮಾಡಿಕೊಳ್ಳಲು ಬರವಣಿಗೆ ತುಂಬಾ ಅನುಕೂಲ. ಆರು ತಾಸು ಅಧ್ಯಯನ ಮಾಡಿದರೆ ಮೂರು ಗಂಟೆ ಬರೆದು ತೆಗೆಯಬೇಕು. ಈ ಪ್ರವೃತ್ತಿ ಪ್ರತಿಯೊಬ್ಬ ಸ್ಪರ್ಧಾರ್ಥಿಗಳು ಬೆಳೆಸಿಕೊಳ್ಳಬೇಕು. ಓದುವ ಧ್ಯಾನ ಬರೆಯುವಾಗಲೂ ಇರಬೇಕು. ಸ್ಪಷ್ಟ ಗುರಿ, ನಿತ್ಯ ಶ್ರಮ ಇದ್ದರೆ ಯಶಸ್ವಿ ಕಟ್ಟಿಟ್ಟ ಬುತ್ತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು