ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ವಿ.ವಿ ಪ್ರವೇಶಕ್ಕಾಗಿ ಭಾಷಾ ಪ್ರವೇಶ ಪರೀಕ್ಷೆಗಳು: ಟೊಫೆಲ್ ಪರೀಕ್ಷಾ ವಿಧಗಳು

Published 16 ಜುಲೈ 2023, 23:30 IST
Last Updated 16 ಜುಲೈ 2023, 23:30 IST
ಅಕ್ಷರ ಗಾತ್ರ

ಗುರುರಾಜ್‌ ಎಸ್‌. ದಾವಣಗೆರೆ

ಇಂಗ್ಲಿಷ್‌ ಮಾತನಾಡುವ ವಿದೇಶಗಳ ವಿಶ್ವವಿದ್ಯಾಲಯಗಳ ಪ್ರವೇಶ ಬಯಸುವ ಭಾರತೀಯ ವಿದ್ಯಾರ್ಥಿಗಳು ಎದುರಿಸಬೇಕಾದ ಟೊಫೆಲ್‌(TOEFL) ಪರೀಕ್ಷೆ ಕುರಿತು ಕಳೆದ ಸಂಚಿಕೆಯಲ್ಲಿ ಪ್ರಾಥಮಿಕ ಮಾಹಿತಿ ನೀಡಲಾಗಿತ್ತು. ಈ ಸಂಚಿಕೆಯಲ್ಲಿ ಪರೀಕ್ಷೆಯ ವಿಧಗಳು, ಎಲ್ಲೆಲ್ಲಿ ಈ ಪರೀಕ್ಷೆಗೆ ಮಾನ್ಯತೆ ಇದೆ.. ಇಂಥ ಹಲವು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳೋಣ.

ಟೊಫೆಲ್ ಪರೀಕ್ಷೆಗೆ ನೋಂದಣಿ ಮಾಡಿಕೊಂಡವರು ನಾಲ್ಕು ವಿವಿಧ ಬಗೆಯ ಪರೀಕ್ಷೆ ಎದುರಿಸಬಹುದು.

1.ಇಟಿಎಸ್‌ ಟೊಫೆಲ್ ಐಬಿಟಿ(ETS TOEFL IBT)– ಐಬಿಟಿ ಎಂದರೆ ಇಂಟರ್‌ನೆಟ್ ಬೇಸ್ಡ್‌  ಟೆಸ್ಟ್ ಎಂದರ್ಥ. ಈ ವಿಧಾನದಲ್ಲಿ ನೋಂದಣಿ ಮಾಡಿಕೊಂಡ ನಿಗದಿತ ಪರೀಕ್ಷಾ ಕೇಂದ್ರಕ್ಕೆ ತೆರಳಿ ಅಲ್ಲಿನ ಪರೀಕ್ಷಾ ಕೊಠಡಿಯಲ್ಲಿ ಇಂಟರ್‌ನೆಟ್ ಆಧಾರಿತ ಪರೀಕ್ಷೆ ಬರೆಯಬಹುದು.

2. ಟೊಫೆಲ್ ಐಬಿಟಿ ಹೋಮ್ ಎಡಿಷನ್‌ (TOEFL iBT home edition)– ಅಂದರೆ ಪರೀಕ್ಷಾ ಕೇಂದ್ರಕ್ಕೆ ತೆರಳದೆ ಮನೆಯಿಂದಲೇ ಆನ್‌ಲೈನ್ ಮೂಲಕ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.

3. ಟೊಫೆಲ್‌ ಟೆಸ್ಟ್‌ ಆನ್‌ ಪೇಪರ್‌ (TOEFL Test on Paper) – ಅಂದರೆ ನೋಂದಣಿ ಮಾಡಿಕೊಂಡ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪೆನ್ನು, ಪೇಪರ್ ಬಳಸಿ 90 ಅಂಕಗಳ ಓದುವ, ಕೇಳಿಸಿಕೊಳ್ಳುವ ಮತ್ತು ಬರೆಯುವ ಪರೀಕ್ಷೆಗಳನ್ನೆದುರಿಸಬಹುದು. ಆದರೆ ಮಾತನಾಡುವ (ಸಂಭಾಷಣೆ) ಪರೀಕ್ಷೆಯನ್ನು ಮನೆಯಿಂದ ಅಥವಾ ಕಂಪ್ಯೂಟರ್‌ ಸೆಂಟರ್‌ಗಳಿಂದ ಆನ್‌ಲೈನ್ ಮಾದರಿಯಲ್ಲಿ ತೆಗೆದುಕೊಳ್ಳಬಹುದು. ಸಂಭಾಷಣೆ ಪರೀಕ್ಷೆಯನ್ನು ಇನ್ನೊಂದು ಬದಿಯಿಂದ ಅಧ್ಯಾಪಕರೇ ನಡೆಸುತ್ತಾರೆ. ಉಳಿದೆರಡು ಮಾದರಿಗಳಲ್ಲೂ ಸಂಭಾಷಣೆ ಪರೀಕ್ಷೆ ನಡೆಸುವ ಅಧ್ಯಾಪಕರ ಸಹಯೋಗದಲ್ಲೇ ನಡೆಯುತ್ತದೆ.

4. ಟೊಫೆಲ್‌ ಎಸೆನ್ಷಿಯಲ್ಸ್‌ ಟೆಸ್ಟ್‌(TOEFL Essentials Test)- ಇದು ಮೊದಲ ಎರಡು ಮಾದರಿಗಳಲ್ಲಿ ಲಭ್ಯವಿರುವ ಪರೀಕ್ಷೆ. ಇದರಲ್ಲಿ ಓದುವ, ಬರೆಯುವ, ಮಾತನಾಡುವ ಮತ್ತು ಕೇಳಿಸಿಕೊಳ್ಳುವ ಪ್ರಶ್ನಾ ವಿಭಾಗಗಳ ಜೊತೆಗೆ ಅಭ್ಯರ್ಥಿಯು ತನ್ನ ಕುರಿತಾದ ಐದು ನಿಮಿಷದ ವಿಡಿಯೊ ಹೇಳಿಕೆ ನೀಡಬೇಕಾಗುತ್ತದೆ. ಪರೀಕ್ಷೆಯ ಅವಧಿ 90 ನಿಮಿಷಗಳು.

ಇಂಗ್ಲಿಷ್ ಭಾಷಾ ಪರೀಕ್ಷೆಗಳು

ಇಂಗ್ಲಿಷ್‌ನ್ನು ಮೂಲಭಾಷೆಯನ್ನಾಗಿ ಮಾತನಾಡುವ ದೇಶಗಳ ವಿವಿಗಳಲ್ಲಿ ಪ್ರವೇಶ ಪಡೆಯಲು ನಾಲ್ಕು ವಿವಿಧ  ಹೆಸರಿನ ಪರೀಕ್ಷೆಗಳಿವೆ.

1. ಟೊಫೆಲ್‌(TOEFL) – Test of English as Foreign Language (3 ಗಂಟೆ 30 ನಿಮಿಷ)

2. ಐಲ್ಟ್ಸ್‌(IELTS) – International English Language Testing system (180 ನಿಮಿಷ)

3.ಪಿಟಿಇ(PTE)– Pearson Test of English  (120 ನಿಮಿಷ)

4. ಡಿಇಟಿ (DET)– Duolingo English Test (60 ನಿಮಿಷ)

ಎಲ್ಲೆಲ್ಲಿ ಮಾನ್ಯತೆ?

ಟೊಫೆಲ್ ಪರೀಕ್ಷೆ ಅಮೆರಿಕ, ಕೆನಡ ದೇಶಗಳಲ್ಲಿ ಹೆಚ್ಚಿನ ಮಾನ್ಯತೆ ಪಡೆದಿದ್ದು ವಿಶ್ವದ 160 ದೇಶಗಳ  ವಿಶ್ವ ವಿದ್ಯಾಲಯಗಳಲ್ಲಿ ಪ್ರವೇಶಾತಿ ನೀಡಲಾಗುತ್ತದೆ. ಅಮೆರಿಕದ ಎಲ್ಲ ವಿವಿಗಳೂ ಸೇರಿ 11 ಸಾವಿರಕ್ಕೂ ಹೆಚ್ಚು ಕಾಲೇಜುಗಳು ಟೊಫೆಲ್ ಪರೀಕ್ಷೆಯ ಫಲಿತಾಂಶವನ್ನು ಪರಿಗಣಿಸುತ್ತವೆ.

ಐಲ್ಟ್ಸ್‌(ILETS) ಪರೀಕ್ಷೆ ಕೆನಡ, ಬ್ರಿಟನ್ ಮತ್ತು ಆಸ್ಟ್ರೇಲಿಯಾಗಳಲ್ಲಿ ಜನಪ್ರಿಯವಾಗಿದೆ. ಪಿಟಿಇ ಪರೀಕ್ಷೆಗೆ  ಬ್ರಿಟನ್‌, ಆಸ್ಟ್ರೇಲಿಯಾ, ಅಮೆರಿಕ ಮತ್ತು ಕೆನಡಗಳಲ್ಲಿ ಮಾನ್ಯತೆ ಇದೆ. ಡುಯೊಲಿಂಗೊ ಪರೀಕ್ಷೆಯು ಅಮೆರಿಕ ಕೆನಡಗಳಿಗೆ ಸೀಮಿತವಾಗಿದೆ.

ಟೊಫೆಲ್ ಪರೀಕ್ಷೆ ವಿಶ್ವದ ಮುಕ್ಕಾಲು ಪಾಲು ದೇಶಗಳಲ್ಲಿ ಮಾನ್ಯತೆ ಪಡೆದಿದೆ ಮತ್ತು ಅಭ್ಯರ್ಥಿಯ ಕ್ಷಮತೆಗೆ ತಕ್ಕಂತೆ ಹೊಂದಾಣಿಕೆ ಮಾಡಿ ಕೊಳ್ಳುತ್ತದೆ. ಉದಾಹರಣೆಗೆ 30 ಅಂಕಗಳ ‘ಓದುವ’( Reading) ಪರೀಕ್ಷಾ ವಿಭಾಗದಲ್ಲಿ ಮೊದಲ ಎರಡು – ಮೂರು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲಾಗದಿದ್ದರೆ ಮುಂದಿನ ವಿಭಾಗಕ್ಕೆ ಅಂದರೆ ‘ಬರೆಯುವ’ ಇಲ್ಲವೆ ‘ಕೇಳಿಸಿಕೊಳ್ಳುವ’ ವಿಭಾಗದಲ್ಲಿ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಿ ಉತ್ತಮ ಅಂಕ ಗಳಿಸಬಹುದು.

ತರಬೇತಿ ಇದೆಯೇ?

ಟೊಫೆಲ್ ಪರೀಕ್ಷೆ ತೆಗೆದುಕೊಳ್ಳುವವರು ನಿಗದಿತ ಶುಲ್ಕ ಪಾವತಿಸಿ ಅಗತ್ಯ ಪರೀಕ್ಷಾ ಪೂರ್ವ ತರಬೇತಿ ಪಡೆಯಬಹುದು. ಪರೀಕ್ಷೆ ನಡೆಸುವ ಇಟಿಎಸ್‌ನವರೇ ಆನ್‌ಲೈನ್ ಮಾದರಿಯಲ್ಲಿ ಟೊಫೆಲ್‌ ಪ್ರಾಕ್ಟೀಸ್ ಆನ್‌ಲೈನ್‌ (TOEFL Practice Online –TPO)ಎಂಬ ವಿಶೇಷ ತರಬೇತಿ ನಿಡುತ್ತಾರೆ. ಇವರದೇ ಅಂಗಸಂಸ್ಥೆಯಾದ ‘ದಿ ಇನ್‌ಸ್ಪೈರ್ಸ್‌ ಗೈಡ್’ ವಿಭಾಗವು ಆರು ವಾರಗಳ ಸಮಗ್ರ ತರಬೇತಿ ನೀಡಿ ವಿದ್ಯಾರ್ಥಿಗಳನ್ನು ಟೊಫೆಲ್ ಪರೀಕ್ಷೆಗೆ ಅಣಿಗೊಳಿಸುತ್ತದೆ. ಕ್ವಿಜ್, ವಿಡಿಯೊ ಮತ್ತು ನುರಿತ ಅಧ್ಯಾಪಕರೊಂದಿಗೆ ಸಂವಾದಗಳ ಮೂಲಕ ತರಬೇತಿ ಇರುತ್ತದೆ. ನಿಗದಿತ ಪರೀಕ್ಷೆಗೆ ಮುನ್ನ ಅಭ್ಯಾಸ ಪರೀಕ್ಷೆ (Practice Test) ಗಳಿಗೂ ಅವಕಾಶವಿದೆ. ಇದಲ್ಲದೆ ಟೊಫೆಲ್‌ ಐಬಿಟಿ ಪ್ರೆಪ್‌ ಪ್ಲಾನರ್‌(TOEFL iBT Test Prep Planner) ಎಂಬ  ಎಂಟು ವಾರಗಳ ಸಮಗ್ರ ತರಬೇತಿಯೂ ಇಟಿಎಸ್‌ ಕಡೆಯಿಂದ ಲಭ್ಯವಿದೆ.

ತರಬೇತಿ ಕುರಿತ ಮಾಹಿತಿಗಾಗಿ: https://www.preply.comv2.ereg.ets.org, www.udemy.com ಈ ಜಾಲತಾಣಗಳನ್ನು ನೋಡಬಹುದು.

ಪರೀಕ್ಷಾ ಶುಲ್ಕ

ದೇಶದ ಯಾವುದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅಭ್ಯರ್ಥಿಗಳು ನೋಂದಣಿ ಶುಲ್ಕವಾಗಿ 195 ಡಾಲರ್ (₹16,000) ಹಣ ಸಂದಾಯಮಾಡಬೇಕಾಗುತ್ತದೆ. ನೋಂದಣಿ ಮಾಡಿದ ದಿನಾಂಕ ಮತ್ತು ಕೇಂದ್ರದ ಬದಲಾವಣೆಗೆ ಹೆಚ್ಚುವರಿಯಾಗಿ 60 (₹4924.65) ರಿಂದ 190 ಡಾಲರ್ (₹15594.73)ಶುಲ್ಕ ಭರಿಸಬೇಕಾಗುತ್ತದೆ. ನೋಂದಣಿ ವಿಳಂಬವಾದರೆ, 40(₹3283.10) ರಿಂದ 80 (₹6566.20) ಡಾಲರ್ ಖರ್ಚು ತಗುಲುತ್ತದೆ.

ಪರೀಕ್ಷೆ ಫಲಿತಾಂಶ ಸುಧಾರಣೆ

ಪರೀಕ್ಷೆಯ ನಂತರ ದೊರಕಿದ ಫಲಿತಾಂಶ ತೃಪ್ತಿಯಾಗದೆ ಮತ್ತೊಂದು ಪರೀಕ್ಷೆ ಬರೆದು, ಅದರ ಅಂಕಗಳು ಮೊದಲ ಪರೀಕ್ಷೆಗಿಂತ ಕಡಿಮೆ ಬಂದಲ್ಲಿ, ಮೊದಲಿನ ಅಂಕಗಳನ್ನೇ ಪಡೆಯಲು 20 ಡಾಲರ್(₹1641.55) ಸಂದಾಯ ಮಾಡಬೇಕು. ಬರೆಯುವ ಮತ್ತು ಮಾತನಾಡುವ ಪರೀಕ್ಷೆಯ ಅಂಕಗಳ ಪುನರ್‌ಪರಿಶೀಲನೆಗೆ 80 ಡಾಲರ್(₹6566.20) ಶುಲ್ಕ ಪಾವತಿಸಬೇಕು.

‘ಮೈ ಬೆಸ್ಟ್ ಸ್ಕೋರ್’ ಅವಕಾಶ

ಅಭ್ಯರ್ಥಿಯು ಮೊದಲ ಸಲ ಪರೀಕ್ಷೆ ಎದುರಿಸಿದಾಗ ನಾಲ್ಕು ವಿಭಾಗಗಳ ಪೈಕಿ ಎರಡಕ್ಕೆ ಉತ್ತಮ ಅಂಕ ಬಂದು ಉಳಿದೆರೆಡಕ್ಕೆ ಬರದಿದ್ದಾಗ, ಮತ್ತೊಮ್ಮೆ ಪರೀಕ್ಷೆ ಎದುರಿಸಬಹುದು. ಎರಡನೇ ಪ್ರಯತ್ನದಲ್ಲಿ, ಕಡಿಮೆ ಅಂಕ ಬಂದ ವಿಭಾಗಗಳಲ್ಲಿ ಸುಧಾರಣೆಯಾಗಿ, ಚೆನ್ನಾಗಿ ಅಂಕಗಳಿಸಿದ್ದ ವಿಭಾಗಗಳಲ್ಲಿ ಕಡಿಮೆ ಅಂಕ ಬರಬಹುದು. ಒಂದೊಂದು ಸಲ ಒಂದೊಂದು ಫಲಿತಾಂಶ ಬಂದಾಗ ಎರಡು ವರ್ಷಗಳ ಅವಧಿಯಲ್ಲಿ ಅಭ್ಯರ್ಥಿ ಎದುರಿಸಿದ ಪರೀಕ್ಷೆಗಳಲ್ಲಿ ಗಳಿಸಿದ ವಿಭಾಗವಾರು ಹೆಚ್ಚು ಅಂಕಗಳನ್ನು ಕ್ರೋಡೀಕರಿಸಿಕೊಳ್ಳಬಹುದು. ಇದನ್ನು ‘ಮೈ ಬೆಸ್ಟ್ ಸ್ಕೋರ್ಸ್‌’  ಎನ್ನುತ್ತಾರೆ. 2019ರ ಆಗಸ್ಟ್‌ನಿಂದ ಈ ವಿಧಾನ ಜಾರಿಯಲ್ಲಿದೆ.

ಮಧ್ಯಾಹ್ನವೂ ಪರೀಕ್ಷೆ

ಮೊದಲೆಲ್ಲ ಟೊಫೆಲ್ ಪರೀಕ್ಷೆ ಆಯ್ದ ಪರೀಕ್ಷಾ ಕೇಂದ್ರಗಳಲ್ಲಿ ಬೆಳಗಿನ 10 ರಿಂದ ಮಧ್ಯಾಹ್ನ 1.30 ರ ವರೆಗೆ ಮಾತ್ರ ನಡೆಯುತ್ತಿತ್ತು. ಈಗ ಪರೀಕ್ಷೆಗೆ ಹಾಜರಾಗುವವರ ಸಂಖ್ಯೆ ಹೆಚ್ಚಾಗಿರುವ ಪರಿಣಾಮ, ಮಧ್ಯಾಹ್ನದ ವೇಳೆಯೂ ಪರೀಕ್ಷೆಗಳು ನಡೆಯುತ್ತಿವೆ.

ಭಾರತದಿಂದ ಎಷ್ಟು ವಿದ್ಯಾರ್ಥಿಗಳು?

ಭಾರತದಲ್ಲಿ ಕಳೆದ ವರ್ಷ ಏಳೂವರೆ ಲಕ್ಷ ವಿದ್ಯಾರ್ಥಿಗಳು ವಿವಿಧ ಪರೀಕ್ಷೆಗಳನ್ನು ಬರೆದು ವಿದೇಶಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಆಯ್ಕೆಯಾಗಿದ್ದರು. ಆರು ವರ್ಷಗಳಲ್ಲಿ 30 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದೇಶಗಳ ವಿವಿಗಳಿಗೆ ತೆರಳಿದ್ದಾರೆ. ಭಾರತದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಇಟಿಎಸ್‌ನವರು ‘ಇಟಿಎಸ್‌ ಇಂಡಿಯ’ ಎಂಬ ಪ್ರತ್ಯೇಕ ವ್ಯವಸ್ಥೆ ಮಾಡಿದ್ದಾರೆ.

ಅಮೆರಿಕದ ಎಲ್ಲ ವಿವಿಗಳಲ್ಲೂ ಟೊಫೆಲ್ ಐಬಿಟಿ ಪರೀಕ್ಷೆಯ ಫಲಿತಾಂಶವನ್ನು ಮಾನ್ಯ ಮಾಡಲಾಗುತ್ತದೆ. ವಿಶ್ವದ 200 ದೇಶಗಳ 9000 ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ವಾರದ ಆರು ದಿನಗಳಲ್ಲಿ ಪರೀಕ್ಷೆ ನಡೆಯುತ್ತದೆ. ವಿದೇಶ ವಿದ್ಯಾಭ್ಯಾಸಕ್ಕಾಗಿ ಭಾರತದ ವಿದ್ಯಾರ್ಥಿಗಳು ವಾರ್ಷಿಕ 8200 ಕೋಟಿ ಡಾಲರ್ ಹಣ ವ್ಯಯಿಸುತ್ತಾರೆ ಎಂಬುದು ತಿಳಿದು ಬಂದಿದೆ.

(ಲೇಖಕರು – ಪ್ರಾಚಾರ್ಯರು, ವಿಡಿಯಾ ಪೂರ್ಣ ಪ್ರಜ್ಞ  ಪದವಿ ಪೂರ್ವ ಕಾಲೇಜು, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT