ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ವರ್ಷಗಳ ಪದವಿಗೆ ವಿರೋಧ

ಎಐಡಿಎಸ್‌ಒ ಸಮೀಕ್ಷೆ: ವಿದ್ಯಾರ್ಥಿಗಳು, ಬೋಧಕರು, ಪೋಷಕರು ಭಾಗಿ
Published 29 ಡಿಸೆಂಬರ್ 2023, 0:31 IST
Last Updated 29 ಡಿಸೆಂಬರ್ 2023, 0:31 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ನಾಲ್ಕು ವರ್ಷಗಳ ಪದವಿಯನ್ನು ಕೈಬಿಡಬೇಕು ಎಂದು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು, ಬೋಧಕರು, ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌’ (ಎಐಡಿಎಸ್‌ಒ) ನಡೆಸಿದ ಸಮೀಕ್ಷೆಯಲ್ಲಿ ಶೇ 83ರಷ್ಟು ವಿದ್ಯಾರ್ಥಿಗಳು ನಾಲ್ಕು ವರ್ಷದ ಪದವಿಗೆ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ.

9 ಸರ್ಕಾರಿ ವಿಶ್ವವಿದ್ಯಾಲಯಗಳು, 82 ಸರ್ಕಾರಿ ಪದವಿ ಕಾಲೇಜುಗಳು, 12 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳು ಹಾಗೂ 15 ಸರ್ಕಾರಿ ವಸತಿ ನಿಲಯಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. 23,120 ಮಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿ ವ್ಯಕ್ತಿಗೂ 9 ಪ್ರಶ್ನೆಗಳನ್ನು ಲಿಖಿತ ರೂಪದಲ್ಲಿ ಕೇಳಲಾಗಿದೆ. ಸಂಗ್ರಹಿಸಿದ 1.99 ಲಕ್ಷ ಪ್ರತಿಕ್ರಿಯೆಗಳಲ್ಲಿ ಶೇ 20ರಷ್ಟು ಸರಾಸರಿ ಮಾದರಿಗಳನ್ನು ಪರಿಗಣಿಸಲಾಗಿದೆ. 

ಶಿಕ್ಷಣದ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು, ನವೋದಯ ಚಳವಳಿಯ ಚಿಂತಕರು ಹಾಗೂ ಸುಭಾಷ್‌ಚಂದ್ರ ಬೋಸ್‌, ಭಗತ್‌ಸಿಂಗ್‌ ಸೇರಿದಂತೆ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರರ ಕುರಿತು ಹೆಚ್ಚು ಪಾಠಗಳನ್ನು ಅಳವಡಿಸಬೇಕು, ಎಲ್ಲಾ ಜಿಲ್ಲೆಗಳಲ್ಲೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಬೇಕು ಎಂಬ ಬಗ್ಗೆ ಹೆಚ್ಚಿನ ಒಲವು ವ್ಯಕ್ತವಾಗಿದೆ. ಈ ಸಮೀಕ್ಷಾ ವರದಿಯನ್ನು ರಾಜ್ಯ ಶಿಕ್ಷಣ ನೀತಿ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್‌ ಹೇಳಿದ್ದಾರೆ. 

ಯಾವುದೇ ಜಾತಿ, ವರ್ಗ, ಲಿಂಗ, ಭಾಷೆಯ ಧರ್ಮದ ಆಧಾರದ ಮೇಲೆ ಶಿಕ್ಷಣ ನೀಡಬಾರದು, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ತಾರತಮ್ಯಗಳಿಗೆ ಅವಕಾಶ ಕೊಡುವ ಪಠ್ಯಗಳನ್ನು ಅಳವಡಿಸಬಾರದು. ರಾಜ್ಯದ ಎಲ್ಲ ಮಕ್ಕಳಿಗೂ ಶಿಕ್ಷಣ ತಲುಪಬೇಕು. ಎಷ್ಟೋ ಕುಟುಂಬಗಳ ಮಕ್ಕಳು ಕೂಲಿ ಮಾಡಿಕೊಂಡು ಕಾಲೇಜು ಶಿಕ್ಷಣ ಪಡೆಯುತ್ತಿದ್ದಾರೆ. ಪರೀಕ್ಷಾ ಶುಲ್ಕ ಪಾವತಿಸಲೂ ಸಾಧ್ಯವಾಗದ ಎಷ್ಟೋ ಮಕ್ಕಳು ಇದ್ದಾರೆ. ಸಮೀಕ್ಷೆ ನಡೆಸಲು ಹೋದಾಗಲೂ ಸಾಕಷ್ಟು ಸಂಖ್ಯೆಯ ಮಕ್ಕಳು ಸಿಗಲಿಲ್ಲ. ಅವರ ಅಭಿಪ್ರಾಯ ದಾಖಲಿಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಸರ್ಕಾರ ಎಲ್ಲರಿಗೂ ಉಚಿತವಾಗಿ ಸಿಗುವ, ಸೌಹಾರ್ದ ಶಿಕ್ಷಣ ನೀತಿ ರೂಪಿಸಬೇಕು ಎನ್ನುವ ಅಶಯ ಇಟ್ಟುಕೊಂಡು ಸಮೀಕ್ಷೆ ನಡೆಸಲಾಗಿದೆ ಎಂದು ಸಂಘಟನೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT