ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಾಂಕನವೆಂಬ ಮೌಲ್ಯಮಾಪನ

–ಭಾರತಿ ಕೊಪ್ಪ
Published 4 ಮಾರ್ಚ್ 2024, 0:04 IST
Last Updated 4 ಮಾರ್ಚ್ 2024, 0:04 IST
ಅಕ್ಷರ ಗಾತ್ರ

ಶೈಕ್ಷಣಿಕ ವರ್ಷದ ಕೊನೆಯ ತಿಂಗಳು ಮಾರ್ಚ್ ಬಂತೆಂದರೆ ಕಲಿಕೆಯ ಮೌಲ್ಯಮಾಪನ ಮಾಡುವ ಕಾರ್ಯಕ್ಕೆ ಶಿಕ್ಷಣ ಕ್ಷೇತ್ರ ಅಣಿಗೊಳ್ಳುತ್ತದೆ.ಪರೀಕ್ಷೆಯ ದಿನಗಳು ಸಮೀಪಿಸುತ್ತಿದ್ದಂತೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಮರ ವೀರರಂತೆ ಸಿದ್ಧತೆ ನಡೆಸುವುದು ಸರ್ವೇಸಾಮಾನ್ಯವಾಗಿದೆ. ಕೇವಲ 10 ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಮಕ್ಕಳು ನೇರವಾಗಿ ಪಬ್ಲಿಕ್ ಪರೀಕ್ಷೆ ಎದುರಿಸುತ್ತಿಲ್ಲ.ರಾಜ್ಯ ಪಠ್ಯಕ್ರಮದ 5,8 ಮತ್ತು 9 ನೇ ತರಗತಿ ವಿದ್ಯಾರ್ಥಿಗಳು ಕೂಡ ಇಡೀ ರಾಜ್ಯದಾದ್ಯಂತ ಏಕಕಾಲದಲ್ಲಿ ಪರೀಕ್ಷೆ ಬರೆಯುವ ಮೌಲ್ಯಾಂಕನ ಪರೀಕ್ಷೆಯ ತಯಾರಿಯಲ್ಲಿದ್ದಾರೆ.ಮಾರ್ಚ್ 11 ರಿಂದ ಪರೀಕ್ಷೆ ನಡೆಯುವ ವೇಳಾಪಟ್ಟಿ ಕೂಡ ಪ್ರಕಟಗೊಂಡಿದೆ.ಮಕ್ಕಳು ಆತಂಕ ರಹಿತವಾಗಿ ಪರೀಕ್ಷೆ ಎದುರಿಸಿದರೆ ಯಶಸ್ವಿ ಫಲಿತಾಂಶ ಪಡೆಯಬಹುದು.

ಪರೀಕ್ಷಾ ತಯಾರಿ ಹೀಗಿರಲಿ :

ಮಕ್ಕಳನ್ನು ಉತ್ತೀರ್ಣ / ಅನುತ್ತೀರ್ಣ ಮಾಡುವುದು ಮುಖ್ಯವಲ್ಲ, ವಯಸ್ಸು ಮತ್ತು ತರಗತಿಗೆ ಅನುಗುಣವಾಗಿ ಮಕ್ಕಳ ಕಲಿಕೆಯ ಪ್ರಗತಿಯಾಗುತ್ತಿದೆಯೇ ಎಂಬುದನ್ನು ತಿಳಿಯುವುದು ಅವಶ್ಯಕವಾಗಿದೆ ಎಂಬ ಉದ್ದೇಶದಿಂದ ಈ ಪರೀಕ್ಷೆ ನಡೆಯುತ್ತಿದೆ ಎಂಬುದನ್ನು ಮೊದಲು ಮನಗಾಣಬೇಕು. 5 ನೇ ತರಗತಿ ಮಕ್ಕಳಿಗೆ ಈವರೆಗೆ ಕೇವಲ ಶಾಲಾ ಹಂತದ ಪರೀಕ್ಷೆಗಳನ್ನು ಮಾತ್ರ ಎದುರಿಸಿದ ಅನುಭವ ಇರುತ್ತದೆ.ಕೆಲವು ಮಕ್ಕಳು ಮಾತ್ರ ವಸತಿ ಶಿಕ್ಷಣ ಸಂಸಕೊ್ಥೆಗಳಿಗ ಪ್ರವೇಶ ಪರೀಕ್ಷೆ ಬರೆದಿರುತ್ತಾರೆ.ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದರಿಂದ ಮೊದಲ ಬಾರಿ ರಾಜ್ಯ ಮಟ್ಟದ ಪರೀಕ್ಷೆ ಎದುರಿಸುವ ಭಯ ದೂರ ಮಾಡಬಹುದು.ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ( ಕೆ.ಎಸ್.ಕ್ಯು.ಎ.ಎ.ಸಿ) ಯ ವೆಬ್ ಸೈಟ್ ನಿಂದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಂಡು ಅಭ್ಯಾಸ ಮಾಡಬಹುದಾಗಿದೆ.

ಬಹು ಆಯ್ಕೆ ಮಾದರಿಯಲ್ಲಿ ಪ್ರಶ್ನೆಗಳು ಇರುವುದರಿಂದ ಯಾವುದೇ ಗೊಂದಲವಿಲ್ಲದೆ ನಿಖರವಾದ ಉತ್ತರವನ್ನು ಆರಿಸುವಷ್ಟು ಕಲಿಕೆ ಮನನವಾಗಿರಬೇಕು.ಭಾಷಾ ವಿಷಯದಲ್ಲಿ ವ್ಯಾಕರಣಾಂಶಗಳ ಕರಾರುವಕ್ಕಾದ ಅಭ್ಯಾಸವು ಹೆಚ್ಚು ಅಂಕ ಗಳಿಕೆಗೆ ಸಹಕಾರಿಯಾಗುತ್ತದೆ. ಕುರುಡು ಕಂಠಪಾಠದ ಸುದೀರ್ಘ ಪ್ರಶ್ನೋತ್ತರಗಳ ಕಲಿಕೆಗೆ ಗಮನ ನೀಡುವುದಕ್ಕಿಂತ ,ವಿಷಯಾಂಶವನ್ನು ಅರ್ಥೈಸಿಕೊಂಡು ಸ್ವಯಂ ಉತ್ತರಿಸುವ ಅನ್ವಯ ಮಾದರಿ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯ ಇಲ್ಲಿ ಅತ್ಯಗತ್ಯವಾಗಿರುತ್ತದೆ.ಮಾದರಿ ಪ್ರಶ್ನೆ ಪತ್ರಿಕೆಯಲ್ಲಿ ನೀಡಿದ ಪ್ರಶ್ನೆಗಳಂತೆ ತಾವೇ ಬಹು ಆಯ್ಕೆ ಪ್ರಶ್ನೆಗಳ ಬ್ಯಾಂಕ್ ಒಂದನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ತಯಾರಿಸಿಕೊಂಡು ಅಭ್ಯಾಸ ಮಾಡಬಹುದಾಗಿದೆ.

ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಡಿಗಲ್ಲು:

ಇತ್ತೀಚಿನ ವರ್ಷಗಳಲ್ಲಿ ಅನೇಕ ಸರ್ಕಾರಿ ಉದ್ಯೋಗಳು,ಸರ್ಕಾರೇತರ ಕೆಲವು ಉದ್ಯೋಗಗಳಿಗೂ ಲಿಖಿತ ಪರೀಕ್ಷೆ ಸಾಮಾನ್ಯವಾಗಿರುತ್ತವೆ. ಇದರಲ್ಲಿ ಬಹು ಆಯ್ಕೆ ಮಾದರಿಯ ಲಿಖಿತ ಪರೀಕ್ಷೆ ಯನ್ನು ಸ್ಪರ್ಧಾತ್ಮಕ ಪರೀಕ್ಷೆಯಾಗಿ ಎದುರಿಸಬೇಕಾಗುತ್ತದೆ. ಹಾಗಾಗಿ ಬಹು ಆಯ್ಕೆ ಪ್ರಶ್ನೆ ಅಧಿಕವಾಗಿರುವ 5,8 ಮತ್ತು 9 ನೇ ತರಗತಿಯ ಮೌಲ್ಯಾಂಕನ ಪರೀಕ್ಷೆಗಳು ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಡಿಗಲ್ಲು ಎಂಬAತೆ ಆಸಕ್ತಿಯಿಂದ ವಿದ್ಯಾರ್ಥಿಗಳು ತಯಾರಿ ನಡೆಸಬೇಕಿದೆ.ವಿದ್ಯಾರ್ಥಿ ಜೀವನದಲ್ಲಿ ಉನ್ನತ ಶಿಕ್ಷಣ ಪಡೆಯಲು ಅಗತ್ಯವಿರುವ ಸಿಇಟಿ,ನೀಟ್,ಜೆಇಇಯಂತಹ ಪರೀಕ್ಷೆಗಳನ್ನೂ ಕೂಡ ಆತ್ಮವಿಶ್ವಾಸದಿಂದ ಎದುರಿಸಲು ರಾಜ್ಯ ಮಟ್ಟದ ಮೌಲ್ಯಾಂಕನ ಪರೀಕ್ಷೆ ಉತ್ತಮ ಅನುಭವವನ್ನು ನೀಡುತ್ತದೆ.

ಪರೀಕ್ಷಾ ದಿನ ಗಾಬರಿ ಬೇಡ:

ಪರೀಕ್ಷಾ ಮೇಲ್ವಿಚಾರಕರಾಗಿ ಬೇರೆ ಶಾಲೆಯ ಶಿಕ್ಷಕರು ಪರೀಕ್ಷಾ ಕೊಠಡಿಗೆ ಆಗಮಿಸುತ್ತಾರೆ. 5 ನೇ ತರಗತಿ ತನಕ ತಮ್ಮದೇ ಶಾಲಾ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಪರೀಕ್ಷೆ ಬರೆದ ಪುಟ್ಟ ಮಕ್ಕಳು ಒಮ್ಮೆಲೇ ಗಾಬರಿಯಾಗುವ ಅಗತ್ಯವಿಲ್ಲ.ತಮ್ಮದೇ ಶಾಲಾ ಕೊಠಡಿಯಲ್ಲಿ ಪರೀಕ್ಷೆ ನಡೆಯುವುದರಿಂದ ನಿರಾತಂಕವಾಗಿ ಬರೆಯಲು ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕಿದೆ.

ಪೋಷಕರ ಕಾಳಜಿ:

ಮೌಲ್ಯಾಂಕನ ಪರೀಕ್ಷೆಯ ಬಗೆಗೆ ಪೋಷಕರು ತಮ್ಮ ಮಕ್ಕಳಿಗೆ ಯಾವುದೇ ರೀತಿಯ ಒತ್ತಡ ಹೇರುವ ಅಗತ್ಯವಿಲ್ಲ.ನವೆಂಬರ್ ನಂತರದ ದ್ವಿತೀಯ ಸೆಮಿಸ್ಟರ್ ಅವಧಿಯ ಪಾಠಗಳನ್ನು ಪ್ರತಿನಿತ್ಯ ಅಭ್ಯಾಸ ಮಾಡಲು ಮಕ್ಕಳಿಗೆ ಪ್ರೇರೇಪಿಸಬೇಕು.ಮಾದರಿ ಪ್ರಶ್ನೆ ಪತ್ರಿಕೆಯ ಆಧಾರದಲ್ಲಿ ಮಕ್ಕಳು ಪೂರ್ವ ತಯಾರಿ ಮಾಡಿಕೊಳ್ಳಲು ಮಾರ್ಗದರ್ಶನ ನೀಡಬೇಕಿದೆ.ಪರೀಕ್ಷಾ ದಿನದಂದು ಬರೆಯಲು ಅಗತ್ಯವಿರುವ ಲೇಖನ ಸಾಮಗ್ರಿಗಳನ್ನು ಖರೀದಿಸಿ ತೆಗೆದುಕೊಂಡು ಹೋಗಲು ಮಕ್ಕಳಿಗೆ ಸಹಕರಿಸಬೇಕು.

ಶಿಕ್ಷಕರ ಸಹಕಾರವೂ ಮುಖ್ಯ:

ಶಾಲಾ ಹಂತದಲ್ಲಿ ರೂಪಣಾತ್ಮಕ ಮೌಲ್ಯಮಾಪನ ಮತ್ತು ಒಂದನೇ ಸಂಕಲನಾತ್ಮಕ ಮೌಲ್ಯಮಾಪನ ಎದುರಿಸಿದ 5,8,9 ನೇ ತರಗತಿಯ ಮಕ್ಕಳು, ಎರಡನೇ ಸಂಕಲನಾತ್ಮಕ ಮೌಲ್ಯಮಾಪನಕ್ಕಾಗಿ ರಾಜ್ಯ ಮಟ್ಟದ ಮೌಲ್ಯಾಂಕನ ಪರೀಕ್ಷೆ ಎದುರಿಸುವಾಗ ಶಿಕ್ಷಕರು ಮಕ್ಕಳಿಗೆ ಆತ್ಮವಿಶ್ವಾಸ ಮೂಡಿಸಬೇಕು.ತರಗತಿಯಲ್ಲಿ ಪುನರ್ಮನನ, ಸ್ವಕಲಿಕೆ,ಅಣಕು ಪರೀಕ್ಷೆಗಳ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಬಹುದಾಗಿದೆ.ಮೌಲ್ಯಾಂಕನದ ದಿನದಂದು ಪರೀಕ್ಷಾ ಪಾರದರ್ಶಕತೆ ಮತ್ತು ಗೊಂದಲರಹಿತ ಪರೀಕ್ಷೆ ನಡೆಸುವುದು ಅತ್ಯಗತ್ಯವಾಗಿದೆ.

ಪರೀಕ್ಷೆ ಎಂಬುದು ಮಕ್ಕಳಿಗೆ ಶಿಕ್ಷೆಯಂತಾಗದೆ ಮಕ್ಕಳು ಪರೀಕ್ಷೆಯನ್ನು ಕಲಿಕೆಯ ಭಾಗವಾಗಿ ಸಂಭ್ರಮಿಸಬೇಕಿದೆ.ಆ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಪೂರ್ಣ ಪ್ರಮಾಣದ ಸಹಕಾರ ಮತ್ತು ಪ್ರೋತ್ಸಾಹ ನೀಡಿ ಗುಣಮಟ್ಟದ ಫಲಿತಾಂಶ ಪಡೆಯಲು ಪ್ರೇರೇಪಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT