ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾ ವಾಣಿ: ಮತ್ತೊಮ್ಮೆ ‘ಅರುಣಾಚಲ ವಿವಾದ’ ಕೆದಕಿದ ಚೀನಾ!

Published 3 ಏಪ್ರಿಲ್ 2024, 21:25 IST
Last Updated 3 ಏಪ್ರಿಲ್ 2024, 21:25 IST
ಅಕ್ಷರ ಗಾತ್ರ

– ಚನ್ನಬಸಪ್ಪ ರೊಟ್ಟಿ

ಭಾರತಕ್ಕೆ ಎಂದೆಂದೂ ಮಗ್ಗುಲ ಮುಳ್ಳಾಗಿರುವ ಚೀನಾ ಮತ್ತೊಮ್ಮೆ ಅರುಣಾಚಲ ಪ್ರದೇಶ ತನಗೇ ಸೇರಿದ್ದು ಎಂದು ಹೇಳುವ ಮೂಲಕ ಮತ್ತೊಮ್ಮೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅರುಣಾಚಲಕ್ಕೆ ಭೇಟಿ ನೀಡಿ, ಅಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಅಲ್ಲದೇ ತವಾಂಗ್‌ ಸಂಪರ್ಕಿಸುವ ‘ಸೇಲಾ’ ಸುರಂಗ ಮಾರ್ಗವನ್ನು ಉದ್ಘಾಟಿಸಿದ್ದರು. ಈ ಹಿನ್ನೆಲೆಯಲ್ಲಿ ಭಾರತಕ್ಕೆ ರಾಜತಾಂತ್ರಿಕವಾಗಿ ಚೀನಾ ಪ್ರತಿಭಟನೆ ಸಲ್ಲಿಸಿತ್ತು.

ಅರುಣಾಚಲ ಪ್ರದೇಶಕ್ಕೆ ಭಾರತದ ನಾಯಕರು ಭೇಟಿ ನೀಡಿದಾಗಲೆಲ್ಲಾ ಆಕ್ಷೇಪ ವ್ಯಕ್ತಪಡಿಸುವ ಕೆಟ್ಟ ಚಾಳಿಯನ್ನು ಚೀನಾ ರೂಢಿಸಿಕೊಂಡಿದೆ. ‘ಭಾರತದ ನಡೆ ಉಭಯ ದೇಶಗಳ ನಡುವಣ ಗಡಿ ವಿವಾದವನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ. ಭಾರತ ಮತ್ತು ಚೀನಾ ನಡುವಿನ ಗಡಿರೇಖೆಯನ್ನು ಗುರುತಿಸುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಅರುಣಾಚಲ ಪ್ರದೇಶ ಭಾರತದ ಭಾಗ ಎಂಬುದನ್ನು ಚೀನಾ ಒಪ್ಪುವುದಿಲ್ಲ. ಝಾಂಗ್ನಾನ್‌ (ಅರುಣಾಚಲಕ್ಕೆ ಚೀನಾ ಇಟ್ಟ ಹೆಸರು) ಚೀನಾಕ್ಕೆ ಸೇರಿದೆ. ಈ ಸಂಗತಿಯನ್ನು ನಿರಾಕರಿಸಲು ಸಾಧ್ಯವೇ ಇಲ್ಲ’ ಎಂಬ ತನ್ನ ಹಳೆಯ ವಿತಂಡವಾದವನ್ನೇ ಚೀನಾ ಪುನರುಚ್ಚರಿಸಿದೆ.

ಈ ವಿಷಯದಲ್ಲಿ ಚೀನಾಗೆ ಭಾರತ ತಿರುಗೇಟು ನೀಡಿದ್ದು, ‘ನಮ್ಮ ಸೇನೆಯನ್ನು ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲಾಗಿದೆ. ಅರುಣಾಚಲ ಪ್ರದೇಶ ಈ ಹಿಂದೆಯೂ ಭಾರತದ ಅವಿಭಾಜ್ಯ ಅಂಗವಾಗಿತ್ತು, ಈಗಲೂ ಆಗಿದೆ ಮತ್ತು ಭವಿಷ್ಯದಲ್ಲೂ ಅವಿಭಾಜ್ಯ ಅಂಗವಾಗಿಯೇ ಇರುತ್ತದೆ’ ಎಂದು ಸ್ಪಷ್ಟಪಡಿಸಿದೆ. ಅರುಣಾಚಲ ಪ್ರದೇಶದ ಕುರಿತು ಇತ್ತೀಚೆಗೆ ಚೀನಾ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ‍ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಹೇಳಿಕೆ ನೀಡಿದೆ.

ಇತ್ತೀಚಿನ ದಿನಗಳಲ್ಲಿ ಅರುಣಾಚಲ ಪ್ರದೇಶ ರಾಜ್ಯದ ಮೇಲೆ ತನ್ನ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿರುವ ಚೀನಾ, ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ಭಾರತದ ಅರುಣಾಚಲ ಪ್ರದೇಶದ ವಿವಿಧ ‌ಸ್ಥಳಗಳಿಗೆ 30 ಹೊಸ ಹೆಸರಿರುವ ನಾಲ್ಕನೇ ಪಟ್ಟಿಯನ್ನು ಚೀನಾ ಬಿಡುಗಡೆ ಮಾಡಿದೆ. ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಹೆಸರುಗಳನ್ನು ಘೋಷಿಸಲಾಗಿದ್ದು, ಈ ಹೆಸರುಗಳು ಮೇ 1ರಿಂದ ಜಾರಿಗೆ ಬರಲಿವೆ ಎಂದು ಮಾಹಿತಿ ನೀಡಿದೆ.

ಚೀನಾ ಮಾಡಿರುವ ಈ ಮರುನಾಮಕರಣ ಅರುಣಾಚಲ ಪ್ರದೇಶದ 11 ಜಿಲ್ಲೆಗಳು, 12 ಪರ್ವತಗಳು, ನಾಲ್ಕು ನದಿಗಳು, ಒಂದು ಸರೋವರ, ಒಂದು ಮೌಂಟೇನ್ ಪಾಸ್ ಮತ್ತು ಒಂದು ಭೂಭಾಗವನ್ನು ಒಳಗೊಂಡಿದೆ. ಇವೆಲ್ಲವುಗಳ ಹೆಸರನ್ನೂ ಚೀನೀ ಅಕ್ಷರಗಳಾದ ಟಿಬೆಟಿಯನ್ ಲಿಪಿ ಮತ್ತು ಪಿನ್ಯಿನ್, ಮ್ಯಾಂಡರಿನ್ ಚೈನೀಸ್‌ನ ರೋಮನೈಸ್ಡ್ ರೂಪಗಳಲ್ಲಿ ಚೀನಾ ಸೂಚಿಸಿದೆ!

ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿದಂತೆ ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ 2017ರಲ್ಲಿ 6, 2021ರಲ್ಲಿ 15 ಹಾಗೂ 2023ರಲ್ಲಿ 11 ಸ್ಥಳಗಳಿಗೆ ಹೊಸ ಹೆಸರುಗಳ ಪಟ್ಟಿ ಪ್ರಕಟಿಸಿತ್ತು ಎಂಬುದು ಗಮನಾರ್ಹ.

ವಿವಾದದ ಹಿನ್ನೆಲೆ:

ಅರುಣಾಚಲ ಪ್ರದೇಶದ ಮೇಲೆ ಭಾರತದ ಸಾರ್ವಭೌಮತ್ವವನ್ನು ಚೀನಾ ದಶಕಗಳಿಂದ ನಿರಾಕರಿಸುತ್ತಿದೆ. ಟಿಬೆಟ್‌ ಗಡಿಯಲ್ಲಿರುವ ಈ ಪ್ರದೇಶ ಉಭಯ ದೇಶಗಳ ನಡುವಿನ ವಿವಾದದ ಬಿಂದುವಾಗಿದೆ. ಇದು ಮೇಲಿಂದ ಮೇಲೆ ಸಾಂದರ್ಭಿಕ ಉದ್ವಿಗ್ನತೆ ಮತ್ತು ರಾಜತಾಂತ್ರಿಕ ಜಗಳಗಳಿಗೆ ಕಾರಣವಾಗುತ್ತಿದೆ. ಅದರಲ್ಲೂ ಮತ್ತೊಂದು ಅವಧಿಗೆ ಕ್ಸಿ ಜಿನ್‌ಪಿಂಗ್‌ ಅವರೇ ಚೀನಾದ ಅಧ್ಯಕ್ಷರಾಗಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ವಿವಾದ ಹೀಗೆಯೇ ಮುಂದುವರಿಯುವ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಭಾರತ-ಚೀನಾ ಗಡಿ ವಿವಾದ ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ 1962 ರ ಚೀನಾ–ಭಾರತ ಯುದ್ಧಕ್ಕಿಂತ ಹಿಂದಿನದು. ಈ ಯುದ್ಧದ ನಂತರ ಚೀನಾ ‘ಅಕ್ಸಾಯ್ ಚಿನ್’ ಮೇಲೆ ನಿಯಂತ್ರಣ ಸಾಧಿಸಿತು. ಅಂದಿನಿಂದ, ಎರಡೂ ದೇಶಗಳು ಗಡಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಗಳನ್ನು ನಡೆಸಿವೆ. ಆದರೆ, ಅರುಣಾಚಲ ಪ್ರದೇಶದಂಥ ಹಲವು ಸೂಕ್ಷ್ಮ ಹಾಗೂ ಆಯಕಟ್ಟಿನ ಪ್ರದೇಶಗಳಿಗೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ಭಿನ್ನಾಭಿಪ್ರಾಯಗಳು ಮುಂದುವರಿದಿವೆ.

ದಕ್ಷಿಣ ಏಷ್ಯಾ ಭಾಗದಲ್ಲಿ ಪ್ರಾದೇಶಿಕ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಹಾಗೂ ಚೀನಾ ಸ್ಪರ್ಧೇಗಿಳಿದಿರುವ ಬೆನ್ನಲ್ಲೇ ಅರುಣಾಚಲ ಪ್ರದೇಶ ಮತ್ತು ಇತರ ಗಡಿ ಪ್ರದೇಶಗಳ ಕುರಿತು ನಡೆಯುತ್ತಿರುವ ವಿವಾದ ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಹದಗೆಡಿಸಿದೆ. ಅಮೆರಿಕ ಕೂಡ ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ ಎಂದು ಮಾನ್ಯತೆ ನೀಡುವುದಾಗಿ ಹೇಳಿದ್ದು, ಅರುಣಾಚಲ ಪ್ರದೇಶ ಗಡಿ ವಿಚಾರದಲ್ಲಿ ಯಾವುದೇ ಏಕಪಕ್ಷೀಯ ಕ್ರಮವನ್ನು ಅಮೆರಿಕ ವಿರೋಧಿಸುತ್ತದೆ ಎಂದು ಉಲ್ಲೇಖಿಸಿದೆ. ಇದು ಚೀನಾವನ್ನು ಮತ್ತಷ್ಟು ಕೆರಳಿಸಿದೆ.

ಉನ್ನತ ಮಟ್ಟದ ಸಭೆಗಳು ಮತ್ತು ರಾಜತಾಂತ್ರಿಕ ನಿಯೋಗಗಳ ಮಾತುಕತೆಗಳ ನಡುವೆಯೂ ಚೀನಾ ಮೇಲಿಂದ ಮೇಲೆ ವಿವಾದಕ್ಕೆ ಕಾರಣವಾಗುವಂಥ ಕೆಲಸಗಳನ್ನು ಮಾಡುತ್ತಲೇ ಇದ್ದು, ಭಾರತದೊಂದಿಗೆ ತನ್ನ ಪ್ರತ್ಯಕ್ಷ ಹಾಗೂ ಪರೋಕ್ಷ ಸಂಘರ್ಷವನ್ನು ಮುಂದುವರಿಸಿದೆ. ಈ ಮುಂಚೆ ಜೂನ್ 2020 ರಲ್ಲಿ ಭಾರತ–ಚೀನಾ ಗಡಿವಿವಾದ ಭುಗಿಲೆದ್ದಿತ್ತು. ಲಡಾಖ್ ಪ್ರದೇಶದಲ್ಲಿ ನಡೆದ ಕಾದಾಟದಲ್ಲಿ ಕನಿಷ್ಠ 20 ಭಾರತೀಯ ಸೈನಿಕರು ಮತ್ತು ನಾಲ್ಕು ಚೀನೀ ಸೈನಿಕರು ಹುತಾತ್ಮರಾಗಿದ್ದರು.

ಇವೆಲ್ಲದರ ನಡುವೆ ಭಾರತ ತನ್ನ ಗಡಿಭಾಗಗಳಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಇದೆ. ಲಡಾಖ್, ಅರುಣಾಚಲ ಪ್ರದೇಶ, ಸಿಕ್ಕಿಂ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಪಂಜಾಬ್ ಮತ್ತು ಜಮ್ಮು–ಕಾಶ್ಮೀರದ ಆಯಕಟ್ಟಿನ ಪ್ರದೇಶಗಳಲ್ಲಿ ಭಾರತ ಈಗಾಗಲೇ 50ಕ್ಕೂ ಹೆಚ್ಚು ಸೇತುವೆಗಳನ್ನು ನಿರ್ಣಾಯಕ ಸುರಂಗಗಳು ಹಾಗೂ ರಸ್ತೆಗಳನ್ನು ನಿರ್ಮಿಸಿದೆ.

‘ಸೇಲಾ’ ಸುರಂಗ ಏನಿದರ ಮಹತ್ವ?

2024 ಮಾರ್ಚ್ 9 ರಂದು ಅರುಣಾಚಲ ಪ್ರದೇಶದಲ್ಲಿ ‘ಸೇಲಾ’ ಸುರಂಗ ಮಾರ್ಗವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.

* ₹825 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಸುರಂಗ ಯೋಜನೆಯನ್ನು ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ ತೇಜ್‌ಪುರದಿಂದ ತವಾಂಗ್‌ಗೆ ಸಂಪರ್ಕಿಸುವ ರಸ್ತೆಯಲ್ಲಿ 13,700 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ.

* ಫೆಬ್ರುವರಿ 2019 ರಲ್ಲಿ ಪ್ರಧಾನಿ ಮೋದಿ ಈ ಯೋಜನೆಗೆ ಅಡಿಗಲ್ಲು ಹಾಕಿದ್ದರು.

* 13,000 ಅಡಿ ಎತ್ತರದಲ್ಲಿ ನಿರ್ಮಿಸಿರುವ ಸೇಲಾ ಸುರಂಗ 3,000 ಮೀಟರ್ (9,800 ಅಡಿ) ಉದ್ದದ ರಸ್ತೆ ಸುರಂಗವಾಗಿದ್ದು, ಇದು ಅಸ್ಸಾಂನ ಗುವಾಹಟಿಯಿಂದ ಅರುಣಾಚಲ ಪ್ರದೇಶದ ತವಾಂಗ್ ನಡುವೆ ಎಲ್ಲ ಹವಾಮಾನದ ಸಂದರ್ಭದಲ್ಲೂ ಸುಗಮ ಸಂಪರ್ಕವನ್ನು ಖಾತ್ರಿಗೊಳಿಸುತ್ತದೆ.

* ಗಡಿ ರಸ್ತೆಗಳ ಸಂಸ್ಥೆ (BRO: Border Roads Organisation) ನಿರ್ಮಿಸಿರುವ ಈ ಸುರಂಗ ವಿಶ್ವದ ಅತಿ ಉದ್ದದ ದ್ವಿಪಥ ಸುರಂಗ ಎಂಬ ಖ್ಯಾತಿ ಪಡೆದಿದೆ.

* ಈ ಯೋಜನೆಯು ಎರಡು ಸುರಂಗಗಳನ್ನು ಒಳಗೊಂಡಿದೆ. ಒಂದು 980 ಮೀಟರ್ ಮತ್ತು ಇನ್ನೊಂದು 1,555 ಮೀಟರ್ ಉದ್ದವನ್ನು ಹೊಂದಿವೆ. ಒಂದು ದ್ವಿಪಥದ ಟ್ಯೂಬ್ ಅನ್ನು ಸಂಚಾರಕ್ಕಾಗಿ ಮತ್ತು ಇನ್ನೊಂದನ್ನು ತುರ್ತು ಸೇವೆಗಳಿಗಾಗಿ ಬಳಸಲು ನಿರ್ಧರಿಸಲಾಗಿದೆ.

* ಈ ಸುರಂವನ್ನು ಸಂಪರ್ಕಿಸಲೆಂದೇ 8.6 ಕಿಲೋಮೀಟರ್ ಸಂಪರ್ಕ ರಸ್ತೆಯನ್ನೂ ನಿರ್ಮಿಸಲಾಗಿದೆ.

* ಸುರಂಗವು ಅತ್ಯಾಧುನಿಕ ಆಸ್ಟ್ರಿಯನ್ ಸುರಂಗ ತಂತ್ರ ಹಾಗೂ ಎಲೆಕ್ಟ್ರೋ-ಮೆಕ್ಯಾನಿಕಲ್ ತಂತ್ರಜ್ಞಾನಗಳನ್ನು ಹೊಂದಿದೆ. SCADA-ನಿಯಂತ್ರಿತ ಮೇಲ್ವಿಚಾರಣಾ ವ್ಯವಸ್ಥೆ, ಅಗ್ನಿಶಾಮಕ ಉಪಕರಣಗಳು, ಗಾಳಿಯ ಗುಣಮಟ್ಟವನ್ನು ಸಂರಕ್ಷಿಸಲು ಜೆಟ್ ಫ್ಯಾನ್ ವಾತಾಯನ ವ್ಯವಸ್ಥೆ ಮತ್ತು CIE ಮಾನದಂಡಗಳನ್ವಯ ವಿವಿಧ ಸೌಕರ್ಯಗಳನ್ನು ಇದರಲ್ಲಿ ಅಳವಡಿಸಲಾಗಿದೆ.

* ಈ ಸುರಂಗದಲ್ಲಿ ಗಂಟೆಗೆ 80 ಕಿ.ಮೀ. ಗರಿಷ್ಠ ವೇಗದಲ್ಲಿ ಪ್ರತಿದಿನ 2,000 ಟ್ರಕ್‌ಗಳು ಮತ್ತು 3,000 ಕಾರುಗಳು ಸಂಚರಿಸಬಹುದಾಗಿದೆ.

* ಈ ಸುರಂಗ ನಿರ್ಮಾಣಕ್ಕಾಗಿ, ಸುಮಾರು 71,000 ಮೆಟ್ರಿಕ್ ಟನ್ ಸಿಮೆಂಟ್, 5,000 ಮೆಟ್ರಿಕ್ ಟನ್ ಉಕ್ಕು ಮತ್ತು 800 ಮೆಟ್ರಿಕ್ ಟನ್ ಸ್ಫೋಟಕಗಳನ್ನು ಬಳಸಲಾಗಿದೆ.

* ಚೀನೀ ಸೈನಿಕರು ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC) ನಿಂದ ಸೇಲಾ ಸುರಂಗವನ್ನು ನೋಡಬಹುದಾಗಿದೆ.

* ಈ ಸುರಂಗ ಭಾರತದ ಮಿಲಿಟರಿ ಅನುಕೂಲತೆಯನ್ನು ಹೆಚ್ಚಿಸಿದ್ದು, LAC ಸಮೀಪದ ಪ್ರದೇಶಗಳಿಗೆ ಸೈನಿಕರು, ಶಸ್ತ್ರಾಸ್ತ್ರಗಳು ಮತ್ತು ಯುದ್ಧೋಪಕರಣಗಳನ್ನು ತ್ವರಿತವಾಗಿ ನಿಯೋಜಿಸಲು ಅನುವು ಮಾಡಿಕೊಡುತ್ತದೆ.

* ಈ ಸುರಂಗ ದೇಶದ ರಕ್ಷಣಾ ಸನ್ನದ್ಧತೆಯನ್ನು ಹೆಚ್ಚಿಸುವುದಲ್ಲದೇ, ಈ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ.

* ಈ ಮುಂಚೆ ತವಾಂಗ್ ತಲುಪಲು ಅಪಾಯಕಾರಿ ತಿರುವುಗಳಿಂದ ಕೂಡಿದ್ದ ಕೇವಲ ಒಂದು ಲೇನ್ ಸಂಪರ್ಕವಿತ್ತು. ದೊಡ್ಡ ವಾಹನಗಳು ಮತ್ತು ಕಂಟೈನರ್ ಟ್ರಕ್‌ಗಳ ಸಂಚಾರ ಕಷ್ಟಸಾಧ್ಯವಾಗಿತ್ತು.

* ‘ಸೇಲಾ’ ಸುರಂಗ ನಿರ್ಮಿಸಿರುವುದೇ ಚೀನಾ ಮತ್ತೊಮ್ಮೆ ಅರುಣಾಚಲಪ್ರದೇಶ ವಿವಾದವನ್ನು ಕೆದಕಲು ಕಾರಣ ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT