ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯಕ ಕಮಾಂಡೆಂಟ್‌: ಸ್ಪರ್ಧಾತ್ಮಕ ಪರೀಕ್ಷೆಗೆ ಕೊನೆ ಕ್ಷಣದ ಪುನರ್‌ಮನನ

Last Updated 3 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯು ಸಹಾಯಕ ಕಮಾಂಡೆಂಟ್ ಹುದ್ದೆಗೆ (Central ArmedPolice force-Assistant Commondent) ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದೆ. ಈ ಪರೀಕ್ಷೆಇದೇ ತಿಂಗಳ 7ರಂದು (ಭಾನುವಾರ) ದೇಶದ ವಿವಿಧ ಆಯ್ದ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.

ಕೆಲವು ಅಭ್ಯರ್ಥಿಗಳು ಈಗಾಗಲೇ ಪರೀಕ್ಷೆಗಾಗಿ ಉತ್ತಮ ತಯಾರಿ ಮಾಡಿಕೊಂಡಿರುತ್ತಾರೆ. ಆದರೂ, ಪರೀಕ್ಷಾ ದಿನಗಳು ಸಮೀಪವಾದಾಗ ಸ್ವಲ್ಪ ಗಲಿಬಿಲಿಯಾಗುವುದು ಸಾಮಾನ್ಯ. ಕೊನೆ ಗಳಿಗೆಯ ಈ ಗೊಂದಲಗಳನ್ನು ನಿವಾರಿಸಲು ಅಭ್ಯರ್ಥಿಗಳು ನಿಗದಿತ ಪಠ್ಯವನ್ನು ಪುನರಾವಲೋಕಿಸಬೇಕು. ಕೊನೆ ಕ್ಷಣದ ಸಿದ್ಧತೆ ಕುರಿತ ಕೆಲವೊಂದು ತಂತ್ರಗಳು ಇಲ್ಲಿವೆ.

ಪರೀಕ್ಷೆಯ ಮಾದರಿ

ಸಿಎಪಿಎಫ್‌–ಎಸಿ ಪರೀಕ್ಷೆಯನ್ನು ಎದುರಿಸಲು, ಮೊದಲು ಆಪರೀಕ್ಷೆಯ ಮಾದರಿ ತಿಳಿದಿರಬೇಕು. ಈ ಪರೀಕ್ಷೆಯಲ್ಲಿ 2 ಪತ್ರಿಕೆಗಳಿರುತ್ತವೆ(ಪೇಪರ್‌). ಪತ್ರಿಕೆ– 1 ರಲ್ಲಿ ಬಹುಆಯ್ಕೆಯ ಪ್ರಶ್ನೆಗಳನ್ನು(Objective) ಕೇಳಲಾಗಿರುತ್ತದೆ. ಪತ್ರಿಕೆ–2 ನಲ್ಲಿ ವಿವರಣಾತ್ಮಕವಾಗಿರುತ್ತದೆ(Descriptive). ಪೇಪರ್-1 ರಲ್ಲಿ 125 ಬಹುಆಯ್ಕೆಯ ಪ್ರಶ್ನೆಗಳಿದ್ದು, 250 ಅಂಕಗಳಿರುತ್ತವೆ. ಇದಕ್ಕೆ ಎರಡು ಗಂಟೆಗಳ ಅವಧಿ ಮೀಸಲು. ಪತ್ರಿಕೆ-2 ರಲ್ಲಿ 200 ಅಂಕಗಳಿಗೆ 3 ಗಂಟೆಗಳ ಅವಧಿಯಲ್ಲಿ 6 ವಿವರಣಾತ್ಮಕ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಪತ್ರಿಕೆ-1 ರ ಒ.ಎಂ.ಆರ್ ಹಾಗೂ ಪತ್ರಿಕೆ-2 ರ ವಿವರಣಾತ್ಮಕ ಉತ್ತರ ಬರೆಯಲು ಕೇವಲ ಕಪ್ಪು ಬಾಲ್ ಪಾಯಿಂಟ್ ಪೆನ್ ಮಾತ್ರ ಬಳಸುವುದು ಕಡ್ಡಾಯ. ಇತರೆ ಯಾವುದೇ ಬಣ್ಣದ ಪೆನ್‌ಗಳಿಗೆ ಅವಕಾಶವಿಲ್ಲ. ನೆನಪಿಡಿ; ಈ ಲಿಖಿತ ಪರೀಕ್ಷೆಯು ಮೊದಲ ಸುತ್ತಿನ ಪರೀಕ್ಷೆಯಾಗಿದೆ. ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು ಅಭ್ಯರ್ಥಿಗಳು ಎರಡೂ ಪತ್ರಿಕೆಗಳಲ್ಲಿ ಉತ್ತೀರ್ಣರಾಗಬೇಕು.

ಪಠ್ಯಕ್ರಮದ ಕಡೆ ಗಮನ ಇರಲಿ

ಎರಡೂ ಪ್ರಶ್ನೆ ಪತ್ರಿಕೆಗಳ ವಿಷಯಗಳು ಬೇರೆ ಬೇರೆ. ಹಾಗಾಗಿ ಪ್ರತ್ಯೇಕ ತಯಾರಿ ಅಗತ್ಯ. ಪತ್ರಿಕೆ-1ರಲ್ಲಿ ಸಾಮಾನ್ಯ ಜ್ಞಾನ ಮತ್ತು ಬುದ್ಧಿವಂತಿಕೆ ಪರೀಕ್ಷಿಸುವ ಪ್ರಶ್ನೆಗಳಿರುತ್ತವೆ. ಅದಕ್ಕಾಗಿ ಮಾನಸಿಕ ಸಾಮರ್ಥ್ಯ, ಪ್ರಚಲಿತ ವಿದ್ಯಮಾನ, ಸಾಮಾನ್ಯ ವಿಜ್ಞಾನ, ಇತಿಹಾಸ, ರಾಜಕೀಯ ಮತ್ತು ಆರ್ಥಿಕತೆ ಮತ್ತು ಭೂಗೋಳಶಾಸ್ತ್ರ ವಿಷಯಗಳ ಪಠ್ಯಕ್ರವಿದೆ. ಈ ಸಂಬಂಧ ಅಭ್ಯರ್ಥಿಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಮತ್ತು ಆರ್ಥಿಕ ವ್ಯವಹಾರಗಳು, ರಕ್ಷಣಾ ಸಂಬಂಧಿತ ಪ್ರಮುಖ ಘಟನೆಗಳು, ಮಿಲಿಟರಿ ವ್ಯವಸ್ಥೆಗಳು, ಇತ್ತೀಚಿನ ಪ್ರಶಸ್ತಿಗಳು ಮತ್ತು ಕ್ರೀಡಾ ಕಾರ್ಯಕ್ರಮಗಳು, ರಾಷ್ಟ್ರೀಯ ಉದ್ಯಾನವನಗಳು, ಅಣೆಕಟ್ಟುಗಳು, ನದಿಗಳು ಮತ್ತು ಉಪನದಿಗಳು, ಮರುಭೂಮಿಗಳು, ಅಂತರರಾಷ್ಟ್ರೀಯ ಸಂಸ್ಥೆ, ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಚಲಿತ ಮಾಹಿತಿಗಳನ್ನು ಪರಾಮರ್ಶಿಸಬೇಕು.

ಪತ್ರಿಕೆ-2 ರಲ್ಲಿ ಬರಹ ಮತ್ತು ಭಾಷಾ ಕೌಶಲ ಪರೀಕ್ಷಿಸಲಾಗುತ್ತದೆ. ಇದರಲ್ಲಿ ಎ ಮತ್ತು ಬಿ ವಿಭಾಗಗಳಿವೆ. ಎ ವಿಭಾಗದಲ್ಲಿ 80 ಅಂಕಗಳಿಗೆ ಪ್ರಬಂಧಗಳು ಹಾಗೂ ಬಿ ವಿಭಾಗದಲ್ಲಿ 120 ಅಂಕಗಳಿಗೆ ಭಾಷೆಯ ಗ್ರಹಿಕೆ, ನಿಖರವಾದ ಬರವಣಿಗೆ, ಇತರ ಭಾಷಾ ಕೌಶಲಗಳು ಮತ್ತು ಸಂವಹನಗಳಿಗೆ ಉತ್ತರಿಸಬೇಕು. ಪತ್ರಿಕೆ-2ರ ಉತ್ತರಗಳನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಬೇಕು. ಪ್ರಬಂಧಗಳು ಆಧುನಿಕ ಭಾರತೀಯ ಇತಿಹಾಸ, ವಿಶೇಷವಾಗಿ ಸ್ವಾತಂತ್ರ‍್ಯ ಹೋರಾಟದ ಸೂಚಕ ವಿಷಯಗಳು, ಭೌಗೋಳಿಕತೆ, ರಾಜಕೀಯ ಮತ್ತು ಆರ್ಥಿಕತೆ, ಭದ್ರತೆ ಮತ್ತು ಮಾನವ ಹಕ್ಕುಗಳ ಸಮಸ್ಯೆಗಳನ್ನು ಒಳಗೊಂಡಿರುತ್ತವೆ. ಅದಕ್ಕಾಗಿ ಅಭ್ಯರ್ಥಿಗಳು ವಿಷಯದ ಆಳ ಜ್ಞಾನ ಮತ್ತು ವಿಶ್ಲೇಷಣಾತ್ಮಕ ಸಾಮರ್ಥ್ಯವನ್ನು ಮತ್ತೊಮ್ಮೆ ಪರಾಮರ್ಶಿಸಿಕೊಳ್ಳಬೇಕು.

ಟಿಪ್ಪಣಿಗಳನ್ನು ನಕ್ಷೆಗಳಾಗಿ ಪರಿವರ್ತಿಸಿ

ವಿಷಯಗಳಿಗೆ ಪೂರಕವಾಗಿ ಸಂಗ್ರಹಿಸಿದ ಮಾಹಿತಿಗಳನ್ನು ಟೈಮ್‌ಲೈನ್‌ಗಳು, ಫ್ಲೋಚಾರ್ಟ್‌ಗಳು ಮತ್ತು ರೇಖಾಚಿತ್ರಗಳ ರೂಪದಲ್ಲಿ ಮರುಜೋಡಿಸಿಕೊಳ್ಳಿ. ಐತಿಹಾಸಿಕ ಘಟನೆಗಳು, ಜೈವಿಕ ಮತ್ತು ಭೌಗೋಳಿಕ ವರ್ಗೀಕರಣದಂತಹ ವಿಷಯಗಳನ್ನು ಘಟನೆಗಳು/ಸರಣಿಯ ರೂಪದಲ್ಲಿ ವರ್ಗೀಕರಿಸಿಕೊಳ್ಳಿ. ಈ ತಂತ್ರಗಳು ಪರೀಕ್ಷೆಯ ಅಂತಿಮ ಸಿದ್ಧತೆಗೆ ಸಹಾಯ ಮಾಡುತ್ತವೆ. ಮೈಂಡ್ ಮ್ಯಾಪ್‌ಗಳನ್ನು ರಚಿಸುವುದು ಆರಂಭದಲ್ಲಿ ಬೇಸರ ಎನಿಸಿದರೂ ಅಂತಿಮ ಹಂತದ ತಯಾರಿಕೆಯಲ್ಲಿ ಇವು ಉತ್ತಮ ಸ್ನೇಹಿತರಂತೆ ಕಾರ್ಯನಿರ್ವಹಿಸುತ್ತವೆ.

ಹೊಸ ವಿಷಯಗಳ ಓದು ನಿಲ್ಲಿಸಿ

ಪರೀಕ್ಷೆಯ ಅಂತಿಮ ಸಮಯದಲ್ಲಿ ಹೊಸ ಓದು ಫಲ ನೀಡುವುದಿಲ್ಲ. ಬದಲಿಗೆ ಗೊಂದಲ ಮೂಡಿಸುವ ಸಾಧ್ಯತೆ ಇರುತ್ತದೆ. ಹೊಸ ವಿಷಯ ಓದಿ ಗ್ರಹಿಸಲು ಹೆಚ್ಚಿನ ಶಕ್ತಿ, ಸಮಯ ಬೇಕಾಗುತ್ತದೆ. ಹೊಸ ಓದಿನ ಬದಲಾಗಿ ಕಳೆದ ಕೆಲವು ತಿಂಗಳುಗಳಲ್ಲಿ ಓದಿದ್ದನ್ನು ಪರಿಷ್ಕರಿಸುವತ್ತ ಗಮನಹರಿಸಿ.

ಉತ್ತರ ಆಯ್ಕೆಯಲ್ಲಿ ಜಾಗರೂಕರಾಗಿರಿ

ಬಹು ಆಯ್ಕೆಯ ಪ್ರಶ್ನೆಗಳಿಗೆ ಉತ್ತರಿಸುವುದು ಸುಲಭವಲ್ಲ. ಹಾಗಾಗಿ, ಉತ್ತರಗಳನ್ನು ಜಾಗರೂಕತೆಯಿಂದ ಆಯ್ಕೆ ಮಾಡಿ. ಏಕೆಂದರೆ ಪ್ರತಿ ಮೂರು ತಪ್ಪು ಉತ್ತರಗಳಿಗೆ ಒಂದು ಅಂಕ ಕಡಿತವಾಗುತ್ತದೆ. ಅದಕ್ಕಾಗಿ ಹೆಚ್ಚು ಅಣಕು ಪರೀಕ್ಷೆಗಳನ್ನು ನಡೆಸಿದ್ದರೆ ಒಳ್ಳೆಯದು. ಪರೀಕ್ಷೆಯ ಸಮಯದಲ್ಲಿ ಒಂದೇ ಪ್ರಶ್ನೆಗೆ ಹೆಚ್ಚು ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಿ. ಉಳಿದ ಪ್ರಶ್ನೆಗಳತ್ತ ಚಿತ್ತ ಹರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT