ಗುರುವಾರ , ಮಾರ್ಚ್ 30, 2023
24 °C

ಏ. 1ಕ್ಕೂ ಮುನ್ನ ಶೈಕ್ಷಣಿಕ ವರ್ಷ ಆರಂಭಿಸದಂತೆ ಸಿಬಿಎಸ್‌ಇ ಎಚ್ಚರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಏಪ್ರಿಲ್ 1ಕ್ಕೂ ಮೊದಲು ಶೈಕ್ಷಣಿಕ ವರ್ಷವನ್ನು ಆರಂಭಿಸದಂತೆ ತನ್ನ ವ್ಯಾಪ್ತಿಯ ಶಾಲೆಗಳಿಗೆ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಎಚ್ಚರಿಕೆ ನೀಡಿದೆ. 

ಹಲವು ಶಾಲೆಗಳು 10 ಮತ್ತು 12ನೇ ತರಗತಿಗಳಿಗೆ ತಮ್ಮ ಶೈಕ್ಷಣಿಕ ವರ್ಷವನ್ನು ಆರಂಭಿಸಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಿಬಿಎಸ್ಇ ಈ ಎಚ್ಚರಿಕೆ ನೀಡಿದೆ. 

‘ಕೆಲವು ಸಂಯೋಜಿತ ಶಾಲೆಗಳು ಶೈಕ್ಷಣಿಕ ಅವಧಿಗಿಂತ ಮುನ್ನವೇ ಈ ವರ್ಷ ಶಾಲೆಗಳನ್ನು ಆರಂಭಿಸಿರುವುದು ಗಮನಕ್ಕೆ ಬಂದಿದೆ. ಕಡಿಮೆ ಅವಧಿಯಲ್ಲಿ ಇಡೀ ವರ್ಷದ ಕೋರ್ಸ್ ಅನ್ನು ಪೂರ್ಣಗೊಳಿಸಲು ಯತ್ನಿಸುವುದು ವಿದ್ಯಾರ್ಥಿಗಳಿಗೆ ಹೆಚ್ಚಿನ ಅಪಾಯವನ್ನುಂಟು ಮಾಡುತ್ತದೆ. ಈ ರೀತಿಯ ಕಲಿಕೆಯ ವೇಗವು ವಿದ್ಯಾರ್ಥಿಗಳಲ್ಲಿ  ಒತ್ತಡಕ್ಕೆ ಕಾರಣವಾಗಬಹುದು’ ಎಂದು ಸಿಬಿಎಸ್‌ಇ ಕಾರ್ಯದರ್ಶಿ ಅನುರಾಗ್ ತ್ರಿಪಾಠಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

‘ನಿಗದಿತ ಅವಧಿಗಿಂತ ಮುನ್ನವೇ ಶೈಕ್ಷಣಿಕ ವರ್ಷವನ್ನು ಆರಂಭಿಸುವುದರಿಂದ ವಿದ್ಯಾರ್ಥಿಗಳಿಗೆ ಜೀವನ ಕೌಶಲ, ಮೌಲ್ಯ ಶಿಕ್ಷಣ, ಆರೋಗ್ಯ, ದೈಹಿಕ ಶಿಕ್ಷಣ ಮತ್ತು ಸಮುದಾಯ ಸೇವೆಯಂಥ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವುದಿಲ್ಲ ಎಂಬುದನ್ನು ಸಿಬಿಎಸ್‌ಇ ಗಮನಿಸಿದೆ. ಪಠ್ಯೇತರ ಚಟುವಟಿಕೆಗಳು ಕೂಡಾ ಶೈಕ್ಷಣಿಕ ಚಟುವಟಿಕೆಗಳಷ್ಟೇ ಮುಖ್ಯವಾಗಿವೆ. ಆದ್ದರಿಂದ ಶಾಲೆಗಳ ಪ್ರಾಂಶುಪಾಲರು, ಸಂಸ್ಥೆಗಳ ಮುಖ್ಯಸ್ಥರು, ನಿಗದಿತ ಸಮಯಕ್ಕಿಂತ ಮೊದಲು ಶೈಕ್ಷಣಿಕ ಅವಧಿಗಳನ್ನು ಪ್ರಾರಂಭಿಸಬಾರದು’ ಎಂದು ತ್ರಿಪಾಠಿ ಸೂಚಿಸಿದ್ದಾರೆ.

ಸಿಬಿಎಸ್‌ಇ ಪ್ರಸ್ತುತ 10 ಮತ್ತು 12ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುತ್ತಿದೆ. ಈ ಎರಡೂ ತರಗತಿಗಳಿಗೆ ಫೆ. 15ರಿಂದ ಪರೀಕ್ಷೆಗಳು ಆರಂಭವಾಗಿದ್ದವು. 10ನೇ ತರಗತಿಗೆ ಮಾರ್ಚ್ 21ರಂದು ಹಾಗೂ 12ನೇ ತರಗತಿಗೆ ಏಪ್ರಿಲ್ 5ರಂದು ಪರೀಕ್ಷೆ ಮುಕ್ತಾಯಗೊಳ್ಳಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು