ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎ.ಪರೀಕ್ಷೆ: ಎರಡನೇ ಸ್ಥಾನ ಗಳಿಸಿದ ಬೆಂಗಳೂರಿನ ಅಭಿಷೇಕ್‌ ನಾಗರಾಜ್‌ ಸಂದರ್ಶನ

ಅಕ್ಷರ ಗಾತ್ರ

ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಚೆನ್ನಾಗಿ ಓದಿ, ಕೈ ತುಂಬಾ ಸಂಬಳ ಬರುವ ದೊಡ್ಡ ಹುದ್ದೆಗೇರಲಿ ಎಂಬುದು ಪೋಷಕರ ಹಂಬಲ. ಅವಕಾಶಗಳು ಇಂದು ಎಷ್ಟಿವೆಯೋ ಅಷ್ಟೆ ಸ್ಪರ್ಧಾತ್ಮಕತೆಯು ಇದೆ. ಇಂತಹ ಸಂದರ್ಭದಲ್ಲಿ ಉನ್ನತ ವ್ಯಾಸಂಗ ಮತ್ತು ವೃತ್ತಿ ಆಯ್ಕೆಯ ವಿಷಯದಲ್ಲಿ ಮಕ್ಕಳಿಗೊಂದಿಷ್ಟು ಮಾರ್ಗದರ್ಶನ ನೀಡಿ ನಿರ್ಧಾರ ಅವರಿಗೇ ಬಿಡುವುದು ಉತ್ತಮ.

ತಮ್ಮ ಮಕ್ಕಳು ಪ್ರತಿಷ್ಠಿತ ಐ.ಎ.ಎಸ್., ಐ,ಪಿ.ಎಸ್., ಐ.ಎಫ್.ಎಸ್., ಸಿ.ಎ. ಪರೀಕ್ಷೆಗಳನ್ನು ಪಾಸು ಮಾಡಬೇಕೆಂದು ಹೆತ್ತವರು ಬಯಸುತ್ತಾರೆ. ಆದರೆ ಮಕ್ಕಳ ಆಸಕ್ತಿ, ಸಾಮರ್ಥ್ಯ, ಇಚ್ಛೆ, ಯೋಚನಾಕ್ರಮ, ಆ ಕ್ಷೇತ್ರದ ಸ್ಪರ್ಧಾತ್ಮಕತೆಗಳು ಯಶಸ್ಸಿನ ಪ್ರಮುಖ ಮಾನದಂಡಗಳು. ತಂದೆ–ತಾಯಿಯ ಇಚ್ಛೆಯೇ ಮಕ್ಕಳ ಇಚ್ಛೆಯೂ ಆಗಿದ್ದಲ್ಲಿ ಯಶಸ್ಸಿನ ಮಾರ್ಗ ಸುಲಭವಾಗುತ್ತದೆ. ಸ್ವ–ಇಚ್ಛೆಯಿಲ್ಲದೆ ಪಾಲಕರ ಒತ್ತಾಯಕ್ಕೆ ಮಣಿದು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಲಕ್ಷಗಟ್ಟಲೆ ಕೊಟ್ಟು ತರಬೇತಿ ಕೇಂದ್ರಗಳಿಗೆ ಸೇರಿಕೊಂಡರೆ ಕೊನೆಯಲ್ಲಿ ಹಣ ಮತ್ತು ಸಮಯ ಎರಡೂ ವ್ಯರ್ಥವಾಗುತ್ತದೆ. ಒಂದು ವೇಳೆ ಸ್ವ–ಇಚ್ಛೆಯಿಲ್ಲದವರೂ ಈ ಪರೀಕ್ಷೆಗಳನ್ನು ಪಾಸು ಮಾಡಿದರೂ ವೃತ್ತಿಯಲ್ಲಿ ಹೊಸತನ ಕಂಡುಕೊಳ್ಳಲು ಸೋಲುತ್ತಾರೆ.

ಸ್ಫರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಕಂಡವರನ್ನು ಮಾತನಾಡಿಸಿದಾಗ, ಸ್ವ–ಇಚ್ಛೆ, ನಿರಂತರ ಓದು, ಮನೆಯವರ ಬೆಂಬಲಗಳು ಕಾರಣವಾಗಿರುವುದು ಕಂಡುಬರುತ್ತದೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡುವುದು ಕಬ್ಬಿಣದ ಕಡಲೆ ಎಂಬಂತೆ ಹಲವರು ನೋಡುತ್ತಾರೆ. ಈ ಪರೀಕ್ಷೆಗಳು ತುಂಬಾ ಕಠಿಣವಾಗಿರುತ್ತವೆ ಎಂಬುದು ಸತ್ಯ. ಆದರೆ ಪಾಸು ಮಾಡಲು ಅಸಾಧ್ಯ ಎಂದೇನೂ ಇಲ್ಲ. ಆಸಕ್ತಿ, ಮಾರ್ಗದರ್ಶನ, ಯೋಚನಾಕ್ರಮ, ಮನಃಸ್ಥಿತಿ – ಇವು ಸಕಾರಾತ್ಮಕವಾಗಿದ್ದರೆ ಯಶಸ್ಸು ಸುಲಭ.

ಕಠಿಣ ಪರೀಕ್ಷೆಗಳಲ್ಲೊಂದಾದ ಚಾರ್ಟೆಡ್ ಅಕೌಂಟೆಟ್ (ಸಿ.ಎ.) ಅನೇಕ ವಿದ್ಯಾರ್ಥಿಗಳ ಕನಸು. ಆದರೆ ಈ ಪರೀಕ್ಷೆಯ ಕುರಿತು ಮಾಹಿತಿಯ ಕೊರತೆ, ಭಯದಿಂದ ಪರೀಕ್ಷೆಯನ್ನು ಕೈಬಿಡುವವರು ಹಲವರು. ಹಲವು ಪ್ರಯತ್ನಗಳಲ್ಲಿಯೂ ಸಫಲರಾಗದವರೂ ಅನೇಕರಿರುತ್ತಾರೆ. ಮಾರ್ಗದರ್ಶನ, ಸಲಹೆ, ಪ್ರೋತ್ಸಾಹಗಳು ದೊರೆತರೆ ಸಫಲತೆಯನ್ನು ಪಡೆಯಲು ಕಷ್ಟವೇನಿಲ್ಲ. ಪರೀಕ್ಷೆಯನ್ನು ಎದುರಿಸಿ ಯಶಸ್ಸನ್ನು ಕಂಡವರು ಮುಂದಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬಲ್ಲರು. ಈಗಷ್ಟೆ ಸಿ.ಎ. ಫಲಿತಾಂಶ ಪ್ರಕಟವಾಗಿದ್ದು ಈ ಬಾರಿ ಬೆಂಗಳೂರಿನ 21 ವರ್ಷದ ಯುವಕ ಅಭಿಷೇಕ್ ನಾಗರಾಜ್ ದೇಶಕ್ಕೆ ಎರಡನೇ ಸ್ಥಾನ ಗಳಿಸಿದ್ದಾರೆ. ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ಉತ್ತೀರ್ಣರಾದ ನಂತರ ಯಾವುದೇ ಪದವಿಗೂ ಸೇರಿಕೊಳ್ಳದ ಇವರು ತಮ್ಮ ಮೊದಲ ಪ್ರಯತ್ನದಲ್ಲೇ ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರ ಯಶಸ್ಸಿನ ಸೂತ್ರಗಳನ್ನು ಅವರಿಂದಲೇ ತಿಳಿದುಕೊಳ್ಳೋಣ.

* ನಿಮಗೆ ಸಿ.ಎ. ಪರೀಕ್ಷೆ ತೆಗೆದುಕೊಳ್ಳಬೇಕೆಂದು ಅನ್ನಿಸಿದ್ದು ಯಾವಾಗ?
ಹತ್ತನೇ ತರಗತಿಯಲ್ಲಿದ್ದಾಗಲೇ ಸಂಬಂಧಿಕರೊಬ್ಬರು ಸಿ.ಎ. ತಯಾರಿ ನಡೆಸುತ್ತಿದ್ದರು. ಆಗಲೇ ನಾನು ಸಿ.ಎ. ಪಾಸು ಮಾಡುವ ಕನಸು ಬೆಳೆಸಿಕೊಂಡಿದ್ದೆ. ನಂಬರ್‌ಗಳೆಂದರೆ ನನಗೆ ಯಾವಾಗಲೂ ಇಷ್ಟ. ಹಾಗೆಯೇ ಟೆಕ್ನಿಕಲ್ ಕ್ಷೇತ್ರ ಇಷ್ಟ ಇರದ ಕಾರಣ ಪಿಯುಸಿಯ ನಂತರ ಸಿ.ಎ. ಮಾಡುವ ಅಭಿಪ್ರಾಯ ಮನೆಯಲ್ಲಿ ತಿಳಿಸಿದೆ. ಮೊದಲು ಒಪ್ಪಿಕೊಳ್ಳದಿದ್ದರು ಆಮೇಲೆ ನನ್ನ ಇಚ್ಛೆಯನ್ನು ಬೆಂಬಲಿಸಿದರು. ಪಾಲಕರು ಮಕ್ಕಳನ್ನು ಬೆಂಬಲಿಸುವುದು ಯಶಸ್ಸಿಗೆ ಮೊದಲನೆ ಹೆಜ್ಜೆ.

* ಪಿ.ಯು.ಸಿ.ಯ ನಂತರ ಸಿ.ಎ. ತಯಾರಿ ಹೇಗೆ?
ಸಿ.ಎ. ಪರೀಕ್ಷೆಯ ಒಟ್ಟು ಅವಧಿ ಕನಿಷ್ಠ 4 ವರ್ಷಗಳು. ಪದವಿಧರರಲ್ಲದವರು ಇನ್ಸಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟ್ಸ್ ಆಫ್ ಇಂಡಿಯಾ ( ಐ.ಸಿ.ಎ.ಐ.)ಯ ಪ್ರವೇಶ ಪರೀಕ್ಷೆ (ಫೌಂಡೇಷನ್ ಪರೀಕ್ಷೆ)ಯನ್ನು ತೆಗೆದುಕೊಳ್ಳಬೇಕು. ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾದ ನಂತರ ಇಂಟರ್ ಮಿಡಿಯೇಟ್ ಪರೀಕ್ಷೆಗೆ ನೋಂದಾಯಿಸಿಕೊಳ್ಳಬೇಕು. ಇದಾದನಂತರ ಆರ್ಟಿಕಲ್ ಶಿಪ್ ಮುಗಿದನಂತರವಷ್ಟೆ ಮುಖ್ಯ ಪರೀಕ್ಷೆಯನ್ನು ತೆಗೆದುಕೊಳ್ಳಲು ಪರೀಕ್ಷಾಕಾಂಕ್ಷಿಗಳು ಅರ್ಹರಾಗುತ್ತಾರೆ.

* ಆರ್ಟಿಕಲ್ ಶಿಪ್ ಅಂದರೇನು?
ಚಾರ್ಟೆಡ್‌ ಅಕೌಂಟೆಂಟ್ ಮಾಡಬೇಕಾದ ಕೆಲಸಗಳನ್ನು ಪ್ರಾಯೋಗಿಕವಾಗಿ ಮಾಡುವುದೇ ಆರ್ಟಿಕಲ್ ಶಿಪ್. ಇದು ವೃತ್ತಿ ತರಬೇತಿಯ ಭಾಗವಾಗಿರುತ್ತದೆ. ಮುಖ್ಯಪರೀಕ್ಷೆಗೆ ಮತ್ತು ವೃತ್ತಿ ತರಬೇತಿಗೆ ಇದು ಸಹಾಯವಾಗುವುದರ ಜೊತೆಗೆ ನಮ್ಮಲ್ಲಿ ಆತ್ಮವಿಶ್ವಾಸವನ್ನು ಬೆಳೆಸುತ್ತದೆ.

* ಆರ್ಟಿಕಲ್ ಶಿಪ್ ನಡುವೆ ಓದುವ ಸಮಯ ಹೇಗೆ ಹೊಂದಿಸಿಕೊಳ್ಳಬೇಕು?
ಆರ್ಟಿಕಲ್ ಶಿಪ್ ಮತ್ತು ಹಲವರು ಕೋಚಿಂಗ್ ತೆಗೆದುಕೊಳ್ಳುತ್ತಾರಾದ್ದರಿಂದ ವೇಳಾಪಟ್ಟಿಯನ್ನು ಹಾಕಿಕೊಂಡು ಕುಳಿತು ಓದುವುದು ಕಷ್ಟ. ನಾನು ತುಂಬಾ ಬೇಗ ಗ್ರಹಿಸಿ ಕಲಿಯುತ್ತಿದ್ದುದರಿಂದ ಕೋಚಿಂಗ್ ಕ್ಲಾಸ್‌ಗಳಲ್ಲಿ ಕಲಿತಿದ್ದು ನೆನಪಿನಲ್ಲಿ ಉಳಿಯುತ್ತಿತ್ತು.

* ಕೋಚಿಂಗ್ ಎಷ್ಟು ಅವಶ್ಯಕ?
ಪಿ.ಯು.ಸಿ. ಮುಗಿಸಿ ಸಿ.ಎ. ಪ್ರವೇಶಾತಿ ಪಡೆದುಕೊಂಡಿದ್ದರಿಂದ ನನಗೆ ಕೋಚಿಂಗ್ ಅವಶ್ಯಕ ಎನಿಸಿತು. ಜೊತೆಗೆ ಸ್ವಧ್ಯಾಯ ತುಂಬಾ ಮುಖ್ಯವಾಗುತ್ತದೆ. ಇದರೊಟ್ಟಿಗೆ ಅನೇಕ ಆನ್‌ಲೈನ್‌ ಕ್ಲಾಸುಗಳನ್ನು ನೋಡಿ ಕಲಿಯಲು ಅವಕಾಶಗಳಿವೆ. ಆದರೆ ಪಿ.ಯು.ಸಿ.ಯ ನಂತರ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಳ್ಳುವವರಿಗೆ ಬೇಸಿಕ್ ಜ್ಞಾನವನ್ನು ಗಟ್ಟಿಕೊಳಿಸಿಕೊಳ್ಳಲು ಕೋಚಿಂಗ್ ಅಗತ್ಯ. ತದನಂತರ ಎಲ್ಲಾ ವಿಷಯಗಳು ಸುಲಭವಾಗಿ ಅರ್ಥವಾಗುತ್ತಾ ಹೋಗುವುದರಿಂದ ಮುಖ್ಯ ಪರೀಕ್ಷೆಗೆ ಅಗತ್ಯ ಎನಿಸಿದ ವಿಷಯಗಳಿಗೆ ಕೋಚಿಂಗ್ ತೆಗೆದುಕೊಳ್ಳುವುದು ಉತ್ತಮ.

* ಪರೀಕ್ಷಾ ಸಮಯ ಸನಿಹವಿರುವಾಗ ಅಧ್ಯಯನ ಹೇಗಿರಬೇಕು?
ಮಾಡಿದ ಕೆಲಸವನ್ನೇ ಮತ್ತೆ ಮಾಡಲು, ಓದಿದ್ದನ್ನೆ ಮತ್ತೆ ಓದಲು ನನಗೆ ಯಾವತ್ತೂ ಬೇಜಾರು ಹೆಚ್ಚಾಗಿ ಎಲ್ಲರಿಗೂ ಹಾಗೇ ಎನಿಸುತ್ತದೆ. ಆದ್ದರಿಂದ ಮೊದಲ ಪ್ರಯತ್ನದಲ್ಲೆ ಪಾಸು ಮಾಡಬೇಕೆಂದು ದಿನದಲ್ಲಿ 12 ಗಂಟೆ ಸಮಯವನ್ನು ಓದಲೆಂದೇ ಮೀಸಲಿಡುತ್ತಿದ್ದೆ. ತಿಂಗಳುಗಳ ಕಾಲ ಹೀಗೆ ಅಧ್ಯಯನ ಮಾಡಿದ್ದೇನೆ. ಕೋಚಿಂಗ್ ಕ್ಲಾಸ್‌ಗಳಲ್ಲಿ ಕಲಿತಿದ್ದು ಮತ್ತು ಆರ್ಟಿಕಲ್ ಶಿಪ್ ತುಂಬಾ ಸಹಾಯವಾಯಿತು. ಏನಾದರೂ ಅನುಮಾನವಿದ್ದರೆ ಗೆಳೆಯರಿಗೆ ಫೋನ್ ಮಾಡಿ ಕೇಳುತ್ತಿದ್ದೆ. ನನ್ನ ಗೆಲುವಿನ ಹಾದಿಯನ್ನು ಸುಲಭವಾಗಿಸಿದ್ದು ನನ್ನ ಆತ್ಮವಿಶ್ವಾಸ.

* ಸಿ.ಎ. ಪಾಸಾದ ಬಳಿಕ ಸಿಗುವ ಅವಕಾಶಗಳ ಬಗ್ಗೆ ತಿಳಿಸಿಕೊಡಿ
ಅವಕಾಶಗಳು ಎಲ್ಲ ಕಡೆಯೂ ಇವೆ. ದೇಶದ ಅಭಿವೃದ್ಧಿಗೆ ತೆರಿಗೆ ಬಹುಮುಖ್ಯವಾದುದ್ದು. ಆದ್ದರಿಂದ ಚಾರ್ಟೆಡ್‌ ಅಕೌಂಟೆಂಟ್‌ಗಳು ದೇಶದ ಆರ್ಥಿಕ ಸುಭದ್ರತೆಯನ್ನು ಕಾಪಾಡುವ ಮಹತ್ತರ ಜವಾಬ್ದಾರಿ ಹೊಂದಿದ್ದಾರೆ. ಪ್ರತಿಭೆ ಮತ್ತು ಕೌಶಲವಿದ್ದರೆ ಅವಕಾಶಗಳು ವಿಪುಲವಾಗಿವೆ. ತಾಂತ್ರಿಕ ಕೆಲಸದ ಹೊರತಾಗಿ ಎಲ್ಲಾ ವಲಯದಲ್ಲೂ ಕೆಲಸ ಮಾಡುವ ಅವಕಾಶವನ್ನು ಸಿ.ಎ. ಪಾಸಾದವರು ಹೊಂದಿದ್ದಾರೆ.

* ಸಿ.ಎ. ಆಕಾಂಕ್ಷಿಗಳಿಗೆ ನಿಮ್ಮ ಕೊನೆಯ ಸಲಹೆ ಏನು?
ಸಿ.ಎ. ಪರೀಕ್ಷೆ ಪಾಸು ಮಾಡುವುದು ಸ್ವಲ್ಪ ಕಠಿಣವಾದರೂ ಅಸಾಧ್ಯವಂತೂ ಅಲ್ಲ. ನಿಮ್ಮ ಇಚ್ಛೆ, ಪಾಲಕರ ಬೆಂಬಲ, ಸತತ ಓದು, ಆತ್ಮವಿಶ್ವಾಸ, ಗುರಿಯಿಂದ ವಿಚಲಿತರಾಗದೆ ಆಸಕ್ತಿ ಕಾಯ್ದುಕೊಳ್ಳುವುದು ಇದೆಲ್ಲ ಯಶಸ್ಸಿಗೆ ಮುಖ್ಯವಾಗುತ್ತದೆ. ನನ್ನ ಓದಿನ ಶೈಲಿ ಬೇರೆಯವರಿಗೆ ಅನುಕರಿಸಿ ಎಂದು ಹೇಳಲಾರೆ. ಅವರವರ ಸಾಮರ್ಥ್ಯ ಮತ್ತು ಗ್ರಹಿಕೆಯ ಆಧಾರದಲ್ಲಿ ಪ್ರತಿಯೊಬ್ಬರು ತಮ್ಮದೆ ಶೈಲಿಯನ್ನು ಆತ್ಮವಿಶ್ವಾಸದಿಂದ ರೂಢಿಸಿಕೊಳ್ಳಬೇಕು. ಸೋತಾಗ ನಿರಾಶರಾಗಬೇಡಿ ಮರಳಿ ಪ್ರಯತ್ನ ಮಾಡಿ ಗೆಲುವು ನಿಮ್ಮದಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT