ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಾಜೆಕ್ಟ್‌ ವರ್ಕ್‌’ ಯೋಚಿಸಿ‌ ಮಾಡಿ; ಸೃಜನಶೀಲತೆ ಅರಳುವಂತಾಗಲಿ

Last Updated 23 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಯೋಜನೆ (ಪ್ರಾಜೆಕ್ಟ್‌ ವರ್ಕ್‌) ಎಂಬುದು ಇಂಟರ್‌ನೆಟ್‌ನಿಂದ ನಕಲು ಮಾಡುವ ಸಂಗತಿಯಾಗದೇ ಮಕ್ಕಳಲ್ಲಿ ಸೃಜನಶೀಲತೆಯನ್ನು ಅರಳಿಸುವ ಚಟುವಟಿಕೆಯಾಗಬೇಕು.

***

ಮೊನ್ನೆಯಷ್ಟೆ ಮೂರು ಅವಧಿಗಳಲ್ಲಿ ಹತ್ತನೇ ತರಗತಿಗೆ ಒಂದು ಪದ್ಯ ಬೋಧಿಸಿದೆ. ಅವರ ಪ್ರಶ್ನೆಗಳಿಗೆ ಸಾದ್ಯಂತವಾಗಿ ಉತ್ತರಿಸಿದೆ. ಪದ್ಯದ ಕುರಿತು ಒಂದು ಚಿಕ್ಕ ಯೋಜನೆ (project work) ನೀಡಿದೆ. ಪದ್ಯದ ಆಯ್ದ ಎರಡು ಚರಣಗಳಿಗೆ ನಿಮ್ಮದೇ ಸಾಲುಗಳಲ್ಲಿ ಅದರ ಭಾವ ಬರೆದುಕೊಂಡು ಬನ್ನಿ ಎಂದೆ.‌ ಮರುದಿನ ಬಹುತೇಕ ವಿದ್ಯಾರ್ಥಿಗಳು ಅದ್ಭುತ ಸಾಲುಗಳೊಂದಿಗೆ ಬಂದಿದ್ದರು. ‌ನನಗೆ ಖುಷಿಯಾಗುವ ಬದಲು ಅನುಮಾನವಾಯಿತು. ಆ ಪದಗಳು ಅವರ ಮಟ್ಟ ಮೀರಿದ್ದವು. ಅದರ ಬಗ್ಗೆ ವಿಚಾರಿಸಿದಾಗ ‘ಸರ್ ಗೂಗಲ್ ನಲ್ಲಿ ಸರ್ಚ್ ಮಾಡಿದ್ವಿ. ಸಿಕ್ತು ಬರೆದುಕೊಂಡು ಬಂದ್ವಿ’ ಅಂದರು. ನಾನು ಮಕ್ಕಳಿಂದ ಏನನ್ನು ನಿರೀಕ್ಷೆ ಮಾಡಿದ್ದೇನೊ ಅದು ಹುಸಿಯಾಯಿತು.

ಯೋಜನೆ ಚಟುವಟಿಕೆಯು ಮಕ್ಕಳಲ್ಲಿ ಸೃಜನಶೀಲತೆ ರೂಪುಗೊಳ್ಳಲು ಒಂದು ಉತ್ತಮ ಮಾರ್ಗ. ಒಂದು ‌ನಿರ್ದಿಷ್ಟವಿಷಯದ ಬಗೆಗಿನ ಪ್ರಾಜೆಕ್ಟ್‌ ವರ್ಕ್‌ ಮಗುವಿನಲ್ಲಿರುವ ವಿವಿಧ ಕೌಶಲ, ಜ್ಞಾನ, ತಿಳಿವಳಿಕೆಯನ್ನು ಹೊರಗೆಳೆಯುತ್ತದೆ.‌ ಇತ್ತೀಚಿಗಂತೂ ಎಲ್ಲಾ ಶಾಲೆಗಳಲ್ಲಿ, ಎಲ್ಲಾ ತರಗತಿಗಳಲ್ಲಿ ಇದನ್ನು ನಿರ್ವಹಿಸಲಾಗುತ್ತದೆ. ಇದನ್ನು ಆಧರಿಸಿಯೇ ಆಂತರಿಕ ಅಂಕ ನೀಡುವ ಪರಿಪಾಠವಿದೆ. ಈ ವರ್ಷ ಜಾರಿಯಾಗಿರುವ ಕಲಿಕಾ ಚೇತರಿಕೆ ಉಪಕ್ರಮದಲ್ಲಿ ಯೋಜನಾ ಕಾರ್ಯವು ಕಡ್ಡಾಯವಾದ ಒಂದು ಕಲಿಕಾ ಮಾರ್ಗವಾಗಿ ಜಾರಿಯಲ್ಲಿದೆ.

ಆದರೆ ಈಗ ನೀಡಲಾಗುತ್ತಿರುವ ಯೋಜನೆಗಳು ತಮ್ಮ ಉದ್ದೇಶವನ್ನು ಸಾಧಿಸುತ್ತಿದ್ದಾವೆಯೇ ಎಂಬ ಪ್ರಶ್ನೆಯನ್ನು ಎಲ್ಲರೂ ಕೇಳಿಕೊಳ್ಳಬೇಕಾದ ಅನಿವಾರ್ಯತೆಯೊಂದಿದೆ.‌ ಯಾವುದೇ ವಿಷಯ ಕೊಡಲಿ ಮಕ್ಕಳು ಹತ್ತು ನಿಮಿಷಕ್ಕೆ ಯೋಜನೆ ಸಿದ್ಧಗೊಳಿಸುತ್ತಾರೆ. ಗೂಗಲ್‌ನಲ್ಲಿ ಹೋಗಿ ಚಿತ್ರ ಮುದ್ರಿಸಿಕೊಂಡು, ಅಲ್ಲಿರುವ ಮಾಹಿತಿಯನ್ನೆ ನಕಲಿಸಿ ಬರೆದು, ಬರೆದ‌ ಪುಟಕ್ಕೆ ರಂಗಿನ ಅಂಚು ಎಳೆದರೆ ಮುಗಿದು ಹೋಯಿತು. ಅಲ್ಲಿ ಮಗು ಕಲಿಯಲಿಲ್ಲ. ಕಂಪ್ಯೂಟರ್‌ನೊಳಗಿನ ಇಂಟರ್‌ನೆಟ್ ಮಾಹಿತಿ ಮತ್ತೊಮ್ಮೆ ಅಚ್ಚಾಯಿತು ಅಷ್ಟೆ. ಇವು ಬರೀ ದಾಖಲೆಗಳಾಗಿ ಶಾಲೆಯ ಅಲಮಾರುಗಳಲ್ಲಿ ಉಳಿಯುತ್ತವೆ. ಕಲಿಕೆ ಮಾತ್ರ ಸೊನ್ನೆ.

ನನಗಿನ್ನೂ ಚೆನ್ನಾಗಿ ನೆನಪಿದೆ. ನಾವು ಹತ್ತನೇ ತರಗತಿಯಲ್ಲಿ ಇರುವಾಗ ರಾಧಾಕೃಷ್ಣನ್ ಅವರ ಜನ್ಮದಿನ ಇಸವಿಗಾಗಿ ಇಡೀ ಗ್ರಂಥಾಲಯದ ಪುಸ್ತಕ ತಡಕಾಡಿದ್ದೆವು. ಆಗ ನಮಗೆ ಇಸವಿ ಅಷ್ಟೆ ಸಿಗಲಿಲ್ಲ, ಹುಡುಕುತ್ತಾ ಹೋದಂತೆ ಬೇರೆ ಬೇರೆ ವಿಚಾರಗಳ ದೊಡ್ಡ ರಾಶಿಯೇ ಸಿಕ್ಕಿತ್ತು. ಈಗಿನ ತಂತ್ರಜ್ಞಾನ ಅದನ್ನು‌ ಕೊಂದು ಹಾಕಿದೆ. ಮಕ್ಕಳು ಗೂಗಲ್‌ನಲ್ಲಿ ಹುಡುಕುವುದನ್ನು ಕರಗತಮಾಡಿಕೊಂಡಿದ್ದಾರೆ. ಮೊಬೈಲ್ ತುಂಬಿದೆ. ತಲೆ ಖಾಲಿ ಇದೆ. ಮಗುಗೆ ಒಂದು ಯೋಜನೆ ನೀಡುವುದರ ಹಿಂದೆ ಹತ್ತೆಂಟು‌ ಉದ್ದೇಶಗಳಿರುತ್ತವೆ. ಸೃಜನಾತ್ಮಕತೆ, ಅಭಿವ್ಯಕ್ತಿ, ವಿಷಯ ಜ್ಞಾನ, ತಿಳಿವಳಿಕೆ, ಭಿನ್ನತೆ‌, ಕಲಿಕಾಮಟ್ಟ ಇಂತಹ ಅನೇಕ ವಿಚಾರಗಳನ್ನು ಅಳೆಯಬೇಕಾಗಿರುತ್ತದೆ. ಎಲ್ಲವೂ ಸಿದ್ಧ ಮಾದರಿಯಲ್ಲಿ ಸಿಕ್ಕುವುದರಿಂದ ಮಗು ತನ್ನ ತಲೆಗೆ ಕೆಲಸ ಕೊಡುವುದಿಲ್ಲ. ಇದಂತೂ ಶಿಕ್ಷಕರಿಗೆ ಸವಾಲಾಗಿದೆ. ಈಗಿನ ‘ಕಲಿಕಾ ಚೇತರಿಕೆ’ ಎಂಬ ಉಪಕ್ರಮದಲ್ಲಿ ಮಗುವಿಗೆ ಏನೇ ಕೆಲಸ ನೀಡಿದರೂ ಮಗು ಯೂಟ್ಯೂಬ್ ನೋಡಿ ಬರೆದುಕೊಂಡು ಬರುತ್ತಿದೆ. ಯೋಜನೆಯನ್ನು ಕೊಡುವ ಮತ್ತು ಅವುಗಳನ್ನು ಮಕ್ಕಳಿಂದ ಮಾಡಿಸುವ ವಿಚಾರದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ತುಂಬಾ ಇದೆ. ಇಲ್ಲದಿದ್ದರೆ ಸಮಯ, ಶ್ರಮ, ಹಣ ಎಲ್ಲವೂ ವ್ಯರ್ಥ ಮತ್ತು ಕಲಿಕೆ ಕೂಡ ಸಾಧ್ಯವಾಗುವುದಿಲ್ಲ.‌ ಕೆಳಗಿನ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಯೋಜನೆಗಳನ್ನು ರೂಪಿಸಬಹುದು.

1. ಮಾದರಿ ಕೊಡುವುದನ್ನು ನಿಲ್ಲಿಸಿ
ಇದು ನಾವು ಪ್ರತಿ ಬಾರಿ ಮಾಡುವ ತಪ್ಪು. ಮಕ್ಕಳಿಗೆ ಒಂದು ಯೋಜನೆ ಮಾದರಿಯನ್ನು ನೀಡಿ ಇದರಂತೆ ಮಾಡಿ ಎನ್ನುತ್ತೇವೆ. ಅಲ್ಲಿಗೆ ನಾವು ಅವರ ಸೃಜನಶೀಲತೆಯನ್ನು ಕೊಂದಂತೆ. ಅವರಿಗೆ ಕೇವಲ ವಿಚಾರ ನೀಡಿ. ಮಗು ತನ್ನದೇ ಮಾದರಿ ರೂಪಿಸಿಕೊಳ್ಳಲು ಅವಕಾಶ ನೀಡಿ. ಎಲ್ಲರನ್ನೂ ಒಂದೇ ಮಾದರಿಯಲ್ಲಿ ಬಂಧಿಸುವ ಪ್ರಯತ್ನ ಬೇಡ..

2. ಸೃಜನಾತ್ಮಕತೆಗೆ ಇರಲಿ ಅವಕಾಶ
ನಾವು ಯೋಜನೆ ತಯಾರಿಸಲು ಮಕ್ಕಳಿಗೆ ಕೊಡುವ ವಿಷಯಗಳು ಮಕ್ಕಳ ಸೃಜನಶೀಲತೆಗೆ ಅನುವು ಮಾಡಿಕೊಡುವಂತಿರಬೇಕು. ಸೃಜನಶೀಲತೆ ಎಂದರೆ ಹೊಸದನ್ನು ಸೃಷ್ಟಿಸುವುದು. ಸಂಬಂಧಗಳ ಬಗ್ಗೆ ಒಂದು ಪಾಠವಿದೆಯೆಂದರೆ ಅಲ್ಲಿ ನೀವು ‘ನಮ್ಮಮ್ಮ ಯಾಕೆ ನನಗಿಷ್ಟ..’ ಅನ್ನುವ ವಿಷಯ ನೀಡಬಹುದು.‌ ಆಗ ಮಗು ತನ್ನ ಸ್ವಂತ ವಿಚಾರವನ್ನು ಬರೆಯುವ ಪ್ರಯತ್ನ ಮಾಡುತ್ತದೆ.

3. ಮಾರ್ಗದರ್ಶನವಿರಲಿ, ಸಹಾಯಬೇಡ
ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಕೊಡಲಾದ ಯೋಜನೆಗಳಿಗೆ ಸಂಬಂಧಿಸಿದಂತೆ ಸಿದ್ಧ ಮಾಹಿತಿ ಕೊಟ್ಟು ಬಿಡುತ್ತಾರೆ. ಮಗು ನೋಡಿ ಬರೆದರೆ ಮುಗಿಯಿತು ಅನ್ನುವಂತಿರುತ್ತದೆ. ಪೋಷಕರೇ‌ ಮಕ್ಕಳಿಗೆ ಗೂಗಲ್‌ನಲ್ಲಿ ಮಾಹಿತಿ ಹುಡುಕಿಕೊಡುತ್ತಾರೆ. ಶಿಕ್ಷಕರು ಈ ವಿಚಾರ ಎಲ್ಲಿ ಸಿಗುತ್ತದೆ ಎಂದು ಮೊದಲೇ ತಿಳಿಸಿ ಬಿಡುತ್ತಾರೆ. ಇದು ಆಗಬಾರದು. ಮಾರ್ಗದರ್ಶನ ಮಾಡಿ. ನೀವೇ ಪೂರ್ತಿ ಸಹಾಯಕ್ಕೆ ನಿಂತು ಬಿಡಬೇಡಿ.

4. ಪಠ್ಯದಿಂದ ಆಚೆ ಬನ್ನಿ
ನೀಡಲಾಗುವ ಎಷ್ಟೊ ಯೋಜನಾ ಕಾರ್ಯಗಳು ಮಗು ಓದುವ ಪಾಠದ್ದೆ ಆಗಿರುತ್ತವೆ. ಅದು ಸರಿಯಲ್ಲ. ಬೇಕಾದರೆ ಅದಕ್ಕೆ ಪೂರಕವಾಗಿರಲಿ. ಮಗುವಿನಲ್ಲಿ ಅಡಗಿರುವ ಪ್ರತಿಭೆ ಹೊರತೆಗೆಯುವ ವಿಚಾರ ಇರಲಿ. ಮಗು ಹೆಚ್ಚು ಖುಷಿಯಿಂದ ಅದರಲ್ಲಿ ತೊಡಗುತ್ತದೆ. ಬರೀ ಅದೇ ಅದೇ ವಿಚಾರಗಳು ಮಗುವಿನ ಕಲಿಕಾ ಆಸಕ್ತಿಯನ್ನು ಕುಂದಿಸಬಹುದು.

5. ಓದುವ ಅಭ್ಯಾಸ ಬೆಳೆಸಿ
ಮಗು ನಿತ್ಯ ಪತ್ರಿಕೆ ಓದಲಿ. ಪತ್ರಿಕೆಗಳು ಅದ್ಭುತ ಮಾಹಿತಿ ಭಂಡಾರಗಳಾಗಿವೆ. ಮಗು ತಾನು ಮಾಡಬೇಕಾದ ಯೋಜನೆಗಳಿಗೆ ಅಲ್ಲಿ ಭರಪೂರ ವಿಚಾರಗಳು ಸಿಗುತ್ತವೆ. ಮಗು ಅದನ್ನು ಸಂಗ್ರಹಿಸಲಿ. ಪುಸ್ತಕ ಓದುವ ಅಭ್ಯಾಸ ಬೆಳೆಸಿ. ಹೆಚ್ಚು ಓದಿದಷ್ಟು ಮಗು ಸತ್ವಯುತವಾಗಿ ಬರೆಯಬಲ್ಲದು. ಮಕ್ಕಳಿಗೆ ಮೊಬೈಲ್ ನೀಡಬೇಡಿ. ಅದನ್ನು ಅನಿವಾರ್ಯತೆಗೆ ಮಾತ್ರ ಬಳಸಿ. ಅಲ್ಲಿನ ವಿಚಾರಗಳನ್ನು ಮಗು ಬೇಕಾದರೆ ಮನನ ಮಾಡಿಕೊಂಡು ಸ್ವಂತವಾಗಿ ಬರೆಯುವುದನ್ನು ರೂಢಿಸಿಕೊಳ್ಳಲಿ.

ಒರೆಗೆ ಹಚ್ಚಿ ನೋಡುವ ಪ್ರವೃತ್ತಿ ಹೆಚ್ಚಲಿ
ಅಂತರ್ಜಾಲದಲ್ಲಿ ಮಾಹಿತಿ ಸಂಗ್ರಹಿಸುವುದು ತಪ್ಪಲ್ಲ. ಅದು ಬೃಹತ್‌ ಗ್ರಂಥಾಲಯ ಇದ್ದಂತೆ. ಆದರೆ, ವಿದ್ಯಾರ್ಥಿಗಳು ಈ ಮಾಹಿತಿಯನ್ನು ಒರೆಗೆ ಹಚ್ಚಿ ನೋಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಆಗಷ್ಟೆ ವಿದ್ಯಾರ್ಥಿಗಳು ಸೃಜನಶೀಲರಾಗಲು ಸಾಧ್ಯ. ಅಂತರ್ಜಾಲದ ಮಾಹಿತಿಯನ್ನು ನಕಲು ಮಾಡಿದರೆ ಕಲಿಕೆಯಾಗದು. ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪೋಷಕರು ಮಾರ್ಗದರ್ಶನ ಮಾಡಬೇಕು.
ಡಾ. ಎಚ್.ಬಿ.ಚಂದ್ರ ಶೇಖರ್‌, ಹಿರಿಯ ಉಪನ್ಯಾಸಕ, ಬೆಂಗಳೂರು ನಗರ ಡಯಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT