ಶನಿವಾರ, ಸೆಪ್ಟೆಂಬರ್ 18, 2021
24 °C

ಸೌಲಭ್ಯ ನಿರ್ವಹಣೆಗೂ ಕೋರ್ಸ್‌ ಅಗತ್ಯವೆ?

ಎಸ್‌.ಜಿ. ಕೃಷ್ಣ Updated:

ಅಕ್ಷರ ಗಾತ್ರ : | |

Prajavani

ಇತ್ತೀಚೆಗೆ ಮ್ಯಾನೇಜ್‌ಮೆಂಟ್‌ನಲ್ಲಿ ಹೊಸ ಹೊಸ ಶಾಖೆಗಳು ಸೇರ್ಪಡೆಯಾಗುತ್ತಿವೆ. ವಿದ್ಯಾರ್ಥಿಗಳೂ ಕೂಡ ಯಾವುದಕ್ಕೆ ಹೆಚ್ಚು ಬೇಡಿಕೆಯಿದೆಯೋ ಅಂತಹ ಕೋರ್ಸ್‌ಗಳನ್ನು ಮಾಡಿಕೊಂಡು ಉದ್ಯೋಗಕ್ಷೇತ್ರದಲ್ಲಿ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೌಲಭ್ಯ ನಿರ್ವಹಣೆ ಅಥವಾ ಫೆಸಿಲಿಟಿ ಮ್ಯಾನೇಜ್‌ಮೆಂಟ್‌ ಸದ್ಯ ಶಿಕ್ಷಣ ವಲಯದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

ಏನಿದು ಸೌಲಭ್ಯ ನಿರ್ವಹಣೆ ಎಂದರೆ ಕಲೆ ಮತ್ತು ವಿಜ್ಞಾನಗಳ ಮಿಶ್ರಣ. ಟೆಕ್ನಿಕಲ್‌ ಮತ್ತು ಎಂಜಿನಿಯರಿಂಗ್‌ ಸೇವೆ, ಪರಿಸರ ಆರೋಗ್ಯ ಮತ್ತು ಸುರಕ್ಷತೆ, ಇಂಧನ ಮತ್ತು ಜಲ ನಿರ್ವಹಣೆ, ಯೋಜನೆ ನಿರ್ವಹಣೆ, ಬ್ಯುಸಿನೆಸ್‌ ಬೆಂಬಲ ಸೇವೆ ಮೊದಲಾದವುಗಳು ಇದರಲ್ಲಿ ಸೇರಿವೆ. ಪ್ರತಿಯೊಂದು ವಿಷಯದಲ್ಲೂ ನೈಪುಣ್ಯದ ಅವಶ್ಯಕತೆಯಿದೆ. ಹಾಗೆಯೇ ಎಲ್ಲವೂ ಮೂಲಸೌಲಭ್ಯವನ್ನು ಅವಲಂಬಿಸಿದೆ.

ಉದಾಹರಣೆಗೆ ಕಟ್ಟಡ ನಿರ್ವಹಣೆಯೂ ಇದರಲ್ಲಿ ಸೇರಿದೆ. ಅಂದರೆ ಈಗಿನ ವಸತಿ ಸಂಕೀರ್ಣದಲ್ಲಿ ನಿರ್ವಹಣಾ ವ್ಯವಸ್ಥೆಯೂ ಇಂತಹ ಸೇವೆಗಳಲ್ಲಿ ಒಂದಾಗಿದೆ. ಹಾಗೆಯೇ ದೊಡ್ಡ ದೊಡ್ಡ ಐಟಿ ಕಂಪನಿಗಳು, ಕೈಗಾರಿಕೆಗಳ ಸಂಕೀರ್ಣವನ್ನೂ ಇದು ಒಳಗೊಂಡಿದೆ. ಇಂತಹ ಕಾರ್ಯಗಳ ವ್ಯಾಪ್ತಿ ಜಾಸ್ತಿಯಾಗುತ್ತ ಹೋದಂತೆ ವೃತ್ತಿಪರ ತಜ್ಞರ ಅವಶ್ಯಕತೆಯೂ ಹೆಚ್ಚಾಗುತ್ತ ಹೋಗುತ್ತದೆ.

ಒಂದು ಕಂಪನಿಯಲ್ಲಿ ಉದ್ಯೋಗಿಗಳು ಯಾವುದೇ ತೊಂದರೆಯಿಲ್ಲದೇ ಕಾರ್ಯನಿರ್ವಹಿಸಬೇಕಾದರೆ ಸೌಲಭ್ಯ ನಿರ್ವಹಣೆ ವ್ಯವಸ್ಥಿತವಾಗಿರಬೇಕು. ಕಂಪನಿಯಲ್ಲಿ ಮಾನವ ಸಂಪನ್ಮೂಲ, ಯಂತ್ರಗಳ ವ್ಯವಸ್ಥೆಯನ್ನು ಅಧ್ಯಯನ ಮಾಡಿದ ಮೇಲೆ ಅಲ್ಲಿ ಈ ತಂಡವು ಹೇಗೆ ಕಾರ್ಯ ನಿರ್ವಹಣೆ ಮಾಡಬೇಕು ಎಂಬುದನ್ನು ನಿರ್ಧರಿಸುತ್ತದೆ. ಇದರಿಂದ ಕಂಪನಿಯ ಮಾಲೀಕರು ಆರ್ಥಿಕವಾಗಿ ಉಳಿತಾಯ ಮಾಡಬಹುದು. ಜೊತೆಗೆ ಸಮಯವೂ ವ್ಯರ್ಥವಾಗದಂತೆ ತಡೆಯಬಹುದು.

ಸೌಲಭ್ಯ ವ್ಯವಸ್ಥಾಪಕರು ನಿತ್ಯದ ಕಾರ್ಯನಿರ್ವಹಣೆಯ ಮೇಲೆ ನಿಗಾ ಇಡಬೇಕು. ಉದಾಹರಣೆಗೆ ಒಂದು ಕಂಪನಿಯ ಹೌಸ್‌ಕೀಪಿಂಗ್‌ ಕೂಡ ಮಾಡಬೇಕಾಗುತ್ತದೆ. ಸ್ವಚ್ಛತೆ, ಭದ್ರತೆ, ಅದಕ್ಕೆ ಬೇಕಾಗಿರುವ ಉದ್ಯೋಗಿಗಳ ನಿರ್ವಹಣೆ, ಅಲ್ಲಿಯ ತುರ್ತು ಅವಶ್ಯಕತೆಗಳನ್ನು ಪೂರೈಸುವುದು, ಅಗ್ನಿ ಅವಗಢವಾಗದಂತೆ ತಡೆಯುವುದು, ವಿದ್ಯುತ್‌, ನೀರು, ತ್ಯಾಜ್ಯಗಳ ನಿರ್ವಹಣೆ.. ಎಲ್ಲವೂ ಇವರ ವ್ಯಾಪ್ತಿಯಲ್ಲಿ ಬರುತ್ತವೆ. ಕೆಲವೊಮ್ಮೆ ಎಂಜಿನಿಯರಿಂಗ್‌ ಸಾಮರ್ಥ್ಯವೂ ಇರಬೇಕಾಗುತ್ತದೆ.

ಅರ್ಹತೆ

ಒಬ್ಬ ಸೌಲಭ್ಯ ವ್ಯವಸ್ಥಾಪಕನಿಗೆ ಕಾರ್ಮಿಕರನ್ನು ನಿರ್ವಹಿಸುವ ಚಾಕಚಕ್ಯತೆ ಇರಬೇಕು. ಒಳ್ಳೆಯ ಸಂವಹನ ಅವಶ್ಯಕ. ತಕ್ಷಣವೇ ನಿರ್ಧಾರ ಕೈಗೊಂಡು ನಿರ್ವಹಿಸುವ ಸಾಮರ್ಥ್ಯವಿರಬೇಕು. ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು ಕೂಡ ಈ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸುತ್ತಿದ್ದಾರೆ.

ಕಂಪನಿ ಅಥವಾ ವಸತಿ ಸಂಕೀರ್ಣದ ಕಟ್ಟಡದಲ್ಲಿ ಸದ್ಯಕ್ಕಂತೂ ಸೌಲಭ್ಯ ವ್ಯವಸ್ಥಾಪಕರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಇದಕ್ಕೂ ಮೊದಲು ಆಡಳಿತದ ಒಂದು ವಿಭಾಗವೇ ಇದನ್ನು ನೋಡಿಕೊಳ್ಳುತ್ತಿತ್ತು. ಈಗ ಈ ವ್ಯವಸ್ಥೆಯ ಹೊಣೆಗಾರಿಕೆಯನ್ನು ಹೊರ ಗುತ್ತಿಗೆ ನೀಡುವ ಪರಿಪಾಟ ಬೆಳೆದಿದೆ. ಇದರಿಂದ ಕಂಪನಿಯ ಆಡಳಿತ ವ್ಯವಸ್ಥೆ ಮುಖ್ಯವಾದ ಕಾರ್ಯಗಳ ಮೇಲೆ ನಿಗಾ ಇಡಬಹುದು. ಬಹು ರಾಷ್ಟ್ರೀಯ ಕಂಪನಿಗಳು ತಮ್ಮ ವಹಿವಾಟನ್ನು ಹೆಚ್ಚಿಸಿದ ಮೇಲಂತೂ ಈ ಸೌಲಭ್ಯ ನಿರ್ವಹಣೆ ಕ್ಷೇತ್ರದವರಿಗೆ ಬೇಡಿಕೆ ಜಾಸ್ತಿಯಾಗಿದೆ. ಉದ್ಯೋಗಗಳು ಸಾಕಷ್ಟು ಸಂಖ್ಯೆಯಲ್ಲಿ ಸೃಷ್ಟಿಯಾಗುತ್ತಿವೆ. ಎಂಜಿನಿಯರಿಂಗ್‌, ಮ್ಯಾನೇಜ್‌ಮೆಂಟ್‌ ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು