ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸಿನ ಮೂಲ ಸ್ವಅವಲೋಕನ

ಡಾ.ಪರಮೇಶ್ವರಯ್ಯ ಸೊಪ್ಪಿಮಠ
Published 29 ಅಕ್ಟೋಬರ್ 2023, 23:30 IST
Last Updated 29 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ
ಸ್ವಅವಲೋಕನವು ಬರೀ ಅಧ್ಯಯನಕ್ಕೆ ಮಾತ್ರ ಸೀಮಿತವಲ್ಲ. ಬದಲಾಗಿ ಬದುಕಿನ ಪ್ರತಿ ಹಂತದಲ್ಲಿಯೂ ಯಶಸ್ವಿಯಾಗಿ ಬಳಸಿಕೊಳ್ಳಬಹುದು. ಸ್ವ ಅಲೋಕನವು ಒಂದು ರೀತಿ ನಮ್ಮೊಂದಿಗೆ ನಾವೇ ಸ್ಪರ್ಧಿ ಮಾಡಲು ಪ್ರೇರಣೆ ಒದಗಿಸುತ್ತದೆ. ಇದು ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಅತ್ಯಂತ ಅಗತ್ಯ.

‘ಸಿಂಹಾವಲೋಕನ’ ಪದವನ್ನು ಸಾಮಾನ್ಯವಾಗಿ ಅನೇಕ ಕಡೆಗಳಲ್ಲಿ ಬಳಸಲಾಗುತ್ತದೆ. ಅಂದರೆ ಸಿಂಹವು ತಾನು ನಡೆಯುವಾಗ ನಾಲ್ಕು ಹೆಜ್ಜೆ ಮುಂದಕ್ಕೆ ಸಾಗಿ ನಂತರ ಒಮ್ಮೆ ಅದು ಹಿಂತಿರುಗಿ ತಾನು ನಡೆದು ಬಂದ ಹಾದಿಯನ್ನು ಅವಲೋಕಿಸುತ್ತದೆ. ಪ್ರಾಣಿಗಳಲ್ಲೇ ಈ ಗುಣವಿರುವಾಗ ಮನುಷ್ಯರು ಇಂಥ ಗುಣವನ್ನು ಅಳವಡಿಸಿಕೊಳ್ಳದಿದ್ದರೆ ಹೇಗೆ?. ಅದರಲ್ಲಿಯೂ ಕಲಿಯುವ ವಿದ್ಯಾರ್ಥಿಗೆ ಇದು ಬಹಳ ಅಗತ್ಯವಾದ ಕ್ರಮ. 

ವಿದ್ಯಾರ್ಥಿಯು ತಾನು ಅಧ್ಯಯನ ಮಾಡಿದ್ದನ್ನು ಸಿಂಹಾವಲೋಕನ ಮಾಡಿಕೊಳ್ಳಲೇಬೇಕು. ಇದನ್ನು ಇನ್ನಷ್ಟು ಸರಳವಾಗಿ ಹೇಳುವುದಾದರೆ ‘ಸ್ವ ಅವಲೋಕನ’ ಎನ್ನಬಹುದು. ಸ್ವಅವಲೋಕನದ ಮೂಲಕ ವಿದ್ಯಾರ್ಥಿಯು ತಾನು ಅಧ್ಯಯನದಲ್ಲಿ ಎಲ್ಲಿರಬೇಕಾಗಿತ್ತು?. ಈಗ ಎಲ್ಲಿದ್ದೇನೆ?. ಅಲ್ಲಿಗೆ ಹೋಗಲು ಇರುವ ಮಾರ್ಗಗಳಾವುವು? ಹೀಗೆ ಇವೆಲ್ಲವನ್ನೂ ಸಂಪೂರ್ಣವಾಗಿ ಅರಿತುಕೊಳ್ಳಲು ಸ್ವಅವಲೋಕನ ನೆರವಾಗುತ್ತದೆ.

ಸ್ವಅವಲೋಕನವು ಬರೀ ಅಧ್ಯಯನಕ್ಕೆ ಮಾತ್ರ ಸೀಮಿತವಲ್ಲ. ಬದಲಾಗಿ ಬದುಕಿನ ಪ್ರತಿ ಹಂತದಲ್ಲಿಯೂ ಯಶಸ್ವಿಯಾಗಿ ಬಳಸಿಕೊಳ್ಳಬಹುದು.  ಸ್ವಅಲೋಕನವು ಒಂದು ರೀತಿ ನಮ್ಮೊಂದಿಗೆ ನಾವೇ ಸ್ಪರ್ಧಿ ಮಾಡಲು ಪ್ರೇರಣೆ ಒದಗಿಸುತ್ತದೆ. ಇದು ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಅತ್ಯಂತ ಅಗತ್ಯ. 

ಸ್ವಅವಲೋಕನದ ಮೂಲಕ ನಮ್ಮ ಗುರಿಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಅವುಗಳನ್ನು ಒಂದೊಂದಾಗಿ ಸಾಧಿಸುವ ಮೂಲಕ ಉನ್ನತ ಹಂತಕ್ಕೆ ಸಾಗಬಹುದಾಗಿದೆ. ಆ ಗುರಿಗಳನ್ನು ತಲುಪಲು ಏನು ಮಾಡಬೇಕು?, ಏನು ಮಾಡಬಾರದು? ಎಂಬುದರ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಆ ಮೂಲಕ ಯೋಜನೆಯನ್ನು ರೂಪಿಸಿಕೊಂಡು ಸಾಧನೆಯತ್ತ ಮುನ್ನಡೆಯಬಹುದು. 

ಸ್ವಅವಲೋಕನದ ಮಾದರಿಗಳು

ಎಸ್ಸೆಸ್ಸೆಲ್ಸಿ ಓದುತ್ತಿದ್ದ ಜಾಣ ವಿದ್ಯಾರ್ಥಿಯೊಬ್ಬ ತಪ್ಪದೇ ಎಲ್ಲ ತರಗತಿಗಳಿಗೆ ಹಾಜರಾಗುತ್ತಿದ್ದ. ಉತ್ತಮ ಅಧ್ಯಯನ ನಡೆಸಿದ್ದ. ಫಲಿತಾಂಶದಲ್ಲಿ  ಅತ್ಯುತ್ತಮ ಶ್ರೇಣಿ ಪಡೆಯುವ ವಿಶ್ವಾಸವಿತ್ತು. ಯಾವ ಪ್ರಶ್ನೆ ಕೇಳಿದರೂ ಉತ್ತರ ಹೇಳುವಷ್ಟು ಪರಿಣತಿ ಇತ್ತು. ಆದರೆ, ಪರೀಕ್ಷೆ  ಬರೆಯುವಾಗ ಮಾಡಿದ ಯಡವಟ್ಟಿನಿಂದ ಅತ್ಯುತ್ತಮ ಶ್ರೇಣಿ ಸಿಗಲಿಲ್ಲ. 
 

ಸಮಾಜವಿಜ್ಞಾನ ಪರೀಕ್ಷೆ ಬರೆಯುವಾಗ ಒಂದು ದೀರ್ಘಪ್ರಶ್ನೆಗೆ ತಪ್ಪು ಉತ್ತರ ಬರೆದಿದ್ದ. ಇದು ಪರೀಕ್ಷಾ ಸಮಯದಲ್ಲಿಯೇ ಆತನಿಗೆ ಗಮನಕ್ಕೆ ಬಂದಿತ್ತು. ಪರೀಕ್ಷಾ ಅವಧಿ ಮುಗಿಯಲು ಇನ್ನೂ ಐದು ನಿಮಿಷ ಬಾಕಿ ಇತ್ತು. ಸರಿಯಾದ ಉತ್ತರ ಗೊತ್ತಿದ್ದರೂ, ಸುಮ್ಮನಾದ. ಇದು ಆತನಿಗೆ ಕಡಿಮೆ ಅಂಕ ಬರಲು ಕಾರಣವಾಗಿತ್ತು. ಕೆಲಸ ಮಾಡುವಾಗ, ನಿರ್ಧಾರ ಕೈಗೊಳ್ಳುವಾಗ ಎರಡೆರಡು ಬಾರಿ ಪರಿಶೀಲಿಸಬೇಕಾಗುತ್ತದೆ. ಈ ಸಮಯದಲ್ಲಿ ಸ್ವಅವಲೋಕನ ಪ್ರಮುಖ ಪಾತ್ರ ವಹಿಸುತ್ತದೆ. 

ಸ್ವಅವಲೋಕನದ ಮಹತ್ವ

  • ಕಾರ್ಯಕ್ಷಮತೆಯ ಮಟ್ಟವನ್ನು ವಿಮರ್ಶಾತ್ಮಕವಾಗಿ ಯೋಚಿಸುವಂತೆ ಮಾಡುತ್ತದೆ. ಪ್ರಗತಿಯ ಮೌಲ್ಯಮಾಪನವೂ ಸುಲಭ.  ಸಾಮರ್ಥ್ಯ ಮತ್ತು ಸುಧಾರಿಸಬೇಕಾದ ಕೌಶಲಗಳನ್ನು ಅರಿಯಲು ಸಾಧ್ಯವಾಗುತ್ತದೆ.‌

  •  ಜ್ಞಾನ ಮತ್ತು ಮಾನಸಿಕ ಬೆಳವಣಿಗೆಯಲ್ಲಿನ ಅಂತರವನ್ನು ಗುರುತಿಸಲು ಸಹಾಯ ಮಾಡುತ್ತದೆ. ಅವುಗಳನ್ನು ಸಮಯಕ್ಕೆ ತಕ್ಕಂತೆ ಪರಿಷ್ಕರಿಸುವುದರಿಂದ ಗುರಿ ಸ್ಪಷ್ಟಗೊಳ್ಳುತ್ತದೆ. ಇದರಿಂದ ಕೆಲಸದೆಡೆಗಿನ ಬದ್ಧತೆ ಹೆಚ್ಚುತ್ತದೆ. ಇನ್ನಷ್ಟು ಕೆಲಸ ಮಾಡಲು ಪ್ರೇರೇಪಿಸುತ್ತದೆ. 

  • ಸ್ವ ಅವಲೋಕನವೆಂಬುದು ನಿಷ್ಠುರವಾದ ಕ್ರಮವಾದ್ದರಿಂದ ಆದ ಘಟನೆಗಳ ಬಗ್ಗೆ ಯೋಚಿಸಿ ವ್ಯರ್ಥ ಮಾಡದೇ, ಭವಿಷ್ಯದ ಕ್ರಿಯೆಗಳ ಬಗ್ಗೆ ಗಮನವಿಡಲು ಸಹಕರಿಸುತ್ತದೆ. ಆಗಾಗ್ಗೆ ಕಾರ್ಯಕ್ಷಮತೆಯನ್ನು ಪರಿಶೀಲಿಸುತ್ತಿದ್ದರೆ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಕಾರ್ಯಕ್ಷಮತೆಯ ಆಧಾರದ ಮೇಲೆ ಪ್ರಗತಿಯ ನಕ್ಷೆಯನ್ನು ರೂಪಿಸಬಹುದು. 
     

ಸ್ವಅವಲೋಕನ ಹೀಗಿರಲಿ

  • ಸ್ವಅವಲೋಕನಕ್ಕೆ ಒಳಪಡುವಾಗ ಪ್ರಾಮಾಣಿಕವಾಗಿರಬೇಕು. ಏನು ತಪ್ಪಾಗಿದೆ ಎಂಬುದನ್ನು ಮುಚ್ಚುಮರೆಯಿಲ್ಲದೇ ಒಪ್ಪಿಕೊಳ್ಳಬೇಕಾಗುತ್ತದೆ. ನಿಮ್ಮನ್ನು ನೀವು ಮೊದಲು ನಂಬಿ. ಖಂಡಿತವಾಗಿಯೂ ಇಂಥದ್ದನ್ನು ಸಾಧಿಸಲು ಸಾಧ್ಯವಿದೆ ಎಂಬುದನ್ನು ಬಲವಾಗಿ ನಂಬಿ. 

  • ಸ್ವ ಮೌಲ್ಯಮಾಪನದಿಂದ ಬದಲಾದ ಅಂಶಗಳನ್ನು ಅಳವಡಿಸಿಕೊಳ್ಳಲು ಸಮಯವನ್ನು ನೀಡಲೇಬೇಕಾಗುತ್ತದೆ. ಅದಕ್ಕೂ ಮೊದಲು ಸ್ವಯಂ ಮೌಲ್ಯಮಾಪನವನ್ನು
    ಪೂರ್ಣಗೊಳಿಸಲು ಕೆಲ ಸಮಯವನ್ನು ಮೀಸಲಿಡಬೇಕಾಗುತ್ತದೆ. ಆದರೆ ನೀವು ಏನನ್ನು ಸಾಧಿಸಲು ಬಯಸುತ್ತೀರಿ, ಅದು ಹೇಗೆ ಸಂಭವಿಸಬಹುದು ಮತ್ತು ನೀವು ಸರಿಯಾದ ಹಾದಿಯಲ್ಲಿದ್ದೀರಾ ಎಂಬುದರ ಕುರಿತು ಯೋಚಿಸಲು ಸಮಯ ಕೊಡಿ.

  • ಕಳೆದ ತ್ರೈಮಾಸಿಕದಲ್ಲಿ ಹೇಗೆ ಅಭ್ಯಾಸ ನಡೆಸಿದ್ದೀರಿ ಎಂಬುದರ ಕುರಿತು ಕೆಲವು  ಟಿಪ್ಪಣಿಗಳನ್ನು ತೆಗೆದುಕೊಳ್ಳಲು  ವಿಶ್ವಾಸಾರ್ಹ ಸ್ನೇಹಿತರೊಂದಿಗೆ ಸಮಾಲೋಚನೆ ಮಾಡಬೇಕು. ಕಡಿಮೆ ಅಂಕ ಬರುವ ವಿಷಯದ ಕುರಿತು ಇರುವ ಅಭಿಪ್ರಾಯದ ಬಗ್ಗೆ ಟಿಪ್ಪಣಿ ಮಾಡಿಕೊಳ್ಳಿ. 

  • ಹಿಂದಿನ ವರ್ಷದ ಕಾರ್ಯಕ್ಷಮತೆಯ ಬಗ್ಗೆ ಶಿಕ್ಷಕರಿಗೆ ಅರಿವಿರುವುದರಿಂದ ಸಾಮರ್ಥ್ಯ ಹಾಗೂ ದೌರ್ಬಲ್ಯ ಗುರುತಿಸಲು ಶಿಕ್ಷಕರ ನೆರವು ಪಡೆಯಬಹುದು. ಇದರಿಂದ ಗುರಿ ಸ್ಪಷ್ಟವಾಗುತ್ತದೆ. ಅದನ್ನು ಸಾಧಿಸುವ ಹಾದಿಯೂ ಸ್ಪಷ್ಟಗೊಳ್ಳುತ್ತದೆ. 

ಸಾಧನೆಗೆ ಹೇಗೆ ಕಾರ್ಯನಿರ್ವಹಿಸಿದ್ದೀರಿ. ನಿರೀಕ್ಷೆಗಳನ್ನು ಪೂರೈಸಿದ್ದೀರಾ, ಮೀರಿದ್ದೀರಾ, ಸಾಧಿಸಲು ಹೆಣಗಾಡಿದ್ದೀರಾ ಎಂಬುದನ್ನು ದಾಖಲಿಸಿಕೊಳ್ಳಬೇಕು. ಸ್ವ ಅವಲೋಕನವೆಂಬುದು ಪ್ರಶ್ನೆಗಳ ಗುಚ್ಛವೇ ಆಗಿರುತ್ತದೆ. ಈ ಗುರಿಯನ್ನು ಏಕೆ ಪೂರೈಸಲು ಸಾಧ್ಯವಾಗುತ್ತಿಲ್ಲ?,  ಯಾವ ಅಂಶಗಳು ಪ್ರಗತಿಗೆ ಅಡ್ಡಗಾಲಾಗಿವೆ?, ಹಾಕಿಕೊಂಡ ಗುರಿಯು ಸ್ಪಷ್ಟವೇ?  ನಿರ್ದಿಷ್ಟವೇ?, ಯಾವ ಪರ್ಯಾಯ ಮಾರ್ಗ ಅನುಸರಿಸಿ ಗುರಿ ಸಾಧಿಸಬಹುದು ಹೀಗೆ  ಪ್ರಶ್ನೆಗಳನ್ನು  ಮುಂದಿಟ್ಟುಕೊಳ್ಳಿ. 

ಮಕ್ಕಳ ನಿರ್ಧಾರ, ಮೌಲ್ಯಮಾಪನ ಹಾಗೂ ತೀರ್ಮಾನಗಳಿಗೆ ದೊಡ್ಡವರು ಗೌರವ ಕೊಡಬೇಕು. ‌ಮಕ್ಕಳ ಅಕ್ಷರ ಜ್ಞಾನಕ್ಕೆ ಅಷ್ಟೆ ಅಲ್ಲದೇ ಸ್ವವಿಮರ್ಶೆಯ ನಡೆಗೂ ಗೌರವ ಸಿಗಬೇಕು.  ಮಗು ತನ್ನೊಳಗೆ ತಾನೇ ಸ್ವ ಮೌಲ್ಯಮಾಪನದ ಬೀಜಬಿತ್ತಿ, ಹೆಮ್ಮರವಾಗುವಂತೆ ನೋಡಿಕೊಂಡರೆ ಸ್ವಬೆಳವಣಿಗೆ ಎಂಬುದು ಬಹಳ ಸಹಜವಾಗಿ ನಡೆಯುತ್ತದೆ.  ಸ್ವ ಅನುಭವದ ಮುಖಾಂತರ ಆಳವಾದ ಜ್ಞಾನವನ್ನು ಅರಿಯುವಲ್ಲಿ ಅವರು ಸಮರ್ಥರಾಗುತ್ತಾರೆ . 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT