ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಗೆ ವರ್ಗಾವಣೆ ಚಿಂತೆ; ಪೋಷಕರಿಗೆ ಮಕ್ಕಳ ಸುರಕ್ಷತೆ ಆತಂಕ

ಪ್ರಜಾವಾಣಿಯಲ್ಲಿ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಫೋನ್ ಇನ್ ಕಾರ್ಯಕ್ರಮ
Last Updated 15 ಜೂನ್ 2020, 8:41 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಜಾವಾಣಿ’ ವತಿಯಿಂದ ಸೋಮವಾರ ಆಯೋಜಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರ ಫೋನ್‌ ಇನ್ ಕಾರ್ಯಕ್ರಮಕ್ಕೆ ನೂರಾರು ಕರೆಗಳು ಬಂದವು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಹಲವು ಪೋಷಕರು ಆತಂಕ ವ್ಯಕ್ತಪಡಿಸಿದರು. ಹಲವಾರು ಶಿಕ್ಷಕರು ವರ್ಗಾವಣೆ ಬೇಡಿಕೆಯನ್ನು ಸಚಿವರ ಮುಂದಿಟ್ಟರು.

ವರ್ಗಾವಣೆ ನೀತಿ ಕುರಿತು ಉತ್ತರಿಸಿದ ಸಚಿವರು, ‘ಒಂದು ಕೇಡರ್‌ನಲ್ಲಿ ಶೇ 25ರಷ್ಟು ಶಿಕ್ಷಕರನ್ನು ವರ್ಗಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಯಾರು ವರ್ಗಾವಣೆಗೆ ಅರ್ಹರು ಎಂಬ ಕುರಿತು ಕೆಲವು ಮಾನದಂಡಗಳನ್ನು ಸಿದ್ಧ ಮಾಡಿಕೊಳ್ಳಲಾಗುತ್ತಿದೆ. ಇದರ ಆಧಾರದ ಮೇಲೆಯೇ ವರ್ಗಾವಣೆ ಮಾಡಲಾಗುವುದು. ಈ ಕುರಿತ ಆಕ್ಷೇಪಣೆಗಳಿದ್ದಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಸಲ್ಲಿಸಬೇಕು. ಅವರು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳನ್ನು ಹೊಂದಿರುವ ಶಿಕ್ಷಕರಿಗೆ ವರ್ಗಾವಣೆ ವೇಳೆ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ– ಆತಂಕ ಬೇಕಿಲ್ಲ:

‘ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸುರಕ್ಷತೆಗೆ ಎಲ್ಲ ಕ್ರಮ ಕೈಗೊಂಡಿದ್ದು, ಯಾರೂ ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ. ಪರೀಕ್ಷೆ ನಡೆಸಲು ಹೈಕೋರ್ಟ್‌ ಕೂಡ ಸಮ್ಮತಿಸಿದೆ. ಸುಪ್ರೀಂಕೋರ್ಟ್‌ ಬುಧವಾರ ಈ ಕುರಿತು ಆದೇಶ ಪ್ರಕಟಿಸಲಿದೆ’ ಎಂದು ಸುರೇಶ್‌ಕುಮಾರ್‌ ಹೇಳಿದರು.

‘ಕಂಟೈನ್‌ಮೆಂಟ್‌ ವಲಯದಲ್ಲಿದ್ದವರು ಅಥವಾ ಅನಾರೋಗ್ಯ ಹೊಂದಿರುವ ವಿದ್ಯಾರ್ಥಿಗಳು ಈಗ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೂ, ಜುಲೈ ಕೊನೆಯಲ್ಲಿ ಪರೀಕ್ಷೆ ಬರೆಯಲು ಅವರಿಗೆ ಅವಕಾಶ ನೀಡಲಾಗುತ್ತದೆ. ದೇಹದ ಉಷ್ಣಾಂಶ ಹೆಚ್ಚು ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ, ವಾಹನ ಸೌಲಭ್ಯವಿಲ್ಲದವರಿಗೆ ಬಸ್‌ ವ್ಯವಸ್ಥೆ ಮಾಡಲಾಗುತ್ತದೆ’ ಎಂದರು.

‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಸರ್ಕಾರ ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಆದರೆ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ನಡೆಸಲಾಗುತ್ತಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ಆರ್ಥಿಕ ನೆರವು:

ಖಾಸಗಿ ಅನುದಾನರಹಿತ ಶಾಲೆಯ ಶಿಕ್ಷಕರು, ಅತಿಥಿ ಶಿಕ್ಷಕರು ಆರ್ಥಿಕ ನೆರವು ನೀಡುವಂತೆ ಕೋರಿದರು. ‘ಕಡಿಮೆ ವೇತನ ಇರುವ ಶಿಕ್ಷಕರಿಗೆ ಅಥವಾ ಖಾಸಗಿ ಶಾಲೆಗಳ ಶಿಕ್ಷಕರಿಗೆ ತೊಂದರೆ ಎದುರಾಗಿರುವುದು ಗಮನದಲ್ಲಿದೆ. ಈ ಕುರಿತು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇನೆ. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ನಂತರ, ಅರ್ಹ ಶಿಕ್ಷಕರಿಗೆ ನೆರವು ನೀಡಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.

ಆನ್‌ಲೈನ್‌ ತರಗತಿ ನಿರ್ಬಂಧಕ್ಕೆ ಮೆಚ್ಚುಗೆ:

ಎಲ್‌ಕೆಜಿ, ಯುಕೆಜಿ ಮತ್ತು ಒಂದರಿಂದ ಐದನೆಯ ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿ ನಡೆಸದಂತೆ ಸರ್ಕಾರ ಕೈಗೊಂಡ ನಿರ್ಧಾರಕ್ಕೆ ಓದುಗರು ಮೆಚ್ಚುಗೆ ವ್ಯಕ್ತಪಡಿಸಿದರು.

‘ಚಿಕ್ಕಮಕ್ಕಳಿಗೆ ಆನ್‌ಲೈನ್‌ ತರಗತಿ ನಡೆಸುವುದು ಸರಿಯಲ್ಲ. 6ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಪ್ರಿರೆಕಾರ್ಡಿಂಗ್‌ ವಿಡಿಯೊ ಮೂಲಕ ಬೋಧನೆ ಮತ್ತು ಚಂದನ ವಾಹಿನಿಯಲ್ಲಿ ಪಾಠ ಬೋಧನೆಗೆ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT