ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ | ಎಂಬಿಎ: ಯಾವ ವಿಷಯಕ್ಕೆ ಹೆಚ್ಚು ಬೇಡಿಕೆ?

Published 27 ಆಗಸ್ಟ್ 2023, 12:08 IST
Last Updated 27 ಆಗಸ್ಟ್ 2023, 12:08 IST
ಅಕ್ಷರ ಗಾತ್ರ

1. ನಾನು ಬಿಕಾಂ ಪದವಿ ಮುಗಿಸಿದ್ದು, ಮುಂದೆ ಎಂಬಿಎ ಮಾಡಬೇಕೆಂದುಕೊಂಡಿದ್ದೇನೆ. ಎಂಬಿಎ ಕೋರ್ಸ್‌ನಲ್ಲಿ ಯಾವ ವಿಷಯಗಳನ್ನು ಆಯ್ಕೆ ಮಾಡಬೇಕು? ಆ ವಿಷಯಗಳ ಬಗ್ಗೆ ಸಂಕ್ಷಿಪ್ತ ವಿವರಣೆ ಕೊಡಿ – ಹೆಸರು, ಊರು ತಿಳಿಸಿಲ್ಲ.

ಉದ್ಯಮಗಳ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದೇ ಮ್ಯಾನೇಜ್‌ಮೆಂಟ್ ಸಿದ್ದಾಂತದ ಮೂಲ ಉದ್ದೇಶ. ಈ ಜವಾಬ್ದಾರಿಗಳನ್ನು ನಿರ್ವಹಿಸಲು, ಸಮಗ್ರವಾದ ಜ್ಞಾನ ಮತ್ತು ಕೌಶಲಗಳನ್ನು ಎಂಬಿಎ ಕೋರ್ಸ್‌ನಲ್ಲಿ ನೀಡಲಾಗುತ್ತದೆ. ಹಾಗಾಗಿ, ಈ ಕೋರ್ಸ್‌ನಲ್ಲಿ ಮಾರ್ಕೆಟಿಂಗ್, ಮಾನವ ಸಂಪನ್ಮೂಲ ನಿರ್ವಹಣೆ, ಹಣಕಾಸು, ಲಾಜಿಸ್ಟಿಕ್ಸ್, ಬಿಸಿನೆಸ್ ಅನಾಲಿಟಿಕ್ಸ್, ಉತ್ಪಾದನೆ, ಇಂಟರ್‌ನ್ಯಾಷನಲ್ ಬಿಸಿನೆಸ್ ಮುಂತಾದ ಸ್ಪೆಷಲೈಸೇನ್ಸ್‌ಗಳಿದ್ದು ನಿಮ್ಮ ವೃತ್ತಿಯೋಜನೆಯಂತೆ ಆಯ್ಕೆ ಮಾಡಿಕೊಳ್ಳಬಹುದು.

ಮ್ಯಾನೇಜ್‌ಮೆಂಟ್ ತತ್ವ ಮತ್ತು ಸಿದ್ದಾಂತಗಳು, ಕಾನೂನು, ಸಂಖ್ಯಾಶಾಸ್ತ್ರ , ಮಾನವ ಸಂಪನ್ಮೂಲ, ಅರ್ಥಶಾಸ್ತ್ರ, ಮಾರ್ಕೆಟಿಂಗ್ ನಿರ್ವಹಣೆ, ಬಿಸಿನೆಸ್ ಸಂವಹನ ಇತ್ಯಾದಿ ವಿಷಯಗಳು ಎಲ್ಲಾ ಸ್ಪೆಷಲೈಸೇಷನ್ ವಿದ್ಯಾರ್ಥಿಗಳಿಗೂ ಇರುತ್ತದೆ. ಎಂಬಿಎ. ಕೋರ್ಸ್‌ನಲ್ಲಿ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಮೂಲಭೂತ ತತ್ವಗಳ, ಮೌಲ್ಯಗಳ ಮನದಟ್ಟಾಗುತ್ತದೆ. ಈ ತತ್ವಗಳ ಆಧಾರದ ಮೇಲೆ, ನೀವು ವೃತ್ತಿ ಮತ್ತು ಖಾಸಗೀ ಜೀವನಗಳೆರಡರಲ್ಲೂ ಯಶಸ್ಸು ಸಾಧಿಸಬಹುದು.

ಹೆಚ್ಚಿನ ಮಾರ್ಗದರ್ಶನಕ್ಕಾಗಿ, ಈ ಕೆಳಗಿನ ವಿಡಿಯೊ ವೀಕ್ಷಿಸಿ

ಪ್ರ

2. ನಾನು ಡಿಪ್ಲೊಮಾ (ಮೆಕ್ಯಾನಿಕಲ್) ಮಾಡಿದ್ದೇನೆ. ನನಗೆ ಪೊಲೀಸ್ ಕಾನ್‌ಸ್ಟೆಬಲ್‌ ಆಗುವ ಆಸೆಯಿದೆ. ಖಾಸಗಿ ಕಾಲೇಜಿನಲ್ಲಿ ಓದಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಕಷ್ಟವಾಗುತ್ತದೆ. ಆದರೆ, ಮನೆಯವರು ಬಿ.ಟೆಕ್ ಮಾಡು ಎನ್ನುತ್ತಿದ್ದಾರೆ. ದಯವಿಟ್ಟು ಮಾರ್ಗದರ್ಶನ ನೀಡಿ – ಹೆಸರು, ಊರು ತಿಳಿಸಿಲ್ಲ.

ಬದುಕಿಗೆ ಅಗತ್ಯವಾದ ವೃತ್ತಿಯನ್ನು ನಿರ್ಧರಿಸುವುದು ಸುಲಭವಲ್ಲ; ಇದು ನಮ್ಮ ಆಸಕ್ತಿ, ಅಭಿರುಚಿ ಮತ್ತು ಸಾಮರ್ಥ್ಯಗಳನ್ನು ಆದರಿಸಿ, ವ್ಯವಸ್ಥಿತವಾಗಿ ನಡೆಯಬೇಕಾದ ವಿಶ್ಲೇಷಾತ್ಮಕ ಪ್ರಕ್ರಿಯೆ. ಹಾಗಾಗಿ, ಪೊಲೀಸ್ ಇಲಾಖೆಯಲ್ಲಿ ವೃತ್ತಿಯನ್ನು ರೂಪಿಸಿಕೊಳ್ಳುವ ನಿಮ್ಮ ಧ್ಯೇಯದ ಹಿಂದೆ ಬಲವಾದ ಕಾರಣಗಳಿರಬೇಕು; ಈ ವೃತ್ತಿ ನಿಮಗೆ ಸಂತೃಪ್ತಿಯನ್ನು ನೀಡಬಹುದು ಎಂದು ನಿಮಗೆ ಖಾತ್ರಿಯಾಗಬೇಕು. ಯೋಜನಾ ಶಕ್ತಿ, ಏಕಾಗ್ರತೆ, ಪರಿಶ್ರಮ, ಸಮಯದ ನಿರ್ವಹಣೆ ಮತ್ತು ನಿರಂತರ ಅಭ್ಯಾಸವಿದ್ದರೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಸಾಧಿಸಬಹುದು.

ಹಾಗಾಗಿ, ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಸಾಮರ್ಥ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿ ವೃತ್ತಿಯೋಜನೆಯನ್ನು ಮಾಡಿದರೆ, ಮುಂದಿನ ಹಾದಿ ಸ್ಪಷ್ಟವಾಗುತ್ತದೆ.

ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ಕೆಳಗಿನ ವಿಡಿಯೊ ವೀಕ್ಷಿಸಿ

ಪ್ರ

3. ನಾನು ಎಂಕಾಂ ಮಾಡಿದ್ದು, ಈಗ ಸಿಎಂಎ ಮಾಡಬೇಕೆಂದುಕೊಂಡಿದ್ದೇನೆ. ಆದರೆ, ನನಗೀಗ 24 ವರ್ಷಗಳಾಗಿದ್ದು, ಸಮಯ ಮೀರಿದೆಯೇ ಎನಿಸುತ್ತದೆ. ಈಗ, ಈ ಕೋರ್ಸ್ ಮಾಡಬಹುದೇ? ದಯವಿಟ್ಟು ಈ ಕೋರ್ಸ್ ವಿವರವನ್ನು ನೀಡಿ – ಹೆಸರು, ಊರು ತಿಳಿಸಿಲ್ಲ.

ಐಸಿಡಬ್ಲ್ಯು (ಇಂಡಿಯನ್ ಕಾಸ್ಟ್ ಅಂಡ್ ವರ್ಕ್ಸ್ ಅಕೌಂಟೆಂಟ್) ಎಂಬ ಹೆಸರಿನಲ್ಲಿ ಜನಪ್ರಿಯವಾಗಿದ್ದ ಈ ಕೋರ್ಸನ್ನು ಇತ್ತೀಚಿಗೆ ಸಿಎಂಎ (ಸರ್ಟಿಫೈಡ್ ಮ್ಯಾನೇಜ್‌ಮೆಂಟ್ ಅಕೌಂಟೆಂಟ್) ಎಂದು ಬದಲಾಯಿಸಲಾಗಿದೆ. ಈ ಕೋರ್ಸ್ ಮಾಡಲು ಯಾವುದೇ ಗರಿಷ್ಠ ವಯೋಮಿತಿ ಯಿರುವುದಿಲ್ಲ. ನೀವು ಈಗಾಗಲೇ ಎಂಕಾಂ ಮಾಡಿರುವುದರಿಂದ, ವೃತ್ತಿಯಲ್ಲಿದ್ದುಕೊಂಡು ಸಿಎಂಎ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://icmai.in/icmai/

ಪ್ರ

4. ನಾನು ವೃತ್ತಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನ್ನ ವೃತ್ತಿಗೆ ತೊಂದರೆಯಾಗದಂತೆ, ನಾನು ಉನ್ನತ ಶಿಕ್ಷಣ ಪಡೆದುಕೊಳ್ಳಲು ಅವಕಾಶವಿದೆಯೇ– ಹೆಸರು, ಊರು ತಿಳಿಸಿಲ್ಲ.

ಸರ್ಕಾರಿ ಉದ್ಯೋಗಿಗಳಿಗೆ, ಪೂರ್ವಾನುಮತಿಯ ಅನುಸಾರ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುವ ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಇಲಾಖೆಯ ಮೇಲಧಿಕಾರಿಗಳನ್ನು ಸಂಪರ್ಕಿಸಿ.

ಪ್ರ

5. ನಾನು ಪ್ರಸ್ತುತ ಪೊಲೀಸ್ ಕಾನ್‌ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪೊಲೀಸ್ ಇಲಾಖೆಗೆ ಸೇರುವಾಗ ಪ್ರಥಮ ಮತ್ತು ದ್ವಿತೀಯ ವರ್ಷದ ಪದವಿಯನ್ನು ರೆಗುಲರ್ ಶಿಕ್ಷಣದ ಮೂಲಕ ಮುಗಿಸಿದ್ದೆ. ಈಗ ನೇರವಾಗಿ ಕೊನೆಯ ವರ್ಷದ ಪದವಿಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರವೇಶಾತಿಯನ್ನು ಪಡೆದಿದ್ದೇನೆ. ಇದು ನನ್ನ ಮುಂದಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ತೊಂದರೆ ಆಗಬಹುದೇ? – ಮೇಘರಾಜ ಹವಾಲ್ದಾರ್, ಕೊಟ್ಟೂರು.

ನಮ್ಮ ಅಭಿಪ್ರಾಯದಂತೆ, ನಿಮ್ಮ ವೃತ್ತಿಯಲ್ಲಿನ ಕರ್ತವ್ಯ ಮತ್ತು ಜವಾಬ್ದಾರಿಗಳಿಗೆ ಅಡ್ಡಿಯಾಗದೆ, ಉಳಿದಿರುವ ಒಂದು ವರ್ಷದ ಪರೀಕ್ಷೆಗೆ ಹಾಜರಾಗಿ ಪದವಿಯನ್ನು ಪೂರ್ಣಗೊಳಿಸುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ.

ಪ್ರ

6. ನಾನು ಬಿ.ಎ ಪ್ರಥಮ ವರ್ಷದಲ್ಲಿ ಓದುತ್ತಿದ್ದೇನೆ. ನನ್ನ ಐಚ್ಛಿಕ ವಿಷಯಗಳು ಇತಿಹಾಸ, ಕನ್ನಡ ಆಗಿದೆ. ನನಗೆ, ಇತಿಹಾಸದಲ್ಲಿ ಎಷ್ಟು ಪ್ರಯತ್ನ ಮಾಡಿದರೂ ಇಸವಿಗಳ ನೆನಪು ಉಳಿಯಿತ್ತಿಲ್ಲ. ಆದ್ದರಿಂದ, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಭೂಗೋಳಶಾಸ್ತ್ರವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಳ್ಳಲು ಬಯಸುತ್ತೇನೆ. ನಾನು 12ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ್ದೇನೆ. ಇಂಗ್ಲಿಷ್ ಕಲಿಕೆ ಸ್ವಲ್ಪ ಕಷ್ಟವಾಗುತ್ತಿದೆ. ಇಂಗ್ಲಿಷ್ ಕಲಿಯಲು ನಿಮ್ಮ ಸಲಹೆ ನೀಡಿ ಮತ್ತು ಯುಪಿಎಸ್‌ಸಿ ತಯಾರಿಗಾಗಿ ಪುಸ್ತಕಗಳ ಪಟ್ಟಿಯನ್ನು ತಿಳಿಸಿ – ಸುಮನ್ ಪಿ, ಚಿತ್ರದುರ್ಗ

ಇತಿಹಾಸದ ಪ್ರಮುಖ ಘಟನೆಗಳನ್ನು ಮತ್ತು ವರ್ಷಗಳನ್ನು ಸಾಮಾನ್ಯ ರೀತಿಯಲ್ಲಿ ಓದಿದರೆ, ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟದ ಕೆಲಸ. ಆದರೆ, ಇತಿಹಾಸದ ಅಧ್ಯಾಯಗಳನ್ನು ಆಸಕ್ತಿಯಿಂದ ಕಥಾರೂಪದಲ್ಲಿ ಓದುತ್ತಾ, ಘಟನೆಗಳನ್ನು ಕಾಲಾನುಕ್ರಮದಂತೆ, ಮನಸ್ಸಿನಲ್ಲಿ ಮರುಸೃಷ್ಠಿ ಮಾಡಿಕೊಳ್ಳುತ್ತಾ ಓದಿದರೆ ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟದ ಕೆಲಸವಲ್ಲ. ಜೊತೆಗೆ, ಇತಿಹಾಸದ ಸಾಕ್ಷ್ಯಚಿತ್ರಗಳನ್ನು ಮತ್ತು ವಿಡಿಯೊಗಳನ್ನು ವೀಕ್ಷಿಸಿ. ಹಾಗೂ, ಓದುತ್ತಿರುವಾಗ ಟಿಪ್ಪಣಿಯನ್ನು ಬರೆದುಕೊಂಡು, ಘಟನೆಗಳ ಶೀರ್ಷಿಕೆಗಳನ್ನು ಮತ್ತು ಇಸವಿಗಳನ್ನು ಹೈಲೈಟ್ ಮಾಡಿಕೊಳ್ಳುವುದರಿಂದ, ಜ್ಞಾಪಕ ಶಕ್ತಿ ಹೆಚ್ಚುತ್ತದೆ.

ಯುಪಿಎಸ್‌ಸಿ ಪರೀಕ್ಷೆಯ ಪಠ್ಯಕ್ರಮವನ್ನು ಅರ್ಥೈಸಿಕೊಂಡು ಅನೇಕ ಮೂಲಗಳಿಂದ ಆಯ್ದ ಅಧ್ಯಯನ ಸಾಮಗ್ರಿಯನ್ನು ಸಿದ್ದಪಡಿಸಿಕೊಳ್ಳಬೇಕು.

ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳ ಮಾಹಿತಿಗಾಗಿ ಗಮನಿಸಿ: https://iasbaba.com/geography-strategy-2/

ನಿಮ್ಮ ಇಂಗ್ಲಿಷ್ ಕಲಿಕೆಗೆ ಸಹಾಯವಾಗಬಹುದಾದ ಈ ಕೆಳಗಿನ ವಿಡಿಯೊ ವೀಕ್ಷಿಸಿ

ಪ್ರ

7. ನಾನು ಪಿಯುಸಿ (ವಿಜ್ಞಾನ) ಮುಗಿಸಿದ್ದೇನೆ. ಸಿಇಟಿ ಪರೀಕ್ಷೆ ಬರೆದಿದ್ದೆ; ಆದರೆ ಒಳ್ಳೆಯ ರ‍್ಯಾಂಕಿಂಗ್ ಬರಲಿಲ್ಲ. ಎಂಜಿನಿಯರಿಂಗ್‌ನಲ್ಲಿ ಸೀಟ್ ಪಡೆದುಕೊಳ್ಳಲು ಹಣದ ಸೌಲಭ್ಯವಿಲ್ಲ. ನಾನು ಒಬ್ಬ ರೈತನ ಮಗಳು. ಅದಕ್ಕಾಗಿ ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್ ಮತ್ತು ಮ್ಯಾಥಮೆಟಿಕ್ಸ್) ತೆಗೆದುಕೊಂಡಿದ್ದೇನೆ. ನನ್ನ ಆಯ್ಕೆ, ತಪ್ಪೋ, ಸರಿಯೋ ಎಂಬ ಗೊಂದಲವಿದೆ. ದಯವಿಟ್ಟು ಪರಿಹರಿಸಿ – ಹೆಸರು, ಊರು ತಿಳಿಸಿಲ್ಲ.

ನಮ್ಮ ಅಭಿಪ್ರಾಯದಂತೆ, ಬಿ.ಎಸ್ಸಿ ( ಕಂಪ್ಯೂಟರ್ ಸೈನ್ಸ್ ಮತ್ತು ಮ್ಯಾಥಮೆಟಿಕ್ಸ್) ಉತ್ತಮ ಆಯ್ಕೆ. ಆದರೆ, ನಿಮ್ಮ ಆಸಕ್ತಿ, ಅಭಿರುಚಿ, ಸಾಮರ್ಥ್ಯಗಳನ್ನು ಗಮನಿಸಿ, ವೈಯಕ್ತಿಕ ಬದುಕು ಮತ್ತು ವೃತ್ತಿಜೀವನದ ಧ್ಯೇಯಗಳನ್ನು ನಿರ್ಧರಿಸಬೇಕು. ಅದರಂತೆ ಬಿ.ಎಸ್ಸಿ ನಂತರ, ಉನ್ನತ ಶಿಕ್ಷಣವನ್ನು ಪಡೆಯಬೇಕೇ ಅಥವಾ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕೇ ಎಂದು ಈಗಲೇ ನಿರ್ಧರಿಸುವುದು ಸೂಕ್ತ.

ಆರ್ಥಿಕ ಸಮಸ್ಯೆಗಳು ತಾತ್ಕಾಲಿಕ. ಆರ್ಥಿಕ ಸಮಸ್ಯೆಯ ಕಾರಣದಿಂದ ನಿಮ್ಮ ಭವಿಷ್ಯದ ಕನಸುಗಳನ್ನು ಕಾಣದೆ ಮುಂದಿನ ಬದುಕಿನ ಬಗ್ಗೆ ರಾಜಿಯಾಗದಿರಿ. ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ವಿದ್ಯಾರ್ಥಿ ವೇತನಗಳು ಮತ್ತು ಸ್ಕಾಲರ್‌ಷಿಪ್ ಸೌಲಭ್ಯಗಳಿವೆ. ಇದಲ್ಲದೆ, ಶೈಕ್ಷಣಿಕ ಸಾಲವನ್ನು ಆಕರ್ಷಕ ಬಡ್ಡಿ ದರ ಮತ್ತು ವಿದ್ಯಾರ್ಥಿ ಸ್ನೇಹಿ ನಿಯಮಗಳೊಂದಿಗೆ ದೇಶದಲ್ಲಿರುವ ಎಲ್ಲಾ ಬ್ಯಾಂಕ್‌ಗಳು ನೀಡುತ್ತವೆ. ಕೇಂದ್ರ ಹಣಕಾಸು ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮಾರ್ಗದರ್ಶನದಲ್ಲಿ ಈ ಸಾಲಗಳನ್ನು ಪಡೆಯಲು ವಿದ್ಯಾಲಕ್ಷ್ಮಿ ಜಾಲತಾಣವನ್ನು ಅಭಿವೃದ್ಧಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.vidyalakshmi.co.in/Students/

ಪ್ರ

8. ನಾನು ಬಿ.ಎ, 2 ನೇ ವರ್ಷದ ಪದವಿ ಓದುತ್ತಿದ್ದು, ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗುತ್ತಿದ್ದೇನೆ. ಆದರೆ, ಎನ್‌ಸಿಇಆರ್‌ಟಿ ಪುಸ್ತಕಗಳಲ್ಲಿರುವಷ್ಟು ಮಾಹಿತಿ, ರಾಜ್ಯ ಪಠ್ಯಕ್ರಮದ ಪುಸ್ತಕಗಳಲ್ಲಿಲ್ಲ. ಯುಪಿಎಸ್‌ಸಿ ಫೌಂಡೇಷನ್‌ಗಾಗಿ ಯಾವ ಪುಸ್ತಕಗಳನ್ನು ಓದಬೇಕು? –ಹೆಸರು, ಊರು ತಿಳಿಸಿಲ್ಲ.

ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗುವಾಗ ಒಂದೇ ಮೂಲದ ಅಧ್ಯಯನ ಸಾಮಗ್ರಿ ಸಾಕಾಗುವುದಿಲ್ಲ. ಹಾಗಾಗಿ, ರಾಜ್ಯ ಪಠ್ಯಕ್ರಮದ ಜೊತೆಗೆ ಎನ್‌ಸಿಇಆರ್‌ಟಿ (ನ್ಯಾಷನಲ್ ಕೌನ್ಸಿಲ್ ಅಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್) ಪಠ್ಯಕ್ರಮದ ಪುಸ್ತಕಗಳನ್ನೂ ಓದಬಹುದು.

ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://ncert.nic.in/textbook.php

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT