ನನಗೆ ಎಲ್ಲದಕ್ಕೂ ಗಾಬರಿಯಾಗುತ್ತದೆ. ಈ ವರ್ಷದಿಂದ ಎಂಜಿನಿಯರಿಂಗ್ ಮಾಡಲು ದೂರದ ಊರಿಗೆ ಹೋಗಬೇಕಾಗಿದೆ. ಅಲ್ಲಿ ಎಲ್ಲವನ್ನೂ ನಾನೊಬ್ಬನೇ ನಿಭಾಯಿಸಲಾಗದು ಎಂದೆನಿಸುತ್ತಿದೆ. ಅಪ್ಪ– ಅಮ್ಮನಿಗೆ ಹೇಳಿ, ಊರಲ್ಲಿಯೇ ಇರುವ ಪದವಿ ಕಾಲೇಜಿಗೆ ಸೇರಲೇ? ಅವರು ಒಪ್ಪದಿದ್ದರೆ ಏನು ಮಾಡಲಿ?
ನಿಮ್ಮ ಪ್ರಶ್ನೆ ಸ್ಪಷ್ಟವಾಗಿಲ್ಲ. ಇನ್ನಷ್ಟು ವಿವರದ ಅಗತ್ಯವಿದೆ. ನಿಮಗೆ ಯಾವಾಗ, ಯಾವುದಕ್ಕೆ, ಎಂಥ ಸಂದರ್ಭದಲ್ಲಿ ಗಾಬರಿಯಾಗುತ್ತದೆ? ಅದು ಗಾಬರಿ ಮಾತ್ರವೋ ಅಥವಾ ಭಯವೋ? ನಿಮಗೆ ಯಾವುದರ ಬಗ್ಗೆ ಭಯವಿದೆ? ರಾತ್ರಿ ನಿದ್ರೆ ಸರಿಯಾಗಿ ಬರುತ್ತದೆಯೇ? ಸರಿಯಾಗಿ ಊಟ ಮಾಡುತ್ತೀರಿ ತಾನೆ?
ನಿಮಗೆ ಮನೆಯಿಂದ ಹೊರಗೆ ಉಳಿದುಕೊಳ್ಳುವ ಅಭ್ಯಾಸವಿಲ್ಲ ಎನ್ನಿಸುತ್ತದೆ. ಈಗ ಬೇರೆ ಊರಿನಲ್ಲಿ, ಮನೆಯವರಿಂದ ದೂರ ಇರಬೇಕಾಗುತ್ತದಲ್ಲಾ ಎನ್ನುವ ಆತಂಕ ಹಾಗೂ ಆ ಕಾರಣದಿಂದ ಗಾಬರಿ ಹೆಚ್ಚಾಗಿರಬೇಕು. ಹದಿಹರೆಯದಲ್ಲಿ ಇದು ಸಾಧಾರಣವಾಗಿ ಬಹುತೇಕರಿಗೆ ಆಗುತ್ತದೆ. ಕೆಲವರು ಬಾಯಿಬಿಟ್ಟು ಹೇಳುತ್ತಾರೆ, ಇನ್ನು ಕೆಲವರು ಹೇಳಿಕೊಳ್ಳುವುದಿಲ್ಲ. ಇರಲಿ, ಇಲ್ಲಿ ಸಮಸ್ಯೆ ಅದಲ್ಲ.
ನಿಮಗೆ ಊರು, ಮನೆ ಬಿಟ್ಟು ಬೇರೆ ಊರಿಗೆ ಹೋಗಿ ಬದುಕುವ ಬಗ್ಗೆ ಇರುವ ಆತಂಕಕ್ಕಿಂತಲೂ ಹೆಚ್ಚಾಗಿ ಏನೋ ಕೆಟ್ಟದ್ದಾಗುತ್ತದೆ ಎನ್ನುವ ಭಯದ ಕಲ್ಪನೆ ಹೆಚ್ಚಾಗುತ್ತಿದೆ. ಮೊದಲಿನಿಂದಲೂ ಮನೆಯಲ್ಲಿ ಅಂದರೆ ಒಂದು ಚೌಕಟ್ಟಿನೊಳಗೆ, ಪಾಲಕರ ರಕ್ಷಣೆಯಲ್ಲಿ, ಅವರ ಮೇಲೆ ಅವಲಂಬಿತರಾಗಿ ಬದುಕಿ ನಿಮಗೆ ಅಭ್ಯಾಸವಾಗಿದೆ. ಈಗ ಬೇರೆ ಊರಿಗೆ ಹೋದರೆ ಬದುಕುವುದು ಹೇಗಪ್ಪಾ ಎಂದು ಮನಸ್ಸು ಹಿಂಜರಿಯುತ್ತಿದೆ, ಅಲ್ಲವೇ? ಇಷ್ಟಕ್ಕೆಲ್ಲ ಆತಂಕ ಪಡಬೇಡಿ. ಹೆದರಿಕೆಯ ಕಲ್ಪನೆಗೆ ಬಣ್ಣ ಹಚ್ಚಬೇಡಿ.
ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಸಿಕ್ಕಿದೆ ಎಂದರೆ ನಿಮಗೆ ಓದಿನಲ್ಲಿ ಆಸಕ್ತಿ ಇದೆ ಎಂದಾಯಿತು. ತರಗತಿಯಲ್ಲಿ ಹಲವರಿಗಿಂತಲೂ ಹೆಚ್ಚು ಪ್ರತಿಭಾವಂತರಾಗಿದ್ದೀರಿ. ನಿಮಗೆ ಎಂಜಿನಿಯರಿಂಗ್ ಓದಲು ಆಸಕ್ತಿ ಇಲ್ಲ ಎನ್ನುವ ಹಾಗಿಲ್ಲ. ಹಾಗೊಂದು ವೇಳೆ ಎಂಜಿನಿಯರಿಂಗ್‌ನಲ್ಲಿ ಆಸಕ್ತಿ ಇಲ್ಲದೆ ಕಲಾ ವಿಷಯದಲ್ಲಿ ಆಸಕ್ತಿ ಇದ್ದಿದ್ದರೆ ಅದು ಬೇರೆ ಮಾತಾಗುತ್ತಿತ್ತು. ಆದರೆ ಇಲ್ಲಿ ಹಾಗಿಲ್ಲ. ನೀವು ಒಬ್ಬ ಒಳ್ಳೆಯ ಎಂಜಿನಿಯರ್ ಆಗುವ ಮೂಲಕ ನಮ್ಮ ದೇಶಕ್ಕೆ ಮಹತ್ತರವಾದ ಕೊಡುಗೆಯನ್ನು ಕೊಡುವ ಸಾಧ್ಯತೆ ಇದೆ. ಅದರ ಬಗ್ಗೆ ಆಲೋಚಿಸಿ. ಭವಿಷ್ಯತ್ತಿನಲ್ಲಿ ಆಗಬಹುದಾದ ಒಳ್ಳೆಯದರ ಬಗ್ಗೆ ಹೆಚ್ಚು ನಂಬಿಕೆ ಇರಿಸಿ.
ನಿಮಗಾಗುವ ಆತಂಕ ಹಾಗೂ ಭಯದ ಬಗ್ಗೆ ನಿಮ್ಮ ಪಾಲಕರಿಗೆ ಗೊತ್ತಿಲ್ಲವೇ? ನಿಮ್ಮ ಅನಿಸಿಕೆಗಳನ್ನೆಲ್ಲಾ ಅವರ ಜೊತೆಯಲ್ಲಿ ನಿರಾಳವಾಗಿ ಹಂಚಿಕೊಳ್ಳಿ. ಅವರಿಂದ ನಿಮಗೆ ಖಂಡಿತವಾಗಿಯೂ ಭರವಸೆ ಸಿಗುತ್ತದೆ. ನಿಮ್ಮ ಗೆಳೆಯರೊಂದಿಗೆ ಈ ಬಗ್ಗೆ ಮಾತನಾಡಿ. ನಿಮ್ಮ ಇಷ್ಟದ ಶಿಕ್ಷಕರಲ್ಲಿ ಸಹ ಮಾತನಾಡಿ. ಇವೆಲ್ಲವುಗಳಿಂದ ನಿಮ್ಮ ಆತಂಕ ನಿವಾರಣೆಯಾಗುತ್ತದೆ. ಆ ಜಾಗದಲ್ಲಿ ಹೊಸ ಭರವಸೆ ಮೂಡುತ್ತದೆ.
ನೀವು ಸೇರುವ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಿಮ್ಮ ಹಳೆಯ ಕಾಲೇಜಿನ ಯಾರಾದರೂ ಇರಬಹುದು ಅಥವಾ ನಿಮ್ಮ ಊರಿನ ಕೆಲವರಾದರೂ ಇರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆ ಬಗ್ಗೆ ವಿಚಾರಿಸಿ, ತಿಳಿದುಕೊಳ್ಳಿ.
ಎಂಜಿನಿಯರಿಂಗ್ ಕಾಲೇಜಿಗೆ ಹೋದಾಗ ಅಲ್ಲಿ ನಿಮ್ಮ ಹಾಗೇ ಆತಂಕದಿಂದ, ಕುತೂಹಲದಿಂದ ಬಂದಿರುವ ಬಹಳಷ್ಟು ಜನ ಇರುತ್ತಾರೆ. ನಿಮಗೆ ಅವರಲ್ಲಿ ಹೆಚ್ಚಿನವರ ಪರಿಚಯ ಆಗುತ್ತದೆ. ಕೆಲವರ ಗೆಳೆತನವಾಗುತ್ತದೆ. ಮುಂದೆ ಕೆಲವು ದಿನಗಳಲ್ಲಿ ನೀವು ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತೀರಿ. ಹೊಸ ಕಾಲೇಜು, ಹೊಸ ಗೆಳೆಯರು, ಹೊಸ ಕಲಿಕೆ, ಎಲ್ಲವೂ ಹೊಸದಾಗಿರುವುದನ್ನು ಗಮನಿಸಿ, ಖುಷಿಪಡಿ. ನಿಮ್ಮ ಮನಸ್ಸಿನಲ್ಲಿ ಈಗ ತುಂಬಿರುವ ನಕಾರಾತ್ಮಕ ಚಡಪಡಿಕೆಗಳನ್ನು ಇಲ್ಲಿಯೇ ಬಿಟ್ಟುಬಿಡಿ. ಕುತೂಹಲ ಹಾಗೂ ಉತ್ಸಾಹ ಇರುವ ಮನುಷ್ಯರು ಜೀವನದಲ್ಲಿ ಉನ್ನತವಾದುದನ್ನು ಸಾಧಿಸುತ್ತಾರೆ ಎನ್ನುವುದು ತಿಳಿದಿರಲಿ. ನಿಮಗೆ ಉಜ್ವಲ ಭವಿಷ್ಯವಿದೆ. ಶುಭವಾಗಲಿ.
(ಡಿ.ಎಂ.ಹೆಗಡೆ, ಆಪ್ತಸಮಾಲೋಚಕ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.