ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಸಂವೇದನೆಯ ಗುರು

Last Updated 11 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಕಾಲೇಜು ಲೈಫ್ ಈಸ್‌ ಗೋಲ್ಡನ್ ಲೈಫ್ ಅಂತಾರೆ; ಅದು ನಿಜವೆ. ಯಾಕೆ ಗೊತ್ತಾ? ಅಲ್ಲಿ ನೂರಾರು ಅನುಭವಗಳಾಗುತ್ತವೆ, ಹತ್ತಾರು ಮನಃಸ್ಥಿತಿಗಳ ಪರಿಚಯವಾಗುತ್ತದೆ; ಹಲವಾರು ವಿಷಯಗಳಿಗೆ ಮೊದಲ ವೇದಿಕೆಯಾಗಿರುತ್ತದೆ. ಹೊಸ ಮುಖಗಳ ಪರಿಚಯವಾಗುತ್ತದೆ.

ನಾನು ನನ್ನ ಪ್ರೌಢಶಿಕ್ಷಣ ಮುಗಿಸಿದ ಮೇಲೆ ನಂತರದ ಶಿಕ್ಷಣಕ್ಕಾಗಿ ಮಂಗಳೂರಿನ ಗಣಪತಿ ಪದವಿ ಪೂರ್ವ ಕಾಲೇಜಿಗೆ ಸೇರಿಕೊಂಡೆ. ಮೊದಮೊದಲು ಕಾಲೇಜಿನ ದಿನಗಳು ಬೇಜಾರೆನಿಸುತ್ತಿತ್ತು. ಆದರೆ ಆ ಕಾಲೇಜು ನನ್ನ ಜೀವನದ ದಿಕ್ಕನ್ನು ಬದಲಾಯಿಸಿತು ಎಂದೇ ಹೇಳಬೇಕು. ಇದಕ್ಕೆ ಮೂಲ ಕಾರಣ ಕಾಲೇಜಿನ ಶಿಕ್ಷಕರೆಂದರೆ ತಪ್ಪಾಗಲಾರದು. ಅದರಲ್ಲೂ ನನ್ನ ನೆಚ್ಚಿನ ಅಧ್ಯಾಪಕಿ ಸಂಧ್ಯಾ ಮೇಡಂ ನನ್ನ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಇವರು ನನಗೆ ಇತಿಹಾಸದ ಶಿಕ್ಷಕಿಯಾಗಿದ್ದರು.

ಅಂದು ಶತ ದಡ್ಡನಾಗಿದ್ದವನು ಇಂದು ಮಂಗಳೂರಿನ ಹೆಮ್ಮೆಯ ವಿಶ್ವವಿದ್ಯಾನಿಲಯದಲ್ಲಿ ನನ್ನ ವ್ಯಾಸಂಗವನ್ನು ಮುಂದುವರಿಸುತ್ತಿದ್ದೇನೆಂದರೆ ಅದಕ್ಕೆ ಕಾರಣ ಇವರೇ. ಎಸ್.ಎಸ್.ಎಲ್.ಸಿ.ಯಲ್ಲಿ ಬರೀ ಶೇ. 40ರಷ್ಟು ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದವನನ್ನು ಪಿ.ಯು.ಸಿ. ಯಲ್ಲಿ ಶೇ. 70ರಷ್ಟು ಅಂಕಗಳನ್ನು ಗಳಿಸುವ ಮೂಲಕ ನನ್ನ ಬದುಕಿನ ದೀವಿಗೆಗೆ ಎಣ್ಣೆಯಾದವರು ಈ ಮೇಡಂ.

’ಶಿಕ್ಷಕ’ ಅಂದರೆ
ಶಿ - ಶಿವ ಸ್ವರೂಪಿಯಾಗಿ (ಶಿಕ್ಷಿಸಿ)
ಕ್ಷ - ಕ್ಷ ಕರಣ ಬೀರುವಂತಹ (ಕ್ಷಮಿಸಿ)
ಕ – ಕರ್ಮವೆಸಗತಕ್ಕವ (ಕಲಿಸುವವ)

ನಮ್ಮ ಮೇಡಂ ನನ್ನನ್ನು ವಿದ್ಯಾರ್ಥಿಯಾಗಿ ಕಾಣದೆ ಒಬ್ಬ ತಮ್ಮನಾಗಿ, ಗೆಳೆಯನಾಗಿ ಕಂಡರು. ಆ ದಿನಗಳಲ್ಲಿ ಅವರು ನನ್ನನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದದಕ್ಕಿಂತ ಬೈದದ್ದೇ ಜಾಸ್ತಿ. ಕಾಲೇಜಿನ ಆವರಣದಲ್ಲಿ ಪ್ರತಿಯೊಬ್ಬರನ್ನೂ ಮಗ/ಮಗಳು ಎನ್ನುವ ಭಾವದಿಂದಲೇ ಮುಗುಳ್ನಕ್ಕು ಮಾತನಾಡಿಸಿದವರು ಅವರು. ಅದು ಅವರ ಮಾತೃಹೃದಯದ ಪ್ರೀತಿ ಮತ್ತು ಸೌಜನ್ಯದ ಪ್ರತೀಕ. ಅವರೆಂದೂ ನನಗೆ ವಿಶ್ವವಿದ್ಯಾನಿಲಯದ ಪಠ್ಯವನ್ನು ಬೋಧಿಸಲಿಲ್ಲ. ಕಾರಣ ನಾನು ಕಲಾವಿಭಾಗದ ವಿದ್ಯಾರ್ಥಿ. ಆದರೆ ಅವರು ನನಗೆ ಅಕ್ಷರದಾಚಿನ ಬದುಕನ್ನು ಕಲಿಸಿದವರು. ನನ್ನಲ್ಲಿ ಸಾಹಿತ್ಯದಾಸಕ್ತಿಯನ್ನು ಮೊಳೆಯಿಸಿದವರು. ಲೌಕಿಕ ಜಗತ್ತಿನ ವ್ಯವಹಾರ ಪರಿಚಯಿಸಿದವರು.

ಅಧ್ಯಾತ್ಮ, ಆದರ್ಶಗಳನ್ನು ಬೋಧಿಸಿದವರು. ಎಲ್ಲಕ್ಕಿಂತ ಹೆಚ್ಚಾಗಿ ನಿಃಸ್ವಾರ್ಥ ಪ್ರೀತಿ, ಸೌಜನ್ಯ, ವಿನಯಗಳನ್ನು ಕಲಿಸಿಕೊಟ್ಟರು. ಇದನ್ನೆಲ್ಲಾ ಅವರು ತರಗತಿಯ ಕರಿಹಲಗೆಯ ಮೇಲೆ ಬರೆದು ವಿವರಿಸಲಿಲ್ಲ. ಕುರ್ಚಿಯಲ್ಲಿ ಕುಳಿತು ಬೋಧಿಸಲಿಲ್ಲ. ಒಂದು ತರಗತಿಯ ಪಾಠ ಮುಗಿಸಿ ಸ್ಟಾಫ್‌ರೂಂಗೆ ಹೋಗುವ ಹಾದಿಯಲ್ಲಿ, ಒಂದು ತರಗತಿಯ ಪಾಠ ಮುಗಿಸಿ ಮತ್ತೊಂದು ತರಗತಿಯ ಪಾಠ ಶುರು ಮಾಡುವ ಮುನ್ನ ಮಧ್ಯಂತರದ ಅವಧಿಯಲ್ಲಿ ತಿಳಿಹೇಳಿದರು.

ಶಿವಾನುಭವ ಪರೀಕ್ಷೆಯನ್ನು ತೆಗೆದುಕೊಳ್ಳಲು ಪ್ರೋತ್ಸಾಹಿಸಿದರು. ಆ ಪರೀಕ್ಷೆಯಲ್ಲಿ ಅಂಕಗಳನ್ನು ನೋಡಿ ನನ್ನ ಹೆತ್ತವರಷ್ಟೇ ಅವರೂ ಸಂತೋಷ ಪಟ್ಟಿರು. ನನ್ನ ವ್ಯಕ್ತಿತ್ವ ರೂಪುಗೊಳ್ಳುತ್ತಿದ್ದ ಆ ವಯಸ್ಸಿನಲ್ಲಿ ನನ್ನ ತಂದೆ ತಾಯಿಯಂತೆ ತಿದ್ದಿ ತೀಡಿ ಸಲಹಿದರು. ಬೇವಿನ ಪುತ್ಥಳಿಯಾಗದೆ, ಬೆಲ್ಲದ ಪುತ್ಥಳಿಯಾಗಿ ಬೆಳಸಿದವರು ಅವರು. ನಂಬಿದ್ದನ್ನು ಧೈರ್ಯವಾಗಿ ಆಚರಿಸುವ ಧೈರ್ಯ ನನ್ನಲ್ಲಿ ಬಂದದ್ದು ಹೇಗೆ? ಅವರಿಂದಲೇ ಹಾಗೂ ಅವರಂತಹ ಇತರ ಗುರುಗಳ ಒತ್ತಾಸೆಯಿಂದ.

ಅವರು ನನಗೆ ಬೋಧಿಸಿದ ಅವಧಿ, ವಾರಕ್ಕೆ ಆರು ದಿನ, ವರ್ಷಕ್ಕೆ ಹತ್ತು ತಿಂಗಳು, ಸತತವಾಗಿ ಎರಡು ವರ್ಷಗಳು. ಅದಕ್ಕೆಂದೇ ಇಂದಿಗೂ ನಾನು ಅವರ ಶಿಷ್ಯ ಎನ್ನುವ ಹೆಮ್ಮೆ ಉಳಿದಿದೆ ನನ್ನಲ್ಲಿ. ಸದಾ ನನ್ನ ಮನಸ್ಸಿನಲ್ಲಿ ಭಾವನಾತ್ಮಕ ಚಿಂತನೆಗೆ ಒರೆ ಹಚ್ಚಿ, ಅಸಂಖ್ಯ ಅಸಾಧ್ಯತೆಗಳ ಸಾಧು ಮಾಡಿದ ಸಂಧ್ಯಾ ಮೇಡಮ್ ಅವರಿಗೆ ನನ್ನ ಸಲಾಂ.

-ಸುಶಾಂತ್, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT