ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಬರಹ ನಿಮ್ಮನ್ನು ಗೆಲ್ಲಿಸಬಲ್ಲದು!

ಪರೀಕ್ಷೆಗಳಲ್ಲಿ ಸಂವಹನ ಕೌಶಲ ಭಾಗ - 2
Last Updated 19 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಮೂ ವತ್ತು ವರ್ಷಗಳಲ್ಲಿ ಹಲವು ಪರೀಕ್ಷೆಗಳಿಗೆ ಪರೀಕ್ಷಕನಾದ ಅನುಭವದಲ್ಲಿ ಹೇಳುತ್ತಿದ್ದೇನೆ, ಯಾವುದೇ ಪರೀಕ್ಷೆ ಇರಲಿ ಎಲ್ಲಿ ಬರವಣಿಗೆ ಇರುತ್ತದೆಯೋ ಅದು ಒಂದು ಗಂಟೆಯ ಪರೀಕ್ಷೆಯೋ ಮೂರೂ ಗಂಟೆಯ ಪರೀಕ್ಷೆಯೋ ಆಗಿರಬಹುದು, ಎಲ್ಲಿ ಅಭ್ಯರ್ಥಿ ಪರೀಕ್ಷಾ ಘಟಕದಲ್ಲಿ ಕುಳಿತು ಬರೆಯಬೇಕಾಗುತ್ತದೆಯೋ, ಅಲ್ಲೆಲ್ಲ ಅಭ್ಯರ್ಥಿಯ ಹಸ್ತಾಕ್ಷರ ಮುಖ್ಯವಾಗುತ್ತದೆ. ಕಂಪ್ಯೂಟರಿನಲ್ಲಿ ಅಥವಾ ಒಎಂಆರ್ ಶೀಟಿನ ಮೇಲೆ ಸರಿ ಚುಕ್ಕೆ ಹಾಕಬೇಕಾದ ಸಂದರ್ಭದಲ್ಲಿ ಮಾತ್ರ ಅಭ್ಯರ್ಥಿಯ ಕೈಬರಹ ಎಂಥದ್ದು ಅಂತ ಯಾರೂ ಕೇಳುವುದಿಲ್ಲ. ಬೇರೆಲ್ಲಾ ಪರೀಕ್ಷೆಗಳಲ್ಲಿ ನಿಮ್ಮ ಕೈಬರಹ ನಿಮ್ಮ ಹಣೆಬರಹ ನಿರ್ಧರಿಸುತ್ತದೆ ಎಂದರೆ ತಪ್ಪಲ್ಲ.

ಈ ಹಂತದಲ್ಲಿ ನಾನು ಕೈಬರಹದ ಪ್ರಾಮುಖ್ಯದ ಬರೆಯುವಾಗ ಕೆಲವರು ಮೂಗು ಮುರಿಯಬಹುದು. ಈ ಆಧುನಿಕ ಕಾಲದಲ್ಲಿ ಯಾರೂ ಮಕ್ಕಳ ಕೈಬರಹದ ಬಗ್ಗೆ ಗಮನವನ್ನೇ ಕೊಡುವುದಿಲ್ಲ. ಹಿಂದೆಲ್ಲ ಅಂಕಲಿಪಿಯಲ್ಲಿ ಮಕ್ಕಳ ಕೈಬರಹವನ್ನು ತಿದ್ದಿಸಲಾಗುತ್ತಿತ್ತು. ಚಿತ್ರ ಬಿಡಿಸುವ ಹಾಗೆ ಸುಂದರ ಅಕ್ಷರಗಳನ್ನು ತಿದ್ದುವ ಕ್ರಿಯೆಗೆ ಬಹಳ ಮಹತ್ವವಿತ್ತು. ಈಗ ಮೊದಲ ದಿನದಿಂದಲೇ ಮೌಸ್ ಹಿಡಿಯುವ ಉಮೇದಿನಲ್ಲಿ ಅಕ್ಷರ ತಿದ್ದುವವರು ಯಾರೂ ಇಲ್ಲ. ದಿನ ನಿತ್ಯ ಇದರ ಬೆಲೆ ಅರಿವಿಗೆ ಬರುವುದಿಲ್ಲ. ಆದರೆ ಲಕ್ಷಾಂತರ ವಿದ್ಯಾರ್ಥಿಗಳು ತೆಗೆದುಕೊಳ್ಳುವ ದೊಡ್ಡ ಪರೀಕ್ಷೆಗಳಲ್ಲಿ ಬರೆಯುವಾಗ ನಿಮಗೆ ಉತ್ತರ ಗೊತ್ತಿರುವಷ್ಟೇ ಅದನ್ನು ಬರೆಯುವ ರೀತಿಯೂ ಮುಖ್ಯವಾಗುತ್ತದೆ ಎಂಬುದನ್ನು ಮರೆಯಬಾರದು.

ಕೇಂದ್ರ ಲೋಕಸೇವಾ ಆಯೋಗದಂಥ ಪರೀಕ್ಷೆಗಳಲ್ಲಿ ಮೂರು ಗಂಟೆಯ ಪ್ರಶ್ನೆಪತ್ರಿಕೆಗೆ ಉತ್ತರ ಬರೆಯುವಾಗ ಅಭ್ಯರ್ಥಿಗಳು ಉತ್ತರದತ್ತ ಗಮನವನ್ನು ಕೇಂದ್ರೀಕರಿಸುತ್ತಾರೆ. ಸಮಯವನ್ನು ಹೊಂದಿಸಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬರೆಯುವುದಷ್ಟೇ ಅವರ ತಲೆಯಲ್ಲಿರುತ್ತದೆ. ಬರೆಯುವ ಧಾವಂತದಲ್ಲಿ ಅವರ ಅಕ್ಷರಗಳು ಕೋಳಿಕಾಲು, ಗುಬ್ಬಿ ಕಾಲಿನಂತಾಗಿರುವುದನ್ನು ಅನೇಕ ವೇಳೆ ಗಮನಿಸಿದ್ದೇನೆ. ಸುಂದರವಾದ ಅಕ್ಷರಗಳ ಉತ್ತರ ಮೊದಲ ನೋಟಕ್ಕೆ ಪರೀಕ್ಷಕನನ್ನು ಸೆಳೆಯುತ್ತದೆ. ಇವೆಲ್ಲ ವೈಚಾರಿಕತೆಯನ್ನು, ಸರಿಯಾದ ಗ್ರಹಿಕೆಯನ್ನು ಬಯಸುವ ಪ್ರಶ್ನೆಗಳಾದ್ದರಿಂದ ಅಭ್ಯರ್ಥಿ ಏನು ಹೇಳುತ್ತಾನೆ ಎಂಬುದು ಬಹಳ ಮುಖ್ಯ. ಆದರೆ ಅವನು/ಅವಳು ಪ್ರಜ್ಞಾಪೂರ್ವಕವಾಗಿ ಯಾರೂ ಓದಬಾರದು ಎಂಬುದಕ್ಕಾಗಿಯೇ ಹೀಗೆ ಗೀಚಿದ್ದಾನೆ/ಳೆೆ ಎಂದು ಮೊದಲ ನೋಟಕ್ಕೆ ಪರೀಕ್ಷಕನಿಗೆ ಅನಿಸಿದಾಗ ಸಹಜವಾಗಿ ಅವನಿಗೆ ಗೊತ್ತಿಲ್ಲದಂತೆ ಅಂಥ ಉತ್ತರಗಳ ಬಗ್ಗೆ ಅಕಾರಣ ದ್ವೇಷ ಹುಟ್ಟದಿದ್ದರೂ ಪ್ರೀತಿಯಂತೂ ಹುಟ್ಟುವುದಿಲ್ಲ. ಇದು ಪರೀಕ್ಷಕನ ಅರಿವಿಗೆ ಬಾರದಂತೆ ಅರ್ಧ ಅಥವಾ ಒಂದು ಅಂಕ ಕಡಿಮೆ ಬರಲು ಕಾರಣವಾದರೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅದು ಬಹಳ ದುಬಾರಿಯಾಗುತ್ತದೆ.

ನಿಮಗೆ ಗೊತ್ತಿರಲಿ- ರಾಷ್ಟ್ರೀಯ ಪರೀಕ್ಷೆಗಳಲ್ಲಿ ಮೌಲ್ಯಮಾಪನ ಮಾಡುವವರು ಅಭ್ಯರ್ಥಿ ಬರೆದ ಪ್ರತಿ ಪುಟವನ್ನೂ ಓದಲು ಸಾಧ್ಯವೇ ಇಲ್ಲ. ಪ್ರತಿ ಪುಟಕ್ಕೆ ಸಿಗುವ ನಾಲ್ಕೋ ಐದೋ ಸೆಕೆಂಡುಗಳಲ್ಲಿ ಅವರು ಅಭ್ಯರ್ಥಿ ಬರೆದುದನ್ನು ನೋಡಬಹುದೇ ವಿನಾ ಓದಲಾಗದು. ಹೀಗಿರುವಾಗ ನೀವು ಬರೆದ ರೀತಿ-ಓದುವಂತೆ ಇರದಿದ್ದರೆ ನೋಡುವಂತಾದರೂ ಇರಬೇಕಲ್ಲ? ಒಂದು ಕ್ಷಣಕ್ಕೆ ಮೌಲ್ಯಮಾಪಕನಿಗೆ ನಿಮ್ಮ ಬರವಣಿಗೆಯಲ್ಲಿ ಏನಿದೆ ಎಂಬುದು ತಿಳಿಯಬೇಕು. ಮೊದಲ ನೋಟಕ್ಕೆ ಹೂರಣ ದಕ್ಕಬೇಕು. ಅದು ಅಭ್ಯರ್ಥಿಯ ಚಿಂತನಾ ಕ್ರಮವನ್ನು, ವಾದ ಸರಣಿಯನ್ನು, ಬಿಂಬಿಸಬೇಕು. ಈ ಉತ್ತರ ಕೇವಲ ಕಲಿತು ಬರೆದುದಲ್ಲ ಅವನಲ್ಲಿ ಏನೋ ವಿಶೇಷತೆಯಿದೆ ಎನಿಸಿದಾಗ ಮಾತ್ರ ನಿಮಗೆ ದಕ್ಕಬೇಕಾದ ಅಂಕ ದಕ್ಕಬಹುದು. ಇಲ್ಲವಾದಲ್ಲಿ ಒಂದು ಕ್ಷಣದ ಆ ನೋಟ ನಿಮ್ಮ ಸೋಲಿಗೆ ಬರೆದ ಮುನ್ನುಡಿಯಾದೀತು. ನೀವು ಎಷ್ಟೇ ಚೆನ್ನಾಗಿ ಬರೆದಿದ್ದೇನೆಂದು ಆತ್ಮಸ್ಥೈರ್ಯಹೊಂದಿದ್ದರೂ ಮೌಲ್ಯಮಾಪಕರಿಗೆ ಓದಲು ಬಾರದ ಸ್ಥಿತಿಯಲ್ಲಿದ್ದರೆ ಏನು ಪ್ರಯೋಜನ?

ಅದಕ್ಕೇ ಈ ಕಂಪ್ಯೂಟರ್ ಯುಗದಲ್ಲಿ ಕೂಡಾ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ದೃಷ್ಟಿಯಿರುವವರು ಗಮನಿಸಬೇಕಾದ ಒಂದು ಅಂಶ ಅವರ ಕೈಬರಹದ್ದು. ಒಳ್ಳೆಯ ಕೈಬರಹ ನಿಮ್ಮನ್ನು ಗೆಲ್ಲಿಸಬಹುದು. ನಿಮಗೆ ಎಷ್ಟೇ ಜ್ಞಾನವಿದ್ದರೂ ಎಲ್ಲಾ ಪ್ರಶ್ನೆಗಳಿಗೆ ‘ಸುಲಿದ ಬಾಳೆಯ ಹಣ್ಣಿನಂದದಿ’ ಉತ್ತರ ಬರೆಯುವ ಸಾಮರ್ಥ್ಯವಿದ್ದರೂ ನಿಮ್ಮ ಕೈಬರಹ ನಿಮ್ಮನ್ನು ಸೋಲಿಸುವ ಅಪಾಯವಿದೆ.

ನಿಮ್ಮ ಹಸ್ತಾಕ್ಷರವು ನಿಮ್ಮ ವ್ಯಕ್ತಿತ್ವದ ಪ್ರತಿಬಿಂಬ ಎನ್ನುತ್ತಾರೆ. ಕೈಬರಹದ ಮೇಲೆ ನಿಮ್ಮ ಭವಿಷ್ಯ ಹೇಳುವವರೂ ಸಿಗುತ್ತಾರೆ. ಅದು ನಿಜವೋ ಗೊತ್ತಿಲ್ಲ. ಆದರೆ ನಿಮ್ಮ ಕೈಬರಹ ಮೌಲ್ಯಮಾಪಕನಿಗೆ ಮೊದಲ ನೋಟಕ್ಕೆ ನಿಮ್ಮ ಬಗ್ಗೆ ಒಂದು ಅಭಿಪ್ರಾಯ ಮೂಡಲು ಕಾರಣವಾಗುತ್ತದೆ ಹಾಗೂ ಆಭಿಪ್ರಾಯವೇ ನಿಮ್ಮ ಸೋಲು- ಗೆಲುವಿಗೆ ಕಾರಣವಾಗುತ್ತದೆ ಎಂಬುದು ಮಾತ್ರ ನಿಜ.

ನನ್ನ ಕೈಬರಹ ಚೆನ್ನಾಗಿಲ್ಲ, ಇದನ್ನು ಸರಿಪಡಿಸಬಹುದೇ ಎಂದು ಕೆಲವರು ಕೇಳಬಹುದು. ಖಂಡಿತ ಸಾಧ್ಯ. ಇಂದಿಗೂ ಮಾರುಕಟ್ಟೆಯಲ್ಲಿ ಸಿಗುವ ಕಾಪಿ ಪುಸ್ತಕ ತನ್ನಿ, ದಿನಾ ಒಂದಿಷ್ಟು ತಿದ್ದಿ. ಗೊತ್ತಾಗದಂತೆ ನಿಮ್ಮ ಕೈಬರಹ ಬದಲಾಗದಿದ್ದರೆ ಹೇಳಿ.

(ಲೇಖಕರು: ಸಂವಹನ ಪ್ರಾಧ್ಯಾಪಕರು ಮತ್ತು ಕುಲಪತಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT