ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾ ವಾಣಿ: ನದಿದಡದ ನಗರಗಳ ಒಕ್ಕೂಟದ ಬಗ್ಗೆ ಮಾಹಿತಿ ಇಲ್ಲಿದೆ..

ರಾಷ್ಟ್ರೀಯ ಶುದ್ಧಗಂಗಾ ಅಭಿಯಾನ ಸಂಸ್ಥೆಯು ದುಬೈನಲ್ಲಿ ಆಯೋಜನೆಯಾಗಿರುವ ಸಿ.ಓ.ಪಿ-28 ಸಮಾವೇಶದಲ್ಲಿ ನದಿ ದಂಡೆಯಲ್ಲಿರುವ ಜಾಗತಿಕ ನಗರಗಳ ಒಕ್ಕೂಟವನ್ನು ಆಯೋಜಿಸಿದೆ.
ಗುರುಶಂಕರ್ ಕೆ.ಪಿ
Published 21 ಡಿಸೆಂಬರ್ 2023, 0:10 IST
Last Updated 21 ಡಿಸೆಂಬರ್ 2023, 0:10 IST
ಅಕ್ಷರ ಗಾತ್ರ

ರಾಷ್ಟ್ರೀಯ ಶುದ್ಧಗಂಗಾ ಅಭಿಯಾನ ಸಂಸ್ಥೆಯು ದುಬೈನಲ್ಲಿ ಆಯೋಜನೆಯಾಗಿರುವ ಸಿ.ಓ.ಪಿ-28 ಸಮಾವೇಶದಲ್ಲಿ ನದಿ ದಂಡೆಯಲ್ಲಿರುವ ಜಾಗತಿಕ ನಗರಗಳ ಒಕ್ಕೂಟವನ್ನು ಆಯೋಜಿಸಿದೆ. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಶುದ್ಧಗಂಗಾ ಅಭಿಯಾನ ಸಂಸ್ಥೆಯು ಮಿಸಿಸಿಪಿ ನಗರದ ಸುತ್ತಮುತ್ತಲಿನ ಪಟ್ಟಣಗಳು ಮತ್ತು ನಗರಗಳ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಅಮೆರಿಕದ, ಮಿಸಿಸಿಪಿ ನದಿಯ ಸುತ್ತಮುತ್ತಲಿನ ಪ್ರದೇಶದಲ್ಲಿ 124ನಗರಗಳು ಮತ್ತು ಪಟ್ಟಣಗಳು ನೆಲೆಯಾಗಿದ್ದು, ಇವುಗಳನ್ನು ಪ್ರತಿನಿಧಿಸುವ ಸಂಸ್ಥೆಯೊಂದಿಗೆ  ಶುದ್ಧಗಂಗಾ ಅಭಿಯಾನ ಸಂಸ್ಥೆಯು, ನದಿ ದಂಡೆಯಲ್ಲಿರುವ ನಗರಗಳ ಒಕ್ಕೂಟದ ಪರವಾಗಿ ಸಹಿ ಹಾಕಿದೆ.

ಜಾಗತಿಕ ನದಿ ದಂಡೆಯಲ್ಲಿರುವ ನಗರಗಳ ಒಕ್ಕೂಟ: ಇದು ಅಂತರರಾಷ್ಟ್ರೀಯ ಒಕ್ಕೂಟವಾಗಿದ್ದು, ಜಾಗತಿಕ ಮಟ್ಟದಲ್ಲಿ ನದಿ ಪಾತ್ರಗಳನ್ನು ಸಂರಕ್ಷಿಸಲು ಮತ್ತು ಸುಸ್ಥಿರ ನಿರ್ವಹಣೆಗೆ ಸ್ಥಾಪಿಸಲಾಗಿದೆ.

ಈ ಒಕ್ಕೂಟದಲ್ಲಿ ಭಾರತ, ಈಜಿಪ್ಟ್, ನೆದರ್ಲೆಂಡ್‌, ಡೆನ್ಮಾರ್ಕ್, ಆಸ್ಟ್ರೇಲಿಯಾ, ಕಾಂಬೋಡಿಯಾ, ಜಪಾನ್, ಭೂತಾನ್ ಮತ್ತು ಘಾನ ರಾಷ್ಟ್ರಗಳು ಸಹಭಾಗಿತ್ವವನ್ನು ಹೊಂದಿವೆ. ಜಾಗತಿಕ ಮಟ್ಟದಲ್ಲಿ 11 ರಾಷ್ಟ್ರಗಳ ನದಿ ದಂಡೆಗಳ ಮೇಲಿರುವ 275 ಪಟ್ಟಣಗಳನ್ನು ಮತ್ತು ನಗರಗಳನ್ನು ಈ ಒಕ್ಕೂಟದ ವ್ಯಾಪ್ತಿಗೆ ತರುವಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಉದ್ದೇಶ: ಈ ಒಕ್ಕೂಟದಲ್ಲಿ ವಿವಿಧ ಸರ್ಕಾರಗಳ ಪ್ರತಿನಿಧಿಗಳು, ಪರಿಸರ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು, ನಗರಪಾಲಿಕೆಗಳ ಪ್ರತಿನಿಧಿಗಳು ಭಾಗವಹಿಸಿ ಪರಸ್ಪರ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ವಿವಿಧ ತಂತ್ರಜ್ಞಾನಗಳನ್ನು ಬಳಸಿ ನದಿಗಳನ್ನು ಸಂರಕ್ಷಿಸುವ ಯೋಜನೆಯಿದೆ. ಪರಸ್ಪರ ಜ್ಞಾನ ಹಂಚಿಕೆಯಿಂದ ಜಾಗತಿಕ ಮಟ್ಟದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಬಹುದು.

ಮಿಸಿಸಿಪಿ ನದಿ ಸುತ್ತಲಿನ ನಗರ– ಪಟ್ಟಣಗಳ ಉಪಕ್ರಮ

ಈ ಸಂಸ್ಥೆಯನ್ನು 2012ರಲ್ಲಿ ಸ್ಥಾಪಿಸಲಾಯಿತು ಮಿಸಿಸಿಪಿ ನದಿಯನ್ನು ಸಮರ್ಪಕವಾಗಿ ಸಂರಕ್ಷಿಸಲು ಮತ್ತು ನಿರ್ವಹಿಸಲು ಈ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ವಾಷಿಂಗ್ ಟನ್‌ನಲ್ಲಿ ಕೇಂದ್ರ ಕಚೇರಿಯನ್ನು ಸ್ಥಾಪಿಸಲಾಗಿದೆ.

ಕಾರ್ಯನಿರ್ವಹಣಾ ವಲಯಗಳು

ನದಿ ನೀರಿನ ಗುಣಮಟ್ಟ ಕಾಪಾಡುವಿಕೆ, ಆವಾಸ ಸ್ಥಾನದ ಸಂರಕ್ಷಣೆ, ಪ್ರವಾಹ ಸಮಸ್ಯೆಗಳು ಉಂಟಾದಾಗ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು, ನದಿ ಕೇಂದ್ರಿತ ಮನರಂಜನಾ ಚಟುವಟಿಕೆಗಳನ್ನು ಕೈಗೊಳ್ಳುವುದು ಹಾಗೂ ನದಿಯ ಮೇಲೆ ಅವಲಂಬಿತವಾಗಿರುವ ಜನವಸತಿಗಳು ಸುಸ್ಥಿರ ಆರ್ಥಿಕ ವ್ಯವಸ್ಥೆ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ನದಿ ನಗರಗಳ ಒಕ್ಕೂಟ

ನದಿ ನಗರಗಳ ಒಕ್ಕೂಟವನ್ನು 2021ರಲ್ಲಿ ಸ್ಥಾಪಿಸಲಾಯಿತು. ಸ್ಥಾಪನೆಯಾದ ಸಂದರ್ಭದಲ್ಲಿ ನದಿ ಪಕ್ಕದಲ್ಲಿರುವ 30 ನಗರಗಳು ಒಕ್ಕೂಟದ ಭಾಗವಾದವು.   ಭಾರತದ 110 ನಗರಗಳು ಒಕ್ಕೂಟದ ಭಾಗವಾಗಿದೆ.  ಡೆನ್ಮಾರ್ಕಿನ ‘ಆರ್ಹಸ್’ ನಗರವು ಕೂಡ ಒಕ್ಕೂಟದ ಭಾಗವಾಗಿದೆ.

ಉದ್ದೇಶ: ನದಿ ವ್ಯವಸ್ಥೆಯನ್ನು ಸಂರಕ್ಷಿಸಲು ನಗರಪಾಲಿಕೆಗಳು ಕೈಗೊಂಡಿರುವ ಉತ್ತಮ ಕ್ರಮಗಳನ್ನು ಇತರೆ ನಗರಗಳಿಗೆ ತಿಳಿಸಿ ಭಾರತದಾದ್ಯಂತ ನದಿ ನೀರಿನ ಸುಸ್ಥಿರ ನಿರ್ವಹಣೆಗೆ ಸಂಸ್ಥೆ ಮುಂದಾಗಿದೆ.

ರಾಷ್ಟ್ರೀಯ ಶುದ್ಧ ಗಂಗಾ ಅಭಿಯಾನ: ಈ ಸಂಸ್ಥೆಯನ್ನು ಆಗಸ್ಟ್ 2011ರಲ್ಲಿ ಸೊಸೈಟಿ ರಿಜಿಸ್ಟ್ರೇಷನ್ ಆ್ಯಕ್ಟ್-1860ರ ಅನ್ವಯ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾಗಿ ಸ್ಥಾಪಿಸಲಾಗಿದೆ.

ಪರಿಸರ ಸಂರಕ್ಷಣಾ ಕಾಯ್ದೆ-1986ರ ಅನ್ವಯ ರಾಷ್ಟ್ರೀಯ ಗಂಗಾ ನದಿ ಪಾತ್ರ ಪ್ರಾಧಿಕಾರವನ್ನು ಸ್ಥಾಪಿಸಿದ್ದು, ಈ ಪ್ರಾಧಿಕಾರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಅನುಷ್ಠಾನಗೊಳಿಸುವ ಸಂಸ್ಥೆಯಾಗಿ ರಾಷ್ಟ್ರೀಯ ಶುದ್ಧಗಂಗಾ ಅಭಿಯಾನ ಸಂಸ್ಥೆ ಕಾರ್ಯನಿರ್ವಹಿಸುತ್ತಿತ್ತು.

2016ರಲ್ಲಿ ರಾಷ್ಟ್ರೀಯ ಗಂಗಾ ನದಿ ಪಾತ್ರ ಪ್ರಾಧಿಕಾರವನ್ನು ವಿಸರ್ಜಿಸಿ, ಈ ಸಂಸ್ಥೆಗೆ ಪರ್ಯಾಯವಾಗಿ ರಾಷ್ಟ್ರೀಯ ಗಂಗಾ ನದಿ ಪುನಶ್ಚೇತನ, ಸಂರಕ್ಷಣೆ ಮತ್ತು ನಿರ್ವಹಣಾ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

ಈ ಸಂಸ್ಥೆಯ ಸ್ಥಾಪನೆಯ ನಂತರ, ಸಂಸ್ಥೆ ಕೈಗೊಳ್ಳುವ ನಿರ್ಧಾರಗಳನ್ನು ರಾಷ್ಟ್ರೀಯ ಶುದ್ಧ ಗಂಗಾ ಅಭಿಯಾನ ಸಂಸ್ಥೆಯು ಅನುಷ್ಠಾನಗೊಳಿಸುತ್ತಿದೆ.

ಈ ಸಂಸ್ಥೆಯ ಉದ್ದೇಶ: ಗಂಗಾ ನದಿಯ ಮಾಲಿನ್ಯವನ್ನು ತಗ್ಗಿಸುವುದು. ಗಂಗಾ ನದಿಯ ಪುನಶ್ಚೇತನ ಕಾರ್ಯವನ್ನು ಕೈಗೊಳ್ಳುವುದು. ಪರಸ್ಪರ ಇಲಾಖೆಗಳ ನಡುವೆ ಸಮನ್ವಯತೆ ಮತ್ತು ಸಹಭಾಗಿತ್ವ ಸಾಧಿಸಿ ಸೂಕ್ತ ಯೋಜನೆಗಳನ್ನು ಹಮ್ಮಿಕೊಳ್ಳುವುದು ಮತ್ತು ನಿರ್ವಹಿಸುವುದು. ಈ ಸಂಸ್ಥೆಯು ನಮಾಮಿ ಗಂಗೆ ಕಾರ್ಯಕ್ರಮವನ್ನು ಜೂನ್ 2014ರಿಂದ ಅನುಷ್ಠಾನಕ್ಕೆ ತರುತ್ತಿದೆ.

ಸೊಸೈಟೀಸ್ ರಿಜಿಸ್ಟ್ರೇಷನ್ ಆ್ಯಕ್ಟ್-1860 ಅನ್ವಯ ಸಂಘಟನಾ ಸ್ವರೂಪ: ಐದು ಹಂತದ ಶ್ರೇಣಿಕೃತ ವ್ಯವಸ್ಥೆಯನ್ನು ಸ್ಥಾಪಿಸಿದ್ದು, ಮೊದಲ ಹಂತದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಗಂಗಾ ಮಂಡಳಿಯನ್ನು ಸ್ಥಾಪಿಸಲಾಗಿದೆ.

ಎರಡನೇ ಹಂತದಲ್ಲಿ ಕೇಂದ್ರ ಜಲಶಕ್ತಿ ಸಚಿವರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸ್ಥಾಪಿಸಲಾಗಿದೆ.

ಮೂರನೇ ಹಂತದಲ್ಲಿ ರಾಷ್ಟ್ರೀಯ ಶುದ್ಧಗಂಗಾ ಅಭಿಯಾನ ಸಂಸ್ಥೆಯು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

ನಾಲ್ಕನೇ ಹಂತದಲ್ಲಿ ರಾಜ್ಯ ಗಂಗಾ ಸಮಿತಿಗಳು ಮತ್ತು ಐದನೇ ಹಂತದಲ್ಲಿ ಜಿಲ್ಲಾ ಗಂಗಾ ಸಮಿತಿಗಳು ಗಂಗಾ ನದಿ ಮತ್ತು ಅದರ ಉಪನದಿಗಳು ಹರಿಯುವ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿದೆ.

ನಮಾಮಿ ಗಂಗೆ ಕಾರ್ಯಕ್ರಮ

ಕೇಂದ್ರ ಜಲಶಕ್ತಿ ಸಚಿವಾಲಯ ಅನುಷ್ಠಾನಗೊಳಿಸುತ್ತಿರುವ ಸಮಗ್ರ ಗಂಗೆ ಸಂರಕ್ಷಣಾ ಅಭಿಯಾನವಾಗಿದೆ. ರಾಜ್ಯ ಮಟ್ಟದಲ್ಲಿಯೂ ಕೂಡ ನಿರ್ವಹಣಾ ಗುಂಪುಗಳನ್ನು ಸ್ಥಾಪಿಸಲಾಗಿದೆ.

2014 ರಿಂದ 2020ರವರೆಗೂ ನಮಾಮಿ ಗಂಗೆ ಕಾರ್ಯಕ್ರಮದ ಮೊದಲ ಹಂತವನ್ನು ಪೂರ್ಣಗೊಳಿಸಿದ ನಂತರ ಎರಡನೇ ಹಂತದ ಕಾರ್ಯಕ್ರಮವನ್ನು 2021 ರಿಂದ 2026 ರ ವರೆಗೂ ಜಾರಿಗೆ ತರಲಾಗುತ್ತಿದೆ.

ಎರಡನೇ ಹಂತದ ಕಾರ್ಯಕ್ರಮದಲ್ಲಿ ಸಣ್ಣ ನದಿಗಳು ಮತ್ತು ಜೌಗು ಪ್ರದೇಶಗಳನ್ನು ಪುನಶ್ಚೇತನಗೊಳಿಸಲಾಗುತ್ತಿದೆ.

****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT