ಶುಕ್ರವಾರ, ಜುಲೈ 1, 2022
26 °C

ಕೆಎಎಸ್‌ಗೆ ತಯಾರಿ ಹೇಗೆ?

ವಿ. ಪ್ರದೀಪ್‌ಕುಮಾರ್‌ Updated:

ಅಕ್ಷರ ಗಾತ್ರ : | |

1. ನಾನು ಬಿಕಾಂ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೆಎಎಸ್ ಮಾಡಬೇಕು ಎಂದುಕೊಂಡಿದ್ದೇನೆ. ತಯಾರಿ ಹೇಗೆ ಮತ್ತು ಯಾವ ಪುಸ್ತಕಗಳನ್ನು ಓದಬೇಕು ಎಂಬ ಮಾಹಿತಿ ನೀಡಬಹುದೇ?

ಪ್ರಕಾಶ್, ಬಳ್ಳಾರಿ


ವಿ. ಪ್ರದೀಪ್‌ಕುಮಾರ್‌

ಸರ್ಕಾರಿ ವಲಯದ ಅನೇಕ ಉನ್ನತ ಹುದ್ದೆಗಳಿಗೆ ಕೆಎಎಸ್ ಏಕರೂಪದ ಪರೀಕ್ಷೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ ಸೇರಿದಂತೆ ಮೂರು ಹಂತದ ಪರೀಕ್ಷೆಯಿರುತ್ತದೆ. ಒಬ್ಬ ದಕ್ಷ ಆಡಳಿತಾಧಿಕಾರಿಗೆ ಇರಬೇಕಾದ ಪರಿಪೂರ್ಣ ಜ್ಞಾನ, ನಾಯಕತ್ವದ ಸಾಮರ್ಥ್ಯ, ಮನೋಧೋರಣೆ, ನೈತಿಕತೆ, ಪಾರದರ್ಶಕತೆ, ಸಮಯದ ನಿರ್ವಹಣೆ, ಶಿಸ್ತು, ಬದ್ಧತೆ, ಸಂವಹನಾ ಸಾಮರ್ಥ್ಯ, ತಾರ್ಕಿಕ ಯೋಚನಾ ಸಾಮರ್ಥ್ಯ, ಪ್ರೇರಣಾ ಕೌಶಲ ಇತ್ಯಾದಿಗಳನ್ನು ಕೂಲಂಕಶವಾಗಿ ಪರೀಕ್ಷಿಸಲಾಗುತ್ತದೆ.

ಮುಖ್ಯ ಪರೀಕ್ಷೆಯಲ್ಲಿ ಕಡ್ಡಾಯವಾದ ಮತ್ತು ಐಚ್ಛಿಕ ವಿಷಯಗಳಿರುತ್ತವೆ. ಪ್ರಶ್ನೆಗಳು ಪದವಿಯ ಮಟ್ಟದ್ದಾಗಿರುತ್ತವೆ ಮತ್ತು ವಿವರಣಾತ್ಮಕ ಮಾದರಿಯಲ್ಲಿರುವುದರಿಂದ ಬರವಣಿಗೆ ಉತ್ಕೃಷ್ಟವಾದ ಗುಣಮಟ್ಟದ್ದಾಗಿರಬೇಕು. ಈ ಎಲ್ಲಾ ಪರೀಕ್ಷೆಗಳ ಮಾದರಿ, ಪಠ್ಯಕ್ರಮ, ವಿಷಯದ ಅನುಸಾರ ಶಿಫಾರಸು ಮಾಡಿರುವ ಪುಸ್ತಕಗಳನ್ನು ತಿಳಿದುಕೊಂಡು ನಿಮ್ಮ ವೃತ್ತಿ ಯೋಜನೆಯ ಅನುಗುಣವಾಗಿ ಕಾರ್ಯತಂತ್ರವನ್ನು ರೂಪಿಸಬೇಕು.

ಈ ಸಲಹೆಗಳ ಅನುಸಾರ ಸಿದ್ಧತೆಯಿರಲಿ:

1. ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು.

2. ಪರಿಶ್ರಮ, ಬದ್ಧತೆ, ಆತ್ಮ ವಿಶ್ವಾಸ ಮತ್ತು ಸಮಯದ ನಿರ್ವಹಣೆ ಅತ್ಯಗತ್ಯ.

3. ಗೂಗಲ್ ಮತ್ತು ಯೂಟ್ಯೂಬ್‌ನಲ್ಲಿ ತಯಾರಿ ಕುರಿತ ಮಾಹಿತಿ ಮತ್ತು ಉಪಯುಕ್ತ ವಿಡಿಯೊಗಳನ್ನು ವೀಕ್ಷಿಸಿ.

4. ಕೆಎಎಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಲು ನಿಗದಿತ ವೇಳಾಪಟ್ಟಿಯಂತೆ ಸಮಗ್ರವಾದ ಮತ್ತು ಆಳವಾದ ಓದು, ಪುನರಾವರ್ತನೆ ಮತ್ತು ಬರವಣಿಗೆ ಇರಬೇಕು.

5. ಸಾಮಾಜಿಕ ಜಾಲತಾಣದಿಂದ ದೂರವಿದ್ದರೆ ಏಕಾಗ್ರತೆ ಸುಲಭ. ಹೆಚ್ಚಿನ ವಿವರಗಳಿಗಾಗಿ ಗಮನಿಸಿ: https://testbook.com/kpsc-kas/syllabus

2. ಅಪರಾಧ ಶಾಸ್ತ್ರ ಮತ್ತು ವಿಧಿ ವಿಜ್ಞಾನ ಶಾಸ್ತ್ರದಲ್ಲಿ ಪದವಿ ಮುಗಿಸಿದ್ದೇನೆ. ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವ ಇಲಾಖೆಗಳಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ದಯವಿಟ್ಟು ಮಾಹಿತಿ ನೀಡಿ.

ರಮೇಶ್ ಆರ್.ಕೆ., ಹಾವೇರಿ.

ಅಪರಾಧ ಶಾಸ್ತ್ರಮತ್ತು ವಿಧಿ ವಿಜ್ಞಾನ ಶಾಸ್ತ್ರದ ಪದವಿಯ ನಂತರ ನೀವು ವೃತ್ತಿಯನ್ನು ಅರಸಬಹುದಾದ ಸರ್ಕಾರಿ ಕ್ಷೇತ್ರಗಳೆಂದರೆ ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು, ವಿಧಿ ವಿಜ್ಞಾನ ಲ್ಯಾಬೊರೇಟರಿಗಳು, ಸಿಐಡಿ, ಸಿಬಿಐ, ಐಬಿ, ಪೊಲೀಸ್ ಇಲಾಖೆ, ನಾರ್ಕೋಟಿಕ್ಸ್ ಇಲಾಖೆ ಇತ್ಯಾದಿ.

3. ನಾನು ಪಿಯುಸಿ ಮಾಡಿಲ್ಲ. ಐಟಿಐ ಮಾಡಿ ಪದವಿ ಮುಗಿಸಿದ್ದೇನೆ. ಈ ಪದವಿಯ ಆಧಾರದ ಮೇಲೆ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದೇ?

ಲಕ್ಷ್ಮಣ್, ಊರು ತಿಳಿಸಿಲ್ಲ.

3 ವರ್ಷದ ಡಿಪ್ಲೊಮಾ ನಂತರ ಮಾಡಿರುವ ಪದವಿ ಕೋರ್ಸ್‌ಗಳಿಗೆ ಮಾನ್ಯತೆ ಇರುತ್ತದೆ. ಹಾಗಾಗಿ, ಸರ್ಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸಬಹುದು.

4. ನಾನು ಅಂತಿಮ ವರ್ಷದ ಬಿಎಸ್‌ಸಿ ಓದುತ್ತಿದ್ದೇನೆ. ನನ್ನ ಮುಂದಿನ ವ್ಯಾಸಂಗವನ್ನು ಎಂಎ (ಅಪರಾಧ ಶಾಸ್ತ) ಮಾಡಬಹುದೇ? ಎಲ್ಲಿ ಮಾಡಬಹುದೆಂದು ತಿಳಿಸಿ.

ಸುಷ್ಮಿತಾ ಕೆ., ಊರು ತಿಳಿಸಿಲ್ಲ

ಸಾಮಾನ್ಯವಾಗಿ ಪದವಿಯಲ್ಲಿ ಓದಿರುವ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಮಾಡಬಹುದು. ಹಾಗಾಗಿ ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ನಿಯಮಾವಳಿಗಳಿವೆ. ಆದರೂ, ಬಿಎಸ್‌ಸಿ ಆದ ಮೇಲೆ ಕೆಲವು ನಿಯಮಿತ ವಿಷಯಗಳಲ್ಲಿ ಮಾತ್ರ ಎಂಎ ಮಾಡುವ ಅವಕಾಶಗಳಿವೆ.

ಈಗ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ (2020) ಯಂತೆ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಉದ್ದೇಶ, ನಿಯಮ ಮತ್ತು ಪ್ರವೇಶ ಪ್ರಕ್ರಿಯೆಯಲ್ಲ್ಲಿ ತೀವ್ರವಾದ ಬದಲಾವಣೆಗಳಿವೆ ಮತ್ತು ಅನುಷ್ಠಾನದ ಪ್ರಕ್ರಿಯೆ ಈಗಷ್ಟೇ ಶುರುವಾಗುತ್ತಿದೆ. ಅಪರಾಧ ಶಾಸ್ತ್ರದಲ್ಲಿ ಎಂಎ ಅಥವಾ ಎಂಎಸ್‌ಸಿ ಕೋರ್ಸ್ ಕುರಿತು ನಿಖರವಾದ ಮಾಹಿತಿಗಾಗಿ ನೀವು ಇಚ್ಛಿಸುವ ವಿಶ್ವವಿದ್ಯಾಲಯದಲ್ಲಿ ವಿಚಾರಿಸಿ.

5. ನಾನು ಮೂರು ವರ್ಷಗಳ ಡಿಪ್ಲೊಮಾ ನಂತರ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಮುಗಿಸಿರುತ್ತೇನೆ. ನಾನು ಪಿಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸಬಹುದು; ಆದರೆ, ಪಿಎಸ್ ಹುದ್ದೆಗೆ ಆಗುವುದಿಲ್ಲ. ಪಿಯುಸಿ ತತ್ಸಮಾನ ಕೋರ್ಸ್ ಯಾವುದೆಂದು ತಿಳಿಸಿ?

ಮಹಾಲಿಂಗಪ್ಪ, ಬಾಗಲಕೋಟೆ

ಮೂರು ವರ್ಷದ ಡಿಪ್ಲೊಮಾ ಕೋರ್ಸ್‌ ಪಿಯುಸಿಗೆ ತತ್ಸಮಾನವೆಂದು ಪರಿಗಣಿಸಲಾಗುತ್ತದೆ. ಕರ್ನಾಟಕ ಪೊಲೀಸ್ ಹುದ್ದೆಗಳಿಗೆ ಅರ್ಹತೆ, ನೇಮಕಾತಿ ಪ್ರಕ್ರಿಯೆ, ಪರೀಕ್ಷೆಗಳ ವಿವರಗಳಿಗೆ ಗಮನಿಸಿ: https://prepp.in/karnataka-police-exam

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣ ತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ.

ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು