ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವ ಭಾಷೆಯಲ್ಲಿ ಪರೀಕ್ಷೆ ಬರೆಯಬೇಕು?

Last Updated 24 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಕರ್ನಾಟಕದ ಅಭ್ಯರ್ಥಿಗಳಲ್ಲಿರುವ ಬಹುಮುಖ್ಯ ಗೊಂದಲವೆಂದರೆ ಯಾವ ಭಾಷೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಸೂಕ್ತ ಎಂಬುದು.

ಮಾತೃಭಾಷೆ ಎಂಬುದು ಹೃದಯಕ್ಕೆ ಹತ್ತಿರದ ಮತ್ತು ಭಾವನಾತ್ಮಕ ಭಾಷೆಯಾಗಿರುವುದರಿಂದ ಸಂವಹನಕ್ಕೆ ತುಂಬಾ ಸಹಕಾರಿಯಾಗಿರುತ್ತದೆ. ರಾಜ್ಯ ಸರ್ಕಾರದ ಗ್ರೂಪ್ ಸಿ ಪರೀಕ್ಷೆಗಳಾದ ಎಫ್‌ಡಿಎ/ ಎಸ್‌ಡಿಎ/ ಪಿಎಸ್‌ಐ/ ಇಎಸ್‌ಐ/ ಪಿಡಿಒ/ ಆರ್‌ಎಫ್‌ಒ/ ಟೀಚರ್ಸ್‌ ನೇಮಕಾತಿಗೆ ಕನ್ನಡದಲ್ಲಿ, ಗ್ರೂಪ್ ಬಿ ಪರೀಕ್ಷೆಗಳಾದ ಕೆಇಎಸ್‌/ ಸಿಡಿಪಿಒ/ ಎಸಿ ಎಸ್‌ಎಡಿ, ತಾಂತ್ರಿಕ ಹುದ್ದೆಗಳಾದ ಎಇ/ ಜೆಇ/ ಎಸಿಎಫ್‌ ಹಾಗೂ ತಾಂತ್ರಿಕೇತರ ಹುದ್ದೆಗಳಾದ ಆರ್‌ಐ/ ಸಿಟಿಐ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲೂ ಬರೆಯಬಹುದು.

ಸಾಮಾನ್ಯವಾಗಿ ಸ್ಪರ್ಧಾತ್ಮಕ ಪ್ರಪಂಚಕ್ಕೆ ಕಾಲಿಟ್ಟಾಗ ಭಾಷೆ ಬಗ್ಗೆ ಗೊಂದಲಕ್ಕೀಡಾಗುವ ಬದಲು ಜ್ಞಾನ ಹೆಚ್ಚಿಸಿಕೊಳ್ಳಲು ಬೇಕಾದ ತಾಲೀಮು ನಡೆಸುವುದು ಸೂಕ್ತ. ರಾಜ್ಯ ಲೋಕಸೇವಾ ಆಯೋಗದ ಕೆಎಎಸ್ ನಂತಹ ಪರೀಕ್ಷೆಗಳೂ ಸಹ ಕನ್ನಡ, ಇಂಗ್ಲಿಷ್ ದ್ವಿಭಾಷೆಯಲ್ಲಿ ಪ್ರಶ್ನೆ ಪತ್ರಿಕೆಗಳಿರುವುದರಿಂದ ಕನ್ನಡಕ್ಕೆ ಹೆಚ್ಚು ಒತ್ತು ನೀಡಿ. ಕಡ್ಡಾಯ ಇಂಗ್ಲಿಷ್ ಪತ್ರಿಕೆ ಕೇವಲ ಅಭ್ಯರ್ಥಿಯ ಭಾಷಾಜ್ಞಾನ ಮಾನದಂಡವಾಗಿರುವುದರಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ಮಟ್ಟದ ಇಂಗ್ಲಿಷ್ ಜ್ಞಾನ ಇದ್ದರೆ ಸಾಕು. ಈ ಪತ್ರಿಕೆಯಲ್ಲಿ ತೇರ್ಗಡೆಯಾಗುವುದರ ಕಡೆ ಗಮನ ಹರಿಸಿ. ಇನ್ನುಳಿದ ಎಲ್ಲಾ ಪತ್ರಿಕೆಗಳನ್ನು ಕನ್ನಡದಲ್ಲಿಯೇ ಬರೆಯಲು ಅವಕಾಶವಿರುವುದರಿಂದ ನಿಮಗೆ ಹೆಚ್ಚು ಅಂಕ ಗಳಿಸಿ, ಆಯಾ ಹುದ್ದೆಗೆ ಆಯ್ಕೆಯಾಗಲು ಸಹಕಾರಿಯಾಗುತ್ತದೆ. ಕರ್ನಾಟಕದ ಗ್ರಾಮೀಣ ಅಭ್ಯರ್ಥಿಗಳು ಭಾಷೆಯ ಆಯ್ಕೆಯ ಗೊಂದಲದಿಂದ ಹೊರಬಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರೀಕ್ಷಿಸಬಹುದಾದ ಜ್ಞಾನದ ಅವಶ್ಯಕತೆ ಕಡೆ ಗಮನಹರಿಸುವುದು ಸೂಕ್ತ.

ಇನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ವಿಚಾರಕ್ಕೆ ಬಂದರೆ, ಕೇಂದ್ರ ಲೋಕ ಸೇವಾ ಆಯೋಗದ ಐಎಎಸ್‌/ ಐಪಿಎಸ್‌/ ಐಎಫ್‌ಒಎಸ್‌ (Indian forest Service) / ಸಿಡಿಎಸ್‌ (Combined Defence Services) ಮತ್ತು ಎನ್‌ಡಿಎ (National Defence Services) ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಅದರಲ್ಲೂ ಪೂರ್ವಭಾವಿ ಪರೀಕ್ಷೆಯು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿರುವುದರಿಂದ ಕೇವಲ ಪ್ರಶ್ನೆಗಳನ್ನು ನಿಮ್ಮ ಭಾಷೆಯಲ್ಲಿ ಅರ್ಥೈಸಿಕೊಂಡು ಉತ್ತರಿಸುವ ಜಾಣ್ಮೆ ನಿಮ್ಮಲ್ಲಿದ್ದರೆ ಸಾಕು, ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯಬಹುದು. ಮುಖ್ಯ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಬಹುದು.

ಇನ್ನುಳಿದಂತೆ ಕೇಂದ್ರ ಸರ್ಕಾರ ನಡೆಸುವ ರೈಲ್ವೆ, ಎಸ್‌ಎಸ್‌ಸಿ ಬ್ಯಾಂಕಿಂಗ್‌, ಗ್ರಾಮೀಣ ಬ್ಯಾಂಕ್‌ಗಳ ಪರೀಕ್ಷೆಗಳನ್ನೂ ಸಹ ಪ್ರಾದೇಶಿಕ (ಕನ್ನಡ) ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಿಕೊಡಬೇಕೆಂಬ ಕೂಗು ಹಲವಾರು ಸಂಘ– ಸಂಸ್ಥೆಗಳಿಂದ ಕೇಳಿಬಂದಿದೆ. ಅದಕ್ಕೆ ಕೇಂದ್ರ ಸರ್ಕಾರವು 2019ರಲ್ಲೇ ಸ್ಪಂದಿಸಿದ್ದು, ಎಸ್‌ಎಸ್‌ಸಿ, ಬ್ಯಾಂಕಿಂಗ್‌, ರೈಲ್ವೆಯಂತಹ ಮತ್ತು ಗ್ರಾಮೀಣ ಬ್ಯಾಂಕ್‌ಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು 13 ಪ್ರಾದೇಶಿಕ ಭಾಷೆಗಳಲ್ಲಿ (ಕನ್ನಡವೂ ಸೇರಿದಂತೆ) ಅವಕಾಶ ಕಲ್ಪಿಸಿದೆ. ಇದು ಗ್ರಾಮೀಣ ಭಾಗದ ಕನ್ನಡ ಮಾಧ್ಯಮದ ಯುವಜನತೆಯ ಚೈತನ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಇತರೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇತ್ತೀಚಿನ ಅಂಕಿ– ಅಂಶ ಗಮನಿಸಿದರೆ, ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ಸು ಗಳಿಸಿರುವುದು ಕಂಡುಬಂದಿದೆ. ಗ್ರಾಮೀಣ ಭಾಗದ ಅಭ್ಯರ್ಥಿಗಳು ಶ್ರದ್ಧೆ ಮತ್ತು ಧೈರ್ಯದಿಂದ ಐಎಎಸ್‌/ ಐಪಿಎಸ್‌/ ಐಎಫ್‌ಒಎಸ್‌/ ಸಿಡಿಎಸ್‌/ ಎನ್‌ಡಿಎ/ ಕೆಎಎಸ್‌ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆ ಗಮನಹರಿಸಬಹುದು.

(ಲೇಖಕ: ಮುಖ್ಯಸ್ಥರು, ಯೂನಿವರ್ಸಲ್ ಕೋಚಿಂಗ್ ಸೆಂಟರ್, ಬೆಂಗಳೂರು)

****

ಸಮಕಾಲೀನ ಜಗತ್ತಿನಲ್ಲಿ ಎಲ್ಲಾ ಭಾಷೆಗಳ ಕಲಿಕೆಯೂ ಬಲು ಸರಳ. ಇಂಗ್ಲಿಷ್ ಕಲಿಕೆಗಂತೂ ಹಲವು ವೆಬ್‌ಸೈಟ್‌ಗಳು ವೇದಿಕೆ ಕಲ್ಪಿಸಿವೆ. ಅಂತಹ ವೆಬ್‌ಸೈಟ್‌ಗಳೆಂದರೆ,

www.ncert.nic.in

www.diksha.gov.in

www.efluniversity.ac.in

www.tesol.org

www.britishcouncil.in

www.riesielt.org

ಯಾವುದೇ ಒಬ್ಬ ಕಲಿಕಾರ್ಥಿ ಈ ಮೇಲಿನ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ಪ್ರತಿದಿನ ಒಂದರಿಂದ ಒಂದೂವರೆ ಗಂಟೆಗಳ ಕಾಲ ಕಲಿಯಲು ಪ್ರಯತ್ನಿಸಿದರೆ ಖಂಡಿತ ಇಂಗ್ಲಿಷ್ ಭಾಷೆ ಮತ್ತು ವ್ಯಾಕರಣದ ಮೇಲೆ ಪ್ರೌಢಿಮೆ ಸಾಧಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT