ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವಿಷ್ಕಾರ : ಇಲ್ಲಿದೆ ಪ್ರಶಸ್ತಿ

ಎ.ಪಿ.ಜೆ ಅಬ್ದುಲ್ ಕಲಾಂ ಇಗ್ನೈಟ್ ಪ್ರಶಸ್ತಿ–2019
Last Updated 27 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಮಕ್ಕಳ ಮನಸ್ಸು ಹಸಿಗೋಡೆಯಂತೆ. ಅಲ್ಲಿ ಸೃಜನಶೀಲತೆ ಮೊಳಕೆಯೊಡೆಯಲು ಹೆಚ್ಚಿನ ಶ್ರಮವೇನೂ ಬೇಕಿಲ್ಲ. ನಿತ್ಯ ಎದುರಾಗುವ ಸಣ್ಣಪುಟ್ಟ ಸಮಸ್ಯೆಗಳಿಗೂ ವಿಭಿನ್ನ ಮಾದರಿಯಲ್ಲಿ ಪರಿಹಾರ ಕಂಡುಕೊಳ್ಳುವ ಶಕ್ತಿ ಮಕ್ಕಳಿಗಿದೆ. ಇದನ್ನು ಪ್ರೋತ್ಸಾಹಿಸುವ ಸಲುವಾಗಿಯೇ ಎನ್‌ಐಎಫ್ ‘ಇಗ್ನೈಟ್’ ಪ್ರಶಸ್ತಿಯನ್ನೂ ನೀಡುತ್ತಿದೆ. ಈಚೆಗಷ್ಟೇ 10ನೇ ಇಗ್ನೈಟ್ ಪ್ರಶಸ್ತಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮಕ್ಕಳು ಅರ್ಜಿ ಸಲ್ಲಿಸಬಹುದು.

ಶಾಲಾ ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ, ಅವರಲ್ಲಿನ ಸೃಜನಾತ್ಮಕ ಶಕ್ತಿ ಮತ್ತು ಆವಿಷ್ಕಾರ ಮನೋಭಾವಗಳನ್ನು ಉತ್ತೇಜಿಸುವುದಕ್ಕೆ ರಾಷ್ಟ್ರೀಯ ಆವಿಷ್ಕಾರ ಪ್ರತಿಷ್ಠಾನ (ನ್ಯಾಷನಲ್ ಇನೊವೇಷನ್ ಫೌಂಡೇಶನ್– ಎನ್‌ಐಎಫ್‌) ವೇದಿಕೆ ಪ್ರತಿ ವರ್ಷ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಇಗ್ನೈಟ್ ಅವಾರ್ಡ್ಸ್‌ ಹೆಸರಿನಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆ ಏರ್ಪಡಿಸುತ್ತಿದೆ.

ದೇಶದ ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೆ ಇದರಲ್ಲಿ ಭಾಗವಹಿಸಲು ಅವಕಾಶವಿದೆ. ವಿದ್ಯಾರ್ಥಿ
ಗಳು ತಮ್ಮ ಆವಿಷ್ಕಾರಗಳ ಮಾಹಿತಿಯನ್ನು ಪ್ರತಿಷ್ಠಾನಕ್ಕೆ ಕಳುಹಿಸಿಕೊಡಬೇಕು. ಉತ್ತಮ ಆವಿಷ್ಕಾರವನ್ನು ಆಯ್ಕೆ ಮಾಡಿ, ಅಬ್ದುಲ್ ಕಲಾಂ ಜಯಂತಿಯಂದು (ಅಕ್ಟೋಬರ್ 15) ನಗದು ಪುರಸ್ಕಾರ ನೀಡಲಾಗುತ್ತದೆ.ಈವರೆಗೆ 1,54,400 ವಿದ್ಯಾರ್ಥಿಗಳು ತಮ್ಮ ಆವಿಷ್ಕಾರಗಳನ್ನು ಪ್ರಕಟಿಸಿದ್ದಾರೆ.

ಆಯ್ಕೆಯಾದರೇ...

ಉತ್ತಮ ಆವಿಷ್ಕಾರವನ್ನು ಆಯ್ಕೆ ಮಾಡಿದ ನಂತರ, ಅದನ್ನು ಕಾರ್ಯರೂಪಕ್ಕೆ ತರಲು ಆರ್ಥಿಕ ನೆರವಿನೊಂದಿಗೆ ತಜ್ಞರ ಮಾರ್ಗದರ್ಶನವನ್ನೂ ಎನ್‌ಐಎಫ್‌ ಒದಗಿಸುತ್ತದೆ. ಆವಿಷ್ಕಾರದ ಗುಣಮಟ್ಟವನ್ನು ಆಧರಿಸಿ ಹಕ್ಕುಸ್ವಾಮ್ಯ ಕೂಡ ನೀಡಲಾಗುತ್ತಿದೆ. ಈ ಆವಿಷ್ಕಾರದ ಹಕ್ಕುಸ್ವಾಮ್ಯವನ್ನು ಉದ್ದಿಮೆಗಳನ್ನು ಮಾರಿಕೊಳ್ಳುವುದಕ್ಕೂ ಅವಕಾಶವಿದೆ. ಇದರ ಜತೆಗೆ ಅಹಮದಾಬಾದ್‌ನಲ್ಲಿ ನಡೆಯುವ ವಸ್ತು ಪ್ರದರ್ಶನದಲ್ಲಿ ಅನಾವರಣ ಮಾಡುವುದಕ್ಕೂ ಅವಕಾಶವಿದೆ.

ಹೆಚ್ಚಿನ ಮಾಹಿತಿಗೆ: www.nif.org.in ಜಾಲತಾಣ ನೋಡಿ.

ಅರ್ಹತೆಗಳೇನು?

ದ್ವಿತೀಯ ಪಿಯುಸಿವರೆಗಿನ 17ನೇ ವರ್ಷದ ಒಳಗಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಶಾಲೆ ಬಿಟ್ಟಿರುವ ಅಥವಾ ಶಾಲಾ ಶಿಕ್ಷಣ ಪೂರೈಸಿರುವ ವಿದ್ಯಾರ್ಥಿಗಳಿಗೂ ಅವಕಾಶವಿದೆ. ಹಿರಿಯರು, ಪೋಷಕರ ಸಹಾಯ ಪಡೆದು ತಯಾರಿಸಿದ ಆವಿಷ್ಕಾರ ಅಥವಾ ಯೋಜನೆಗಳಿಗೆ ಅವಕಾಶವಿಲ್ಲ. ಈಗಾಗಲೇ ಪ್ರಕಟವಾಗಿರುವ ಆವಿಷ್ಕಾರ ಮಾದರಿಗಳನ್ನು ಕಳುಹಿಸುವಂತಿಲ್ಲ. ಹದಿನೇಳು ವರ್ಷ ದಾಟಿರುವ, ಯಾವುದಾದರೂ ಒಂದು ಪದವಿ ತರಗತಿಗೆ ಪ್ರವೇಶ ಪಡೆದಿರುವ ಹಾಗೂ ಎನ್‌ಐಎಫ್ ಸಿಬ್ಬಂದಿ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.

ಅರ್ಜಿ ಸಲ್ಲಿಕೆ ವಿಧಾನ

ಅರ್ಜಿ ಸಲ್ಲಿಸುವುದಕ್ಕೆ ಮೂರು ಮಾರ್ಗಗಳಿವೆ. ಮೊದಲನೆಯದು, ignite@nifindiaಗೆ ಯೋಜನೆಯ ವಿವರಗಳನ್ನು ಮೇಲ್ ಮಾಡಬಹುದು. ಎರಡನೆಯದು www.nif.org.in ವೆಬ್‌ಸೈಟ್‌ಗೆ ಲಾಗಿನ್ ಆಗಿ, ವಿವರಗಳನ್ನು ಭರ್ತಿ ಮಾಡಬಹುದು. ಇಲ್ಲದಿದ್ದರೆ, ಈ ತಾಣದಲ್ಲಿರುವ ವಿಳಾಸಕ್ಕೆ ಶಾಲೆಯ ಪ್ರಾಂಶುಪಾಲರ ಸಹಿಯೊಂದಿಗೆ ಅರ್ಜಿ ಸಲ್ಲಿಸಬಹುದು. ಸಲ್ಲಿಕೆಗೆ ನಿರ್ದಿಷ್ಟ ವಿಧಾನ ಇಲ್ಲ. ಆದರೆ ವಿದ್ಯಾರ್ಥಿಯ ಹೆಸರು, ವಯಸ್ಸು, ತರಗತಿ, ಶಾಲೆಯ ವಿವರ, ವಿಳಾಸ, ಸಂಪರ್ಕ ಸಂಖ್ಯೆ, ಯೋಜನೆಯ ಮಾಹಿತಿ, ಬಳಸಿರುವ ರೇಖಾಚಿತ್ರ, ಸ್ಕೆಚ್‌ಗಳು, ಡಯಾಗ್ರಾಮ್‌, ಫೊಟೊಗ್ರಾಫ್‌ಗಳನ್ನು ಕಳುಹಿಸಿಕೊಡಬೇಕು. ‘ಇದು ನಮ್ಮ ಸ್ವಂತ ಆವಿಷ್ಕಾರ’ ಎಂದು ಸ್ವಯಂ ದೃಢೀಕರಣ ಪತ್ರವನ್ನು ಲಗತ್ತಿಸುವುದು ಕಡ್ಡಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT