ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟರ್ನ್‌ಶಿಪ್‌ ಉದ್ಯೋಗಕ್ಕೆ ಮುನ್ನುಡಿ

Last Updated 30 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ಗುರಿಯ ಹಿಂದೆ ಓಡುವವರೇ. ಆರಂಭದಲ್ಲಿ ಶಿಕ್ಷಣ, ಶೈಕ್ಷಣಿಕ ವಿಭಾಗಗಳು, ಅದರಲ್ಲಿ ವಿಶೇಷ ಪರಿಣತಿ, ಪರೀಕ್ಷೆ, ತರಬೇತಿ.. ಹೀಗೆ ಹಲವು ಕಠಿಣ ಮಜಲುಗಳನ್ನು ದಾಟಿ ಔದ್ಯೋಗಿಕ ಕ್ಷೇತ್ರಕ್ಕೆ ಕಾಲಿಡಬೇಕಾಗುತ್ತದೆ. ಆದರೆ ವೃತ್ತಿಪರರಾಗಿ ಶೈಕ್ಷಣಿಕ ಜಗತ್ತಿನಿಂದ ಆಚೆ ಹೋಗುವ ಈ ಸ್ಥಿತ್ಯಂತರದ ಸಂದರ್ಭ ಕೂಡ ಅಷ್ಟು ಸುಲಭವಲ್ಲ.

ಉದ್ಯೋಗದ ರೀತಿ-ನೀತಿ, ಅದರಲ್ಲಿ ಹಾಕಬೇಕಾದ ಪರಿಶ್ರಮ, ಅದನ್ನು ನಿಭಾಯಿಸುವ ಪರಿ, ಅದು ಬೇಡುವ ವಿಶೇಷ ಕೌಶಲ, ತಾಳ್ಮೆ.. ಇವೆಲ್ಲವನ್ನೂ ಒಂದು ಕಚೇರಿಯೊಳಗೆ ಕಾಲಿಡುವ ಮುನ್ನವೇ ಕಲಿಯಲೇ ಬೇಕಾದಂತಹ ಪರಿಸ್ಥಿತಿ ಉದ್ಯೋಗಾಕಾಂಕ್ಷಿಗಳ ಮುಂದಿದೆ.

ಇವೆಲ್ಲ ಆತಂಕ, ಪ್ರಶ್ನೆಗಳಿಗೆ ನಿಮ್ಮ ಮುಂದಿರುವ ಉತ್ತರ ಇಂಟರ್ನ್‌ಶಿಪ್‌. ಯಾವುದೇ ಕ್ಷೇತ್ರವನ್ನು ತೆಗೆದುಕೊಳ್ಳಿ, ಅದು ಮಾಧ್ಯಮ, ಮ್ಯಾನೇಜ್‌ಮೆಂಟ್‌, ಎಂಜಿನಿಯರಿಂಗ್‌, ವೈದ್ಯಕೀಯ.. ಯಾವುದೆ ಇರಲಿ, ಉದ್ಯೋಗಕ್ಕೆ ಕಾಲಿಡುವ ಮುನ್ನ ಇಂಟರ್ನ್‌ಶಿಪ್‌ ನಿಮ್ಮನ್ನು ಪರಿಪೂರ್ಣ ವೃತ್ತಿಪರರನ್ನಾಗಿ ರೂಪಿಸಲು ಕೊಡುಗೆ ನೀಡುತ್ತದೆ. ಕಾಲೇಜು, ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನದಲ್ಲಿ ಕಲಿತಿರದ ಹಲವು ವಿಷಯಗಳನ್ನು ಒಂದು ಸಂಸ್ಥೆಯಲ್ಲಿ ಇಂಟರ್ನ್‌ಶಿಪ್‌ ಮಾಡುವಾಗ ಕಲಿಯಬಹುದು. ಉದ್ಯೋಗ ನಿರ್ವಹಿಸಲು ಆತ್ಮವಿಶ್ವಾಸದಿಂದ ಸಿದ್ಧರಾಗಬಹುದು.

ನೀವು ಯಾವ ವೃತ್ತಿಯನ್ನು ಕೈಗೆತ್ತಿಕೊಳ್ಳುತ್ತೀರಿ ಎಂಬುದರ ಮೇಲೆ ಈ ಇಂಟರ್ನ್‌ಶಿಪ್‌ ಅನ್ನು ಯಾವ ಕಂಪನಿ ಅಥವಾ ಸಂಸ್ಥೆಯಲ್ಲಿ ಮಾಡಬೇಕೆಂಬುದನ್ನು ನಿರ್ಧರಿಸಬೇಕಾಗುತ್ತದೆ. ನಿಮ್ಮ ಹಿನ್ನೆಲೆ, ಅನುಭವ ಗಟ್ಟಿಯಾಗಿದ್ದರೆ ಮುಂದಿನ ದಾರಿಯೂ ಸುಗಮ. ಭವಿಷ್ಯದ ಉದ್ಯೋಗಕ್ಕೆ ಮುನ್ನುಡಿಯಾಗಿ ಜ್ಞಾನವನ್ನು ಅಭಿವೃದ್ಧಿ ಮಾಡಿಕೊಂಡಷ್ಟೂ ಒಳಿತು. ಏಕೆಂದರೆ ಇದು ನಿಮ್ಮ ಮುಂದಿನ ವೃತ್ತಿಜೀವನದ ನಿರ್ವಹಣೆಯ ಅಳತೆಗೋಲಾಗಿರುತ್ತದೆ.

ಕೌಶಲ ಸುಧಾರಣೆ
ಇಂಟರ್ನ್‌ಶಿಪ್‌ ನಿಮ್ಮಲ್ಲಿ ಅಡಗಿರುವ ಕೌಶಲಗಳನ್ನು ಇನ್ನಷ್ಟು ಹರಿತಗೊಳಿಸುವುದಲ್ಲದೇ ಕಲಿಕಾ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಜೊತೆಗೆ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುತ್ತದೆ.

ನೀವು ಓದುತ್ತಿರುವಾಗಲೇ ರಜಾ ದಿನಗಳಲ್ಲಿ ಇಂಟರ್ನ್‌ಶಿಪ್‌ ಮಾಡುವ ಅವಕಾಶವೂ ಸಾಕಷ್ಟು ಕೋರ್ಸ್‌ಗಳಲ್ಲಿವೆ. ಇದು ಪ್ರಾಯೋಗಿಕ ಅನುಭವ ನೀಡುವುದಲ್ಲದೆ ಪರೀಕ್ಷೆಗೂ ನೆರವಾಗುವುದು ನಿಶ್ಚಿತ. ಏಕೆಂದರೆ ಕಾಲೇಜಿನಲ್ಲಿ ಓದುವಾಗ ನಿಮಗೆ ಸಿಗುವುದು ಕೇವಲ ಸೈದ್ಧಾಂತಿಕ ಜ್ಞಾನ ಮಾತ್ರ. ಇದರ ಜೊತೆಗೆ ಪ್ರಾಯೋಗಿಕ ತಿಳಿವಳಿಕೆಯೂ ಸಿಕ್ಕರೆ ಅದರಿಂದ ವಿಷಯವನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ನೆರವಾಗುತ್ತದೆ.

ಇಂಟರ್ನ್‌ಶಿಪ್‌ ಮಾಡುವುದರಿಂದ ದೊರಕುವ ಇನ್ನೊಂದು ಲಾಭವೆಂದರೆ ನಿಮ್ಮ ಕೌಶಲಗಳನ್ನು ಇನ್ನಷ್ಟು ಬೆಳೆಸಿಕೊಳ್ಳಬಹುದು. ಉದಾಹರಣೆಗೆ ಕಚೇರಿಯ ವಾತಾವರಣದಲ್ಲಿ ಅಲ್ಲಿಯ ಉದ್ಯೋಗಿಗಳೊಂದಿಗೆ ಬೆರೆಯುವುದರಿಂದ ನಿಮ್ಮ ಸಂವಹನ ಕೌಶಲ ಸುಧಾರಿಸಿಕೊಳ್ಳಲು ಸಾಧ್ಯ. ಇದರಿಂದ ಹಿಂಜರಿಕೆಯಿಂದಲೂ ಹೊರಬರಬಹುದು. ಜೊತೆಗೆ ಸಮಯ ನಿರ್ವಹಣೆಯ ಬಗ್ಗೆಯೂ ಪಾಠ ಕಲಿಯಬಹುದು. ಹಾಗೆಯೇ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಾಗುತ್ತದೆ.

ಇಂಟರ್ನ್‌ಶಿಪ್‌ನ ಮೂಲ ಉದ್ದೇಶವೆಂದರೆ ನೀವು ತರಗತಿಗಳಲ್ಲಿ ಪಡೆದ ಜ್ಞಾನವನ್ನು ವೃತ್ತಿ ಜೀವನಕ್ಕೆ ಒರೆ ಹಚ್ಚುವುದು. ಅಲ್ಲಿಯ ಉದ್ಯೋಗಿಗಳಿಂದ ಹೆಚ್ಚಿನ ತಿಳಿವಳಿಕೆ ಪಡೆಯಬಹುದು. ಯಾವುದೇ ಪ್ರಶ್ನೆಗಳನ್ನು ಕೇಳಲು ಹಿಂಜರಿಯಬೇಡಿ. ಹೆಚ್ಚು ಪ್ರಶ್ನೆ ಕೇಳಿದಷ್ಟೂ ನಿಮ್ಮ ಜ್ಞಾನ ಹೆಚ್ಚುತ್ತದೆಯೇ ಹೊರತು ಅದರಿಂದೇನೂ ನಷ್ಟವಿಲ್ಲ ಅಥವಾ ನೀವು ಕಡಿಮೆ ಬುದ್ಧಿವಂತರು ಎಂದು ಅಲ್ಲಿರುವವರು ತಿಳಿದುಕೊಳ್ಳುತ್ತಾರೆ ಎಂಬ ಭಯ ಬೇಡ. ಬದಲಾಗಿ ತಿಳಿದುಕೊಳ್ಳುವ ಉತ್ಸಾಹವಿದೆ ಎಂಬ ಹೊಗಳಿಕೆಯೇ ಸಿಗಬಹುದು. ಅವರಿಂದ ನಿಮ್ಮ ಕೆಲಸದ ಬಗ್ಗೆ ಅಭಿಪ್ರಾಯವನ್ನು ಕೇಳಿ. ಇದರಿಂದ ನಿಮ್ಮ ಕೆಲಸದ ವೈಖರಿಯನ್ನು ಸುಧಾರಿಸಿಕೊಳ್ಳಲು ಸಾಧ್ಯ.

ಸಂದರ್ಶನದ ಅನುಭವ
ಕೆಲವು ಕಡೆ ಇಂಟರ್ನ್‌ಶಿಪ್‌ಗೂ ಕೂಡ ಸಂದರ್ಶನ ಮಾಡಿ ತೆಗೆದುಕೊಳ್ಳುವ ರೂಢಿಯಿದೆ. ಅಂತಹ ಕಡೆ ನಿಮ್ಮ ರೆಸ್ಯುಮೆ ಸಿದ್ಧಪಡಿಸಿಕೊಂಡು ಹೋಗಬೇಕಾಗುತ್ತದೆ. ಹೀಗಾಗಿ ರೆಸ್ಯುಮೆ ಸಿದ್ಧಪಡಿಸುವ ಹಾಗೂ ಸಂದರ್ಶನ ಎದುರಿಸುವ ಅನುಭವ ಕೂಡ ನಿಮಗೆ ದೊರೆಯಬಹುದು.

ಇಂಟರ್ನ್‌ಶಿಪ್‌ ಮಾಡುವ ಸಂಸ್ಥೆಯ ಆಯ್ಕೆಯಲ್ಲೂ ಎಚ್ಚರಿಕೆ ಅಗತ್ಯ. ಒಳ್ಳೆಯ ಹೆಸರಿರುವ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಿ. ಏಕೆಂದರೆ ನೀವು ಅಲ್ಲಿ ಉತ್ತಮವಾಗಿ ಕೆಲಸ ಮಾಡಿದರೆ, ಆಸಕ್ತಿ ತೋರಿಸಿದರೆ ಅಲ್ಲಿಯೇ ಮುಂದೆ ಉದ್ಯೋಗ ಸಿಗುವ ಅವಕಾಶಗಳು ಹೆಚ್ಚು. ಇದು ನಿಮಗೆ ಪ್ಲಸ್‌ ಪಾಯಿಂಟ್‌. ಇನ್ನೊಂದು ಇಂತಹ ಹೆಸರಾಂತ ಕಂಪನಿಯಲ್ಲಿ ಇಂಟರ್ನ್‌ಶಿಪ್‌ ಮಾಡಿದ ಸರ್ಟಿಫಿಕೇಟ್‌ ಬೇರೆ ಕಂಪನಿಯಲ್ಲೂ ಉದ್ಯೋಗಕ್ಕೆ ಯತ್ನಿಸುವಾಗ ಸಹಾಯಕ್ಕೆ ಬರುತ್ತದೆ. ಏಕೆಂದರೆ ಔದ್ಯೋಗಿಕ ಕ್ಷೇತ್ರದಲ್ಲಿ ಸದ್ಯಕ್ಕೆ ತಾಂಡವವಾಡುತ್ತಿರುವ ಅನಿಶ್ಚಿತ ಪರಿಸ್ಥಿತಿಯಿಂದಾಗಿ ಅಭ್ಯರ್ಥಿಗಳು ಎಲ್ಲದಕ್ಕೂ ಸಿದ್ಧತೆ ನಡೆಸಿರಬೇಕು.

ನಿರುದ್ಯೋಗ ಹೆಚ್ಚಿದೆ ಎಂಬ ವರದಿಗಳಿಂದ ವಿದ್ಯಾರ್ಥಿಗಳು ಧೃತಿಗೆಡಬೇಕಾದ ಅವಶ್ಯಕತೆಯಿಲ್ಲ. ಏಕೆಂದರೆ ಉದ್ಯೋಗಕ್ಕೇನೂ ಕೊರತೆಯಿಲ್ಲ, ಆದರೆ ಬೇಕಾಗಿರುವುದು ಕೌಶಲ ಹೊಂದಿದ ಅಭ್ಯರ್ಥಿಗಳು ಮತ್ತು ಗುಣಮಟ್ಟದಿಂದ ಕೂಡಿದ ಕೆಲಸ ಮಾಡುವ ಅಭ್ಯರ್ಥಿಗಳು. ಹೀಗಾಗಿ ಓದುತ್ತಿರುವಾಗಲೇ ಒಂದಲ್ಲ, ಹಲವು ಕಡೆ ಬೇಕಾದರೂ ಇಂಟರ್ನ್‌ಶಿಪ್ ಮಾಡಿ ಅನುಭವ ಪಡೆದರೆ ಉದ್ಯೋಗ ಗಿಟ್ಟಿಸುವ ಅವಕಾಶಗಳೂ ಜಾಸ್ತಿಯಾಗುತ್ತವೆ.

ಇನ್ನೊಂದು ಮುಖ್ಯವಾದ ಅಂಶವೆಂದರೆ ಇಂಟರ್ನ್‌ಶಿಪ್‌ ಮುಗಿಸಿ ಬರುವಾಗ ಅಲ್ಲಿಯ ಮುಖ್ಯಸ್ಥರ ಅಥವಾ ಇನ್ನಿತರ ಉದ್ಯೋಗಿಗಳ ಜೊತೆ ರೆಫರೆನ್ಸ್‌ ತೆಗೆದುಕೊಳ್ಳುವುದನ್ನು ಮರೆಯದಿರಿ. ಮುಂದೆ ಉದ್ಯೋಗ ಪರ್ವದಲ್ಲಿ ಇದು ತೀರಾ ಮುಖ್ಯ. ಹಾಗೆಯೇ ನಿರಂತರ ಸಂಪರ್ಕವಿಟ್ಟುಕೊಳ್ಳಿ.
(ಲೇಖಕರು ಪುಣೆಯ ನಾಂದಿ ಸ್ಟಾರ್ಟ್‌ಅಪ್‌ ಸ್ಥಾಪಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT