ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಲಿತ ವಿದ್ಯಮಾನಗಳು: ಇಂಡಿಯಾ – ಭಾರತ ಆಗುವುದೇ: ಚರ್ಚೆ

Published 20 ಸೆಪ್ಟೆಂಬರ್ 2023, 23:31 IST
Last Updated 20 ಸೆಪ್ಟೆಂಬರ್ 2023, 23:31 IST
ಅಕ್ಷರ ಗಾತ್ರ

ಯುಪಿಎಸ್‌ಸಿ –ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ–2, ಕೆಪಿಎಸ್‌ಸಿ –ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ–2, ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ವಿದ್ಯಮಾನಗಳ ಕುರಿತು ಹನುಮನಾಯಕ್ ರಾಥೋಡ್ ಮಾಹಿತಿ ನೀಡಿದ್ದಾರೆ.

ಹಿನ್ನೆಲೆ: ಇಂಡಿಯಾ ಅದೇ ಭಾರತ ಎಂದು ಕರೆಯಲಾಗುವ ದೇಶದ ಹೆಸರನ್ನು ಅಧಿಕೃತವಾಗಿ ಬದಲಿಸಲು ಕೇಂದ್ರ ಸರ್ಕಾರ ಆಲೋಚಿಸುತ್ತಿದೆ ಎಂಬ ಸುದ್ದಿ ಹರಡಿದ ನಂತರ ದೇಶದಲ್ಲಿ ಮಿಶ್ರ ಪ್ರತಿಕ್ರಿಯ ವ್ಯಕ್ತವಾಗಿದೆ. ಇಂತಹ ಯಾವುದೇ ವಿಚಾರವಿಲ್ಲ ಎಂದು ಕೇಂದ್ರಸರ್ಕಾರವೇ ಸ್ಪಷ್ಟೀಕರಣ ನೀಡಿದ್ದರೂ ಈ ಕುರಿತು ಚರ್ಚೆಯ ಕಾವು ಕಡಿಮೆಯಾಗಿಲ್ಲ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕೂಡ ಈ ಬಗ್ಗೆ ಮಾತನಾಡಿದ್ದಾರೆ.

ವಿವಾದ ಆರಂಭವಾದದ್ದು ಹೇಗೆ?: ದೆಹಲಿಯಲ್ಲಿ ಆಯೋಜಿಸಿದ್ದ G-20 ಶೃಂಗಸಭೆಯಲ್ಲಿ ಅತಿಥಿಗಳನ್ನು ರಾಷ್ಟ್ರಪತಿಗಳ ಔತಣಕೂಟಕ್ಕೆ ಆಹ್ವಾನಿಸುವ ವೇಳೆ ಆಂಗ್ಲಭಾಷೆಯ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಎಂದಿರಬೇಕಿದ್ದ ಜಾಗದಲ್ಲಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಬರೆಯಲಾಗಿತ್ತು. ಇದು ಕೇಂದ್ರ ಸರ್ಕಾರವು ದೇಶದ ಹೆಸರನ್ನು ಬದಲಾಯಿಸಲು ಹೊರಟಿದೆಯೇ ಎಂಬ ಪ್ರಶ್ನೆಯನ್ನು ಮೂಡಿಸಿತು.

ದೇಶದ ಸಾಂವಿಧಾನಿಕ ಸಂಸ್ಥೆಗಳು ನೀಡುವ ಆಹ್ವಾನ, ಆದೇಶ, ಸುತ್ತೋಲೆ ಮತ್ತು ಸೂಚನೆಗಳಲ್ಲಿ ಪಠ್ಯವು ಇಂಗ್ಲಿಷ್‌ನಲ್ಲಿದ್ದರೆ ದೇಶದ ಹೆಸರನ್ನು ‘ಇಂಡಿಯಾ’ ಎಂದು, ಹಿಂದಿಯಲ್ಲಿದ್ದರೆ ‘ಭಾರತ್’ ಎಂದು ಉಲ್ಲೇಖಿಸುವುದು ವಾಡಿಕೆ. ಆದರೆ ರಾಷ್ಟ್ರಪತಿಗಳ ಔತಣಕೂಟದ ಆಮಂತ್ರಣ ಪಠ್ಯ ಇಂಗ್ಲಿಷ್‌ನಲ್ಲಿದ್ದರೂ ಇಂಡಿಯಾದ ಜಾಗದಲ್ಲಿ ಭಾರತ್ ಇತ್ತು.

ಬದಲಾವಣೆ ಸುಲಭವಲ್ಲ: ಇಂಡಿಯಾ ಎಂಬುದನ್ನು ಭಾರತ ಎಂದು ಬದಲಿಸಲು ಔಪಚಾರಿಕ ಕ್ರಮಗಳನ್ನು ಅನುಸರಿಸಿದ ನಂತರವೂ ಹಲವು ನೆಲೆಗಟ್ಟುಗಳಲ್ಲಿ ಈ ಮರುನಾಮಕರಣವನ್ನು ಕಾರ್ಯರೂಪಕ್ಕೆ ತರಬೇಕಾಗುತ್ತದೆ. ಅಂದರೆ ಸರ್ಕಾರಿ ಸಂಸ್ಥೆಗಳು, ಕರೆನ್ಸಿ ನೋಟುಗಳಿಂದ ಶುರುವಾಗಿ ಬಳಕೆಯಲ್ಲಿರುವ ಪಾನ್ ಕಾರ್ಡ್, ಆಧಾರ್ ಗುರುತಿನ ಚೀಟಿ, ವಾಹನ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯಲ್ಲಿನ ವಿವರ ಹೀಗೆ ಎಲ್ಲ ಕಡೆ ಬದಲಾಯಿಸಬೇಕಾಗುತ್ತದೆ.

ಸಂವಿಧಾನದಲ್ಲಿನ ಅಂಶಗಳು: ಸಂವಿಧಾನದ ಇಂಗ್ಲಿಷ್ ಆವೃತ್ತಿಯ ಪೀಠಿಕೆಯಲ್ಲಿ ‘ನಾವು ಭಾರತದ (ಇಂಡಿಯಾದ) ಜನರು’ ಎಂದು ಆರಂಭವಾಗುತ್ತದೆ. ಇಂಡಿಯಾ ಎಂದರೆ ಭಾರತವು ರಾಜ್ಯಗಳ ಒಂದು ಒಕ್ಕೂಟ ಎನ್ನಲಾಗಿದೆ. ಇಂಗ್ಲಿಷ್‌ನಲ್ಲಿ ಬರೆಯುವಾಗ ಇಂಡಿಯಾ ಎಂದೂ ಇತರ ಭಾರತೀಯ ಭಾಷೆಗಳಲ್ಲಿ ಭಾರತ್ ಅಥವಾ ಭಾರತ ಎಂದು ಬಳಸಬೇಕು ಎಂದಿದೆ.

ದೇಶದ ಹೆಸರಿನ ಇತಿಹಾಸ: ದೇಶಕ್ಕೆ ಇಂಡಿಯಾ ಎಂಬ ಹೆಸರು ವಸಾಹತುಶಾಹಿ ಬ್ರಿಟಿಷರು ನೀಡಿದ ಹೆಸರು ಎಂದು ಕೆಲವರು ಅಭಿಪ್ರಾಯಪಟ್ಟರೆ ಬ್ರಿಟಿಷರ ಆಳ್ವಿಕೆಗೂ ಮುನ್ನವೇ ಈ ಹೆಸರು ಚಾಲ್ತಿಯಲ್ಲಿತ್ತು ಎನ್ನುತ್ತಾರೆ ಬ್ರಿಟಿಷ್ ಇತಿಹಾಸಕಾರರು. ಕ್ರಿ. ಪೂ. ಮೂರನೇ ಶತಮಾನದಲ್ಲಿ ದೇಶದ ಮೇಲೆ ದಂಡಯಾತ್ರೆಗೆ ಬಂದಿದ್ದ ಗ್ರೀಸ್‌ ಸಾಮ್ರಾಟ ಅಲೆಕ್ಸಾಂಡರ್ ಇಂಡಸ್ (ಸಿಂಧೂ) ನದಿಯಾಚೆಗಿನ ಭೂಭಾಗವನ್ನು ಇಂಡಿಯಾ ಎಂದು ಗುರುತಿಸಿದ್ದ. ಗ್ರೀಸ್‌ ಪ್ರವಾಸಿಗರು ಇಂಡಸ್ ನದಿಯ ಆಗ್ನೇಯ ಭಾಗವನ್ನು ಇಂಡಿಯಾ ಎಂದಿದ್ದರು.

ವಿಷ್ಣು ಪುರಾಣದ ಉಲ್ಲೇಖ: ಪ್ರಧಾನಿ ನರೇಂದ್ರ ಮೋದಿಯವರು ಭಾರತ ಎಂಬ ಪರಿಕಲ್ಪನೆಯ ವೈಶಿಷ್ಟ್ಯವನ್ನು ಸಾರುವ ಯತ್ನದ ಭಾಗವಾಗಿ ವಿಷ್ಣು ಪುರಾಣದ ಸಾಲನ್ನು 2022ರಲ್ಲಿಯೇ ಸಂಸತ್ತಿನಲ್ಲಿ ಉಲ್ಲೇಖಿಸಿದ್ದರು.

ಹೆಸರು ಬದಲಿಗೆ ನಾವು ಸಿದ್ಧ ಎಂದ ವಿಶ್ವಸಂಸ್ಥೆ: ದೇಶದ ಹೆಸರನ್ನು ಅಧಿಕೃತವಾಗಿ ಭಾರತ ಎಂದು ಬದಲಿಸಲು ಮನವಿ ಬಂದರೆ ಪರಿಗಣಿಸಲಾಗುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ಉಪವಕ್ತಾರ ಫರ್ಹಾನ್ ಹಕ್ ‘ತನ್ನ ಹೆಸರನ್ನು ಟರ್ಕಿ ಎಂಬುದರಿಂದ ಟರ್ಕಿಯೆ ಎಂದು ಬದಲಿಸುವಂತೆ ಟರ್ಕಿ ಸರ್ಕಾರ ಕಳೆದ ವರ್ಷ ಔಪಚಾರಿಕವಾಗಿ ಮನವಿ ಮಾಡಿಕೊಂಡಿತ್ತು. ಅದಕ್ಕೆ ಸ್ಪಂದಿಸಿ ಮರುನಾಮಕರಣಕ್ಕೆ ಅನುವು ಮಾಡಿಕೊಡಲಾಯಿತು. ಭಾರತ ಸರ್ಕಾರದಿಂದಲೂ ಅಂತಹ ಮನವಿ ಬಂದರೆ ಪರಿಗಣಿಸಲಾಗುವುದು’ ಎಂದಿದ್ದಾರೆ.

ಉಪಸಂಹಾರ:

ಕಾಲಕ್ಕೆ ತಕ್ಕಂತೆ ಯಾವುದೇ ದೇಶ ಅಥವಾ ಸಮಾಜ ಬದಲಾಗಲೇಬೇಕು. ನಮ್ಮ ದೇಶಕ್ಕೂ ಸಹ ಪರಂಪರಾನುಗತವಾಗಿ ಬಂದಿರುವ ಭಾರತ ಎಂಬ ಹೆಸರೇ ಸೂಕ್ತ ಎಂದು ಹಲವರು ವಾದ ಮಂಡಿಸುತ್ತಿದ್ದಾರೆ. ಇಂಡಿಯಾ ಎಂಬುದು ಬ್ರಿಟಿಷ್ ಸಂಸ್ಕೃತಿಯ    ಹಾಗೂ ವಿದೇಶಿ ಭಾಷೆಯನ್ನು ಅನುಸರಿಸುವ ಹೆಸರಾಗಿದ್ದು ಇದಕ್ಕೆ ಪರ್ಯಾಯವಾಗಿ ಭಾರತ ಎಂಬ ಹೆಸರು ನಮ್ಮ ದೇಶಕ್ಕೆ ಸೂಕ್ತವಾಗಿದ್ದು ಕೇಂದ್ರ ಸರ್ಕಾರ ಈ ಹೆಸರನ್ನು ಯಾವ ರೀತಿ ಅಧಿಕೃತವಾಗಿ ಜಾರಿಗೆ ತರುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT