ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೌತಶಾಸ್ತ್ರ ಎಂಎಸ್‌ಸಿಯಲ್ಲಿ ಹೆಚ್ಚು ಅವಕಾಶಗಳಿವೆಯೇ?

Last Updated 20 ಜೂನ್ 2021, 19:30 IST
ಅಕ್ಷರ ಗಾತ್ರ

1. ನಾನು ಎರಡನೇ ವರ್ಷದ ಬಿಎಸ್‌ಸಿಯಲ್ಲಿ ಓದುತ್ತಿದ್ದು ಗಣಿತದಲ್ಲಿ ಎಂಎಸ್‌ಸಿ ಕೋರ್ಸ್ ಅನ್ನು ಮಾಡಲಿಚ್ಛಿಸಿದ್ದೇನೆ. ಆದರೆ, ನನ್ನ ಹಿತೈಶಿಗಳು ಭೌತಶಾಸ್ತ್ರದಲ್ಲಿ ಮಾಡಿದರೆ ಹೆಚ್ಚಿನ ಅವಕಾಶಗಳಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾವುದನ್ನು ತೆಗೆದುಕೊಳ್ಳಲಿ?
-ಪೂರ್ಣಿಮ ಎನ್. ಮಾಳಿಗೇರ್, ಊರು ತಿಳಿಸಿಲ್ಲ

ಎಂಎಸ್‌ಸಿ ಗಣಿತದಲ್ಲಿಯೂ ಸಾಕಷ್ಟು ಅವಕಾಶಗಳಿವೆ. ಖಾಸಗಿ ಕ್ಷೇತ್ರದ ಐಟಿ, ರಿಸರ್ಚ್ ಕಂಪನಿಗಳಲ್ಲಿ, ಸರ್ಕಾರಿ ವಲಯದಲ್ಲಿ ವೃತ್ತಿಯ ಅವಕಾಶಗಳಿರುತ್ತವೆ. ಇದಲ್ಲದೆ, ಡಾಕ್ಟರೇಟ್ ಮಾಡಿ ಅಥವಾ ಎಂಎಸ್‌ಸಿ ನಂತರವೂ ಶಿಕ್ಷಕ ವೃತ್ತಿಯ ಅವಕಾಶಗಳಿವೆ. ಇದಲ್ಲದೆ, ಐಎಎಸ್‌ ಕೂಡಾ ಮಾಡಬಹುದು. ಹಾಗಾಗಿ, ನಿಮಗೆ ಒಲವಿರುವ ವಿಷಯವನ್ನು ಆರಿಸುವುದು ಉತ್ತಮ.

2. ದ್ವಿತೀಯ ಪಿ.ಯು.ಸಿ. (ಕಾಮರ್ಸ್) ನಂತರ ಏನು ಮಾಡಬಹುದು?
-ಮೊಹಮದ್ ಅಯಾನ್, ಊರಿನ ಹೆಸರು ತಿಳಿಸಿಲ್ಲ.

ದ್ವಿತೀಯ ಪಿಯುಸಿ (ಕಾಮರ್ಸ್) ನಂತರ ಸಿಎ, ಎಸಿಎಸ್‌, ಐಸಿಡಬ್ಲುಎ, ಬಿಕಾಂ ಅಥವಾ ಬಿಸಿಎ ಮೊದಲಾದ ಅವಕಾಶಗಳಿವೆ. ನಿಮಗೆ ಇಷ್ಟವಿರುವ ವೃತ್ತಿಯನ್ನು ಮೊದಲು ನಿರ್ಧರಿಸಿ ಅದರಂತೆ ಕೋರ್ಸ್ ಆಯ್ಕೆ ಉತ್ತಮ.

3. ನಾನು ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಿದ್ದೇನೆ. ಸ್ಪರ್ಧಾತ್ಮಕ ಪರೀಕೆಗಳಲ್ಲಿ ಆಸಕ್ತಿ ಇದೆ. ಶಿಕ್ಷಣ ಸಂಬಂಧಿತ ಸಾಲವಿರುವುದರಿಂದ ಮೊದಲು ಕೆಲಸಕ್ಕೆ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲೇ? ಗೊಂದಲವಿದೆ; ಸಹಾಯ ಮಾಡಿ.
-ಸಾಹಿತ್ಯ, ಕೊಣ್ಣೂರ್

ನೀವು ಸಾಲ ಪಡೆದಿರುವ ಸಂಸ್ಥೆಯ ಜೊತೆ ಮಾತನಾಡಿ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಬಹುದು. ಬ್ಯಾಂಕ್‌ಗಳಲ್ಲಿ ಇಂತಹ ವ್ಯವಸ್ಥೆ ಇದೆ. ನಿಮಗೆ ಯಾವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಸಕ್ತಿ ಇದೆ ಎನ್ನುವ ಮಾಹಿತಿ ಇಲ್ಲ, ಹಾಗಾಗಿ, ಕೆಲಸಕ್ಕೆ ಸೇರಿಯೂ ಕೂಡ ಸಮಯದ ನಿರ್ವಹಣೆಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಬಹುದು. ಅಂತಿಮ ನಿರ್ಧಾರ ನಿಮ್ಮ ವೈಯಕ್ತಿಕ ಆದ್ಯತೆಯಂತೆ ಇರಲಿ.

4. ನಾನು 10ನೇ ತರಗತಿಯ ವಿದ್ಯಾರ್ಥಿ ಹಾಗೂ ಐಎಎಸ್‌ ಮಾಡಲು ಬಯಸಿದ್ದೇನೆ. ನಾನೊಬ್ಬ ಕನ್ನಡ ಮಾಧ್ಯಮ ವಿದ್ಯಾರ್ಥಿ. ಹಾಗಾಗಿ ನನಗೆ ವಿಜ್ಞಾನ ವಿಭಾಗದಲ್ಲಿ ಆಸಕ್ತಿ ಇಲ್ಲ. ನಾನು ಯಾವ ವಿಭಾಗ ಆರಿಸಿಕೊಳ್ಳಬೇಕು ಎಂಬುದನ್ನು ತಿಳಿಸಿ.
-ಹೆಸರು, ಊರು ತಿಳಿಸಿಲ್ಲ

ಐಎಎಸ್‌ ಮಾಡಿದ ಮೇಲೆ ಅಖಿಲ ಭಾರತ ಮಟ್ಟದಲ್ಲಿ ಯಾವ ಸರ್ವೀಸ್ ವಿಭಾಗಕ್ಕೆ ಸೇರಬೇಕು ಎನ್ನುವ ಯೋಜನೆಯಿದ್ದರೆ, ಅದಕ್ಕೆ ಅನುಗುಣವಾಗಿ ಪಿಯುಸಿ ವಿಷಯಗಳ ಆಯ್ಕೆ ಸುಲಭ. ನೀವು ಪಿಯುಸಿಯಲ್ಲಿ ಆರ್ಟ್ಸ್ ಅಥವಾ ಕಾಮರ್ಸ್ ತೆಗೆದುಕೊಳ್ಳಬಹುದು.

5. ನಾನು 10ನೇ ತರಗತಿಯಲ್ಲಿ ಓದುತ್ತಿದ್ದೇನೆ. 10ನೇ ತರಗತಿ ಆದ ಮೇಲೆ ಯಾವ ವಿಭಾಗ ತೆಗೆದುಕೊಳ್ಳಬೇಕು ಎಂಬ ಗೊಂದಲದಲ್ಲಿದ್ದೀನಿ. ನಾನು ಯಾವ ವಿಭಾಗ ತೆಗೆದುಕೊಳ್ಳುವುದು ಸೂಕ್ತ?
-ಸುಪ್ರೀತಾ, ಊರಿನ ಹೆಸರಿಲ್ಲ

ಕೋರ್ಸ್ ನಿರ್ಧಾರಕ್ಕೆ ಮುಂಚೆ ನಿಮ್ಮ ವೃತ್ತಿ ಜೀವನದ ಬಗ್ಗೆ ಚಿಂತಿಸಿ. ನಿಮಗೆ ಇಷ್ಟವಿರುವ, ಒಲವಿರುವ, ಸ್ವಾಭಾವಿಕ ಪ್ರತಿಭೆಯಿರುವ ವೃತ್ತಿಯನ್ನು ಆರಿಸುವುದು ಒಳ್ಳೆಯದು. ಅಂದರೆ ಡಾಕ್ಟರ್, ಎಂಜಿನಿಯರ್, ವಕೀಲ, ವಿಜ್ಞಾನಿ, ಶಿಕ್ಷಕ ವೃತ್ತಿ, ಫ್ಯಾಷನ್ ಡಿಸೈನರ್, ಆರ್ಕಿಟೆಕ್ಟ್, ಪತ್ರಕರ್ತ, ಐಎಎಸ್‌ ಸೇರಿದಂತೆ ನೂರಾರು ವೃತ್ತಿಗಳಿವೆ. ವೃತ್ತಿಯ ಆಯ್ಕೆಯ ನಂತರ ಪಿಯುಸಿ ವಿಭಾಗದ ಆಯ್ಕೆಯಲ್ಲಿ ಗೊಂದಲವಿರುವುದಿಲ್ಲ.

6. ನನಗೆ ಐಎಎಸ್‌ ಆಗಬೇಕು ಅಂತ ಆಸೆ. 10 ನೇ ತರಗತಿ ನಂತರ ಬಿಎ ಅಥವಾ ಬಿಎಸ್‌ಸಿ ಮಾಡಬೇಕೇ? ಅದನ್ನು ಓದುವುದಕ್ಕೆ ಎಷ್ಟು ಖರ್ಚಾಗುತ್ತದೆ? ಮತ್ತೆ ಕೆಲಸ ಸಿಕ್ಕಿದ ಮೇಲೆ ಕರ್ನಾಟಕದಲ್ಲಿ ಕೆಲಸ ಮಾಡಬೇಕು ಅಂದರೆ ಏನು ಮಾಡಬೇಕು?

ಐಎಎಸ್‌ ಪರೀಕ್ಷೆಯನ್ನು ಯಾವುದೇ ಪದವಿಯ ನಂತರ ಮಾಡಬಹುದು. ಹಾಗಾಗಿ ಬಿಎ ಅಥವಾ ಬಿಎಸ್‌ಸಿ ಆಯ್ಕೆ ನಿಮ್ಮದು. ಐಎಎಸ್‌ ಪರೀಕ್ಷೆಯ ತಯಾರಿಗೆ ನೀವು ತರಬೇತಿ ತೆಗೆದುಕೊಳ್ಳಬಹುದು ಅಥವಾ ಅಧ್ಯಯನಕ್ಕೆ ಬೇಕಾದ ಪುಸ್ತಕಗಳನ್ನು ಖರೀದಿಸಿ (ಸುಮಾರು 20 ಸಾವಿರ) ನೀವೇ ತಯಾರಿ ಮಾಡಿಕೊಳ್ಳಬಹುದು. ತರಬೇತಿ ತೆಗೆದುಕೊಂಡರೆ ಸುಮಾರು 1 ರಿಂದ 1.5 ಲಕ್ಷ ರೂಪಾಯಿ ಖರ್ಚಾಗಬಹುದು. ಐಎಎಸ್‌ ನೇಮಕಾತಿಯ ಉದ್ದೇಶ ಮತ್ತು ನಿಯಮಗಳ ಅನುಸಾರ, ಅಧಿಕಾರಿಗಳು ತಮ್ಮ ರಾಜ್ಯಕ್ಕೆ ಸಾಮಾನ್ಯವಾಗಿ ನೇಮಕವಾಗುವುದಿಲ್ಲ.

7. ನಾನು ಬಿಕಾಂ ಮಾಡಿ ಐಸಿಡಬ್ಲ್ಯುಎ ಕೋರ್ಸ್‌ನ ಇಂಟರ್‌ಮೀಡಿಯೆಟ್ ಒಂದು ಗ್ರೂಪ್ ಮುಗಿಸಿದ್ದೇನೆ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಕೆಳಗೆ ಕೆಲಸ ಮಾಡುತ್ತಿದ್ದೆ. ಲಾಕ್‌ಡೌನ್ ಕಾರಣದಿಂದ ಈಗ ಅದೂ ಇಲ್ಲದೆ ಮನೆಯಲ್ಲಿದ್ದೇನೆ. ಉಳಿದಿರುವ ಕೋರ್ಸ್ ಮುಗಿಸಿ ಕೆಲಸಕ್ಕೆ ಸೇರಲು ಇನ್ನೂ ಎರಡು ವರ್ಷಗಳಾಗುತ್ತದೆ. ನಿಮ್ಮ ಸಲಹೆ ಬೇಕು.
-ಸಚಿನ್, ಊರಿನ ಹೆಸರು ತಿಳಿಸಿಲ್ಲ

ಸಾಧ್ಯವಾದರೆ, ನಿಮ್ಮ ವೃತ್ತಿ ಸಂಬಂಧಿತ ವ್ಯಕ್ತಿತ್ವ ವಿಕಸನದ ಕೋರ್ಸ್ ಮಾಡಿ. ಆನ್‌ಲೈನ್ ಶುಲ್ಕ ರಹಿತ ಕೋರ್ಸ್‌ಗಳೂ ಇವೆ. ಈ ಕೋರ್ಸ್ ಮತ್ತು ಬಿಕಾಂ ಕೋರ್ಸ್ ಆಧಾರದ ಮೇಲೆ ಕೆಲಸಕ್ಕೆ ಸೇರಿ, ಐಸಿಡಬ್ಲುಎ ಮುಂದುವರೆಸಿ. ಈ ಕಾರ್ಯದಲ್ಲಿ ಸಮಯದ ನಿರ್ವಹಣೆ ಅತ್ಯಗತ್ಯ.

8. ಬಿಟೆಕ್‌ ಕೋರ್ಸ್ ಬಗ್ಗೆ ಮಾಹಿತಿ ನೀಡಿ. ಹಾಗೂ ಡಿ.ಫಾರ್ಮಾ ಕೋರ್ಸ್ ಉಪಯುಕ್ತತೆ ಬಗ್ಗೆ ತಿಳಿಸಿ.
-ಗುರುದೇವ್ ಎಂ., ಊರು ತಿಳಿಸಿಲ್ಲ

ಬಿಟೆಕ್‌ ಕೋರ್ಸ್‌ನಲ್ಲಿ 100ಕ್ಕೂ ಹೆಚ್ಚು ಸ್ಪೆಷಲೈಸೇಶನ್‌ಗಳಿವೆ ಹಾಗೂ ದೇಶದಲ್ಲಿ 3500 ಕ್ಕೂ ಹೆಚ್ಚು ಕಾಲೇಜುಗಳಿವೆ. ಬಿಟೆಕ್‌ ಪಾಸಾದ ವಿದ್ಯಾರ್ಥಿಗಳಿಗೆ ಸಾಕಷ್ಟು ಬೇಡಿಕೆ ಇದೆ. ಎಂಜಿನಿಯರಿಂಗ್ ವೃತ್ತಿಗೆ ಮುಖ್ಯವಾಗಿ ಸಂವಹನ ಕೌಶಲ, ತಾರ್ಕಿಕ ಪ್ರತಿಪಾದನಾ ಕೌಶಲ ಅಂದರೆ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹಾರವನ್ನು ಒದಗಿಸೋ ಕೌಶಲ, ವಿಶ್ಲೇಷಣೆ ಮಾಡೋ ಕೌಶಲಗಳು ಬೇಕಾಗುತ್ತವೆ. ವೃತ್ತಿಯ ಯಶಸ್ಸಿಗೆ ವಿದ್ಯಾರ್ಥಿಗಳು ಈ ಕೌಶಲಗಳನ್ನೂ ಸಹ ಬೆಳೆಸಿಕೊಳ್ಳಬೇಕು.

ಡಿಫಾರ್ಮಾ ಕೋರ್ಸ್ ನಂತರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಫಾರ್ಮಸಿಸ್ಟ್ ಆಗಿ ಕೆಲಸ ಮಾಡಬಹುದು. ನೋಂದಣಿ ನಂತರ, ಔಷಧದ ಅಂಗಡಿ ಇಟ್ಟು ವ್ಯಾಪಾರ ಮಾಡಬಹುದು.

9. ಪಿಯುಸಿ ನಂತರ ನಾನು ಆಯ್ಕೆ ಮಾಡಲು ಇಚ್ಛಿಸುವ ಕೋರ್ಸ್‌ಗೆ ಕಳಿಸಲು ನನ್ನ ತಂದೆಗೆ ಒಪ್ಪಿಗೆ ಇಲ್ಲ. ಅವರನ್ನು ಒಪ್ಪಿಸಲು ಸಾಧ್ಯವಾಗಿಲ್ಲ, ಏನು ಮಾಡಬೇಕು?
-ಶಾಲಿನಿ ಎಂ. ಗೌಡ, ಊರು ತಿಳಿಸಿಲ್ಲ

ಎಲ್ಲಾ ಪೋಷಕರು ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂದೇ ಬಯಸುತ್ತಾರೆ. ಬಹುಶಃ ನಿಮ್ಮ ತಂದೆಯವರಿಗೆ, ನೀವು ಇಚ್ಛಿಸುವ ಕೋರ್ಸ್‌ ಅನ್ನು ಯಶಸ್ವಿಯಾಗಿ ಪೂರೈಸಲು ಬೇಕಾದ ಸಾಮರ್ಥ್ಯಗಳು ನಿಮ್ಮಲ್ಲಿ ಇವೆಯೇ ಎನ್ನುವ ಅಥವಾ ಕೋರ್ಸ್ ಸಂಬಂಧಿತ ವೃತ್ತಿಗಳ ಬಗ್ಗೆ ಇನ್ನಿತರ ಸಂದೇಹಗಳಿರಬಹುದು. ಆದ್ದರಿಂದ, ಅವರ ಸಂದೇಹಗಳ, ಸಮಸ್ಯೆಗಳ ನಿವಾರಣೆಯನ್ನು ನೀವು ಮಾಡಲೇಬೇಕು. ಇದು ಸಾಧ್ಯವಾಗದಿದ್ದರೆ, ಶೈಕ್ಷಣಿಕ ಸಮಾಲೋಚಕರನ್ನು ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT