ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯ ಕಲಿಕೆಗೆ ರಂಗರೂಪ: ಮಕ್ಕಳ ಕಲಿಕಾ ಜ್ಞಾನ ವೃದ್ಧಿಗೆ ನವೀನ ಪ್ರಯೋಗ

Last Updated 25 ಡಿಸೆಂಬರ್ 2022, 23:45 IST
ಅಕ್ಷರ ಗಾತ್ರ

ಓದಿದ್ದು ಸುಲಭವಾಗಿ ಮನಸ್ಸಿನಲ್ಲಿ ಉಳಿಯುವಂತಾಗಲು ಪಠ್ಯಗಳನ್ನು ನಾಟಕ ರೂಪಕ್ಕಿಳಿಸಿ, ಅದನ್ನು ಮಕ್ಕಳಿಂದಲೇ ಅಭಿನಯಿಸುವಂತಹ ಪ್ರಯೋಗವನ್ನು ಶಿಕ್ಷಕರೊಬ್ಬರು ನಡೆಸಿದ್ದಾರೆ. ಅವರ ಅನುಭವದ ಮಾತುಗಳು ಇಲ್ಲಿವೆ.

ವಿದ್ಯಾರ್ಥಿಗಳಲ್ಲಿ ಓದುವ, ಬರೆಯುವ ಹವ್ಯಾಸ ಬೆಳೆಸಬೇಕು. ಓದಿದ್ದನ್ನು ಸಿನಿಮಾ ಕಥೆಯಂತೆಯೋ, ಕೇಳಿದ ಹಾಡಿನಂತೆಯೋ ನೆನೆಪಿಟ್ಟುಕೊಳ್ಳಬೇಕು. ಹೀಗೆ ಆಗಬೇಕೆಂದರೆ ಏನು ಮಾಡಬಹುದು ಎಂದು ಯೋಚಿಸುತ್ತಿದ್ದಾಗ, ಹೊಳೆದಿದ್ದೇ ‘ಅಭಿನಯದ ಮೂಲಕ ಮಕ್ಕಳಿಗೆ ಪಠ್ಯ ಕಲಿಸುವ’ ವಿಧಾನ. ಇದನ್ನು ಹೊಸ ಪ್ರಯೋಗದ ರೀತಿ ಆರಂಭಿಸಿದೆ. ಈ ಪ್ರಯೋಗದಲ್ಲಿ ಪಠ್ಯಗಳನ್ನು ನಾಟಕದ ರೂಪಕ್ಕೆ ಪರಿವರ್ತಿಸಿ, ಮಕ್ಕಳಿಂದಲೇ ಸಂಭಾಷಣೆ(ಡೈಲಾಗ್) ಬರೆಸಿ, ಅವರಿಂದಲೇ ಅಭಿನಯ ಮಾಡಿಸುವುದು ನನ್ನ ಉದ್ದೇಶವಾಗಿತ್ತು.

ಹೀಗೆ ಆರಂಭವಾಯಿತು..

ನಾಟಕ ಮಾಡಿಸುವ ಯೋಚನೆ ಬಂದ ನಂತರವೇ, ಆ ಕುರಿತ ನೀಲನಕ್ಷೆಯೊಂದು ಮನಸ್ಸಿನಲ್ಲಿ ಸಿದ್ಧವಾಯಿತು. ನಂತರ ಮಕ್ಕಳನ್ನು ಕೇಳಿದೆ; ‘ಇತಿಹಾಸದ ಒಂದು ಪಾಠವನ್ನು ನಿಮ್ಮಿಂದ ನಾಟಕ ಮಾಡಿಸಬೇಕು ಅಂತ ಅಂದುಕೊಂಡಿದ್ದೇನೆ. ಯಾರು ಪಾತ್ರಧಾರಿಗಳಾಗುತ್ತೀರಿ’ ಎಂದು. ಬಹುತೇಕ ಮಕ್ಕಳು ‘ನಾನ್‌ ಮಾಡ್ತೀನಿ’ ಎಂದು ಕೈ ಮೇಲೆ ಮಾಡಿದರು. ‘ಸರಿ, ಯಾರು ಯಾವ್ಯಾವ ಪಾತ್ರಗಳನ್ನು ಮಾಡ್ತೀರೋ ಅವರು, ಆಯಾ ಪಾತ್ರದ ಪಾಠವನ್ನು ಓದಿಕೊಂಡು, ಸಂಭಾಷಣೆ ‌ಬರೆದುಕೊಡಬೇಕು’ ಎಂದು ಸೂಚಿಸಿದೆ.

ಸೂಚನೆ ಪ್ರಕಾರ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು, ತಮ್ಮದೇ ಶೈಲಿಯಲ್ಲಿ ಡೈಲಾಗ್‌ಗಳನ್ನು ಬರೆದುಕೊಂಡು ಬಂದರು. ಎಲ್ಲರ ಬರಹಗಳನ್ನು ಓದಿದೆ. ‘ಇವ್ಯಾಕೋ ಸರಿಯಿಲ್ಲವಲ್ಲ. ಮತ್ತೊಮ್ಮೆ ಬರೆದು ತನ್ನಿ’ ಎಂದೆ. ಹೀಗೆ ಒಂದೆರಡು ಬಾರಿ ಅವರ ಬಳಿಯೇ ತಿದ್ದಿಸಿದೆ. ಒಂದೆರಡು ದಿನಗಳ ಬಳಿಕ ಮಕ್ಕಳಿಂದ ಸುಧಾರಿಸಿದ ಬರಹಗಳು ಬಂದವು. ಆ ಬರಹಗಳನ್ನು ಪರಿಶೀಲಿಸಿ, ಅವುಗಳಲ್ಲಿ ಉತ್ತಮವಾಗಿರುವ ಒಂದು ‌ಬರಹವನ್ನು (ಸಂಭಾಷಣೆ) ಆಯ್ದುಕೊಂಡೆ. ಅದನ್ನೇ ಬಳಸಿಕೊಂಡು ಮಕ್ಕಳಿಗೆ ಅಭಿನಯ ತರಬೇತಿ ನೀಡಿದೆ. ಆ ನಾಟಕವನ್ನು ವಿಡಿಯೊ ಮಾಡಿ, ಸಣ್ಣದಾಗಿ ಹಿನ್ನೆಲೆ ಸಂಗೀತ ಜೋಡಿಸಿದೆ. ಅರ್ಧ ಗಂಟೆಯ ಪಠ್ಯ ನಾಟಕ ಸಿದ್ಧವಾಯಿತು. ಎಲ್ಲ ಮಕ್ಕಳು ನೋಡುವಂತೆ ಸ್ಕ್ರೀನ್ ಮೇಲೆ ಪ್ರದರ್ಶನ ಮಾಡಿದೆ.

ಉತ್ತಮ ಪ್ರತಿಕ್ರಿಯೆ

ನಾಟಕದ ವಿಡಿಯೊ ತುಣಕನ್ನುಸಾಮಾಜಿಕ ಜಾಲಾತಾಣಕ್ಕೆ ಹಾಕಿದೆ. ಮಾರನೆಯ ದಿನ, ಕೆಲವು ಪೋಷಕರು ಶಾಲೆಗೆ ಬಂದು, ‘ನಮ್ಮ ಮಕ್ಕಳನ್ನು ಏಕೆ ನಾಟಕಕ್ಕೆ ಸೇರಿಸಿಕೊಂಡಿಲ್ಲ’ ಎಂದು ಕೇಳಿದರು. ಅವರು ಮಾತುಗಳಿಂದ ನನ್ನ ಅಭಿನಯದ ಮೂಲಕ ಕಲಿಕೆ ಪ್ರಯೋಗ ಯಶಸ್ವಿಯಾಗಿದೆ ಎಂದು ಖಾತರಿಯಾಯಿತು. ಆ ಪೋಷಕರಿಗೆ‘ಮುಂದಿನ ಸಾರಿ ನಿಮ್ಮ ಮಕ್ಕಳನ್ನು ಸೇರಿಸಿಕೊಳ್ಳುವೆ’ ಎಂದು ಸಮಾಧಾನ ಮಾಡಿ ಕಳಿಸಿದೆ.

ಈ ಪಠ್ಯದ ನಾಟಕದ ನಂತರ, ಇದೇ ಪಠ್ಯದ ಮೇಲೆ ನಡೆದ ಕಿರುಪರೀಕ್ಷೆಯಲ್ಲಿ ಎಲ್ಲ ಮಕ್ಕಳು ಉತ್ತಮವಾಗಿ ಉತ್ತರ ಬರೆದಿದ್ದರು. ಅಷ್ಟೆ ಅಲ್ಲ, ಆ ನಾಟಕ ನೋಡಿದ 8 ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳೂ ಈಗ ಪ್ರಶ್ನೆಗಳಿಗೆ ಉತ್ತರ ಹೇಳುವಷ್ಟು ತಯಾರಾಗಿದ್ದರು. ಈ ಬೆಳವಣಿಗೆ ನಂತರ, ವಿದ್ಯಾರ್ಥಿಗಳು ತಾವೇ ಸಮಾಜ ವಿಜ್ಞಾನದ ಪಠ್ಯ ವಿಷಯವನ್ನೇ ನಾಟಕ, ಹಾಡು, ಕಥೆ, ಕವನದ ರೂಪಕ್ಕೆ ಬದಲಾಯಿಸಿಕೊಂಡು ಕಲಿಕೆಯನ್ನು ಸರಳಗೊಳಿಸಿ ಅಭ್ಯಾಸ ಮಾಡುತ್ತಿದ್ದಾರೆ. ಆ ಮಟ್ಟಿಗೆ, ‘ಅಭಿನಯದ ಮೂಲಕ ಕಲಿಕೆ’ ಎಂಬ ಪ್ರಯೋಗ ಯಶಸ್ವಿಯಾಗಿದೆ.

ಕಲಿಕೆ ದೃಢೀಕರಣ

ನಾಟಕದಿಂದಾಗಿ, ಮಕ್ಕಳಲ್ಲಿ ಕಲಿಕೆಯ ಹೊಸ ದಾರಿಗಳ ಅನ್ವೇಷಣೆ ಸಾಧ್ಯವಾಯಿತು. ಸಂವಹನ, ಹೊಸ ಅನುಭವಗಳನ್ನು ಪಡೆದರು. ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಎದುರಿಸುವುದು ಹೇಗೆಂದು ಕಲಿತರು. ಅಷ್ಟೇ ಅಲ್ಲ, ಮಕ್ಕಳಲ್ಲಿ, ಜೀವನ ಕೌಶಲಗಳ ಬಗ್ಗೆಯೂ ಅರಿವು ಮೂಡಿದೆ. ಸೃಜನಶೀಲತೆ, ಆತ್ಮವಿಶ್ವಾಸ, ಸಂವಹನ, ತಂಡವಾಗಿ ಕೆಲಸ ಮಾಡುವುದು ಮತ್ತು ಸಾಮರ್ಥ್ಯ ಹೆಚ್ಚಿರುವುದರ ಜೊತೆಗೆ ಭಾವನಾತ್ಮಕ ಮತ್ತು ಸಾಮಾಜಿಕ ನಿಯಂತ್ರಣ, ವಿಮರ್ಶಾತ್ಮಕ ಚಿಂತನೆ ಸಹ‌ಜವಾಗಿಯೇ ಅಭಿವೃದ್ಧಿಯಾಗಿವೆ. ಇವೆಲ್ಲವನ್ನೂ ಗಮನಿಸಿದ್ದೇನೆ. ಈಗ ಪ್ರತಿ ಘಟಕವನ್ನೂ ಅಭಿನಯ, ನಾಟಕ, ಸಂದರ್ಶನ ಮಾದರಿ, ಜನಪದ ಪ್ರಕಾರಗಳ ಮೂಲಕ ಕಲಿಕಾಂಶಗಳನ್ನು ಬಳಸಿಕೊಂಡು ಮಕ್ಕಳಿಂದಲೇ ಪ್ರಸ್ತುತಪಡಿಸಲಾಗುತ್ತಿದೆ.

ಖರ್ಚಿಲ್ಲದ ಚಟುವಟಿಕೆ

ಯಾವುದೇ ಖರ್ಚಿಲ್ಲದೆ ವಿವಿಧ ತಂತ್ರಜ್ಞಾನಗಳನ್ನು ಬಳಸಿಕೊಂಡು ಪಠ್ಯ ಬೋಧನೆ ಮಾಡುತ್ತ, ಹೊಸ ತಂತ್ರಗಳನ್ನು ಪರಿಚಯಿಸಲಾಗುತ್ತಿದೆ. ಇದೀಗ ಈ ಪದ್ಧತಿಯನ್ನು ಸುತ್ತಲಿನ ಹಲವು ಶಿಕ್ಷಕರು ಅನುಸರಿಸುತ್ತಿದ್ದಾರೆ. ಇದಕ್ಕಾಗಿ ನಾನು ಏನೂ ಖರ್ಚು ಮಾಡಿಲ್ಲ. ನನ್ನದೇ ಕ್ಯಾಮೆರಾ, ಒಂದು ಪ್ಲಾಸ್ಟಿಕ್ ಸ್ಟ್ಯಾಂಡ್, ಒಂದು ವೈರ್ ಮೈಕ್, ನನ್ನ ಹಳೆಯ ಲ್ಯಾಪ್‌ಟಾಪ್ ಇವಿಷ್ಟೇ ‘ಡ್ರಾಮಾ ಶೂಟಿಂಗ್’ ಸಾಧನಗಳು. ಈ ಹೊಸ ಪ್ರಯೋಗಗಳನ್ನು ಮಾಡುತ್ತಿರುವ ಕಾರಣಕ್ಕಾಗಿ ನಮ್ಮ ಶಾಲೆಯ ವಿದ್ಯಾರ್ಥಿಗಳ ಕಲಿಕೆಯಲ್ಲಿ ಪ್ರಗತಿಯಾಗುತ್ತಿದೆ, ಜೊತೆಗೆ ಹಾಜರಾತಿ ಹೆಚ್ಚಾಗುತ್ತಿದೆ, ವಿಶೇಷವಾಗಿ ಶಾಲೆಯ ಮೇಲೆಪಾಲಕರ ಪ್ರೀತಿ ಹೆಚ್ಚಿದೆ.

ಅಂದ ಹಾಗೆ ಈ ನಾಟಕ ಅಭಿನಯ, ಅದಕ್ಕೆ ಬೇಕಾದ ತಾಲೀಮು, ಶೂಟಿಂಗ್, ಮಕ್ಕಳಿಗೆ ಡೈಲಾಗ್‌ ಬರವಣಿಗೆ ಅಭ್ಯಾಸ ಎಲ್ಲವನ್ನೂ ಶಾಲೆಯ ರಜಾ ದಿನ ಹಾಗೂ ಶಾಲಾ ಅವಧಿ ಮುಗಿದ ನಂತರವೇ ನಡೆಸಿದ್ದೇನೆ.

ಇನ್ನೇಕೆ, ತಡ. ನೀವೂ ಶುರು ಮಾಡಿ, ಅಭಿನಯದ ಮೂಲಕ ಕಲಿಕೆಯನ್ನು...!

****

ಪಠ್ಯ ಕಲಿಸುವ ‘ನಾಟಕಗಳು’

ನಾಟಕಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ಬಹುತೇಕ 10 ನೇ ತರಗತಿಯ ಪಠ್ಯಗಳಲ್ಲಿರುವ ವಿಷಯಗಳನ್ನು. ವಿಶೇಷವಾಗಿ ಸಮಾಜ ವಿಜ್ಞಾನ ವಿಷಯದ ಭೂಗೋಳ ವಿಭಾಗದಲ್ಲಿ ದೇಶದಲ್ಲಿರುವ ವೈವಿಧ್ಯಮಯ ಮಣ್ಣುಗಳ ಬಗ್ಗೆ ಮಾಹಿತಿ ನೀಡುವ ‘ಭಾರತದಲ್ಲಿನ ಮಣ್ಣುಗಳು’, ಅಣಕು ಸಂಸತ್ತು, ಭಾರತದ ಸ್ಥಾನ ಮತ್ತು ವಿಸ್ತೀರ್ಣ, ಭಾರತಕ್ಕೆ ಯುರೋಪಿಯನ್ನರ ಆಗಮನ, ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು, ಸಂವಿಧಾನ.. ಸೇರಿದಂತೆ ವಿವಿಧ ಪಠ್ಯಗಳನ್ನು ನಾಟಕ ರೂಪಕ್ಕೆ ತಂದಿದ್ದೇವೆ. ಸಂದರ್ಶನ ರೂಪದಲ್ಲೂ ಪಠ್ಯಗಳನ್ನು ತಲುಪಿಸುವ ಪ್ರಯತ್ನ ಮಾಡಿದ್ದೇವೆ.

ನೀವೂ ಮಾಡಿ ನೋಡಿ..

ನೀವೂ ಕೂಡ ಇಂಥ ಪ್ರಯೋಗಗಳನ್ನು ನಿಮ್ಮ ನಿಮ್ಮ ಶಾಲೆಗಳಲ್ಲಿ ಪ್ರಯತ್ನಿಸಬಹುದು. ನಿಮಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಒಂದು ಪಾಠದ ತುಣುಕಿನ ವಿಡಿಯೊ ಕ್ಲಿಪ್‌ ಅನ್ನು ‌ಇಲ್ಲಿ ಹಾಕಿದ್ದೇನೆ. ಕೆಳಗಿರುವ ಕ್ಯೂ ಆರ್ ಕೋಡ್‌ ಸ್ಕ್ಯಾನ್ ಮಾಡಿ ವಿಡಿಯೊ ನೋಡಬಹುದು. ನಂತರ ನೀವು ಪ್ರಯತ್ನಿಸಬಹುದು.

–ಕಿಶನರಾವ್ ಕುಲಕರ್ಣಿ

(ಲೇಖಕರು: ಸಮಾಜವಿಜ್ಞಾನ ಸಹಶಿಕ್ಷಕ,ಹನುಮಸಾಗರ, ಕೊಪ್ಪಳ ಜಿಲ್ಲೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT