ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ–ಹೊಯ್ಸಳ ದೇವಾಲಯಗಳು

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ವಿದ್ಯಮಾನಗಳ ಕುರಿತು ಯು.ಟಿ ಆಯೆಷಾ ಫರ್ಜಾನ ಮಾಹಿತಿ ನೀಡಿದ್ದಾರೆ
Published 28 ಸೆಪ್ಟೆಂಬರ್ 2023, 0:34 IST
Last Updated 28 ಸೆಪ್ಟೆಂಬರ್ 2023, 0:34 IST
ಅಕ್ಷರ ಗಾತ್ರ

ಯುಪಿಎಸ್‌ಸಿ -ಪ್ರಿಲಿಮ್ಸ್ ,ಕೆಪಿಎಸ್‌ಸಿ –ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-2, ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ವಿದ್ಯಮಾನಗಳ ಕುರಿತು ಯು.ಟಿ ಆಯೆಷಾ ಫರ್ಜಾನ ಇಲ್ಲಿ ಮಾಹಿತಿ ನೀಡಿದ್ದಾರೆ..

–––

ಭಾರತದ ವಿಶ್ವಮಾನ್ಯ ಕವಿಯಾದ ರವೀಂದ್ರನಾಥ ಠಾಗೋರ್ ಅವರು ಶತಮಾನದ ಹಿಂದೆ ವಿಶ್ವಭಾರತಿಯನ್ನು ನಿರ್ಮಿಸಿದ ಪ್ರದೇಶವಾದ ಪಶ್ಚಿಮ ಬಂಗಾಳದ ಶಾಂತಿನಿಕೇತನ ಮತ್ತು ಕರ್ನಾಟಕದ ಹೊಯ್ಸಳರ ಪವಿತ್ರ ದೇವಾಲಯಗಳಾದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ದೇವಾಲಯಗಳು ಇತ್ತೀಚೆಗೆ UNESCO ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ವಿವರಗಳು

ಭಾರತದ ಪ್ರಮುಖ ಸಾಂಸ್ಕೃತಿಕ ತಾಣವಾದ ಶಾಂತಿನಿಕೇತನವು ಬಿರ್ಭುಮ್ ಜಿಲ್ಲೆಯಲ್ಲಿದ್ದು, ಇದನ್ನು ಯುನೆಸ್ಕೋ ಪಾರಂಪರಿಕ ಸ್ಥಾನದ ಪಟ್ಟಿಯಲ್ಲಿ ಸೇರಿಸಬೇಕೆಂದು ಭಾರತವು ಬಹಳ ಹಿಂದಿನಿಂದಲೂ ಪ್ರಯತ್ನಿಸುತ್ತಾ ಬಂದಿದೆ.

ಕೆಲವು ತಿಂಗಳ ಹಿಂದೆ ಈ ಸಂಬಂಧ ಅಂತರಾಷ್ಟ್ರೀಯ ಸಲಹಾ ಸಂಸ್ಥೆಯಾದ ICOMOS , ಶಾಂತಿನಿಕೇತನವನ್ನು UNESCO ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕೆಂದು ಶಿಫಾರಸು ಮಾಡಿತ್ತು. ಇದು ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಭಾರತದ 41ನೇ ಸೇರ್ಪಡೆಯಾಗಿದೆ.

ಹಾಗೆಯೇ ಹೊಯ್ಸಳ ಸಾಮ್ರಾಜ್ಯದ ಮಹತ್ವದ ದೇವಾಲಯಗಳನ್ನು 'ಏಪ್ರಿಲ್ 15, 2014 ರಂದು ಯುನೆಸ್ಕೋದ ತಾತ್ಕಾಲಿಕ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಈ ಸ್ಮಾರಕಗಳು ಭಾರತೀಯ ಪುರಾತತ್ವ ಸರ್ವೇಕ್ಷಣೆ (ASI) ಇಲಾಖೆಯ ರಕ್ಷಣೆಯಲ್ಲಿದ್ದು ಅವುಗಳ ಸಂರಕ್ಷಣೆ ಮತ್ತು ನಿರ್ವಹಣೆಯು ಇದರ ಜವಾಬ್ದಾರಿಯಾಗಿದೆ. ಇವು ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಭಾರತದ 42ನೇ ಸೇರ್ಪಡೆಯಾಗಿದೆ.

UNESCO ವಿಶ್ವ ಪರಂಪರೆಯ ತಾಣಗಳು

UNESCO ವಿಶ್ವ ಪರಂಪರೆಯ ತಾಣಗಳು ಮಾನವೀಯತೆಯ ಸಾಮೂಹಿಕ ಪರಂಪರೆಯನ್ನು ಪ್ರತಿನಿಧಿಸುತ್ತದೆ ಹಾಗೂ ಅವುಗಳು ಎತ್ತಿಹಿಡಿಯುವ ಸಾಂಸ್ಕೃತಿಕ, ಐತಿಹಾಸಿಕ, ವೈಜ್ಞಾನಿಕ ಅಥವಾ ನೈಸರ್ಗಿಕ ಪ್ರಾಮುಖ್ಯ ಜಗತ್ತಿಗೆ ಪರಿಚಯಿಸುವ ಗುರಿಯನ್ನು ಹೊಂದಿದೆ.

ಈ ತಾಣಗಳನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಬಲು ಎಚ್ಚರಿಕೆಯಿಂದ ಆಯ್ಕೆಮಾಡುತ್ತದೆಯಲ್ಲದೇ ಭವಿಷ್ಯದ ಪೀಳಿಗೆಗಾಗಿ ಇದನ್ನು ಜತನದಿಂದ ಕಾಪಿಡುವ ಗುರಿಯನ್ನು ಹೊಂದಿದೆ.

ಹಿನ್ನೆಲೆ ಮತ್ತು ಇತಿಹಾಸ

ಜಗತ್ತಿನ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯನ್ನು ಸಂರಕ್ಷಿಸುವ ಕಲ್ಪನೆಯು ದ್ವಿತೀಯ ವಿಶ್ವ ಸಮರದ ನಂತರ ಮುನ್ನೆಲೆಗೆ ಬಂದಿತು. ಹಾಗೆ 1945 ರಲ್ಲಿ ಸ್ಥಾಪನೆಯಾದ ಯುನೆಸ್ಕೋ, ಮುಂದುವರಿದ ಭಾಗವಾಗಿ ವಿಶ್ವದ ಪಾರಂಪರಿಕ ಸ್ಥಳಗಳನ್ನು ರಕ್ಷಿಸುವ ಅಗತ್ಯವನ್ನು ಗುರುತಿಸಿತು.

ವಿಶ್ವ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ರಕ್ಷಣೆಗೆ ಸಂಬಂಧಿಸಿದ ಒಪ್ಪಂದವನ್ನು 1972 ರಲ್ಲಿ ಯುನೆಸ್ಕೋ ಸಾಮಾನ್ಯ ಸಮ್ಮೇಳನದ 17 ನೇ ಅಧಿವೇಶನದಲ್ಲಿ ಅಂಗೀಕರಿಸಲಾಯಿತು.

ಈ ಅಂತರ್‌ ರಾಷ್ಟ್ರೀಯ ಒಪ್ಪಂದವು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯ ಸ್ಥಾಪನೆಗೆ ರೂಪುರೇಷೆಗಳನ್ನು ಒದಗಿಸಿದ್ದು ಇದು ಜಗತ್ತಿನ ಅತ್ಯುತ್ತಮ ಅಮೂಲ್ಯ ಸ್ಥಳಗಳನ್ನು ಒಳಗೊಂಡಿದೆ.

1. ಬೇಲೂರಿನ ಚೆನ್ನಕೇಶವ ದೇವಾಲಯ
ಪ್ರಧಾನ ಶಿಲ್ಪಿಗಳು :ದಾಸೋಜ ಮತ್ತುಅವನ ಮಗ ಚಾವಣ.

ಇಲ್ಲಿನ ಗೋಡೆಗಳು ಶಿಲ್ಪಸಂಪತ್ತಿನ ತೆರೆದ ಗಣಿಗಳಾಗಿದ್ದು, ಗೋಡೆಯ ಕೆಳ ಸಾಲುಗಳಲ್ಲಿ ಸದೃಢತೆಯ ಸಂಕೇತವಾದ ಗಜಗಳ ಸಾಲು,ಅದರ ಮೇಲೆ ಶೌರ್ಯ ಸಂಕೇತವಾಗಿ ಸಿಂಹಗಳ ಸಾಲು, ಅದರ ಮೇಲಿನ ಪಟ್ಟಿಕೆಯಲ್ಲಿ ರಾಮಾಯಣ-ಮಹಾಭಾರತದ ಸಮರ ದೃಶ್ಯಗಳ ಸಾಲು, ಮಧ್ಯೆ ಶಾರ್ದೂಲ ಮತ್ತು ಹಂಸಗಳ ಪಟ್ಟಿಕೆಗಳು ಇರುತ್ತವೆ. ಇದರ ಮೇಲೆ ಎರಡು ಎರಡುವರೆ ಅಡಿ ಎತ್ತರದ ಸುಂದರವಾದ ದೇವ-ದೇವತೆಗಳ ಶಿಲ್ಪಗಳಿರುತ್ತವೆ.ಈ ಚಿತ್ರ ಪಟ್ಟಿಕೆಗಳು ಮತ್ತು ಬೋದಿಗೆಗಳ ಬಳಿ ಅತಿ ಸುಂದರವಾದ 42 ಪ್ರತಿಮೆಗಳಿವೆ.
ಈ ದೇವಾಲಯವನ್ನು  ಲಲಿತಕಲಾ ವಸ್ತುಸಂಗ್ರಹಾಲಯ ಎಂದು ಡಾಕ್ಟರ್ ಎಂ ಎಚ್ ಕೃಷ್ಣರವರು ಬರೆದಿರುವುದರಲ್ಲಿ ಉತ್ಪ್ರೇಕ್ಷೆಯಿಲ್ಲ.

2. ಹಳೇಬೀಡಿನ ಹೊಯ್ಸಳೇಶ್ವರ ದೇಗುಲ

ಪ್ರಧಾನ ಸ್ಥಪತಿ : ಕೇದಾರೋಜ
ವಿಷ್ಣುವರ್ಧನನ ಅಧಿಕಾರಿಯಾದ ಕೇತಮಲ್ಲನು ಕೇದಾರ ಎಂಬ ಸ್ಥಪತಿಯ ಮೂಲಕ ಈ ದೇಗುಲವನ್ನು ಕಟ್ಟಿಸಿದನು. ಐದು ಅಡಿ ಎತ್ತರದ ಜಗತಿಯ ಮೇಲೆ ನಕ್ಷತ್ರಾಕಾರದ ತಳನವಿನ್ಯಾಸದಲ್ಲಿ ಇದನ್ನು ನಿರ್ಮಿಸಲಾಗಿದ್ದು ಇದು ದ್ವಿಕೂಟಾಚಲವಾಗಿದೆ. ಎರಡು ಭಾಗಗಳಲ್ಲಿ ಎರಡು ಗರ್ಭಗೃಹಗಳು, ಸುಖನಾಸಿ, ನವರಂಗ ಮತ್ತು ಮಹಾದ್ವಾರಗಳಿವೆ. ಎರಡು ಮಹಾದ್ವಾರಗಳ ಮುಂದೆ ಎರಡು ನಂದಿ ಮಂಟಪಗಳು ಮತ್ತು ನಂದಿ ವಿಗ್ರಹಗಳೂ ಇವೆ. ನವ ರಂಗಗಳಲ್ಲಿ ಕಂಬಗಳ ಕೆತ್ತನೆ ಮನಮೋಹಕವಾಗಿದ್ದು ಅವುಗಳ ಮೇಲೆ ಒಂದೊಂದು ಅಂಕಣದಲ್ಲಿಯೂ ಮೇಲ್ಚಾವಣಿಯಲ್ಲಿ ಭುವನೇಶ್ವರಿಯ ವಿಗ್ರಹಗಳಿವೆ.
ಬೇಲೂರಿನ ದೇವಾಲಯದಂತೆಯೇ ಇವುಗಳ ಭಿತ್ತಿಗಳಲ್ಲಿ ಹಲವು ರೀತಿಯ ಶಿಲ್ಪ ಪಟ್ಟಿಕೆಗಳು ಕಂಗೊಳಿಸುತ್ತವೆ.ಈ ದೇವಾಲಯದಲ್ಲಿ ಬೇಲೂರಿಗಿಂತಲೂ ಹೆಚ್ಚಿನ ಶಿಲ್ಪ ಸಮೃದ್ಧಿ ಕಣ್ಮನ ತಣಿಸುತ್ತದೆ. ಫರ್ಗ್ಯುಸನ್ ಅವರ ಅಭಿಪ್ರಾಯದಂತೆ  ಸೂಕ್ಷ್ಮ ಕೌಶಲ್ಯದ ಕೆತ್ತನೆ ಕೆಲಸದಲ್ಲಿ ಇಡೀ ಜಗತ್ತಿನ ಶಿಲ್ಪವನ್ನು ಮೀರಿಸಿದ ಅನೇಕ ಕಟ್ಟಡಗಳು ಭಾರತದಲ್ಲಿವೆ. ಆದರೆ ಬೇಲೂರು-ಹಳೇಬೀಡು ಗಳ ದೇವಾಲಯಗಳು ಅವುಗಳೆಲ್ಲವನ್ನು ಮೀರಿಸಿದೆ. 

3. ಸೋಮನಾಥಪುರದ ಕೇಶವ ದೇವಾಲಯ
ಮೂರನೆಯ ಸೋಮೇಶ್ವರನ ಮಂತ್ರಿ ಸೋಮನಾಥ ಎಂಬವನು ಈ ದೇವಾಲಯವನ್ನು ಕ್ರಿಸ್ತಶಕ 1268ರಲ್ಲಿ ಕಟ್ಟಿಸಿದನು.

ಇದು ಮೂರು ಗರ್ಭಗೃಹಗಳನ್ನುಳ್ಳ ತ್ರಿಕೂಟಾಚಲವಾಗಿದ್ದು ಇದು ದೊಡ್ಡ ಪ್ರಾಕಾರದ ಒಳಗಿದೆ. ಪ್ರಾಕಾರದ ಗೋಡೆಗೆ ಸೇರಿದಂತೆ ಒಟ್ಟು 64 ಅಂಕಣಗಳ ಕೈಸಾಲೆಯ ಮಂಟಪಗಳಿವೆ. ಗರ್ಭಗುಡಿಗಳ ಹೊರಭಾಗಗಳು ನಕ್ಷತ್ರಾಕಾರವಾಗಿಯೂ ಒಳಭಾಗ ಚೌಕಾಕಾರವಾಗಿಯೂ ಇದೆ. ಮೂರು ಗರ್ಭಗುಡಿಗಳ ಮೇಲ್ಭಾಗದಲ್ಲಿಯೂ ಮೂರು ಗೋಪುರಗಳಿವೆ. ಬೇಲೂರು ಹಳೇಬೀಡು ದೇವಾಲಯಗಳಲ್ಲಿರುವಂತೆ ಇವುಗಳ ಮೇಲೂ ಹಲವು ರೀತಿಯ ಶಿಲ್ಪಪಟ್ಟಿಕೆಗಳ ಕೆತ್ತನೆಗಳಿವೆ.

ಹೆನ್ರಿ ಕಸಿನ್ಸ್ ಅವರ ಪ್ರಕಾರ ಚಿನ್ನ-ಬೆಳ್ಳಿಯ ಕೆತ್ತನೆಯ ನುಣುಪು ಈ ದೇಗುಲದಲ್ಲಿರುವ ಕೆತ್ತನೆಗಿಂತ ಸೊಗಸಾಗಿ ಇರಲಾರದು.ಆದರೆ ಹೊಯ್ಸಳ ಸ್ಥಪತಿಗಳು ಶಿಲ್ಪಗಳ ಅಲಂಕರಣೆಯತ್ತ ಹೆಚ್ಚು ಕೇಂದ್ರೀಕರಿಸಿ ಜೀವಂತಿಕೆಯ ಅಭಿವ್ಯಕ್ತಿಯನ್ನು ಮರೆತಿದ್ದಾರೆ ಎಂಬ ಆರೋಪಗಳೂ ಇವೆ. ಮತ್ತು ಶಿಲ್ಪದಡಿಯಲ್ಲಿ ತಮ್ಮ ಹೆಸರನ್ನು ಕೆತ್ತಿರುವ ಉದಾಹರಣೆಗಳು ಹೊಯ್ಸಳ ಸ್ಥಪತಿಗಳಲ್ಲೇ ವ್ಯಾಪಕವಾಗಿ ಕಾಣಬಹುದು. ಅವರಲ್ಲಿ ಬೀರಣ,ರೇವೋಜ,ಹೊನ್ನೋಜ, ಬೈಚೋಜ ಮುಂತಾದ ಮುನ್ನೂರಕ್ಕೂ ಹೆಚ್ಚಿನ ಹೆಸರನ್ನು ಕಾಣಬಹುದು. ಇವರ ಹಸ್ತಗಳಲ್ಲಿ ಅರಳಿದ ಹೊಯ್ಸಳರ ಕಾಲದ 100 ಕ್ಕೂ ಹೆಚ್ಚಿನ‌ ದೇವಾಲಯಗಳು ಈಗಲೂ ಇವೆ.

4. ಶಾಂತಿನಿಕೇತನ

ಶಾಂತಿನಿಕೇತನವನ್ನು ಇತ್ತೀಚೆಗೆ ಭಾರತದ 41 ನೇ UNESCO ವಿಶ್ವ ಪರಂಪರೆಯ ತಾಣವಾಗಿ ಗೊತ್ತುಪಡಿಸಲಾಗಿದ್ದು ಇದು ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನ ಮತ್ತು ಡಾರ್ಜಿಲಿಂಗ್ ಮೌಂಟೇನ್ ರೈಲ್ವೇಗಳ ಬಳಿಕ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲ್ಪಟ್ಟ ಪಶ್ಚಿಮ ಬಂಗಾಳ ರಾಜ್ಯದ ಮೂರನೆಯ ತಾಣವಾಗಿದೆ. ಕಳೆದ ವರ್ಷ, ಪಶ್ಚಿಮ ಬಂಗಾಳದ ದುರ್ಗಾ ಪೂಜೆಯನ್ನು ಯುನೆಸ್ಕೋ  ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಯ ಪಟ್ಟಿಯಲ್ಲಿ ಸೇರಿಸಿಕೊಂಡಿತ್ತು ಎಂಬುವುದನ್ನು ಇಲ್ಲಿ ಸ್ಮರಿಸಬಹುದು.


5 ವಿಶ್ವ ಭಾರತಿ ವಿಶ್ವವಿದ್ಯಾಲಯ

ಶಾಂತಿನಿಕೇತನದ ಪ್ರಾರಂಭದ ಹೆಜ್ಜೆಯನ್ನು 1901 ರಲ್ಲಿ ನೊಬೆಲ್‌ ಪ್ರಶಸ್ತಿ ಪುರಸ್ಕೃತರಾದ ರವೀಂದ್ರನಾಥ್‌ ಟ್ಯಾಗೋರ್‌ ಅವರು ಸ್ಥಾಪಿಸಿದರು.1921 ರಲ್ಲಿ ಮುಂದುವರಿದು ಟ್ಯಾಗೋರ್ ಶಾಂತಿನಿಕೇತನದಲ್ಲಿ ವಿಶ್ವ ಭಾರತಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಶಿಕ್ಷಣದ ಮೂಲಕ ಸಾರ್ವತ್ರಿಕ ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದ ಮಹತ್ವದ ಕಲಿಕಾ ತಾಣವಾಗಿದ್ದ ಈ ಸಂಸ್ಥೆಯನ್ನು, 1951 ರಲ್ಲಿ ಸಂಸತ್ತಿನ ಕಾಯಿದೆಯ ಮೂಲಕ ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ರೂಪಿಸಲಾಯಿತು.

ಶಾಂತಿನಿಕೇತನದಲ್ಲಿರುವ ವಿಶ್ವಭಾರತಿ ಬಂಗಾಳದ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯವಾಗಿದ್ದು ಪ್ರಧಾನಮಂತ್ರಿಯವರು ಈ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾರೆ. ಶಾಂತಿನಿಕೇತನವನ್ನು ರೂಪಿಸಿದ ರವೀಂದ್ರನಾಥ ಟ್ಯಾಗೋರ್ ಅವರ ಶೈಕ್ಷಣಿಕ ತತ್ತ್ವಶಾಸ್ತ್ರವು ಪ್ರಾಚೀನ ಭಾರತದ ಸಮಗ್ರ ಕಲಿಕೆ
ಮತ್ತು ಗುರುಕುಲ ಪದ್ಧತಿಯ ಕಲ್ಪನೆಯಲ್ಲಿ ಆಳವಾಗಿ ಬೇರೂರಿರುವುದರ ಜತೆಗೆ ವಿಶ್ವಮಾನವ ಪರಿಕಲ್ಪನೆಯ ಸುಂದರ ಸಂಯೋಜನೆಯನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT