ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾರಥಾನ್‌ ಬಲ: ಸಾಧನೆಯ ‘ಶಿಖರ’ವೇರುವ ಛಲ

ಐಟಿ ಉದ್ಯೋಗ ತೊರೆದು ಓಟದ ಸ್ಪರ್ಧೆಗಳಲ್ಲಿ ಮಿಂಚುತ್ತಿರುವ ಅಶ್ವಿನಿ
Last Updated 1 ಜುಲೈ 2022, 19:30 IST
ಅಕ್ಷರ ಗಾತ್ರ

ಹವ್ಯಾಸವಾಗಿ ಆರಂಭಿಸಿದ ಮ್ಯಾರಥಾನ್‌ನ ತುಡಿತ ಐಟಿ ಕಂಪೆನಿಯ ವೃತ್ತಿ ತೊರೆಯುವಂತೆ ಮಾಡಿತು. ದೂರ ಅಂತರದ ಓಟದಲ್ಲಿ ಮಿನುಗುತ್ತಿರುವ ಪ್ರತಿಭೆ ಅಶ್ವಿನಿ ಗಣಪತಿ ಭಟ್‌ ಅವರಿಗೆ ಈ ಕ್ರೀಡೆಯಲ್ಲಿ ಶ್ರೇಷ್ಠ ಸಾಧನೆಯ ತವಕ.

ನೇಪಾಳದಲ್ಲಿ ಇದೇ ವರ್ಷದ ಮೇ 29ರಂದು ನಡೆದ ಎವರೆಸ್ಟ್‌ ಮ್ಯಾರಥಾನ್‌ನ 60 ಕಿ.ಮೀ. ಸ್ಪರ್ಧೆಯಲ್ಲಿ ಪಾಲ್ಗೊಂಡ ಏಕೈಕ ಮಹಿಳೆ ಎಂಬ ಶ್ರೇಯ ಅಶ್ವಿನಿ ಅವರದು. 15 ಗಂಟೆ 40 ನಿಮಿಷಗಳಲ್ಲಿ ನಿಗದಿತ ಗುರಿ ಮುಟ್ಟಿದ್ದ ಅವರು, ನಾಲ್ಕನೇ ಶ್ರೇಷ್ಠ ಸಮಯ ದಾಖಲಿಸಿದ್ದರು. ಒಟ್ಟು 15 ಜನ ಪಾಲ್ಗೊಂಡಿದ್ದ ಈ ಸ್ಪರ್ಧೆಯಲ್ಲಿ ಅಶ್ವಿನಿ ಒಂಬತ್ತನೇ ಸ್ಥಾನ ಗಳಿಸಿದ್ದರು.

ಅಶ್ವಿನಿ ಮೂಲತಃ ಮಲೆನಾಡಿನವರು. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ತಾಳಗುಪ್ಪ ಅವರೂರು.ತಂದೆ ಬಿ.ಕೆ.ಗಣಪತಿ ಉದ್ಯೋಗ ಅರಸಿ ಉದ್ಯಾನನಗರಿಗೆ ಬಂದವರು. ಬಾಲ್ಯದಿಂದಲೇ ಕ್ರೀಡೆಯ ಕುರಿತು ಆಸಕ್ತಿ ಬೆಳೆಸಿಕೊಂಡಿದ್ದ ಅಶ್ವಿನಿ ಅವರಿಗೆ ತಂದೆ ಪ್ರೋತ್ಸಾಹದ ನೀರೆರೆದರು. ಆಟೊ ರಿಕ್ಷಾ ಚಾಲನೆ, ಎಸ್ಟೇಟ್‌ ಏಜೆನ್ಸಿ, ವಿಮಾ ಏಜೆನ್ಸಿ ಮತ್ತಿತರ ಉದ್ಯೋಗಗಳ ಮೂಲಕ ಬದುಕು ಕಟ್ಟಿಕೊಂಡು ಮಗಳಿಗೆ ಎಂಜಿನಿಯರಿಂಗ್ ಪದವಿ ಓದಿಸಿದರು.

‘ಬೇಸ್ ಕ್ಯಾಂಪ್‌ನಿಂದಪ್ರಾರಂಭವಾಗುವ ಎವರೆಸ್ಟ್ ಓಟಕ್ಕೆ ಮಾರ್ಗದರ್ಶಿ ಅಥವಾ ಪೋರ್ಟರ್ ಬೆಂಬಲವಿಲ್ಲದೆ ಏಕಾಂಗಿಯಾಗಿ ತೆರಳಿದ್ದೆ. 14 ದಿನಗಳಲ್ಲಿ 130 ಕಿ.ಮೀ. ಟ್ರೆಕ್ಕಿಂಗ್‌ ಮಾಡಿಕೊಂಡು ಮೇ 27ಕ್ಕೆ ಕ್ಯಾಂಪ್ ತಲುಪಿದೆ. 29ನೇ ತಾರೀಖು ಬೆಳಿಗ್ಗೆ 6 ಗಂಟೆಗೆ ಓಟ ಶುರುವಾಯಿತು’ ಎಂದು ಅಶ್ವಿನಿ ನೆನಪಿಸಿಕೊಳ್ಳುತ್ತಾರೆ. 2016ರಲ್ಲಿ ಬಹುರಾಷ್ಟ್ರೀಯ ಕಂಪೆನಿಯ ಪ್ರೊಗಾಮ್ ಮ್ಯಾನೇಜರ್ ಹುದ್ದೆ ತೊರೆದು ಮ್ಯಾರಥಾನ್‌ನಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

10 ಕಿ.ಮೀ ಓಟದಿಂದ ಆರಂಭಿಸಿದ 36 ವರ್ಷದ ಅಶ್ವಿನಿ, ಇಲ್ಲಿಯವರೆಗೆ 100ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.

ಪ್ರಮುಖ ಸಾಧನೆಗಳು: 2019ರಲ್ಲಿ ಲೇಹ್‌ನಲ್ಲಿ ನಡೆದ ಖರ್ದುಂಗ್ಲಾ ಚಾಲೆಂಜ್‌ (72 ಕಿ.ಮೀ) ಮತ್ತು ಲಡಾಖ್‌ ಮ್ಯಾರಥಾನ್‌ (42 ಕಿ.ಮೀ.) ಎರಡರಲ್ಲೂ ಪೋಡಿಯಂ ಫಿನಿಶ್‌ ಮಾಡಿದ್ದಾರೆ. 2020ರ ಫೆಬ್ರುವರಿಯಲ್ಲಿ ಚಂಡಿಗಡದಲ್ಲಿ ನಡೆದ ಸ್ಪರ್ಧೆಯಲ್ಲಿ 12 ತಾಸುಗಳಲ್ಲಿ 112 ಕಿ.ಮೀ. ಕ್ರಮಿಸಿ ರಾಷ್ಟ್ರೀಯ ಶ್ರೇಷ್ಠ ಸಮಯದ ದಾಖಲೆ, 2019ರ ನವೆಂಬರ್‌ನಲ್ಲಿ 110 ಕಿ.ಮೀ ಮಲ್ನಾಡ್ ಅಲ್ಟ್ರಾ ಸ್ಪರ್ಧೆಯಲ್ಲಿ ಕೂಟ ದಾಖಲೆ ನಿರ್ಮಿಸಿದ್ದು ಅವರ ಪ್ರಮುಖ ಸಾಧನೆಗಳಾಗಿವೆ.

‘ಪತಿ ಸಂದೀಪ್ ಸತ್ಯನಾರಾಯಣ ಅವರ ಅಪಾರ ಬೆಂಬಲವೂ ನನ್ನ ಸಾಧನೆಗೆ ಕಾರಣ’ ಎಂದು ಅಶ್ವಿನಿ ಹೇಳುತ್ತಾರೆ.

ಕಠಿಣ ಅಭ್ಯಾಸ: ಮ್ಯಾರಥಾನ್ ಯಶಸ್ಸಿಗಾಗಿ ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಏಳುವ ಅಶ್ವಿನಿ, ವಾರದಲ್ಲಿ ಮೂರು ದಿನಗಳನ್ನು ಅಭ್ಯಾಸಕ್ಕೆ ಮೀಸಲಿಡುತ್ತಾರೆ. ದಿನಕ್ಕೆ 20 ರಿಂದ 30 ಕಿ.ಮೀ ಓಟದ ತಾಲೀಮು ನಡೆಸುತ್ತಾರೆ.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಂದು (ಶನಿವಾರ) ಮತ್ತು ನಾಳೆ ನಡೆಯಲಿರುವ ಏಷ್ಯಾ ಒಷಿಯಾನಿಯಾ ಚಾಂಪಿಯನ್‌ಷಿಪ್‌ನಲ್ಲಿ ಅವರು ಪಾಲ್ಗೊಳ್ಳಲಿದ್ದು, ಉತ್ತಮ ಸಾಮರ್ಥ್ಯ ತೋರುವ ಹಂಬಲದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT