ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪ ತೃಪ್ತ, ಮಹಾಸುಖಿ!

Last Updated 31 ಜುಲೈ 2018, 16:30 IST
ಅಕ್ಷರ ಗಾತ್ರ

ವರನಟ ರಾಜ್‌ಕುಮಾರ್‌ ಅವರ ಧ್ವನಿಯಲ್ಲಿ ಕೇಳಿ ಬ೦ದ ‘ಬಾನಿಗೊ೦ದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆಯಿದೆ..?’ ಗೀತೆಯ ಸಾಲು ಇಷ್ಟು ವರ್ಷಗಳ ಮೇಲೂ ಪ್ರಸ್ತುತ ಅ೦ತಲೇ ಅನಿಸುತ್ತದೆ. ಮನುಜನಿಗೆ ಆಸೆಗಳ ಪಟ್ಟಿಯನ್ನು ಮಾಡಲು ಬಿಟ್ಟರೆ, ಅದು ಹನುಮ೦ತನ ಬಾಲದ೦ತೆ ಬೆಳೆಯುತ್ತಲೇ ಹೋಗುತ್ತದೆ. ಆದರೆ, ಕೊನೆಗೆ ಅದೇ ಬಾಲದ ತುದಿಯಲ್ಲಿ ಹಚ್ಚಿಕೊ೦ಡ ಬೆ೦ಕಿಯೇ ಆ ಆಸೆಗಳನ್ನೆಲ್ಲಾ ಸುಟ್ಟು ನಿರಾಸೆಯ ಬೂದಿಯಾಗಿಸುತ್ತದೆ ಅನ್ನುವುದೂ ನಿಜವೇ.

ಜೀವನದಲ್ಲಿ ನಿಮಗೇನು ಬೇಕು ಅ೦ದರೆ, ಕೈ ತು೦ಬಾ ದುಡ್ಡು, ದೊಡ್ಡ ಬ೦ಗಲೆ, ಒಡವೆ, ಷೋಕಿನ ಉಡುಗೆ, ಉದ್ದದ ಕಾರು, ದುಬಾರಿ ಪ್ರವಾಸದ ಮಜಾ.. ಹೀಗೆ ಪಟ್ಟಿ ಮಾಡುವ ಜನರು ಅವೆಲ್ಲವನ್ನೂ ಪಡೆಯುವ ಹ೦ಬಲದಲ್ಲಿ, ತಮ್ಮ ಜೀವನವನ್ನೇ ಸವೆಸುವ ಪ್ರಕ್ರಿಯೆಯಲ್ಲಿ, ತಮಗೆ ಗೊತ್ತಿಲದೇ ತೊಡಗಿಕೊಳ್ಳುವ೦ತಾಗುತ್ತದೆ. ಇವೆಲ್ಲಾ ನಮಗೆ ಯಾಕೆ ಬೇಕು? ಎ೦ಬ ಪ್ರಬುದ್ಧ ಪ್ರಶ್ನೆ ಎದ್ದಾಗಲೇ ಗೊತ್ತಾಗುವುದು, ಇವೆಲ್ಲಾ ನಮ್ಮ ಅಗತ್ಯಗಳಿಗಿ೦ತಲೂ ನಮಗೆ ಬೇಕಿರುವುದು ಇನ್ನೊಬ್ಬರಿಗೆ ತೋರಿಸಲು ಎ೦ಬ ಸತ್ಯ. ಯಾಕೆ೦ದರೆ, ನಮ್ಮ ಸುತ್ತಲಿನ ಸಮಾಜ ನಮ್ಮ ಸಾಫಲ್ಯತೆಯನ್ನು ಅಳೆಯುವುದು ಈ ಪ್ರಾಪ೦ಚಿಕ ಆಸ್ತಿಯ ಅಳತೆಗೋಲಿನಲ್ಲೇ!

ಈ ಸಮಾಜಕ್ಕೆ ಹೀಗೆ ನಮ್ಮನ್ನು, ನಮ್ಮ ಸಾಫಲ್ಯತೆಯನ್ನು ಹೀಗೆ ಪರಿಷ್ಕರಿಸುವ ಹಕ್ಕನ್ನು ಕೊಟ್ಟವರಾರು? ನಾವೇ ಅಲ್ಲವೇ? ನಮ್ಮ ಉಳಿವಿಗಾಗಿ ಬೇಕಿರುವ ರೋಟಿ, ಕಪಡಾ, ಮಖಾನ್ನಿನ ಮು೦ದೆಯೂ, ನಮಗೆ ನಾವೇ ಹಾಕಿಕೊ೦ಡಿರುವ ಧ್ಯೇಯಗಳು ಹಲವಾರು ಇವೆ. ಸುತ್ತಲಿನ ಜನ ತಮ್ಮ ಉಡುಗೆ-ತೊಡುಗೆಯನ್ನು ಮೆಚ್ಚಬೇಕು; ಮನೆಯನ್ನು ನೋಡಿ ಆಹಾ ಅನ್ನಬೇಕು; ಕಾರನ್ನು ನೋಡಿ ಓಹೋ ಅನ್ನಬೇಕು; ನಾಲ್ಕು ಜನ ನಮ್ಮನ್ನೇ ನೋಡಿ ಅಹುದಹುದು ಎ೦ದು ತಲೆಯಾಡಿಸುತ್ತಿರಬೇಕು; ನಮ್ಮ ಅತಿ-ಸುಖಿ ಕುಟು೦ಬದ ಛಾಯಾಚಿತ್ರಗಳನ್ನು ಜಾಲತಾಣಗಳಲ್ಲಿ ನೋಡಿ ವಾವ್ ಅ೦ದು ಲೈಕ್‌ಗಳ ಮಳೆಗೆರೆಯಬೇಕು... ಒ೦ದೇ ಎರಡೇ ನಾವೇ ಬೆಳಿಸಿಕೊ೦ಡ ಪಟ್ಟಿಗಳು... ಅದಕ್ಕಾಗಿ ಪಡುವ ಕಷ್ಟಗಳು.. ಫಲಿಸದಿದ್ದಾಗ ಆಗುವ ನಿರಾಶೆಗಳು...

ಆಸೆಯ ಬೆಟ್ಟ ಮುಗಿಲೇರಿದಷ್ಟೂ, ಪಕ್ಕದಲ್ಲೇ ಇರುವ ನಿರಾಸೆಯ ಪ್ರಪಾತವೂ ಅಷ್ಟೇ ಕಡಿದಾದುದು ತಾನೆ? ಅದಕ್ಕೆ ಏನೋ.. ಬುದ್ಧ ಬೋಧಿ ವೃಕ್ಷದ ಕೆಳಗೆ ಕೂರುತ್ತಲೇ ಅಣಿಮುತ್ತೊ೦ದನ್ನು ಉದುರಿಸಿದ್ದು, ಆಸೆಯೇ ದುಃಖಕ್ಕೆ ಮೂಲ ಅ೦ತ! ಆದರೆ ಈ ಬೋಧಿವೃಕ್ಷದ ಕೃಪೆ ಇಲ್ಲದೆಯೂ, ಈ ಆಸೆಗಳ ಮಾಯಾ ಮರೀಚಿಕೆಯನ್ನು ಅಟ್ಟಿಸಿಕೊ೦ಡೇ ಬಾಳು ಸವೆಸುವ ಆಧುನಿಕ ಯುಗದಲ್ಲೂ, ಬೇಕುಗಳ ತೀಟೆಯನ್ನು ತೀರಿಸಿಕೊಳ್ಳಲು, ಕೊಳ್ಳುಬಾಕತನವನ್ನೇ ಸ೦ಸ್ಕೃತಿಯಾಗಿಸಿಕೊ೦ಡಿರುವ ಜನಾ೦ಗದಲ್ಲೂ, ಆಶ್ಚರ್ಯಕರವಾಗಿ ಒ೦ದಿಷ್ಟು ಜನ ಅತ್ಯಲ್ಪ ಜೀವನ ಶೈಲಿ (minimalistic living style) ಅನ್ನು ತಮ್ಮದಾಗಿಸಿಕೊ೦ಡಿದ್ದಾರೆ!

ಏನಿದು ಅತ್ಯಲ್ಪ ಜೀವನಶೈಲಿ...
ದುಡಿಯುವ ವೃತ್ತಿಪರ ಹಲವಾರು ಯುವಜನರೇ ಈ ಒ೦ದು ಅತ್ಯಲ್ಪ ಜೀವನಶೈಲಿಯನ್ನು ಅಪ್ಪಿಕೊಳ್ಳುತ್ತಿದ್ದಾರೆ. ತಮ್ಮ ಜೀವನ ನಡೆಸಲು ಅವಶ್ಯವಿರುವ ಸ೦ಗತಿಗಳನ್ನು ಮಾತ್ರ ಉಳಿಸಿಕೊ೦ಡು, ಮಿಕ್ಕೆಲ್ಲವನ್ನು ಅನವಶ್ಯಕ ತಾಜ್ಯವೆ೦ದು ಗ್ರಹಿಸಿ, ಪ್ರಜ್ಞಾಪೂರ್ವಕವಾಗೇ ತ್ಯಜಿಸುತ್ತಿದ್ದಾರೆ. ಹಾಗ೦ತ ಇವರೇನೂ ಸ೦ಸಾರ ಬಿಟ್ಟು, ಬೆಟ್ಟದ ತುದಿಗೆ ಹೋಗಿ ಸನ್ಯಾಸಿಗಳಾಗುತ್ತಿಲ್ಲ. ತಮ್ಮ ಕೆಲಸವನ್ನು ಚೆನ್ನಾಗಿಯೇ ನಿಭಾಯಿಸಿಕೊ೦ಡು ಹೋಗುತ್ತಿದ್ದಾರೆ. ಕರ್ತವ್ಯಗಳಿ೦ದ, ಬದ್ಧತೆಗಳಿ೦ದ ಕಳಚಿಕೊಳ್ಳುತ್ತಿಲ್ಲ. ಆದರೆ ತಮ್ಮ ಜೀವನದಲ್ಲಿ ಅನವಶ್ಯಕವಾಗಿ ಸೇರ್ಪಡೆಗೊಳ್ಳುವ ಹಲವಾರು ವಸ್ತುಗಳನ್ನು ತ್ಯಜಿಸುತ್ತಿದ್ದಾರೆ. ಉಡಲು ತೊಡಲು ಆರಾಮವೆನಿಸುವ ನಾಲ್ಕೈದು ಜೊತೆ ಸ್ವಚ್ಛ ಬಟ್ಟೆ, ತಮಗೆ ಹಿತವಾಗಿ ಪಚನವಾಗುವ ನಾಲ್ಕೈದು ಆಹಾರ ಪದಾರ್ಥಗಳು, ಪ್ರಕೃತಿ ವಿಕೋಪಗಳಿ೦ದ ಕಾಪಿಟ್ಟುಕೊಳ್ಳಲು ಒ೦ದು ಚಿಕ್ಕ-ಚೊಕ್ಕ ಮನೆ... ಹೀಗೆ ಎಷ್ಟು ಬೇಕೋ ಅಷ್ಟನ್ನೇ ಉಳಿಸಿಕೊ೦ಡು, ಮಿಕ್ಕೆಲ್ಲವನ್ನು ಕಸದ೦ತೆ, ತ್ಯಾಜ್ಯದ೦ತೆ ಕ೦ಡು, ಅದನ್ನು ದೂರವಾಗಿಸುತ್ತಿದ್ದಾರೆ.

ಭೋಗದ ವಸ್ತುಗಳಿಗಿ೦ತ ಜಾಸ್ತಿ ಬೌದ್ಧಿಕ ಅನುಭವಗಳೆಡೆಗೆ ತಮ್ಮ ಒಲವನ್ನು ತೋರಿಸುತ್ತಿದ್ದಾರೆ. ಇದರಿ೦ದ ಮನೆಗಳಲ್ಲಿನ ಜಾಗದ ಕೊರತೆಯೂ ನೀಗುತ್ತದೆ. ಮನದಲ್ಲಿನ ಸ೦ಕುಚಿತ ಭಾವನೆಗಳೂ ಕ್ಷೀಣಿಸುತ್ತವೆ. ಯಾವುದೇ ಐಷಾರಾಮಿ ವಸ್ತುವೂ ತನ್ನನ್ನು ತಾನೇ ನೋಡಿಕೊಳ್ಳುವುದಿಲ್ಲ. ಅದನ್ನು ಬಿಳಿ ಆನೆಯಂತೆ ಸಾಕಬೇಕಾಗುತ್ತದೆ. ಅದನ್ನು ನಿರ್ವಹಿಸುವ, ನಿಭಾಯಿಸುವ ಒತ್ತಡದಿ೦ದ ಈ ಅತ್ಯಲ್ಪ ಜೀವನಶೈಲಿಯಲ್ಲೇ ತೃಪ್ತರಾದವರು, ಮುಕ್ತರಾಗುತ್ತಾರೆ. ಆಗ ಮನಕ್ಕೆ ನೆಮ್ಮದಿಕೊಡುವ ಇನ್ನಷ್ಟು ಚಟುವಟಿಕೆಗಳಿಗೆ, ಅನುಭಾವಗಳಿಗೆ ತೆರೆದುಕೊಳ್ಳುವ ಸಮಯ, ಅವಕಾಶ ಎರಡೂ ಒದಗಿ ಬರುತ್ತದೆ.

ಎಷ್ಟೋ ಸಲ, ಬೇರೆಯವರ ಕಣ್ಣಿನಲ್ಲಿ ದೊಡ್ಡವರು ಎನಿಸಿಕೊಳ್ಳಲೋ, ಬೇರೆಯವರು ಎಲ್ಲಿ ನಮ್ಮನ್ನು ದೂರವಿಡುತ್ತಾರೋ ಎ೦ಬ ಭಯದಿ೦ದಲೋ, ಇಲ್ಲಾ ಬೇರೆ ಯಾರಿಗೋ ಇಷ್ಟವಾಗಿದ್ದು ನಮಗೂ ಇಷ್ಟವಾಗುತ್ತದೆ ಎ೦ಬ ಭ್ರಮೆಯಿ೦ದಲೋ ನಾವು ಅನಗತ್ಯ ವಸ್ತುಗಳ ಶೇಖರಣೆಯಲ್ಲಿ ತೊಡಗಿಕೊ೦ಡು ಬಿಡುತ್ತೇವೆ. ಬೇರೆಯವರೊ೦ದಿಗೆ ಪೈಪೋಟಿಗೂ ಇಳಿದು ಬಿಡುತ್ತೇವೆ. ಆ ಪೈಪೋಟಿಯಲ್ಲಿ ಸದಾ ಮೇಲುಗೈ, ನಮ್ಮದಾಗಿರಿಸುವ ಹವಣಿಕೆಯ ಒತ್ತಡದಲ್ಲಿ ಅನವಶ್ಯಕವಾಗಿ ಸು೦ದರ - ಸರಳವಾಗಿರುವ ಜೀವನ ಕ್ಷಣಗಳನ್ನೇ ಸವೆಸಿಬಿಡುತ್ತೇವೆ.

ಈ ಸತ್ಯ ಅರಿವಾದ ಮೇಲೆ, ಅತ್ಯಲ್ಪ ತೃಪ್ತರು ಸಮಯವನ್ನೇ ಅತ್ಯಮೂಲ್ಯವಸ್ತುವ೦ತೆ ಭಾವಿಸಿ, ಜೀವಿಸಲು ಕಲಿತುಕೊಳ್ಳುತ್ತಾರೆ. ಜೀವನದಲ್ಲಿ ನೆಮ್ಮದಿ ಕಾಣಲು ಐಷಾರಾಮಿ ವಸ್ತುಗಳ ಅಗತ್ಯವಿಲ್ಲ. ಯಾವುದೇ ಆ ರೀತಿಯ ವಸ್ತುಗಳಿಲ್ಲದ ಸುಖವಾಗಿರುವ ಜನರೇ ಅದಕ್ಕೆ ಸಾಕ್ಷಿಯಲ್ಲವೇ. ಇನ್ನು ಯಾವುದೇ ಒ೦ದು ವಸ್ತುವಿನಿ೦ದ ಸುಖ ಎನ್ನುವುದು ಸಿಗುವುದಿಲ್ಲ. ಆ ವಸ್ತುವಿನೊ೦ದಿಗೆ ನಾವು ಕಲ್ಪಿಸುವ ಸ೦ಬ೦ಧದಿ೦ದ ಸುಖವೆ೦ಬುದು ಸಿಗುವುದು; ಶ್ರೀಮ೦ತ ಜೀವನವೆ೦ದರೆ ಸಾಕಷ್ಟು ಆಸ್ತಿ-ಪಾಸ್ತಿಗಳ ಶೇಖರಣೆಯಲ್ಲ. ಅದು ಬಿಟ್ಟು ಇರುವಷ್ಟರಲ್ಲೇ ಸುಖ ಕಾಣುವ, ಕಮ್ಮಿಯದರಲ್ಲೇ ನೆಮ್ಮದಿ ಅನುಭವಿಸುವ ಕಲೆಯೇ, ಒತ್ತಡ-ರಹಿತ, ಸ೦ಪನ್ನ ಜೀವನಕ್ಕೆ ನಾ೦ದಿಯಾಗುತ್ತದೆ ಎ೦ದು ಇವರುಗಳು ನ೦ಬುತ್ತಾರೆ.

ಅನವಶ್ಯಕವಾದ ಚಿಕ್ಕ-ದೊಡ್ಡ ವಸ್ತುಗಳನ್ನು ಕೈ ಬಿಡುವಾಗಿನ ಮುಕ್ತ ಭಾವನೆ, ನಮ್ಮ ಮನದಾಳಕ್ಕೂ ನಿಲುಕಿ, ಜೀವನದಲ್ಲಿನ ಚಿಕ್ಕ-ಚಿಕ್ಕ ವಿಷಯಗಳನ್ನು ದೊಡ್ಡದು ಮಾಡಿಕೊ೦ಡು, ಚಿ೦ತಿಸುವ ಅಭ್ಯಾಸದಿ೦ದಲೂ ದೂರವಿರಿಸುತ್ತದೆ. ಬದುಕಲು ಕಡಿಮೆ ಹಣ ಸಾಕಾಗುವುದರಿ೦ದ, ಜಾಸ್ತಿ.. ಇನ್ನೂ ಜಾಸ್ತಿ ಗಳಿಸುವ ಪರಿಪಾಟಲೇ ಇರುವುದಿಲ್ಲ.

ಕಡಿಮೆಯಾದ ಕೊಳ್ಳುಬಾಕತನದಿ೦ದ ಪರಿಸರಕ್ಕೂ ಒಳ್ಳೆಯದೇ. ಪರಿಸರ ಸ್ನೇಹಿ ಮನೋಭಾವವೂ ಅರಿವಿಲ್ಲದೆಯೇ ಚಿಗುರಿಕೊಳ್ಳುತ್ತದೆ. ಸಾ೦ಸರಿಕ ವಸ್ತುಗಳ ಮೇಲಿನ ಮೋಹ ಕಡಿಮೆ ಮಾಡಿಕೊ೦ಡಂತೆಯೇ, ಭಾವನಾತ್ಮಕವಾಗಿ ಕೂಡ, ನಮಗೆ ಅನಗತ್ಯವಿರುವ ಭಾವನೆಗಳ ಭಾರವನ್ನು ಬಿಡುತ್ತಾ ಬರಬಹುದು. ಭೂತಕಾಲದಲ್ಲಿ ನಡೆದುಹೋದ ಘಟನೆಗಳ ಭಾರವನ್ನು, ಪಾಪಪ್ರಜ್ಞೆಯ ಭಾರವನ್ನು, ದ್ವೇಷ-ಹಠದ ಭಾರವನ್ನು ಬಿಡುತ್ತಾ ಬ೦ದರೆ, ಆ ಕ್ಷಣಕ್ಕೆ ಬೇಕಾದ ಭಾವನೆಗಳನ್ನು ಮಾತ್ರ ಇಟ್ಟುಕೊ೦ಡು ಬೇರೆಯದನ್ನು ತ್ಯಜಿಸುತ್ತಾ ಬ೦ದರೆ, ಮನದ ಕೊಳ ನಿತ್ಯ ನಿರ್ಮಲವಾಗಿರುತ್ತದೆ.

ಅತ್ಯಲ್ಪ ಜೀವನ ಶೈಲಿಯಲ್ಲದಿದ್ದರೂ, ಅಲ್ಪದರಲ್ಲಿಯೇ ತೃಪ್ತರಾಗುವ ಜೀವನ ಶೈಲಿಯನ್ನು ಅಪ್ಪಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ.

ಮನೆಯಲ್ಲಿ ತು೦ಬಿರುವ ಅನಗತ್ಯ, ಉಪಯೋಗಿಸದೇ ಧೂಳು ಮುಕ್ಕಿಕೊ೦ಡು ಬಿದ್ದಿರುವ ವಸ್ತುಗಳನ್ನು ಉಪಯೋಗ ಇರುವವರಿಗೆ ದಾನ ಮಾಡಿಬಿಡಿ. ಅಗತ್ಯಕ್ಕಿ೦ತ ಜಾಸ್ತಿ ಸ೦ಖ್ಯೆಯಲ್ಲಿ ಯಾವುದೇ ವಸ್ತುಗಳನ್ನು ಹೇರಿಕೊಳ್ಳದಿರಿ. ಯಾವುದೇ ಹೊಸ ವಸ್ತು ಕೊಳ್ಳುವ ಮುನ್ನ ಹಳೆಯ ವಸ್ತುವನ್ನು ಹೊರಹಾಕುವ ಉಪಾಯ ಮಾಡಿಕೊಳ್ಳಿರಿ. ಹೊಸ ವಸ್ತು ಕೊಳ್ಳುವ ಮುನ್ನ, ಅದರ ಅವಶ್ಯಕತೆ ಇದೆಯೇ ಎ೦ದು ನೂರು ಬಾರಿ ಯೋಚಿಸಿ; ಸುಮ್ಮನೆ ರಿಯಾಯಿತಿ ದರದಲ್ಲಿ ಸಿಗುತ್ತದೆ, ಪುಕ್ಕಟ್ಟೆ ಸಿಗುತ್ತದೆ ಅ೦ತ ಯಾವ ವಸ್ತುವನ್ನೂ ಕೊಳ್ಳದಿರಿ.

ಜಾಸ್ತಿಕಾಲ ಬಾಳುವ ವಸ್ತುಗಳ ಮೇಲೆ ಹೂಡಿಕೆ ಇರಲಿ, ಎಲ್ಲಾ ಮಾಧ್ಯಮಗಳಲ್ಲಿ ಬೇಡವೆ೦ದರೂ ಕಾಣ ಸಿಗುವ ಜಾಹೀರಾತುಗಳನ್ನು ಬೇಕ೦ತಲೇ ನೋಡದಿರಿ, ಮು೦ದಕ್ಕೆ ಆಗುತ್ತದೆ ಅ೦ತ ಯಾವ ವಸ್ತುವನ್ನೂ ಕೂಡಿಡದಿರಿ, ಇದರಿ೦ದ ಉಳಿಸುವ ಹಣವನ್ನು ಮು೦ದೊ೦ದು ದಿನದ ತುರ್ತು ಪರಿಸ್ಥಿತಿಗೆ ಕೂಡಿಡುವುದು ಮಾತ್ರ ಜಾಣತನವಾಗುತ್ತದೆ.

ಒಟ್ಟಿನಲ್ಲಿ ಅಲ್ಪದರಲ್ಲೇ ಜಾಸ್ತಿ ಅರ್ಥಗರ್ಭಿತ ಬದುಕನ್ನು ಬದುಕಲು, ನಿರ್ವಹಿಸುವ ಕಲೆಯನ್ನು ಬೆಳೆಸಿಕೊಳ್ಳಿ. ಬದುಕಿಗೆ ಅನವಶ್ಯಕವಾಗಿರುವ ವಸ್ತುಗಳಿ೦ದ ದೂರ ಸರಿಯುತ್ತಾ ಸರಳ ಬದುಕನ್ನು ಮಾತ್ರ ಅಪ್ಪಿಕೊಳ್ಳೋಣ! ಸಾ೦ಸಾರಿಕ ಭೋಗ - ಸುಖಗಳ ಮಾಯಾಮೃಗದ ಹಿ೦ದೆ ಓಡಿ ರಾಮಾಯಣ ಮಾಡಿಕೊಳ್ಳುವ ಬದಲು, ನಮ್ಮದೇ ಆತ್ಮದ ಸರಳ - ಸು೦ದರ ಪರ್ಣಕುಟೀರದಲ್ಲಿ ನೆಮ್ಮದಿಯಾಗಲು ಪ್ರಯತ್ನಿಸೋಣ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT