ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಣಸಗಿ | ವೈದ್ಯಕೀಯ ಕನಸು; ನೀಟ್‌ನಲ್ಲಿ ಗ್ರಾಮೀಣ ಮಕ್ಕಳಿಗೆ ಯಶಸ್ಸು

Published 6 ಜೂನ್ 2024, 5:30 IST
Last Updated 6 ಜೂನ್ 2024, 5:30 IST
ಅಕ್ಷರ ಗಾತ್ರ

ಹುಣಸಗಿ: ತಾಲ್ಲೂಕಿನ ಗ್ರಾಮೀಣ ಭಾಗದ ಪ್ರತಿಭೆಗಳು ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಯಾದಗಿರಿ ಜಿಲ್ಲೆ ಹಾಗೂ ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ.

ಹುಣಸಗಿ ತಾಲ್ಲೂಕಿನ ಮಂಜಲಾಪುರಹಳ್ಳಿ ಗ್ರಾಮದಲ್ಲಿ ಚಹಾ ಅಂಗಡಿಯ ಹಣಮಂತ್ರಾಯ ಮೇಟಿ ಅವರ ಮಗ ಅಭಿನಂದ್‌ 720ಕ್ಕೆ 548 ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾನೆ.

ಅಭಿನಂದ ಪ್ರಾಥಮಿಕ ಶಿಕ್ಷಣವನ್ನು ಮಂಜಲಾಪುರಹಳ್ಳಿ ಸರ್ಕಾರಿ ಶಾಲೆ, ಪ್ರೌಢಶಿಕ್ಷಣವನ್ನು ಎಸ್.ಕೆ. ಶಾಲೆಯಲ್ಲಿ ಅಭ್ಯಾಸ ಮಾಡಿ ಪಿಯುಸಿಯನ್ನು ವಿಜಯಪುರ ಜಿಲ್ಲೆ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ ವಿಜ್ಞಾನ ಕಾಲೇಜಿನಲ್ಲಿ ಅಭ್ಯಾಸ ಮಾಡಿದ್ದಾರೆ.

‘ತಂದೆ ಗ್ರಾಮದಲ್ಲಿ ಚಹಾ ಅಂಗಡಿ ನಡೆಸಿಕೊಂಡು ಹೋಗುತ್ತಿದ್ದುದರಿಂದ ಸಾಧನೆ ಮಾಡಬೇಕು ಎಂಬ ಗುರಿಯೊಂದಿಗೆ ಸತತ ಅಭ್ಯಾಸ ಮಾಡಿ ಎಸ್ಎಸ್ಎಲ್‌ಸಿಯಲ್ಲಿ ಶೇ 98 ಹಾಗೂ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 96.6 ಅಂಕ ಪಡೆದೆ ಎಂದ ಅಭಿನಂದ ವೈದ್ಯನಾಗುವ ಬಯಕೆ ವ್ಯಕ್ತಪಡಿಸಿದರು. ಅಭಿನಂದ್ ನೀಟ್‌ ಪಾಸಾದ ಮಂಜಲಾಪುರದ ಗ್ರಾಮದ ಮೊದಲ ವಿದ್ಯಾರ್ಥಿ ಎಂದು ಪರಮಣ್ಣ ನೀಲಗಲ್ಲ ತಿಳಿಸಿದರು.

ಇನ್ನು ಹುಣಸಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿವರೆಗೆ ಅಭ್ಯಾಸ ಮಾಡಿದ್ದ ಏದಲಬಾವಿ ತಾಂಡಾದ ವಿದ್ಯಾರ್ಥಿ ಚಂದ್ರಕಾಂತ ಶಂಕ್ರಪ್ಪ ಜಾಧವ ಪ್ರಾಥಮಿಕ ಶಿಕ್ಷಣವನ್ನು ತಾಂಡಾದ ಶಾಲೆಯಲ್ಲಿಯೇ ಕಲಿತು ತಾಳಿಕೋಟೆಯ ಭಾಗ್ಯವಂತಿ ಪಿಯುಸಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ 97 ಅಂಕಗಳಿಸಿದ್ದಾನೆ. ಗಣಿತ ಹಾಗೂ ಜೀವಶಾಸ್ತ್ರದಲ್ಲಿ ಶೇ 100 ಅಂಕಗಳಿಸಿದ್ದಾನೆ. ನೀಟ್ ಪರಿಕ್ಷೆಯಲ್ಲಿ 720ಕ್ಕೆ 498 ಅಂಕ ಪಡೆದಿದ್ದಾನೆ.

ಒಂದು ಎಕರೆ ಹೊಲದಲ್ಲಿ ಕೃಷಿ ಮಾಡಿಕೊಂಡಿರುವ ರಾಜವಾಳ ತಾಂಡಾದ ಕಾಶಿರಾಮ ಹಾಗೂ ದೇವಿಬಾಯಿ ಪುತ್ರ ಪ್ರವೀಣ ಕುಮಾರ ಕೂಡಾ ಸರ್ಕಾರಿ ತಾಂಡಾದ ಶಾಲೆಯಿಂದಲೇ ಬಂದ್ದದ್ದು ವಿಶೇಷ. ಪ್ರವೀಣ ಕುಮಾರ ಪಿಯುಸಿಯಲ್ಲಿ ಭೌತಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರದಲ್ಲಿ ಶೇ 100 ಅಂಕಗಳಿಸಿದ್ದಾನೆ. ನೀಟ್ ಪರಿಕ್ಷೆಯಲ್ಲಿ 720 ಕ್ಕೆ 620 ಅಂಕ ಗಳಿಸಿದ್ದಾನೆ. ಎಂಬಿಬಿಎಸ್ ಪೂರೈಸಿ ಎಂಡಿ ಮುಗಿಸುವವರೆಗೂ ಬೇರಾವ ಗುರಿಗಳು ನಮ್ಮ ಕಣ್ಣ ಮುಂದಿಲ್ಲ ಎಂದು ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.

ಚಂದ್ರಕಾಂತ ಮತ್ತು ಪ್ರವೀಣ ಹುಣಸಗಿಯ ಮೊರಾರ್ಜಿ ಶಾಲೆಯಲ್ಲಿ ಅಭ್ಯಾಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ಮಾಳನೂರು ಗ್ರಾಮದ ಅಲೆಮಾರಿ ಸುಡುಗಾಡು ಸಿದ್ಧ ಸಮುದಾಯಕ್ಕೆ ಸೇರಿದ ಬಡ ವಿದ್ಯಾರ್ಥಿ ಅಮೃತ ದೊಡ್ಡಮನಿ ನೀಟ್ ಪರಿಕ್ಷೆಯಲ್ಲಿ 720ಕ್ಕೆ 452 ಅಂಕ ಪಡೆದು ವೈದ್ಯನಾಗುವ ಕನಸಿನತ್ತ ಹೆಜ್ಜೆ ಹಾಕುತ್ತಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT