ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಪರೀಕ್ಷೆ: ಪೂರ್ವ ಸಿದ್ಧತೆಯ ಆಯಾಮಗಳು

ಅಕ್ಷರ ಗಾತ್ರ

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶ ಸಾಧಿಸಲು ಯೋಜಿತ ಪೂರ್ವಸಿದ್ಧತೆಯೇ ಮುನ್ನುಡಿ. ಸಿದ್ಧತೆ ಇಲ್ಲದೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದೆಂದರೆ ಈಜು ಬಾರದವ ಸಮುದ್ರಕ್ಕೆ ಇಳಿದಂತೆ! ಹಾಗಾದರೆ, ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಯ ಆಯಾಮಗಳೇನು?

ಸ್ಪರ್ಧಾತ್ಮಕ ಓದು ಯಾವಾಗಿನಿಂದ?

ಕೆಲವು ಗ್ರೂಪ್‌ ಸಿ ಹುದ್ದೆಗಳನ್ನು ಹೊರತುಪಡಿಸಿ, ಬಹುತೇಕ ಹುದ್ದೆಗಳಿಗೆ ಪದವಿಯೇ ಕನಿಷ್ಠ ವಿದ್ಯಾರ್ಹತೆಯಾಗಿದೆ. ಈ ನಿಟ್ಟಿನಲ್ಲಿ ಪದವಿ ಓದುತ್ತಿರುವಾಗಲೇ ಕೆಲವರು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುತ್ತಾರೆ. ಆದರೆ, ಕಾಲೇಜು ಓದುತ್ತಿರುವಾಗ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮಾಡಿಕೊಳ್ಳುವುದು ಸೂಕ್ತವಲ್ಲ. ಪದವಿ ಹಂತದ ಪಠ್ಯಕ್ರಮ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾಗಿರುತ್ತದೆ. ಅದಕ್ಕಾಗಿ ಪದವಿಯಲ್ಲಿ ನಿಗದಿಪಡಿಸಿದ ಪಠ್ಯಕ್ರಮಕ್ಕೆ ಆದ್ಯತೆ ನೀಡುವುದು ಒಳ್ಳೆಯದು.

ಪದವಿ ನಂತರ ಸ್ನಾತಕೋತ್ತರ ಪದವಿ ಅಗತ್ಯವೇ?: ನಿಮ್ಮ ಗುರಿ ಐಎಎಸ್‌, ಐಪಿಎಸ್ ಅಥವಾ ಕೆಎಎಸ್‌ ಅಧಿಕಾರಿ ಆಗಬೇಕು ಎಂದಾಗಿದ್ದರೆ, ನಿಮ್ಮ ಇಷ್ಟದ ಸ್ನಾತಕೋತ್ತರ ಪದವಿ ಪಡೆಯುವುದು ಉತ್ತಮ. ನಿಮಗೆ ಉದ್ಯೋಗ ಅನಿವಾರ್ಯ ಎಂದಾಗಿದ್ದರೆ ಪದವಿ ನಂತರ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಮಾಡಿಕೊಳ್ಳುವುದು ಒಳಿತು.

ಅಧ್ಯಯನ ಸಾಮಗ್ರಿ ಆಯ್ಕೆ ಹೇಗೆ?

ಸ್ಪರ್ಧಾತ್ಮಕ ಪರೀಕ್ಷೆಯ ಓದಿಗೆ ಪುಸ್ತಕ, ಪತ್ರಿಕೆಗಳು ಹಾಗೂ ಆನ್‌ಲೈನ್‌ ಓದು ಅಗತ್ಯವಾಗಿವೆ. ಪುಸ್ತಕ, ಪತ್ರಿಕೆಗಳ ಖರೀದಿಗೂ ಮುನ್ನ- ಇತ್ತೀಚಿಗೆ ನಡೆದ ಪರೀಕ್ಷೆಗಳಲ್ಲಿ ಆ ಪುಸ್ತಕ, ಪತ್ರಿಕೆಗಳಿಂದ ಎಷ್ಟು ಪ್ರಶ್ನೆಗಳು ಬಂದಿವೆ ಎಂಬುದನ್ನು ಪರಿಶೀಲಿಸಿ, ನೀವು ಓದುವ ಆವೃತ್ತಿ ಪರಿಷ್ಕೃತ ಎಂಬುದನ್ನು ದೃಢೀಕರಿಸಿಕೊಳ್ಳಿ, ಅನ್ವಯಿಕ, ವಿಶ್ಲೇಷಣಾತ್ಮಕ ಪ್ರಶ್ನೆಗಳಿಗೆ ಅವು ಉತ್ತರ ಒದಗಿಸುತ್ತವೆಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಿ. ಪುಸ್ತಕ ಅಂಗಡಿ ಮಾಲೀಕರು ‘ಇದು ಉತ್ತಮ ಪುಸ್ತಕ’ ಎಂದ ಕೂಡಲೇ ಕಣ್ಮುಚ್ಚಿ ಖರೀದಿಸದಿರಿ. ವೆಬ್‌ ರೆಫರೆನ್ಸ್‌ಗೂ ಮುನ್ನ ತಜ್ಞರ, ಸಾಧಕರ ಮಾರ್ಗದರ್ಶನ ಪಡೆಯಿರಿ.

ಏಕಕಾಲದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಕರೆದಾಗ ಏನು ಮಾಡಬೇಕು?

ಎಫ್‌ಡಿಎ, ಪಿಎಸ್‌ಐ, ಟಿಇಟಿ, ಸಿಇಟಿ, ಸಿಟಿಇಟಿ, ಕೆಎಎಸ್‌, ಬ್ಯಾಂಕಿಂಗ್‌... ಹೀಗೆ ವಿವಿಧ ಪರೀಕ್ಷೆಗಳಿಗೆ ಏಕಕಾಲಕ್ಕೆ ಅರ್ಜಿ ಕರೆದಿದ್ದರೆ, ನಿಮ್ಮ ತಯಾರಿ, ಸಾಮರ್ಥ್ಯಕ್ಕೆ ಅನುಗುಣವಾಗಿ ಯಾವ ಪರೀಕ್ಷೆ ಎದುರಿಸಬೇಕು ಎಂಬ ನಿರ್ಧಾರ ಕೈಗೊಳ್ಳಬೇಕು. ಉದಾಹರಣೆಗೆ: ನೀವು ಬಿಇಡಿ ಪಾಸಾಗಿದ್ದರೆ ಟಿಇಟಿ, ಸಿಇಟಿ, ಸಿಟಿಇಟಿಗೆ ಆದ್ಯತೆ ನೀಡಬೇಕು, ದೈಹಿಕ ಕ್ಷಮತೆ ಹೊಂದಿದ್ದರೆ ಪಿಎಸ್‌ಐ ಪರೀಕ್ಷೆಗೆ ಒತ್ತು ಕೊಡಬೇಕು, ಮೊದಲ ಬಾರಿ ಕೆಎಎಸ್‌ಗೆ ಸಿದ್ಧರಾಗುತ್ತಿದ್ದರೆ ಎಫ್‌ಡಿಎ ಪರೀಕ್ಷೆ ಎದುರಿಸುವುದು ಒಳಿತು.

ಪಠ್ಯಕ್ರಮಕ್ಕೆ ಅನುಗುಣವಾಗಿ ಓದಿ

ನಿಮ್ಮ ಓದು ಪಠ್ಯಕ್ರಮವೆಂಬ ಪಥದ ಮೇಲೆಯೇ ಸಾಗಬೇಕು. ಉದಾಹರಣೆಗೆ: ಪ್ರಚಲಿತ ವಿದ್ಯಮಾನ ಹಾಗೂ ಸಾಮಾನ್ಯ ಅಧ್ಯಯನಕ್ಕೆ ಸಂಬಂಧಿಸಿ ಇತಿಹಾಸ, ಭೂಗೋಳ, ವಿಜ್ಞಾನ-ತಂತ್ರಜ್ಞಾನ, ಬೇಸಿಕ್‌ ಕಂಪ್ಯೂಟರ್‌, ಸಂವಿಧಾನ ಮತ್ತು ರಾಜಕೀಯ, ಅರ್ಥಶಾಸ್ತ್ರ, ಕಲೆ- ಸಾಹಿತ್ಯ- ಸಂಗೀತ ಸಾಧಕರ ವಿಶೇಷತೆ, ಸ್ಥಳ ವಿಶೇಷತೆ, ಆವಿಷ್ಕಾರಗಳ ಸಾಂಪ್ರದಾಯಿಕ ಹಾಗೂ ಸಮಕಾಲೀನ ವಿದ್ಯಮಾನಗಳನ್ನು ಅರಿತುಕೊಳ್ಳಬೇಕು.

ಅಗತ್ಯ ದಾಖಲೆ ಪತ್ರಗಳನ್ನು ಹೊಂದಿರಬೇಕು: ಆಯಾ ಪರೀಕ್ಷೆಗೆ ಸಂಬಂಧಪಟ್ಟಂತೆ ಅಗತ್ಯವಾದ ಎಲ್ಲ ದಾಖಲೆ ಪತ್ರಗಳನ್ನು ಅರ್ಜಿ ಹಾಕುವ ಕೊನೆಯ ದಿನಾಂಕದೊಳಗೆ ಹೊಂದಿರಲೇಬೇಕು. ಅರ್ಜಿ ಹಾಕಿದ ನಂತರದ ದಿನಾಂಕದ ದಾಖಲೆ ಪತ್ರಗಳು ಅಸಿಂಧುವಾಗುತ್ತವೆ.

ಕೆಲಸ ಮಾಡುವುದು ಅನಿವಾರ್ಯವಾಗಿದ್ದರೆ.. :

ಪದವಿ ನಂತರ ಸೂಕ್ತ ತರಬೇತಿ ಪಡೆದು ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಆರಂಭಿಸುವುದು ಒಳ್ಳೆಯದು. ಆದರೆ, ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇದ್ದರೆ, ಅರೆಕಾಲಿಕ ಉದ್ಯೋಗ ಮಾಡುತ್ತ ಅಧ್ಯಯನ ಮುಂದುವರಿಸಬಹುದು. ಇಲ್ಲಿ ಓದು ಮೊದಲ ಆದ್ಯತೆ ಆಗಿರಬೇಕು.

(ಲೇಖಕರು: ನಿರ್ದೇಶಕರು, ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT