ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿ ಆರ್ಟ್ಸ್ ಮತ್ತು ಕಾಮರ್ಸ್: ಜೀವನ ಕೌಶಲ‌ ದುಡಿಮೆಗೆ ರಹದಾರಿ

Last Updated 12 ಮಾರ್ಚ್ 2023, 22:30 IST
ಅಕ್ಷರ ಗಾತ್ರ

‍ಪಿಯುಸಿ- ಕಲಾ ವಿಭಾಗದಲ್ಲಿ 35, ವಾಣಿಜ್ಯ ವಿಭಾಗದಲ್ಲಿ ಒಂಬತ್ತು ವಿಷಯ ಸಂಯೋಜನೆಗಳಿವೆ (ಕಾಂಬಿನೇಷನ್‌). ಎರಡೂ ವಿಭಾಗದಲ್ಲಿ ಕೋರ್ಸ್‌ಗಳನ್ನು ಪೂರೈಸಿದವರಿಗೆ ಸಾಕಷ್ಟು ಉದ್ಯೋಗಾವಕಾಶಗಳೂ ಇವೆ. ಈ ವಿಭಾಗಗಳಲ್ಲಿನ ಕೋರ್ಸ್‌ಗಳು ಜೀವನದ ಕೌಶಲ ಕಲಿಸುವ ಜೊತೆಗೆ, ದುಡಿಮೆಗೂ ದಾರಿತೋರಿಸುತ್ತವೆ...

ಎಸ್ಸೆಸ್ಸೆಲ್ಸಿ ನಂತರ ಮುಂದೇನು? ಎಂಬ ವಿಷಯದ ಕುರಿತು ಪ್ರೌಢಶಾಲೆ ಯೊಂದರಲ್ಲಿ ಉಪನ್ಯಾಸ ನೀಡುತ್ತಿದ್ದೆ. ಪಿಯುಸಿಯಲ್ಲಿರುವ ವಿಷಯ ಸಂಯೋಜನೆ ಕೋರ್ಸ್‌ಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದೆ. ಒಬ್ಬ ವಿದ್ಯಾರ್ಥಿನಿ ‘ವಿಜ್ಞಾನದ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆಗಳಿದ್ದಂತೆ, ಕಾಮರ್ಸ್‌, ಆರ್ಟ್ಸ್‌ ಓದುವವರಿಗೆ ಯಾವ ಪ್ರವೇಶ ಪರೀಕ್ಷೆಗಳಿರುತ್ತವೆ? ಎಂದು ಕೇಳಿದಳು. ಇನ್ನೊಬ್ಬ ವಿದ್ಯಾರ್ಥಿ, ‘ಪಾಲಿಟಿಕ್ಸ್‌ ಓದಬೇಕು, ಅದಕ್ಕೆ ಯಾವ ಕೋರ್ಸ್‌, ಕಾಂಬಿನೇಶನ್ ಸೇರಬೇಕು?’ ಎಂದು ಕೇಳಿದ. ಅಷ್ಟರಲ್ಲಿ ಶಿಕ್ಷಕರೊಬ್ಬರು ನನ್ನದೂ ಒಂದು ಪ್ರಶ್ನೆ ಇದೆ ಎನ್ನುತ್ತಾ ‘ಕಾಲೇಜುಗಳ ಜಾಹಿರಾತುಗಳಲ್ಲಿ ವಿಜ್ಞಾನದ ವಿದ್ಯಾರ್ಥಿಗಳ ಸಾಧನೆ, ಕಾಲೇಜಿನಲ್ಲಿರುವ ಸೈನ್ ಕಾಂಬಿನೇಶನ್, ಇಂಟೆಗ್ರೇಟೆಡ್ ಕೋಚಿಂಗ್ ಬಗ್ಗೆಯೇ ಇರುತ್ತದೆ. ಆರ್ಟ್ಸ್, ಕಾಮರ್ಸ್‌ಗೆ ವಿದ್ಯಾರ್ಥಿಗಳು ಸೇರುವುದೇ ಇಲ್ಲವೆ? ಅಥವಾ ಅವರ ಸಾಧನೆ ನಗಣ್ಯವೆ? ಎಂದು ಗಂಭೀರವಾದ ಪ್ರಶ್ನೆ ಮುಂದಿಟ್ಟರು.

ಇವೆಲ್ಲ ಸಹಜವಾಗಿ ಕೇಳಿಬರುವ ಪ್ರಶ್ನೆಗಳೇ. ಹಾಗೆಯೇ ಇವೆಲ್ಲಕ್ಕೂ ಉತ್ತರವಿದೆ. ಅಂದ ಹಾಗೆ, ಪ್ರತಿ ವರ್ಷ ವಿಜ್ಞಾನಕ್ಕಿಂತ, ಆರ್ಟ್ಸ್‌, ಕಾಮರ್ಸ್ ಓದುವವರ ಸಂಖ್ಯೆ ಎರಡರಷ್ಟು ಹೆಚ್ಚಿದೆ. ಹಾಗೆಯೇ, ಆರ್ಟ್ಸ್‌ನಲ್ಲಿ 35, ವಾಣಿಜ್ಯ ವಿಭಾಗದಲ್ಲಿ 9 ವಿಷಯ ಸಂಯೋಜನೆಗಳಿವೆ (ಕಾಂಬಿನೇಷನ್‌). ಎರಡನ್ನೂ ಕನ್ನಡ ಅಥವಾ ಆಂಗ್ಲ ಮಾಧ್ಯಮದಲ್ಲಿ ಓದಬಹುದು. ಪಿಯುಸಿ ನಂತರ ಪದವಿ ಸೇರಿ, ಸರ್ಕಾರಿ ಅಥವಾ ಖಾಸಗಿ ವಲಯಗಳಲ್ಲಿ ನೌಕರಿಗಳಿಸಬಹುದು ಅಥವಾ ಉನ್ನತ ಅಧ್ಯಯನಕ್ಕೆ ದಾಖಲಾಗಬಹುದು.

ವಿಶಾಲ ವೈವಿಧ್ಯದ ಕಲೆಯ ಅಲೆ

ಕಲಾ ವಿಭಾಗದಲ್ಲಿ ಸಮಾಜ ವಿಜ್ಞಾನ, ಇತಿಹಾಸ, ಶಿಕ್ಷಣ, ಮನಃಶಾಸ್ತ್ರ, ತರ್ಕಶಾಸ್ತ್ರ, ಅರ್ಥಶಾಸ್ತ್ರ, ಭೂಗೋಳ ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಐಚ್ಛಿಕ ಕನ್ನಡ ಹೀಗೆ ಒಟ್ಟು ಹನ್ನೊಂದು ವಿವಿಧ ವಿಷಯಗಳಿವೆ. ಭಾಷಾ ವಿಭಾಗದಲ್ಲಿರುವ 11 ಭಾಷೆಗಳ ಪೈಕಿ ಎರಡನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಭಾಗ – 1 ರಲ್ಲಿ ಇಂಗ್ಲಿಷ್ ಅಥವಾ ಯಾವುದಾದರೂ ಭಾಷೆಯ ಜೊತೆ ಕನ್ನಡ ಆಯ್ದುಕೊಂಡರೂ ಐಚ್ಛಿಕ ವಿಭಾಗದಲ್ಲಿ ಕನ್ನಡವನ್ನು ಮತ್ತೆ ಓದಬಹುದು. ಇದಕ್ಕೆ ಬೇರೆ ಪಠ್ಯಕ್ರಮ, ಪುಸ್ತಕ ಇರುತ್ತದೆ.

ಕಲಾ ವಿಭಾಗ ಓದುವ ವಿದ್ಯಾರ್ಥಿಗಳು ಪದವಿಯಲ್ಲಿ ಪಿಯುಸಿಯಲ್ಲಿ ಓದಿದ ವಿಷಯಗಳನ್ನೇ ಆಯ್ಕೆ ಮಾಡಿಕೊಂಡು ಮುಂದುವರಿಯಬಹುದು. ಪದವಿ ಶಿಕ್ಷಣ ಪೂರೈಸಿದ ಐಎಎಸ್, ಐಪಿಎಸ್, ಐಎಫ್‌ಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು ಇಲ್ಲವೆ ವಿಶ್ವ ವಿದ್ಯಾಲಯ ಗಳಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಬಹುದು.

ದುಡಿಮೆಯ ಅವಶ್ಯಕತೆ ಇರುವವರು ಬ್ಯಾಂಕ್, ಪೊಲೀಸ್‌ ಸೇವೆ, ಸೈನ್ಯ, ಪತ್ರಿಕೆ, ಟೆಲಿವಿಷನ್ ಮಾಧ್ಯಮಗಳಲ್ಲಿ ನಿಗದಿತ ಪ್ರವೇಶ ಪರೀಕ್ಷೆ ಬರೆದು, ಯಶಸ್ವಿಯಾಗಿ ಕೆಲಸಗಳಿಗೆ ಸೇರಬಹುದು. ರಾಜ್ಯಶಾಸ್ತ್ರ ಓದಿದವರಿಗೆ ರಾಜಕೀಯ ಪಕ್ಷಗಳು ‘ಇಂಟರ್ನ್‌ಷಿಪ್’ (ಉದ್ಯೋಗ ಪೂರ್ವ ತರಬೇತಿ) ನೀಡುತ್ತವೆ.

ಶಿಕ್ಷಣ ಕ್ಷೇತ್ರ ಪ್ರವೇಶಿಸುವವರು ಎರಡು ವರ್ಷದ ಬಿ.ಇಡಿ ತರಬೇತಿ ಪಡೆದು ಶಿಕ್ಷಕರಾಗಬಹುದು. ಪಿಯುಸಿ ನಂತರ ಪತ್ರಿಕೋದ್ಯಮದ ಡಿಪ್ಲೊಮಾ ಪೂರೈಸಿ ಪತ್ರಿಕೆ, ದೃಶ್ಯವಾಹಿನಿಗಳಲ್ಲಿ ಕೆಲಸ ಪಡೆಯಬಹುದು.

ಕಾನೂನು ವಿಷಯ ಓದಿ ಲಾಯರ್‌, ನೋಟರಿ, ಜಡ್ಜ್‌ ಆಗ ಬಯಸುವವರು ಪಿಯುಸಿ ನಂತರದ ಐದು ವರ್ಷಗಳ ಕಾನೂನು ಪದವಿ ಓದಬಹುದು. ಪದವಿ ಅಧ್ಯಯನದ ನಂತರ ಮೂರು ವರ್ಷಗಳ ಕಾನೂನು ಅಧ್ಯಯನಕ್ಕೆ ದಾಖಲಾಗಬಹುದು.

ಸಾಕಷ್ಟು ಉದ್ಯೋಗಗಳಿವೆ..

‘ಆರ್ಟ್ಸ್‌ ಓದಿದವರಿಗೆ ಉದ್ಯೋಗವಕಾಶಗಳು ಕಡಿಮೆ’ ಎನ್ನುವುದು ಅರ್ಧ ಮಾಹಿತಿಯಷ್ಟೆ. ಸಾರಿಗೆ, ಕಾಲ್ ಸೆಂಟರ್, ಬ್ಯಾಂಕ್‌, ಪೊಲೀಸ್‌, ಸೈನ್ಯ, ಸಿನಿಮಾಹಾಲ್, ಮಾಲ್, ಸೂಪರ್‌ಮಾರ್ಕೆಟ್, ದೃಶ್ಯ ಹಾಗೂ ಮುದ್ರಣ ಮಾಧ್ಯಮ, ಕ್ರೀಡೆ, ನಾಟಕ, ಸಿನಿಮಾ, ಧಾರಾವಾಹಿ ನಿರ್ಮಾಣ, ನಟನೆ, ಹಿನ್ನೆಲೆ ಗಾಯನ, ರಿಯಾಲಿಟಿ ಶೋ, ಸಂಗೀತ ನಿರ್ದೇಶನ, ಕಾರ್ಯಕ್ರಮ ನಿರೂಪಣೆ, ಈವೆಂಟ್ ಮ್ಯಾನೇಜ್‌ಮೆಂಟ್‌ನಂತಹ ಉದ್ಯೋಗಗಳಲ್ಲಿ ಬದುಕು ಕಟ್ಟಿಕೊಂಡಿರುವವರು ಕಲಾವಿಭಾಗದಲ್ಲಿ ಓದಿದವರೇ. ನಾಗರಿಕರ ಬದುಕನ್ನು ಸಹನೀಯವಾಗಿಸುವ ಅನೇಕ ಕಲಾ ಅಭಿವ್ಯಕ್ತಿ ಕ್ರಮಗಳು ಕಲಾ ವಿಭಾಗದ ಅಧ್ಯಯನದ ಕೊಡುಗೆ ಎಂಬುದನ್ನು ನಾವು ಮರೆಯಕೂಡದು. ಪ್ರಾಥಮಿಕ, ಪ್ರೌಢ, ಉನ್ನತ ಶಿಕ್ಷಣದ ಹಂತಗಳಲ್ಲಿ ಕೋಟ್ಯಂತರ ವಿದ್ಯಾರ್ಥಿ ಗಳಿಗೆ ಪಾಠ – ಮಾರ್ಗದರ್ಶನ – ತರಬೇತಿ ನೀಡುವ ಕಲಾ ವಿಭಾಗದ ವಿಷಯಗಳನ್ನು ಕಲಿತ ಪದವೀಧರರು, ಶಿಕ್ಷಕರು ದೇಶದ ಮೂಲೆ – ಮೂಲೆಯಲ್ಲೂ ಇದ್ದಾರೆ.

ವಾಣಿಜ್ಯ ವಿಭಾಗದ ತೂಕವೇ ಬೇರೆ!

ಹಣಕಾಸು, ಆರ್ಥಿಕತೆ, ವಹಿವಾಟು, ವ್ಯಾಪಾರ, ಒಪ್ಪಂದ, ಶೇರು ಮಾರುಕಟ್ಟೆ, ಬ್ಯಾಂಕಿಂಗ್‌, ಇನೂಶ್ಯೂರೆನ್ಸ್‌, ಆಫೀಸ್ ಮ್ಯಾನೇಜ್‌ಮೆಂಟ್, ಮಾನವ ಸಂಪನ್ಮೂಲ ನೇಮಕ, ಪ್ಲಾನಿಂಗ್, ಮೆನ್ ಮ್ಯಾನೇಜ್‌ಮೆಂಟ್, ಕಾಮಗಾರಿ ಉಸ್ತುವಾರಿ, ಉದ್ಯೋಗ ಸೃಷ್ಟಿ, ಮಾರಾಟ, ಲಾಭ, ನಷ್ಟ, ಪಾಲುದಾರಿಕೆ, ಬಂಡವಾಳ, ಹೂಡಿಕೆಗಳ ಕುರಿತಾದ ಅಧ್ಯಯನಕ್ಕೆ ವಾಣಿಜ್ಯ ವಿವಿಧ ಸಂಯೋಜನೆಗಳಿವೆ.

ಮೂಲಗಣಿತ, ಸ್ಟಾಟಿಸ್ಟಿಕ್ಸ್, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ, ಗಣಿಕ ವಿಜ್ಞಾನ, ಅರ್ಥಶಾಸ್ತ್ರ, ಇತಿಹಾಸ, ಭೂಗೊಳಶಾಸ್ತ್ರ ಮತ್ತು ಸಮಾಜ ವಿಜ್ಞಾನ (ಸಮಾಜಶಾಸ್ತ್ರ) ವಿಷಯಗಳನ್ನೊಳಗೊಂಡ ಸಂಯೋಜನೆಗಳಿಗೆ ವಿದ್ಯಾರ್ಥಿಗಳು ದಾಖಲಾಗಬಹುದು. ವಿಜ್ಞಾನ ವಿಭಾಗದ ಕಂಪ್ಯೂಟರ್ ಸೈನ್ಸ್‌ ವಿಷಯವನ್ನು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳೂ ಅಭ್ಯಸಿಸಲು ಅವಕಾಶವಿದೆ. ಈ ಸಂಯೋಜನೆ ಆಯ್ದುಕೊಂಡವರಿಗೆ ಕಂಪ್ಯೂಟರ್ ಸೈನ್ಸ್ ವಿಷಯದ ಪ್ರಾಯೋಗಿಕ ಪರೀಕ್ಷೆ ಇರುತ್ತದೆ. ಸ್ಟಾಟಿಸ್ಟಿಕ್ಸ್‌ಗೆ ಪ್ರಾಯೋಗಿಕ ತರಗತಿಯಾಗಲೀ, ಪ್ರಾಯೋಗಿಕ ಪರೀಕ್ಷೆಯಾಗಲೀ ಇರುವುದಿಲ್ಲ.

ಕಲಾ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಂತೆ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳೂ ಭಾಗ – 1 ರ 11 ಭಾಷಾ ವಿಷಯಗಳಲ್ಲಿ ಯಾವುದಾದರೂ ಎರಡು ಭಾಷೆ ಮತ್ತು ಭಾಗ - 2 ರ ನಾಲ್ಕು ವಿಷಯಗಳನ್ನು ಆಯ್ದುಕೊಂಡು ಓದಬಹುದು. ವಾಣಿಜ್ಯ ಮತ್ತು ಕಲಾ ವಿಭಾಗಗಳೆರಡಕ್ಕೂ ಎನ್‌ಸಿಇಆರ್‌ಟಿ ಪಠ್ಯಕ್ರಮದಲ್ಲೇ ಬೋಧನೆ ನಡೆಯುತ್ತದೆ.

ಕಾಮರ್ಸ್– ಸಾಫ್ಟ್‌ವೇರ್‌ ಉದ್ಯೋಗ

ಸಾಫ್ಟ್‌ವೇರ್‌ ಉದ್ಯೋಗ ಮಾಡಬೇಕೆನ್ನುವ ಆಸೆ ಇದೆ. ಆದರೆ ವಿಜ್ಞಾನ ವಿಭಾಗ ಆಯ್ದುಕೊಳ್ಳುವ ಮನಸ್ಸಿಲ್ಲ. ಅಂಥವರು ಕಾಮರ್ಸ್ ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್ ಸಂಯೋಜನೆ ಆಯ್ಕೆ ಮಾಡಿಕೊಂಡು ನಂತರ ಪದವಿ ಹಂತದಲ್ಲಿ ಬಿಸಿಎ ಕಲಿತರೆ ಸಾಪ್ಟ್‌ವೇರ್‌ / ಕಂಪ್ಯೂಟರ್ ಉದ್ಯಮಗಳಲ್ಲಿ ಉದ್ಯೋಗ ಪಡೆಯಬಹುದು. ವಿದ್ಯಾಭ್ಯಾಸ ಮುಂದುವರೆಸಿ ಎಂಸಿಎ (ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್) ಕಲಿತರೆ ಉನ್ನತ ಕೆಲಸ ಸಂಪಾದಿಸಿ ಸಾಫ್ಟ್‌ವೇರ್‌ ಎಂಜಿನಿಯರ್‌ ಎನ್ನಿಸಿಕೊಳ್ಳಬಹುದು. ಕಾಲೇಜುಗಳಲ್ಲಿ ಅಧ್ಯಾಪಕರಾ ಗಬಹುದು.

ಇಂಟೆಗ್ರೇಟೆಡ್ ಕೋಚಿಂಗ್

ಕಾಮರ್ಸ್ ಅಧ್ಯಯನ ಮಾಡುವ ಬಹುತೇಕ ವಿದ್ಯಾರ್ಥಿಗಳ ಕನಸು ‘ಸಿಎ’(ಚಾರ್ಟೆಡ್‌ ಅಕೌಂಟೆಂಟ್‌) ಮಾಡಬೇಕೆನ್ನುವುದಾಗಿರುತ್ತದೆ. ಅದಕ್ಕಾಗಿ ಶ್ರಮ ಪಡಲೂ ತಯಾರಿರುತ್ತಾರೆ. ಪಿಯುಸಿ ವಿದ್ಯಾರ್ಥಿಗಳು ‘ಸಿಎ’ ಪರೀಕ್ಷೆ ಪಾಸು ಮಾಡುವುದಕ್ಕಿಂತ ಮುಂಚೆ ‘ಸಿಎ ಫೌಂಡೇಶನ್’ ಕೋರ್ಸ್‌ನ ಪರೀಕ್ಷೆ ಉತ್ತೀರ್ಣರಾಗಬೇಕು. 100 ಅಂಕಗಳ 4 ವಿಷಯಗಳ ಪರೀಕ್ಷೆ ಎದುರಿಸಬೇಕು. ಈ ಪರೀಕ್ಷೆಗೆ ತರಬೇತಿ ನೀಡುವ ಅನೇಕ ಪದವಿ ಪೂರ್ವ ಕಾಲೇಜುಗಳು ರಾಜ್ಯದಲ್ಲಿದ್ದು ನಗರ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಪಿಯುಸಿ ಓದಿನ ಜೊತೆ ಸಿಎ ಫೌಂಡೇಶನ್ ತರಬೇತಿಗೆ ಹೆಚ್ಚುವರಿ ಶುಲ್ಕವಿರುತ್ತದೆ. ಪದವಿ ಅಧ್ಯಯನದ ಜೊತೆ ‘ಸಿಎ’ ತರಬೇತಿ ಮುಂದುವರೆಸಬಹುದು.

(ಲೇಖಕರು: ಪ್ರಾಚಾರ್ಯರು, ವಿಡಿಯ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT