ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ : ನೀಟ್‌ಗೆ ತಯಾರಿ ಹೇಗೆ?

Published 22 ಅಕ್ಟೋಬರ್ 2023, 23:30 IST
Last Updated 22 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

*1. ನಾನು ಅಂತಿಮ ವರ್ಷದ ಬಿ.ಎಸ್ಸಿ ಮಾಡುತ್ತಿದ್ದು, ಮುಂದೆ ನೀಟ್ ಪರೀಕ್ಷೆಗೆ ತಯಾರಾಗಲೋ ಅಥವಾ ಕೆಲಸಕ್ಕೆ ಸೇರುವುದೋ ತಿಳಿಯದು. ನಮ್ಮದು ಬಡತನದ ಕುಟುಂಬ. ದಯವಿಟ್ಟು ಮಾರ್ಗದರ್ಶನ ನೀಡಿ.

ಹೆಸರು, ಊರು ತಿಳಿಸಿಲ್ಲ.

ಈಗಿನ ಪರಿಸ್ಥಿತಿಯಿಂದ ಎದೆಗುಂದದೆ, ನಿಮ್ಮ ದೀರ್ಘಾವಧಿ ಕನಸುಗಳನ್ನು ಸಾಕಾರಗೊಳಿಸುವ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಿ. ಆರ್ಥಿಕ ಸಮಸ್ಯೆಯ ಕಾರಣದಿಂದ ನಿಮ್ಮ ಭವಿಷ್ಯದ ಕನಸುಗಳನ್ನು ಕಾಣದೆ ಮುಂದಿನ ಜೀವನದ ಬಗ್ಗೆ ರಾಜಿಯಾಗದಿರಿ; ಏಕೆಂದರೆ, ಆರ್ಥಿಕ ಸಮಸ್ಯೆಗಳು ತಾತ್ಕಾಲಿಕ. ಬಿ.ಎಸ್ಸಿ ನಂತರ ಸೂಕ್ತವಾದ ಕೆಲಸಕ್ಕೆ ಸೇರಿ, ನಿಮ್ಮ ವೃತ್ತಿಯೋಜನೆಗೆ ಅನುಗುಣವಾಗಿ ಮುಂದೆ ಯಾವü ಕೋರ್ಸ್ ಮಾಡಬೇಕೆಂದು ತೀರ್ಮಾನಿಸಿ, ಸಂಜೆ ಕಾಲೇಜು/ದೂರ ಶಿಕ್ಷಣದ ಮೂಲಕ ಅಧ್ಯಯನವನ್ನು ಮುಂದುವರೆಸಿ. ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

* 2.ನಾನು ಕಳೆದ ನಾಲ್ಕು ವರ್ಷಗಳಿಂದ ಪೊಲೀಸ್ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದೇನೆ.  ಜವಾಬ್ದಾರಿಯಿರುವುದರಿಂದ, ಕೆಲಸದಿಂದ ಬಂದ ನಂತರವೇ ಓದಲು ಸಾಧ್ಯ. ಕೋಚಿಂಗ್ ಪಡೆಯಲು ಸಾಧ್ಯವಿಲ್ಲ. ಯಾವುದನ್ನು ಹೇಗೆ, ಯಾವ ರೀತಿ ಓದುವುದು ತಿಳಿಯುತ್ತಿಲ್ಲ. ಪರಿಹಾರ ತಿಳಿಸಿ. ದರ್ಶನ್, ಚಿಕ್ಕಮಗಳೂರು.

ಈ ಸಲಹೆಗಳನ್ನು ಗಮನಿಸಿ:

*ಸರ್ಕಾರಿ ವಲಯದಲ್ಲಿ ವೃತ್ತಿಯನ್ನು ಪಡೆಯಲು ಆಯೋಜಿಸುವ ಪರೀಕ್ಷೆಗಳು ಅತ್ಯಂತ ಸ್ಪರ್ಧಾತ್ಮಕವಾಗಿರುತ್ತದೆ. ಈವರೆಗಿನ ನಿಮ್ಮ ಅನುಭವವನ್ನು ಪರಿಗಣಿಸಿ, ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.

*ಸ್ಪರ್ಧಾತ್ಮಕ ಪರೀಕ್ಷೆಯಲ್ಲಿರುವ ವಿಷಯಗಳ ಪಠ್ಯಕ್ರಮವನ್ನು ತಿಳಿದುಕೊಂಡು, ಅಗತ್ಯವಾದ ಪುಸ್ತಕಗಳು ಮತ್ತು ಇನ್ನಿತರ ಅಧ್ಯಯನದ ಮಾಹಿತಿಯನ್ನು ಸಂಗ್ರಹಿಸಿ.

*ಕಳೆದ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಗಮನಿಸಿ, ಅಣಕು- ಪರೀಕ್ಷೆ ಆಧಾರಿತ ತಯಾರಿಯನ್ನು ಮಾಡುತ್ತಿರಬೇಕು.

*ಪರೀಕ್ಷೆಯಲ್ಲಿ ಯಶಸ್ವಿಯಾಗಲು ನಿಗದಿತ ವೇಳಾಪಟ್ಟಿಯಂತೆ ಸಮಗ್ರವಾದ ಮತ್ತು ಆಳವಾದ ಓದುವಿಕೆ, ಪುನರಾವರ್ತನೆ ಮತ್ತು ಉತ್ಕೃಷ್ಟವಾದ ಬರವಣಿಗೆ ಇರಬೇಕು. ನಿಮ್ಮ ಬರವಣಿಗೆ ಕಾಗುಣಿತ, ವ್ಯಾಕರಣ ದೋಷ ಮುಕ್ತವಾಗಿರಲಿ; ಓದಲು ಸುಲಭವಾಗಿರಲಿ.

*ಜೊತೆಗೆ, ಸಮಯದ ನಿರ್ವಹಣೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ. ಪರಿಣಾಮಕಾರಿ ಅಧ್ಯಯನಕ್ಕೆ ಸಹಾಯವಾಗಬಹುದಾದ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk

*3. ನಾನು ಮೊದಲು ಚೆನ್ನಾಗಿ ಓದುತ್ತಿದ್ದು, ಮೊಬೈಲ್ ತೆಗೆದುಕೊಂಡ ನಂತರ ಓದಲು ಆಗುತ್ತಿಲ್ಲ. ದಯವಿಟ್ಟು ನಿಮ್ಮ ಸಲಹೆ ನೀಡಿ. ಹೆಸರು, ಊರು ತಿಳಿಸಿಲ್ಲ.

ನೀವು ಯಾವ ತರಗತಿಯಲ್ಲಿ ಓದುತ್ತಿದ್ದೀರಿ ಎಂದು ತಿಳಿಸಿಲ್ಲ. ಅತಿಯಾದ ಮೊಬೈಲ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನಿಮಗೆ ಈಗಾಗಲೇ ಅರಿವಾಗಿರುವುದು ಶ್ಲಾಘನೀಯ. ಮೊಬೈಲ್ ಬಳಕೆಯನ್ನು ಮಿತಿಗೊಳಿಸುವುದರ ಜೊತೆಗೆ, ಮೊಬೈಲ್ ತಂತ್ರಜ್ಞಾನದ ಸದುಪಯೋಗದಿಂದ ಕಲಿಕೆಯನ್ನು ಪರಿಣಾಮಕಾರಿಯಾಗಿಸಬಹುದೆಂದು ಗಮನಿಸಿ. ಉದಾಹರಣೆಗೆ, ಕಷ್ಟಕರವಾದ ವಿಷಯಗಳನ್ನು, ಪರಿಕಲ್ಪನೆಗಳನ್ನು ಗೂಗಲ್, ಯೂಟ್ಯೂಬ್ ಮುಂತಾದ ಸಾಧನಗಳಿಂದ ಅರ್ಥ ಮಾಡಿಕೊಳ್ಳುವುದು ಸಾಧ್ಯ. ಹಾಗೂ, ಇ-ಲರ್ನಿಂಗ್, ಇ-ಕ್ಲಾಸ್‌ರೂಮ್, ವೆಬಿನಾರ್ ಮುಂತಾದ ಮಾಧ್ಯಮಗಳಿಂದ ಉಪಯುಕ್ತವಾದ ಮಾಹಿತಿಯ ವಿತರಣೆ ಮತ್ತು ತಜ್ಞರ/ಉಪನ್ಯಾಸಕರ ಮಾರ್ಗದರ್ಶನವನ್ನು ಮೊಬೈಲ್ ತಂತ್ರಜ್ಞಾನದ ಮೂಲಕ ಪಡೆಯಬಹುದು.

ನಿಮ್ಮ ಭವಿಷ್ಯದ ಕನಸುಗಳಂತೆ, ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಯಶಸ್ವಿಯಾಗಲು ಸ್ಪಷ್ಟವಾದ, ಸಾಧಿಸಬಹುದಾದ ಗುರಿಗಳನ್ನು ನಿಗದಿಪಡಿಸಿ. ಈ ಗುರಿಗಳು ದೃಡವಾಗಿದ್ದರೆ, ಸ್ವಯಂಪ್ರೇರಣೆ ತಾನೇ ತಾನಾಗಿ ಮೂಡುತ್ತದೆ. ಪ್ರೇರಣೆಯೆಂದರೆ, ನಮ್ಮ ಗುರಿಗಳತ್ತ ನಮ್ಮನ್ನು ಕ್ರಿಯಾತ್ಮಕವಾಗಿಸುವ ಚಾಲನಾ ಶಕ್ತಿ. ಏಕೆಂದರೆ, ಅತ್ಯಂತ ಶಕ್ತಿಶಾಲಿಯಾದ ಆಂತರಿಕ ಪ್ರೇರಣೆಯೇ ನಮ್ಮ ಸ್ಪೂರ್ತಿಗೂ, ಚೈತನ್ಯಕ್ಕೂ, ಕಾರ್ಯತತ್ಪರತೆಗೂ ಮೂಲ. ಪ್ರೇರಣೆ, ಬದುಕಿನ ಕನಸುಗಳನ್ನು ಕಾಣುವುದರ ಜೊತೆಗೆ ನಮ್ಮಲ್ಲಿ ಅವುಗಳನ್ನು ಸಾಧಿಸುವ ಛಲ, ಆತ್ಮವಿಶ್ವಾಸವನ್ನು ಹುಟ್ಟುಹಾಕುತ್ತದೆ. ಆದ್ದರಿಂದ, ಮೊಬೈಲ್‌ನ ಸದುಪಯೋಗದ ಅಭ್ಯಾಸವನ್ನು ರೂಡಿಸಿಕೊಂಡು, ದೃಢಸಂಕಲ್ಪದಿಂದಲೂ ಏಕಾಗ್ರತೆಯಿಂದಲೂ, ನಿಮ್ಮ ಗುರಿಗಳನ್ನು ಸಾಧಿಸುವತ್ತ ಕಠಿಣವಾದ ಪರಿಶ್ರಮವಿರಲಿ.

*4. ನಾನು 2023ರಲ್ಲಿ ಬಿಎ ಪದವಿ ಮುಗಿಸಿದ್ದು ಮುಂದೇನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಒಳ್ಳೆಯ ಕೋರ್ಸ್ ಬಗ್ಗೆ ತಿಳಿಸಿ. ಹೆಸರು, ಊರು ತಿಳಿಸಿಲ್ಲ.

ಕಲಾ ವಿಭಾಗ ವಿಸ್ತಾರವಾದ ಕ್ಷೇತ್ರ. ನಿಮ್ಮ ಆಸಕ್ತಿ, ಅಭಿರುಚಿ, ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನಿಸಿ, ಮುಂದೇನು ಮಾಡಬೇಕೆಂದು ನಿರ್ಧರಿಸಬಹುದು. ಬಿಎ ನಂತರ ಮಾಡಬಹುದಾದ ಕೋರ್ಸ್‌ಗಳೆಂದರೆ, ಬಿಎಲ್, ಬಿ.ಇಡಿ, ಎಂಎ, ಎಂಬಿಎ, ಎಂ. ಡಿಸೈನ್, ಪತ್ರಿಕೋಧ್ಯಮ, ಹೋಟೆಲ್ ಮ್ಯಾನೇಜ್‌ಮೆಂಟ್ ಇತ್ಯಾದಿ. ಇದಲ್ಲದೆ ಬಿಎ ನಂತರ ಆಸಕ್ತಿಯಿದ್ದಲ್ಲಿ, ಬಿಸಿನೆಸ್ ಅನಾಲಿಟಿಕ್ಸ್, ಡೇಟಾ ಸೈನ್ಸ್, ಸಾಫ್ಟ್‌ವೇರ್‌ ಡೆವಲಪ್‌ಮೆಂಟ್, ಡಿಜಿಟಲ್ ಮಾರ್ಕೆಟಿಂಗ್, ಮಾನವ ಸಂಪನ್ಮೂಲ ಇತ್ಯಾದಿ

ಕ್ಷೇತ್ರಗಳಲ್ಲಿ ಅಲ್ಪಾವದಿ/ಆನ್‌ಲೈನ್ ಕೋರ್ಸ್‌ಗಳನ್ನು ಮಾಡಿ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಹಾಗೂ, ಸರ್ಕಾರಿ ವಲಯದ ಯುಪಿಎಸ್‌ಸಿ, ಕೆಪಿಎಸ್‌ಸಿ, ಎಸ್‌ಎಸ್‌ಸಿ, ರೈಲ್ವೇಸ್, ಬ್ಯಾಂಕಿಂಗ್ ಮುಂತಾದ ಕ್ಷೇತ್ರಗಳಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ವೃತ್ತಿಯನ್ನು ರೂಪಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT