ಶನಿವಾರ, ಅಕ್ಟೋಬರ್ 8, 2022
23 °C

JEE Result: ಜೆಇಇ ಅಡ್ವಾನ್ಸ್ಡ್ ಫಲಿತಾಂಶ, ರಾಜ್ಯದ ಶಿಶಿರ್‌ಗೆ ಮೊದಲ ರ‍್ಯಾಂಕ್‌

ಪಿಟಿಐ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐಐಟಿ ಸಂಸ್ಥೆಗಳಿಗೆ ಪ್ರವೇಶಕ್ಕಾಗಿ ನಡೆಸುವ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಅಡ್ವಾನ್ಸ್ಡ್‌ ಫಲಿತಾಂಶದಲ್ಲಿ ರಾಜ್ಯದ ವಿದ್ಯಾರ್ಥಿ ಆರ್‌.ಕೆ.ಶಿಶಿರ್‌ ಅಖಿಲ ಭಾರತ ಮಟ್ಟದಲ್ಲಿ ಮೊದಲ ರ‍್ಯಾಂಕ್‌ ಪಡೆದರೆ, ಲಕ್ಷ್ಮಿ ಸಾಯಿ ಲೋಹಿತ್‌ ರೆಡ್ಡಿ ದ್ವಿತೀಯ ರ‍್ಯಾಂಕ್‌ ಪಡೆದಿದ್ದಾರೆ.

ರಾಜ್ಯದ ಮತ್ತೊಬ್ಬ ವಿದ್ಯಾರ್ಥಿ, ವಿಶಾಲ್‌ ಬೈಸಾನಿ 13ನೇ ರ‍್ಯಾಂಕ್‌ ಗಳಿಸಿದ್ದಾರೆ. ಬೆಂಗಳೂರು ಸಹಕಾರ ನಗರದ ನಾರಾಯಣ ಟೆಕ್ನೊ ಸ್ಕೂಲ್‌ನ ವಿದ್ಯಾರ್ಥಿಯಾದ ಶಿಶಿರ್‌, ಜೆಇಇ– ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿ 360ಕ್ಕೆ 314 ಅಂಕಗಳಿಸಿದ್ದಾರೆ.

ಜೆಇಇ ಮೇನ್‌ನಲ್ಲಿ ಶಿಶಿರ್‌, ಅಖಿಲ ಭಾರತ ಮಟ್ಟದಲ್ಲಿ 56ನೇ ರ‍್ಯಾಂಕ್‌ ಪಡೆದಿದ್ದರು. ಅಲ್ಲದೆ, ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಸಿಇಟಿಯಲ್ಲಿ ನಾಲ್ಕನೇ ಮತ್ತು ಬಿ.ಫಾರ್ಮಾ ಪ್ರವೇಶಕ್ಕೆ ಮೊದಲ ರ‍್ಯಾಂಕ್‌ ಪಡೆದಿದ್ದರು.

ಲಕ್ಷ್ಮೀ ಸಾಯಿ ಲೋಹಿತ್‌ ರೆಡ್ಡಿ ಕೂಡಾ ನಾರಾಯಣ ಟೆಕ್ನೊ ಸಂಸ್ಥೆಯ ವಿದ್ಯಾರ್ಥಿ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಶಿಶಿರ್, ಐಐಟಿ ಬಾಂಬೆ ಸೇರುವ ಬಯಕೆ ವ್ಯಕ್ತಪಡಿಸಿದರು. ‘ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ವ್ಯಾಸಂಗ ಮಾಡಿ, ನವೋದ್ಯಮದ (ಸ್ಟಾರ್ಟ್–ಅಪ್‌) ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ಗುರಿಯಿದೆ’ ಎಂದರು. ಶಿಶಿರ್‌ ತಂದೆ ಮಾಧ್ಯಮ ಸಂಸ್ಥೆಯೊಂದರ ಉದ್ಯೋಗಿ, ತಾಯಿ ಗೃಹಿಣಿ. 

‘ಈ ಯಶಸ್ಸನ್ನು ಪ್ರೇರಣೆ ನೀಡಿದ ಪೋಷಕರಿಗೆ ಅರ್ಪಿಸುತ್ತೇನೆ. ಸೂಕ್ತ ಯೋಜನೆಯೊಂದಿಗೆ ಪರೀಕ್ಷೆಗೆ ತಯಾರಿ ನಡೆಸಲು ಮಾರ್ಗದರ್ಶನ ಮತ್ತು ನೆರವು ನೀಡಿದ ಆರ್ಗ್ಯಾನಿಕ್‌ ಕೆಮಿಸ್ಟ್ರಿ ವಿಷಯ ಪ್ರಾಧ್ಯಾಪಕ ರಾಮು ಸರ್‌ ಅವರಿಗೂ ಧನ್ಯವಾದ ಹೇಳಲೇಬೇಕು’ ಎಂದರು.


ಶಿಶಿರ್‌

‘ಓದಿನ ಮಧ್ಯೆ ಒತ್ತಡದಿಂದ ಮುಕ್ತನಾಗಲು ಬ್ಯಾಡ್ಮಿಂಟನ್‌ ಆಡುತ್ತಿದ್ದೆ. ರುಬಿಕ್ಸ್ ಕ್ಯೂಬ್ ಸಮಸ್ಯೆ ಬಿಡಿಸಲು ಒಂದಷ್ಟು ಸಮಯ ಕಳೆಯುತ್ತಿದ್ದೆ. ಕೇವಲ ಪರೀಕ್ಷೆಗಾಗಿ ಓದುತ್ತಿರಲಿಲ್ಲ, ವಿಷಯ ಅರ್ಥಮಾಡಿಕೊಂಡು ಅಧ್ಯಯನ ಮಾಡುತ್ತಿದ್ದೆ. ಮುಖ್ಯವಾಗಿ ನಾನು ಕಲಿಕೆಯನ್ನು ಆನಂದಿಸುತ್ತೇನೆ’ ಎಂದೂ ಹೇಳಿದರು.‌

ಬೆಂಗಳೂರಿನ ಅಲೆನ್‌ ಕೆರಿಯರ್‌ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಯಾಗಿರುವ ವಿಶಾಲ್‌ ಬೈಸಾನಿ, ಕಾಮೆಡ್‌–ಕೆ ಪ್ರವೇಶ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದರು. ‘ಎರಡು ವರ್ಷದಿಂದ ಮಾರ್ಗದರ್ಶನ ನೀಡಿದ ಅಲೆನ್‌ ಸಂಸ್ಥೆಗೆ ಈ ಯಶಸ್ಸು ಸಲ್ಲಬೇಕು. ಓದಿನ ಕಡೆಗಿನ ನನ್ನ ಆಸಕ್ತಿ, ಪರೀಕ್ಷೆಯ ತಯಾರಿ ಕಂಡು ಸಂಸ್ಥೆಯವರಿಗೆ ಅತಿಯಾದ ವಿಶ್ವಾಸವಿತ್ತು. ಪೋಷಕರು, ಶಿಕ್ಷಕರ ಬೆಂಬಲದಿಂದ ಈ ಯಶಸ್ಸು ಸಾಧ್ಯವಾಗಿದೆ’ ಎಂದು ಬೈಸಾನಿ ಪ್ರತಿಕ್ರಿಯಿಸಿದರು.

1.5 ಲಕ್ಷಕ್ಕೂ ಹೆಚ್ಚು ಮಂದಿ ಪರೀಕ್ಷೆ ಬರೆದಿದ್ದು, 40,000ಕ್ಕೂ ಹೆಚ್ಚು ಮಂದಿ ಅರ್ಹತೆ ಪಡೆದಿದ್ದಾರೆ.

https://result.jeeadv.ac.in/ ವೆಬ್‌ಸೈಟ್ ಮೂಲಕ ಫಲಿತಾಂಶ ವೀಕ್ಷಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು