ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ಬೆಳೆಸಲು ಪಣ: ವಾಟ್ಸ್‌ ಆ್ಯಪ್ ಗ್ರೂಪ್‌ನಿಂದ ಸ್ಮಾರ್ಟ್ ಕ್ಲಾಸ್

ಪಣತೊಟ್ಟ ಹನುಮಾಪುರ ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳು: ಚಾಲನೆ 23ರಂದು
Last Updated 22 ಡಿಸೆಂಬರ್ 2018, 20:38 IST
ಅಕ್ಷರ ಗಾತ್ರ

ರಾಣೆಬೆನ್ನೂರು:ವಾಟ್ಸ್‌ ಆ್ಯಪ್ ಗ್ರೂಪ್ ಮೂಲಕ ಒಂದಾದ ತಾಲ್ಲೂಕಿನ ಹನುಮಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಹಳೇ ವಿದ್ಯಾರ್ಥಿಗಳು ಸ್ಥಾಪಿಸಿದ ‘ಡಿಜಿಟಲ್ ಸ್ಮಾರ್ಟ್ ಕ್ಲಾಸ್’ ಹಾಗೂ ‘ದತ್ತಿನಿಧಿ’ಗೆ ಇಂದು (ಡಿ.23) ಚಾಲನೆ ದೊರೆಯಲಿದೆ.

ಗ್ರಾಮದ ಸರ್ಕಾರಿ ಶಾಲೆಯನ್ನು ಉಳಿಸಿ–ಬೆಳೆಸುವ ನಿಟ್ಟಿನಲ್ಲಿ ಈ ಶಾಲೆಯ ಸುಮಾರು 110 ಹಳೇ ವಿದ್ಯಾರ್ಥಿಗಳು 2017ರ ಜನವರಿಯಲ್ಲಿ ‘ಸಮಾನ ಮನಸ್ಕರ ವೇದಿಕೆ’ ಎಂಬ ವಾಟ್ಸ್ ಆ್ಯಪ್ ಗ್ರೂಪ್‌ ರಚಿಸಿಕೊಂಡಿದ್ದಾರೆ. ಈ ಗ್ರೂಪ್‌ಗೆ ಅವರ ಗೆಳೆಯರು, ಗ್ರಾಮಸ್ಥರನ್ನೂ ಸೇರಿಸಿಕೊಂಡಿದ್ದಾರೆ.

ಗ್ರಾಮದ ಸರ್ಕಾರಿ ಶಾಲೆಯನ್ನು ಉಳಿಸುವುದು, ಆಧುನಿಕ ಬೆಳವಣಿಗೆಗೆ ತಕ್ಕಂತೆ ಅಭಿವೃದ್ಧಿ ಪಡಿಸುವ ಕುರಿತು ‘ಗ್ರೂಪ್‌’ನಲ್ಲಿ ಚರ್ಚೆ ಆರಂಭಿಸಿದ್ದಾರೆ. ‘ಇದು ಸಾಧ್ಯವೇ?’ ಎಂಬ ಪ್ರಕ್ರಿಯೆಗಳೂ ಬಂದಿವೆ. ಆದರೆ, ಗ್ರೂಪ್‌ನ ಕೆಲವರು ಗುರಿಯಿಂದ ಹಿಂದೆ ಸರಿಯದೇ, ಸರ್ಕಾರಿ ಶಾಲೆ ಉಳಿಸುವ ಮಹತ್ವವನ್ನು ಎಲ್ಲರಿಗೂ ಮನವರಿಕೆ ಮಾಡಿದ್ದಾರೆ. ಅಂತಿಮವಾಗಿ ‘ಡಿಜಿಟಲ್ ಸ್ಮಾರ್ಟ್ ಕ್ಲಾಸ್’ ಆರಂಭಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ದೇಣಿಗೆ

ಇದಕ್ಕಾಗಿ, ದೇಣಿಗೆ ಸಂಗ್ರಹಿಸುವ ಬದಲು ತಾವೇ ಸಾಧ್ಯವಾದಷ್ಟರ ಮಟ್ಟಿಗೆ ಕೊಡುಗೆ ನೀಡಲು ನಿರ್ಧರಿಸಿದ್ದಾರೆ. ಈ ಪೈಕಿ ರೈತರು, ಸಾಮಾನ್ಯ ಕೂಲಿಕಾರ್ಮಿಕರಿಂದ ಹಿಡಿದು ಸರ್ಕಾರಿ ನೌಕರರ ತನಕ ತಮ್ಮ ತಮ್ಮ ವೈಯಕ್ತಿಕ ಸಾಮರ್ಥ್ಯಕ್ಕೆ ತಕ್ಕಂತೆ ₹500ರಿಂದ ₹11 ಸಾವಿರ ತನಕ ದೇಣಿಗೆಯ ಭರವಸೆ ನೀಡಿದ್ದಾರೆ.

ನಗದು ರಹಿತ

ಅನಂತರ ಶೇ 90ರಷ್ಟು ಮಂದಿ ಖಾತೆಯೊಂದಕ್ಕೆ ಗೂಗಲ್ ಪೇ, ಫೋನ್ ಪೇ, ಪೇಟಿಯಂ, ನೆಫ್ಟ್, ಆನ್‌ಲೈನ್ ಅಕೌಂಟ್ ಇತ್ಯಾದಿಗಳ ಮೂಲಕ ನಗದು ರಹಿತವಾಗಿ ಹಣ ವರ್ಗಾಯಿಸಿದ್ದಾರೆ. ಹೀಗೆಸುಮಾರು ₹3ಲಕ್ಷ ಹಣ ಸಂಗ್ರಹವಾಗಿದೆ. ಇದರಲ್ಲಿ ₹2.40 ಲಕ್ಷ ವೆಚ್ಚದಲ್ಲಿ ಡಿಜಿಟಲ್ ಸ್ಮಾರ್ಟ್‌ ಕ್ಲಾಸ್ ನಿರ್ಮಿಸಿದ್ದಾರೆ. ಉಳಿದ ಹಣದಲ್ಲಿ ‘ದತ್ತಿ ನಿಧಿ’ ಸ್ಥಾಪಿಸಿದ್ದು, ಮುಂದಿನ ವರ್ಷದಿಂದ ಸಾಧಕ ವಿದ್ಯಾರ್ಥಿಗಳಿಗೆ ನಗದು ನೀಡಿ ಸನ್ಮಾನಿಸುವ ಯೋಜನೆ ರೂಪಿಸಿದ್ದಾರೆ.

‘ಕೇವಲ ಹಳೇ ವಿದ್ಯಾರ್ಥಿಗಳು ಮಾತ್ರವಲ್ಲ, ಅವರ ಸ್ನೇಹಿತರೂ ಹಣ ನೀಡಿದ್ದಾರೆ. ‘ಸರ್ಕಾರಿ ಶಾಲೆ ಸಂರಕ್ಷಣೆ’ ಕುರಿತ ಗ್ರಾಮಸ್ಥರ ನಿರ್ಧಾರದ ಬಗ್ಗೆ ಮಾಹಿತಿ ಪಡೆದ ಬೆಂಗಳೂರಿನಲ್ಲಿರುವ ಉಡುಪಿಯ ಕಾನ್‌ಸ್ಟೆಬಲ್ ಪ್ರದೀಪ್ ಎಂಬವರು ₹10 ಸಾವಿರ ದೇಣಿಗೆ ನೀಡಿದ್ದಾರೆ’ ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಲ್ಲಪ್ಪ ನಿಂ. ಕಟಗೇರ ಮತ್ತು ಉಪಾಧ್ಯಕ್ಷ ಮಾಲತೇಶ ಪಾಟೀಲ.

‘ಆರಂಭದಲ್ಲಿ ಸಂಗ್ರಹವಾಗಿದ್ದ ₹11 ಸಾವಿರವನ್ನು ಕೊಡಗು ಸಂತ್ರಸ್ತರ ನಿಧಿಗೆ ದೇಣಿಗೆ ನೀಡಿದ್ದೆವು. ಹಳೇ ವಿದ್ಯಾರ್ಥಿಗಳು– ಗ್ರಾಮಸ್ಥರು ಅಲ್ಲದವರೂ ದೇಣಿಗೆ ನೀಡಿರುವುದು ವಿಶೇಷ ’ ಎನ್ನುತ್ತಾರೆ ಹಳೇ ವಿದ್ಯಾರ್ಥಿಯಾದ ಶಿಕ್ಷಕ ಮಲ್ಲಪ್ಪ ಕರೆಣ್ಣನವರ.

ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಇದ್ದು, 281 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಹಳೇ ವಿದ್ಯಾರ್ಥಿಗಳ ಕೊಡುಗೆಯು ಹೆಮ್ಮೆಯ ಸಂಗತಿಯಾಗಿದೆ. ಎಲ್ಲ ಗ್ರಾಮಗಳಲ್ಲೂ ಇಂತಹ ಪ್ರೋತ್ಸಾಹ ಸಿಗಬೇಕು ಎನ್ನುತ್ತಾರೆ ಮುಖ್ಯಶಿಕ್ಷಕ ಬಿ.ಎಂ. ಮಾರುತಿ.

ಸ್ಮಾರ್ಟ್ ಕ್ಲಾಸ್‌ಗಾಗಿ 3 ಗ್ರೀನ್ ಬೋರ್ಡ್, 1 ವೈಟ್ ಬೋರ್ಡ್, ಪ್ರೊಜೆಕ್ಟರ್, ಡಿಜಿಟಲ್ ಸೌಂಡ್ ಸಿಸ್ಟಮ್, ಯಾಂತ್ರಿಕ ಪೆನ್, 1 ಪ್ರಿಂಟರ್, ಜೆರಾಕ್ಸ್, ಸ್ಕೂಲ್ ಬೆಲ್, 2 ವಾಲ್ ಫ್ಯಾನ್, ಸ್ಮಾರ್ಟ್ ಕ್ಲಾಸ್‌ಗೆ ಕಬ್ಬಿಣದ ಗ್ರಿಲ್, ಕಿಟಕಿ ಬಾಗಿಲು, ಕೊಠಡಿಗಳಿಗೆ ಬಣ್ಣ, ಕರ್ಟನ್ ಹಾಕಿಸಿದ್ದಾರೆ.

‘ಸರ್ಕಾರಿ ಶಾಲೆಗಳು ಭೌತಿಕವಾಗಿ ಸಬಲೀಕರಣಗೊಂಡರೆ, ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ಕಾಲ ದೂರವಿಲ್ಲ’ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನೆಪ್ಪ ವಡಗೇರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT