ಬುಧವಾರ, ಜೂನ್ 29, 2022
26 °C
ಮಕ್ಕಳ ನಡುವೆ ಹೋಲಿಕೆ ಮಾಡಬೇಡಿ..

ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸಲು ಸರಳ ಸೂತ್ರಗಳು

ವೆಂಕಟ ಸುಬ್ಬರಾವ್.‌ ವಿ Updated:

ಅಕ್ಷರ ಗಾತ್ರ : | |

Prajavani

ಭಾಗ 2

ಕಳೆದ ವಾರ, ಮಕ್ಕಳಲ್ಲಿ ಕಲಿಕಾ ಆಸಕ್ತಿಯನ್ನು ಹೆಚ್ಚಿಸಲು ಪೋಷಕರು ಮನೆಯಲ್ಲಿ ಯಾವ ರೀತಿ ಪೂರಕ ಕಲಿಕಾ ವಾತಾವರಣವನ್ನು ನಿರ್ಮಿಸಬೇಕು, ಮಕ್ಕಳೊಂದಿಗೆ ಹೇಗೆ ಬೆರೆಯಬೇಕು ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಲಾಗಿತ್ತು. ಈ ಲೇಖನದಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ಗುರುತಿಸುವಿಕೆ, ಸಮಯದ ಉಳಿತಾಯ, ಶಿಸ್ತಿನ ಕಲಿಕೆ ಸೇರಿದಂತೆ ಮತ್ತಷ್ಟು ವಿಷಯಗಳನ್ನು ವಿವರಿಸಲಾಗಿದೆ.

5. ನಿಮ್ಮ ಮಕ್ಕಳನ್ನು ಯಾರೊಂದಿಗೂ ಹೋಲಿಸಬೇಡಿ.

ಹೀಗೆ ಹೇಳುವಾಗ, ಒಂದು ಝೆನ್‌ ಕಥೆ ನೆನಪಾಗುತ್ತದೆ. ಒಮ್ಮೆ ವೀರ ಯೋಧರೊಬ್ಬರು ಝೆನ್‌ ಗುರುಗಳ ಬಳಿ ಒಂದು ಪ್ರಶ್ನೆ ಕೇಳುತ್ತಾರೆ. ‘ಗುರುಗಳೇ, ನಾನು ಯೋಧ. ದೇಶ ರಕ್ಷಣೆಗಾಗಿ ಹಗಲಿರುಳೂ ಶ್ರಮಿಸುತ್ತೇನೆ. ನೀವು ಸುಮ್ಮನೆ ಇಲ್ಲಿ ಕುಳಿತಿರುತ್ತೀರಿ ಆದರೂ ನಾವೆಲ್ಲಾ ನಿಮಗೆ ಗೌರವ ಕೊಡುತ್ತೇವೆ. ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠರು?’

ಪ್ರಶ್ನೆ ಕೇಳಿಸಿಕೊಂಡ ಝೆನ್‌ ಗುರುಗಳು ನಗುತ್ತಾ, ಆ ಯೋಧರನ್ನು ಹೊರಗೆ ಕರೆದುಕೊಂಡು ಹೋಗಿ, ‘ಎರಡು ಮರಗಳನ್ನು ತೋರಿಸಿ, ಇವುಗಳಲ್ಲಿ ಯಾವುದು ಶ್ರೇಷ್ಠ?’ ಎನ್ನುತ್ತಾರೆ. ಮರಗಳನ್ನು ಗಮನಿಸಿದ ಯೋಧರು, ವಿಚಲಿತಗೊಂಡು, ‘ಅಲ್ಲಿ ಒಂದು ತೆಂಗಿನಮರ ಮತ್ತೊಂದು ಮಾವಿನ ಮರವಿದೆ. ಎರಡೂ ಮರಗಳಿಗೂ ಅವುಗಳದ್ದೇ ಆದ ವಿಶಿಷ್ಟ ಗುಣಗಳಿವೆ. ಮರಗಳನ್ನು ಹೇಗೆ ಹೋಲಿಸಲು ಸಾಧ್ಯ?’ ಎಂದು ಉತ್ತರಿಸುತ್ತಾರೆ. ಅದಕ್ಕೆ ಗುರುಗಳು ನಕ್ಕು, ‘ಈಗ ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿತೇ?’ ಎನ್ನುತ್ತಾರೆ.

ಎಷ್ಟು ಚೆಂದದ ಕಥೆ ಅಲ್ಲವಾ? ಮಕ್ಕಳ ವಿಷಯದಲ್ಲೂ ಅಷ್ಟೇ. ಪ್ರತಿ ಮಗುವಿಗೂ ಅದರದ್ದೇ ಆದ ಆಸಕ್ತಿ, ಶಕ್ತಿ, ನೈಪುಣ್ಯ ಇರುತ್ತದೆ. ಆದ್ದರಿಂದ ಎಂದಿಗೂ ಮಕ್ಕಳನ್ನು ಹೋಲಿಸಬಾರದು. ಹೀಗೆ ಹೋಲಿಸಿದರೆ, ಅವರ ಆತ್ಮವಿಶ್ವಾಸ ಕಡಿಮೆಯಾಗಬಹುದು. ಅದರ ಬದಲು ಅವರಲ್ಲಿರುವ ಒಳ್ಳೆಯ ಗುಣಗಳನ್ನು ಗುರುತಿಸಿ, ಅವರಿಗೆ ತಿಳಿಸಿ. ಆಗ ಮಕ್ಕಳಲ್ಲಿ  ಆತ್ಮವಿಶ್ವಾಸವೂ ಹೆಚ್ಚುತ್ತದೆ.

6. ಕಲಿಕಾ ಸಾಮಗ್ರಿಗಳನ್ನು ಒಪ್ಪವಾಗಿಟ್ಟುಕೊಳ್ಳಲು ಮಕ್ಕಳಿಗೆ ಸಹಕರಿಸಿ.

ಸಾಮಾನ್ಯವಾಗಿ ಮಕ್ಕಳು ಶಾಲೆಯಿಂದ ಬಂದ ತಕ್ಷಣ, ಬ್ಯಾಗ್‌, ಪುಸ್ತಕ, ಪೆನ್ನು, ಪೆನ್ಸಿಲ್ ಮತ್ತಿತರ ವಸ್ತುಗಳನ್ನು ಎಲ್ಲೆಂದರಲ್ಲಿ ಇಡುತ್ತಾರೆ. ಓದುವ ಸಮಯದಲ್ಲಿ ಅವುಗಳನ್ನು ಹುಡುಕುತ್ತಾರೆ. ಈ ಹುಡುಕಾಡುವಿಕೆಯಲ್ಲಿ ಅವರ ಕಲಿಕಾ ಅವಧಿಯೂ ಕಡಿಮೆಯಾಗುತ್ತದೆ. ಇದೇ ವೇಳೆ ಪೋಷಕರು ಮಕ್ಕಳನ್ನು ಬೈಯುತ್ತಾರೆ, ಅಸಮಾಧಾನವನ್ನೂ ಹೊರಹಾಕಬಹುದು. ಇದರಿಂದ ಮಕ್ಕಳು ಬೇಸರಪಟ್ಟುಕೊಳ್ಳುತ್ತಾರೆ. ಇದೂ ಕೂಡ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುವ ಸಂಭವವೇ ಹೆಚ್ಚು. ಆದ್ದರಿಂದ ಪೋಷಕರು, ಕಲಿಕಾ ಸಾಮಗ್ರಿಗಳನ್ನು ಒಪ್ಪವಾಗಿಟ್ಟುಕೊಳ್ಳುವಂತೆ ಪದೇ ಪದೇ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿರಬೇಕು. ಯಾವುದೇ ವಸ್ತುವನ್ನು ತೆಗೆದುಕೊಂಡು ಬಳಸಿದ ಮೇಲೆ, ಆ ವಸ್ತುವನ್ನು ಅದೇ ಜಾಗದಲ್ಲಿ ಇಡುವಂತೆ ಮಕ್ಕಳನ್ನು ಎಚ್ಚರಿಸುತ್ತಿರಬೇಕು. 

ಪ್ರತಿದಿನ, ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿ (ಸುಮಾರು 10 ನಿಮಿಷಗಳು). ಆ ಸಮಯವನ್ನು, ಕಲಿಕಾ ಸಾಮಗ್ರಿಗಳನ್ನು ಸರಿಯಾಗಿ ಜೋಡಿಸಿಕೊಳ್ಳುವುದಕ್ಕೇ ಮೀಸಲಿಡಿ. ನೀವೂ ಮಕ್ಕಳಿಗೆ ಸಹಕರಿಸಿ. ಅವರ ಮೇಲೆ ಒತ್ತಡ ಹಾಕುವುದು ಬೇಡ. ಸಹನೆಯಿರಲಿ. ಕೆಲವು ದಿನಗಳ ನಂತರ ಮಕ್ಕಳಿಗೆ ಇದು ಅಭ್ಯಾಸವಾಗುತ್ತದೆ ಹಾಗೂ ಅವರು ತಮ್ಮಷ್ಟಕ್ಕೆ ತಾವೇ ಈ ಕೆಲಸವನ್ನು ಮಾಡುತ್ತಾರೆ.

7. ಶಾಲೆಯ ಘಟನೆಗಳ ಬಗ್ಗೆ ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡುವ ಅವಕಾಶ ಕಲ್ಪಿಸಿಕೊಡಿ

ಮಕ್ಕಳು ಶಾಲೆಯ ವಿಷಯವನ್ನು ಮಾತನಾಡುವಾಗ, ಅವರಿಗೆ ಅವಕಾಶ ನೀಡಿ. ಮಕ್ಕಳು ಹೇಳುವ ವಿಷಯದಲ್ಲಿ ತಪ್ಪಿದ್ದರೆ, ಅದನ್ನು ತಿದ್ದಿ, ತಿಳಿಸಿ.  ಪಾಠಗಳ ವಿಷಯಕ್ಕಿಂತಲೂ ಹೆಚ್ಚಾಗಿ ಜೀವನ ಹಾಗೂ ಬೇರೆ-ಬೇರೆ ರೀತಿಯ ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ನಿಮ್ಮ ಅನುಭವವನ್ನು ಹಂಚಿಕೊಳ್ಳಿ. ನಿಮ್ಮ ಬಳಿ ವಿಷಯಗಳನ್ನು ಹಂಚಿಕೊಳ್ಳಬಹುದು ಎನ್ನುವ ಆತ್ಮವಿಶ್ವಾಸವನ್ನು ಅವರಲ್ಲಿ ಮೂಡಿಸಿ, ಪ್ರೋತ್ಸಾಹಿಸಿ. ನಿಮ್ಮ ಪ್ರೋತ್ಸಾಹ ಅವರಿಗೆ ಉಪದೇಶ ದಂತೆ ಕಾಣುವುದು ಬೇಡ. ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ ಆದರೆ ಬೇರೆಯವರ ಬಗ್ಗೆ ಹೋಲಿಕೆ ಬೇಡ.

(……. ಮುಂದುವರಿಯುತ್ತದೆ)

ಭಾಗ 1: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.