ಶನಿವಾರ, ಜನವರಿ 22, 2022
16 °C

ಸಲಹೆ: ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಲು ಸರಳ ಸೂತ್ರಗಳು

ವೆಂಕಟ ಸುಬ್ಬರಾವ್. ವಿ Updated:

ಅಕ್ಷರ ಗಾತ್ರ : | |

Prajavani

ಮಕ್ಕಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸಲು ಪೋಷಕರು ಒತ್ತಡ ಹೇರುವ ಬದಲು ಪೂರಕ ವಾತಾವರಣ ನಿರ್ಮಾಣ ಮಾಡುವುದು ಅಗತ್ಯ.

***

ಕಳೆದ ವಾರದ ಲೇಖನದಲ್ಲಿ, ಮಕ್ಕಳು ಯಾವ್ಯಾವ ರೀತಿಯಲ್ಲಿ ಕಲಿಯುತ್ತಾರೆ ಮತ್ತು ಅವರು ಕಲಿಯುವ ರೀತಿಯನ್ನು ಆಧರಿಸಿ ಮನೆಯಲ್ಲಿ ಪೋಷಕರು ಕಲಿಕೆಗೆ ಪೂರಕವಾದ ವಾತಾವರಣವನ್ನು ಯಾವ ರೀತಿ ಕಲ್ಪಿಸಬಹುದು ಎನ್ನುವುದರ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಲಾಗಿತ್ತು.

ಈ ವಾರ ಮಕ್ಕಳ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸಲು ಮನೆಯಲ್ಲಿ ಪೋಷಕರು ಏನು ಮಾಡಬಹುದು. ಅವರ ಕಲಿಕಾ ಪ್ರಕ್ರಿಯೆಯಲ್ಲಿ ನಾವು ಹೇಗೆ ನೆರವಾಗಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

1. ಮಕ್ಕಳಿಗೆ ಓದಲು ಹೇಳಲೇಬೇಡಿ
ಹೀಗೆಂದು ಹೇಳಿದಾಗ, ಅದನ್ನು ಒಪ್ಪಿಕೊಳ್ಳುವುದು ಕಷ್ಟ, ಅಲ್ಲವಾ? ನಿಜ, ಮಕ್ಕಳಿಗೆ ಮನೆಯಲ್ಲಿ ಓದಲು ಹೇಳಲೇಬೇಡಿ. ಆದರೆ, ಅವರಲ್ಲಿ ಓದುವ ಆಸಕ್ತಿ ಮೂಡುವಂತೆ ಮಾಡಿ. ಅದು ಹೇಗೆ – ಎಂದು ಕೇಳ್ತೀರಾ? ನೋಡಿ, ನೀವು ಮಕ್ಕಳಿಗೆ ಏನಾದರೂ ಕೆಲಸ ಹೇಳಿದಾಗ, ಅವರು ಅದಕ್ಕೆ ವಿರುದ್ಧವಾದುದ್ದನ್ನೇ ಮಾಡಲು ಆಸಕ್ತಿ ತೋರುತ್ತಾರೆ. ನಾವು ಹೇಳಿದ್ದನ್ನು ಮಾಡದೇ, ನಾವು ಮಾಡುವುದನ್ನೇ ಅನುಕರಿಸುತ್ತಾರೆ, ಹೌದಲ್ಲವಾ? ಹಾಗಾಗಿ, ಮನೆಯ ಸದಸ್ಯರು ಪ್ರತಿದಿನ ಒಂದು ನಿರ್ದಿಷ್ಟ ಸಮಯದಲ್ಲಿ (ಉದಾಹರಣೆಗೆ ಪ್ರತಿದಿನ ಸಂಜೆ 7 ರಿಂದ 8 ಗಂಟೆ) ನಿಮಗೆ ಇಷ್ಟವಾದ ಯಾವುದಾದರೂ ಒಂದು ಪುಸ್ತಕವನ್ನು ಓದಲು ಪ್ರಾರಂಭಿಸಿ. ಕೆಲವು ದಿನಗಳವರೆಗೆ ಇದನ್ನು ನಿರಂತರವಾಗಿ ಮುಂದುವರಿಸಿ. ಆಗಲೂ ನೀವು ಮಗುವಿಗೆ ಓದಲು ಹೇಳಬೇಡಿ, ಒತ್ತಾಯವನ್ನೂ ಮಾಡಬೇಡಿ. ನಿಮ್ಮ ಪಾಡಿಗೆ ಓದುವುದನ್ನು ಮುಂದುವರಿಸಿ. ಆರಂಭದ ಕೆಲವು ದಿನಗಳಲ್ಲಿ ಮಕ್ಕಳು ನಿಮ್ಮ ಈ ಓದುವಿಕೆಯನ್ನು ಗಮನಿಸದಿರಬಹುದು. ಆದರೆ, ನಂತರದಲ್ಲಿ ಗಮನಿಸಲು ಪ್ರಾರಂಭಿಸುತ್ತಾರೆ. ನಂತರ ಅವರು ನಿಮ್ಮನ್ನು ಅನುಕರಿಸುತ್ತಾರೆ. ತಮ್ಮಷ್ಟಕ್ಕೆ ತಾವೇ ನಿಮ್ಮ ಬಳಿ ಬಂದು ಕುಳಿತು ಓದಲು ಶುರು ಮಾಡುತ್ತಾರೆ.

2. ಮಕ್ಕಳ ಮೇಲಿನ ನಿಯಂತ್ರಣ ಕಡಿಮೆ ಮಾಡಿ
ಕೆಲವು ಪೋಷಕರು ಮಕ್ಕಳು ಓದುವ ಸಮಯದಲ್ಲಿ ಅವರ ಪಕ್ಕದಲ್ಲಿಯೇ ಕುಳಿತು, ಓದುವ ರೀತಿಯನ್ನು ಗಮನಿಸುತ್ತಿರುತ್ತಾರೆ. ‘ಏನು ಓದುತ್ತಿದ್ದೀಯ‘ ಎಂದು ಪದೇ ಪದೇ ಕೇಳುತ್ತಿರುತ್ತಾರೆ. ಓದುವ ವಿಷಯ ಮತ್ತು ಓದುವ ರೀತಿ ಎರಡನ್ನೂ ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ‘ಹೀಗೆ ಮಾಡಿದರೆ ಮಾತ್ರ ಮಕ್ಕಳು ಕಲಿಯುತ್ತಾರೆ’ ಎಂಬುದು ಅವರ ನಂಬಿಕೆ. ನಿಜ, ಮಕ್ಕಳ ಮೇಲೆ ಸ್ವಲ್ಪಮಟ್ಟಿಗೆ ನಿಯಂತ್ರಣ ಅವಶ್ಯಕ. ಹಾಗೆಂದು, ಅದು ಅತಿಯಾಗಬಾರದು. ಇದರಿಂದ ಮಕ್ಕಳ ಕಲಿಕೆಯ ಆಸಕ್ತಿಯೇ ಕಡಿಮೆಯಾಗಬಹುದು. ಹಾಗಾಗಿ, ಮಕ್ಕಳನ್ನು ನಿಯಂತ್ರಣ ಮಾಡುವುದರ ಬದಲು, ಅವರಿಂದ ಏನಾದರೂ ಕಲಿಯಲು ಪ್ರಯತ್ನಿಸಿ!

ಉದಾಹರಣೆಗೆ; ಮಕ್ಕಳು ಶಾಲೆಯಲ್ಲಿ ಯಾವ ಪಾಠ ಕಲಿಯುತ್ತಿದ್ದಾರೆ ಎಂದು ತಿಳಿದುಕೊಳ್ಳಿ. ನಂತರ, ಆ ಪಾಠದ ಬಗ್ಗೆ ನಿಮಗಿರುವ ಆಸಕ್ತಿಯನ್ನು ತಿಳಿಸಿ. ಆ ಪಾಠವನ್ನು ಕಲಿಸುವಂತೆ ಕೇಳಿ. ನಂತರ, ಏನಾಗುತ್ತದೆ ಎಂದು ನೀವೇ ಗಮನಿಸಿ. ಆಗ ನಿಮ್ಮ ಮಕ್ಕಳೇ ನಿಮಗೆ ಶಿಕ್ಷಕರಾಗುತ್ತಾರೆ. ನಿಮಗೆ ಕಲಿಸುತ್ತಾ ತಾವೂ ಓದಿ ಕಲಿಯತ್ತಾರೆ. ಇದರಿಂದ ನಿಮ್ಮ ಮತ್ತು ಮಕ್ಕಳ ನಡುವೆ ಪರಸ್ಪರ ನಂಬಿಕೆ, ವಿಶ್ವಾಸ ಬಾಂಧವ್ಯವೂ ಹೆಚ್ಚುತ್ತದೆ.

3. ಮಕ್ಕಳನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ
ಶಾಲೆಯಲ್ಲಿ ಕೊಟ್ಟ ಚಟುವಟಿಕೆ ಅಥವಾ ಪ್ರಾಜೆಕ್ಟ್‌ ಮಾಡುವಾಗ ಮಕ್ಕಳಿಗೆ ಪೋಷಕರು ಸಹಾಯ ಮಾಡುವ ಆಸಕ್ತಿ ತೋರುತ್ತಾರೆ. ಕೆಲವು ವೇಳೆ ಅವಶ್ಯಕತೆಗಿಂತ ಹೆಚ್ಚು ಸಲಹೆ ಕೊಡುವುದು ಅಥವಾ ಸಹಾಯ ಮಾಡುವುದೂ ಇದೆ. ಹೀಗೆ ಮಾಡುವುದರಿಂದ ಮಕ್ಕಳ ಸ್ವತಂತ್ರ ಆಲೋಚನೆಗಳಿಗೆ ಅವಕಾಶವೇ ಇಲ್ಲದಂತೆ ಆಗುತ್ತದೆ. ಆದ್ದರಿಂದ ಈ ರೀತಿಯ ಕೆಲಸಗಳನ್ನು ಮಾಡುವಾಗ ಅವರಷ್ಟಕ್ಕೆ ಅವರನ್ನು ಬಿಡಿ. ಅವಶ್ಯಕತೆ ಇದ್ದಾಗ ಮಾತ್ರ ನೀವು ಭಾಗವಹಿಸಿ. ಅವರು ತಪ್ಪು ಮಾಡಿದರೆ ಮಾಡಲಿ. ಆ ತಪ್ಪುಗಳ ಬಗ್ಗೆ ನಂತರ ವಿವರಿಸಿ ಹಾಗೂ ಆ ರೀತಿಯ ತಪ್ಪುಗಳನ್ನು ಹೇಗೆ ಕಡಿಮೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ನಿಮಗೆ ತಿಳಿದಿದ್ದರೆ ಅವರಿಗೆ ವಿವರಿಸಿ. 

ನೆನಪಿಡಿ; ಶಾಲೆಯಲ್ಲಿ ಚಟುವಟಿಕೆಗಳು ಅಥವಾ ಪ್ರಾಜೆಕ್ಟ್‌ಗಳನ್ನು ಕೊಡುವುದು ನಿಮ್ಮ ಮಕ್ಕಳಿಗೆ ಹೊರತು ನಿಮಗಲ್ಲಾ !

4. ಕಲಿಯುವಿಕೆಯಲ್ಲಿ ನಿಮ್ಮ ಉತ್ಸಾಹ ಮತ್ತು ಆಸಕ್ತಿಯನ್ನು ಪ್ರದರ್ಶಿಸಿ
ಮೊದಲೇ ಹೇಳಿದಂತೆ, ನಮ್ಮ ಮಕ್ಕಳು ನಮ್ಮನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಮಕ್ಕಳ ಎದುರು ಕಲಿಯುವಿಕೆಯಲ್ಲಿನ ನಿಮ್ಮ ಉತ್ಸಾಹವನ್ನು ಮಕ್ಕಳ ಜೊತೆ ಹಂಚಿಕೊಳ್ಳಿ. ಉದಾಹರಣೆಗೆ; ನಿಮಗೆ ಗಿಡಗಳನ್ನು ಬೆಳೆಸುವ ಆಸಕ್ತಿಯಿದ್ದರೆ, ನಿಮ್ಮ ಆಸಕ್ತಿಯನ್ನು ನಿಮ್ಮ ಮಕ್ಕಳ ಜೊತೆ ಹಂಚಿಕೊಳ್ಳಿ. ಅವರನ್ನೂ ಆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಅವರು ಶಾಲೆಯಲ್ಲಿ ಗಿಡಗಳ ಭಾಗಗಳ ಬಗ್ಗೆ ಕಲಿಯುತ್ತಿದ್ದರೆ ಅದನ್ನು ನಿಮಗೆ ಕಲಿಸುವಂತೆ ಕೇಳಿ.

ನಿಮಗೆ ಅಡುಗೆ ಮಾಡುವಲ್ಲಿ ಆಸಕ್ತಿಯಿದ್ದರೆ, ಸಾಧ್ಯವಾದಾಗ ಅವರನ್ನೂ ಅಡುಗೆ ಕೆಲಸಕ್ಕೆ ತೊಡಗಿಸಿಕೊಳ್ಳಿ. ನೀವು ಉಪಯೋಗಿಸುತ್ತಿರುವ ತರಕಾರಿಗಳ ವೈಜ್ಞಾನಿಕ ಹೆಸರುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತಿಳಿಸಿ. 

(……. ಮುಂದುವರಿಯುತ್ತದೆ)

ಲೇಖಕರು: ನಿರ್ದೇಶಕರು, ಸ್ಮಾರ್ಟ್‌ ಸೆರಬ್ರಮ್‌ ಪ್ರೈ. ಲಿಮಿಟೆಡ್‌, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು