ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಎಸ್‌ಟಿ: ಬಾಹ್ಯಾಕಾಶ ಅಧ್ಯಯನ ಪದವಿಗೆ ಅವಕಾಶ

Last Updated 2 ಜನವರಿ 2022, 19:30 IST
ಅಕ್ಷರ ಗಾತ್ರ

ಐಐಎಸ್‌ಟಿ ಸಂಸ್ಥೆ ಖಗೋಳ ವಿಜ್ಞಾನದಲ್ಲಿ ಆಸಕ್ತಿಯಿರುವವರಿಗೆ ಪದವಿ, ಸ್ನಾತಕೋತ್ತರ ಪದವಿ, ಪಿಎಚ್‌ಡಿ ಮಾಡುವಂತಹ ಅವಕಾಶವನ್ನು ಒದಗಿಸಿದೆ. ನಿಗದಿಪಡಿಸಿದ ಅಂಕಗಳೊಂದಿಗೆ ಇಸ್ರೊ ಸಂಸ್ಥೆಯಲ್ಲಿ ಉದ್ಯೋಗವನ್ನೂ ಕಲ್ಪಿಸುತ್ತಿದೆ.

ಖಗೋಳ ವಿಜ್ಞಾನದ ಬಗ್ಗೆ ಆಸಕ್ತಿ ಇರುವವರಿಗೆ ಬಾಹ್ಯಾಕಾಶ ವಿಜ್ಞಾನದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪಡೆಯಲು ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿ –ಐಐಎಸ್‌ಟಿ) ಅವಕಾಶ ಕಲ್ಪಿಸಿದೆ. ಇದು ಈ ವಿಷಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ನೀಡುವ ಭಾರತದ ಏಕೈಕ ಸ್ವಾಯತ್ತ ಸಂಸ್ಥೆಯೂ ಹೌದು ಎಂಬುದು ವಿಶೇಷ.

ಕೇಂದ್ರ ಬಾಹ್ಯಾಕಾಶ ಇಲಾಖೆ ವ್ಯಾಪ್ತಿಗೆ ಬರುವ ಐಐಎಸ್‌ಟಿಯನ್ನು 2007 ಕೇರಳದ ತಿರುವನಂತಪುರಂನಲ್ಲಿ ಪ್ರಾರಂಭಿಸಲಾಯಿತು. ಇಸ್ರೊ ಅಧ್ಯಕ್ಷರು ಈ ಐಐಎಸ್‌ಟಿ ಆಡಳಿತ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಇಸ್ರೊ ಹಾಗೂ ಡಿಆರ್‌ಡಿಒ ಮತ್ತಿತರ ಪ್ರತಿಷ್ಠಿತ ಸಂಸ್ಥೆಗಳಿಗೆ ಬೇಕಾದ ತಾಂತ್ರಿಕ ಕೌಶಲವುಳ್ಳ ಸಿಬ್ಬಂದಿಯನ್ನು ನೇಮಿಸಬೇಕೆಂಬ ಉದ್ದೇಶದಿಂದ ಐಐಎಸ್‌ಟಿ ಪ್ರಾರಂಭಿಸಲಾಗಿದೆ.

ಉತ್ತಮ ಗುಣಮಟ್ಟದ ಬೋಧಕ ಸಿಬ್ಬಂದಿ, ಅಂತರರಾಷ್ಟ್ರೀಯ ಗುಣಮಟ್ಟದ ಮೂಲ ಸೌಲಭ್ಯ, ಆಧುನಿಕ ಪ್ರಯೋಗಾಲಯವನ್ನು ಹೊಂದಿರುವ ಐಐಎಸ್‌ಟಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಪ್ರಕಟಿಸಿರುವ ಎಂಜಿನಿಯರಿಂಗ್ ಸಂಬಂಧಿತ ಎನ್‌ಐಆರ್‌ಎಫ್ ರ‍್ಯಾಂಕಿಂಗ್‌ನಲ್ಲಿ 40ನೇ ಸ್ಥಾನದಲ್ಲಿದೆ.

ಪದವಿ ಕೋರ್ಸ್‌ಗಳು:ಐಐಎಸ್‌ಟಿಯಲ್ಲಿ ಪೂರ್ಣಾವಧಿಯ ವಸತಿಯುತ (ರೆಸಿಡೆನ್ಶಿಯಲ್) ನಾಲ್ಕು ವರ್ಷ ಅವಧಿಯ ಬಿಟೆಕ್ ಪದವಿಯ ಜತೆಗೆ, ಐದು ವರ್ಷದ ದ್ವಿಪದವಿಯ ಬಿಟೆಕ್ + ಎಂಟೆಕ್ ಕೋರ್ಸ್‌ ಪ್ರವೇಶಕ್ಕೆ ಅವಕಾಶವಿದೆ. ಬಿಟೆಕ್‌ಗೆ ಪ್ರವೇಶ ಪಡೆಯಲು 10+2 ಪರೀಕ್ಷೆಯಲ್ಲಿ ಪಾಸಾದ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇ 75 ರಷ್ಟು ಅಂಕ ಮತ್ತು ಪರಿಶಿಷ್ಟ ಜಾತಿ(ಎಸ್‌ಸಿ) ಮತ್ತು ಪರಿಶಿಷ್ಟ ವರ್ಗದ(ಎಸ್‌ಟಿ) ಅಭ್ಯರ್ಥಿಗಳು ಕನಿಷ್ಠ ಶೇ 65 ಅಂಕ ಪಡೆದಿರಬೇಕು. (2020-21ನೇ ಸಾಲಿನಲ್ಲಿ ಕೋವಿಡ್-19 ಕಾರಣದಿಂದಾಗಿ ಸಾಮಾನ್ಯ ಅರ್ಹತೆಯಲ್ಲಿ ಅಂಕದ ಮಾನದಂಡವನ್ನು ಕೈಬಿಟ್ಟು ಜೆಇಇ ಅಡ್ವಾನ್‌ನಲ್ಲಿ ಗಳಿಸಿದ ಅಂಕವನ್ನು ಮಾತ್ರ ಆಯ್ಕೆಗೆ ಪರಿಗಣಿಸಲಾಗಿತ್ತು).

ಅಭ್ಯರ್ಥಿಯ ದ್ವಿತೀಯ ಪಿಯುಸಿಯೊಂದಿಗೆ ಎನ್‌ಟಿಎ ಆಯೋಜಿಸುವ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಈ ಕೆಳಗೆ ನೀಡಿರುವಂತೆ ಕನಿಷ್ಠ ಅಂಕಗಳನ್ನು ಪಡೆದಿರಬೇಕು.

1. ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್‌ನಲ್ಲಿ ‌‌‌‌ಕನಿಷ್ಠ ಶೇ 16 ಅಂಕ ಗಳಿಸಬೇಕು. ಭೌತ, ಗಣಿತ ಮತ್ತು ರಸಾಯನಶಾಸ್ತ್ರ ವಿಷಯದಲ್ಲಿ ತಲಾ ಕನಿಷ್ಠ ಶೇ 14 ಅಂಕ ಗಳಿಸಬೇಕು.

2. ಹಿಂದುಳಿದ ವರ್ಗದ ವಿದ್ಯಾರ್ಥಿಗಳು, ಕನಿಷ್ಠ ಶೇ 14.4ರಷ್ಟು ಅಂಕವನ್ನು ಗಳಿಸಬೇಕು ಮತ್ತು ಭೌತ, ಗಣಿತ ಮತ್ತು ರಸಾಯನಶಾಸ್ತ್ರ ವಿಷಯದಲ್ಲಿ ಕನಿಷ್ಠ ಶೇ 3.6 ಅಂಕ ಗಳಿಸಬೇಕು.

3. ಪರಿಶಿಷ್ಟ ಜಾತಿ ಮತ್ತು ವರ್ಗ ಕನಿಷ್ಠ ಶೇ 8ರಷ್ಟು ಅಂಕವನ್ನು ಗಳಿಸಬೇಕು ಮತ್ತು ಭೌತ, ಗಣಿತ ಮತ್ತು ರಸಾಯನಶಾಸ್ತ್ರ ಪ್ರತಿ ವಿಷಯದಲ್ಲಿ ತಲಾ ಕನಿಷ್ಠ ಶೇ 2.00 ಅಂಕ ಗಳಿಸಿರಬೇಕು.

ಐಐಎಸ್‌ಟಿ ವೆಬ್‌ಸೈಟ್‌ ಮೂಲಕ ಪರೀಕ್ಷಾ ಶುಲ್ಕ ಪಾವತಿಸಿ, ಹೆಸರು ನೋಂದಾಯಿಸಿದ ಅಭ್ಯರ್ಥಿಗಳು ಮಾತ್ರ ಆಯ್ಕೆಗೆ ಅರ್ಹರಾಗುತ್ತಾರೆ. ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ರ‍್ಯಾಂಕ್ ಪಟ್ಟಿಯನ್ನು ಮೀಸಲಾತಿ ಅನುಸಾರ ಪ್ರಕಟಿಸಲಾಗುತ್ತದೆ.

ಪದವಿ ಕೋರ್ಸ್‌ಗಳು

ಪದವಿಯಲ್ಲಿ ಮೂರು ವಿಭಾಗಗಳಿವೆ. ಒಟ್ಟು 154 ಸ್ಥಾನಗಳ ಭರ್ತಿಗೆ ಅವಕಾಶವಿದೆ. ಬಿಟೆಕ್‌ ಏರೋಸ್ಪೇಸ್‌ನಲ್ಲಿ 76, ಬಿಟೆಕ್‌ ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್‌ನಲ್ಲಿ 66,ದ್ವಿಪದವಿಯ ಬಿಟೆಕ್‌ ಮತ್ತು ಎಂಟೆಕ್‌ ಫಿಸಿಕಲ್ ಸೈನ್ಸ್ /ಡ್ಯೂಯಲ್ ಡಿಗ್ರಿಯಲ್ಲಿ 22 ಸ್ಥಾನಗಳಿವೆ.

ವರ್ಗವಾರು ಮೀಸಲು

ಕೇಂದ್ರ ಸರ್ಕಾರದ ಮೀಸಲಾತಿ ನಿಯಮಾನುಸಾರವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇ 10, ಪರಿಶಿಷ್ಟ ಜಾತಿಯವರಿಗೆ ಶೇ 15, ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆ ಶೇ 7.5, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ
ಶೇ 27ರಷ್ಟು ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶೇ 5ರಷ್ಟು ಸ್ಥಾನಗಳನ್ನು ಮೀಸಲಿಡಲಾಗಿದೆ.

ಸ್ನಾತಕೋತ್ತರ ಪದವಿ

ಐಐಎಸ್‌ಟಿಯ ಈ ಪದವಿಯಲ್ಲಿ ಪವರ್ ಎಲೆಕ್ಟ್ರಾನಿಕ್ಸ್, ಜಿಯೊ ಇನ್‌ಫಾರ್ಮೆಟಿಕ್ಸ್‌, ಆಪ್ಟಿಕಲ್ ಎಂಜಿನಿಯರಿಂಗ್‌, ಸ್ಟ್ರಕ್ಚರ್‌ ಅಂಡ್ ಡಿಸೈನ್, ವಿಎಎಲ್‌ಎಸ್‌ಐ ಅಂಡ್ ಮೈಕ್ರೋಸಿಸ್ಟಂ, ಕಂಟ್ರೋಲ್ ಸಿಸ್ಟಂ, ಏರೋಡೈನಾಮಿಕ್ಸ್ ಅಂಡ್ ಫ್ಲೈಟ್‌ ಮೆಕ್ಯಾನಿಸಂ ಮೊದಲಾದ 16 ವಿವಿಧ ಸ್ಪೆಷಲೈಸೇಷನ್ ಕೋರ್ಸ್‌ ಕಲಿಯಲು ಅವಕಾಶವಿರುತ್ತದೆ.

ವಯಸ್ಸಿನ ಅರ್ಹತೆ ‌

ಅಭ್ಯರ್ಥಿಯು ಭಾರತೀಯ ಪ್ರಜೆಯಾಗಿರಬೇಕು. ಕನಿಷ್ಠ 32 ವರ್ಷದೊಳಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿಯ ಸಡಿಲಿಕೆ ಇದೆ.

ಶೈಕ್ಷಣಿಕ ಅರ್ಹತೆ

ಆಯಾ ಶಾಖೆ (ಬ್ರಾಂಚ್‌)ಗಳಿಗೆ ನಿರ್ದಿಷ್ಟಪಡಿಸಲಾದ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಸಾಮಾನ್ಯ ವರ್ಗ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳು ಶೇಕಡ 60 ರಷ್ಟು ಅಂಕ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಭ್ಯರ್ಥಿಗಳು ಪದವಿಯಲ್ಲಿ ಶೇ 55 ರಷ್ಟು ಅಂಕವನ್ನು ಗಳಿಸಿರಬೇಕು. ಅದರೊಂದಿಗೆ ಗೇಟ್ (GATE) ಪ್ರವೇಶ ಪರೀಕ್ಷೆಯಲ್ಲಿ ಅರ್ಹತಾ ಅಂಕವನ್ನು ಗಳಿಸಿರಬೇಕು. ಗೇಟ್ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಉದ್ಯೋಗಾವಕಾಶ

ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಸಿಜಿಪಿಎ 10ಕ್ಕೆ 7.5 ಕ್ಕಿಂತ ಹೆಚ್ಚಿನ ಅಂಕಗಳಿಸಿದವರಿಗೆ ನೇರವಾಗಿ ಇಸ್ರೊ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಉದ್ಯೋಗ ಅವಕಾಶ ನೀಡಲಾಗುತ್ತದೆ. ಅಲ್ಲದೆ ಎಚ್‌ಎಎಲ್, ಬಿಎಚ್‌ಇಎಲ್ ಸೇರಿದಂತೆ ಸರ್ಕಾರಿ ಸ್ವಾಮ್ಯದ ಹಾಗೂ ವಿವಿಧ ಖಾಸಗಿ ಕಂಪನಿಗಳಲ್ಲಿಯೂ ಉದ್ಯೋಗಕ್ಕೆ ಸೇರುವ ಅವಕಾಶವಿರುತ್ತದೆ.

ಖಗೋಳ ವಿಜ್ಞಾನದ ಬಗ್ಗೆ ಕುತೂಹಲ ಹೊಂದಿದವರು ತಮ್ಮ ಆಸಕ್ತಿದಾಯಕ ವಿಷಯದಲ್ಲಿ ಪದವಿ ಗಳಿಸಲು ಹಾಗೂ ತಾವು ಪದವಿ ಪಡೆದ ವಿಷಯದಲ್ಲಿ ವೃತ್ತಿ ಕೈಗೊಳ್ಳುವ ವಿಶೇಷ ಅವಕಾಶವನ್ನು ಐಐಎಸ್‌ಟಿ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ admission@iist.ac.in ಗೆ ಸಂಪರ್ಕಿಸಬಹುದು.

ಪಿಎಚ್‌ಡಿ ಪ್ರವೇಶ

ಸಾಮಾನ್ಯವಾಗಿ ಪ್ರತಿ ವರ್ಷ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಪಿ.ಎಚ್‌.ಡಿ ಪ್ರವೇಶಕ್ಕಾಗಿ ಬಾಹ್ಯಾಕಾಶ ಸಂಬಂಧಿತ ಕೋರ್ಸ್‌ಗಳನ್ನು ಅಧ್ಯಯನ ಮಾಡಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗುತ್ತದೆ. ಅಭ್ಯರ್ಥಿಯು ಭಾರತೀಯ ನಾಗರೀಕನಾಗಿದ್ದು, 35 ವರ್ಷದೊಳಗಿರಬೇಕು. ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಜೊತೆಯಲ್ಲಿ ಯು.ಜಿ.ಸಿ/ಎನ್‌ಇ.ಟಿ/ಸಿಎಸ್‌ಐಆರ್/ ಜೆಇಎಸ್‌ಟಿ ಯಲ್ಲಿ ಅರ್ಹತಾದಾಯಕ ಅಂಕವನ್ನು ಗಳಿಸಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT