ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ವಿಶೇಷ | ದಾಖಲೆ ಸಂಖ್ಯೆಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ !

ಬಿಬಿಎಂಪಿ ಶಾಲಾ–ಕಾಲೇಜುಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳ ಬಹುಮಾನಕ್ಕೆ ಈ ಬಾರಿ ₹ 44.20ಲಕ್ಷ ವೆಚ್ಚ
Last Updated 21 ಆಗಸ್ಟ್ 2021, 20:39 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿರುವ ಬಿಬಿಎಂಪಿ ಶಾಲಾ–ಕಾಲೇಜುಗಳಲ್ಲಿ ಈ ಬಾರಿ ಹೊಸ ಹುರುಪು ಕಂಡು ಬರುತ್ತಿದೆ. ಇದೇ ಮೊದಲ ಬಾರಿಗೆ ದಾಖಲೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರೋತ್ಸಾಹ ಧನ ಪಡೆಯುವ ಉತ್ಸಾಹದಲ್ಲಿದ್ದಾರೆ.

ಬಿಬಿಎಂಪಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಶೇ 85ಕ್ಕಿಂತ ಹೆಚ್ಚು ಅಂಕಗಳಿಸಿದರೆ ತಲಾ ₹25 ಸಾವಿರ, ಕಾಲೇಜು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರೆ ತಲಾ ₹35 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತದೆ. ಪ್ರತಿ ವರ್ಷ ಈ ಸೌಲಭ್ಯ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಷ್ಟು ಇರುತ್ತಿತ್ತು. ಈ ಉದ್ದೇಶಕ್ಕಾಗಿ ಮೀಸಲಿಟ್ಟ ಅನುದಾನವೂ ಬಳಕೆಯಾಗದೇ ಉಳಿಯುತ್ತಿತ್ತು.

ಈ ಬಾರಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿರುವುದರಿಂದ ಈ ಸೌಲಭ್ಯಕ್ಕೆ ಅರ್ಹರಾಗಿರುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ. ಬಿಬಿಎಂಪಿ ಶಾಲೆಗಳಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದವರಲ್ಲಿ 62 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದವರಲ್ಲಿ 82 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ. ಅಂದರೆ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ₹15.50 ಲಕ್ಷ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ₹28.70 ಲಕ್ಷ ಸೇರಿ ಒಟ್ಟು ₹44.20 ಲಕ್ಷ ಪ್ರೋತ್ಸಾಹಧನವನ್ನು ಈ ಬಾರಿ ವಿತರಿಸಲಾಗುತ್ತಿದೆ.

ಫಲಿತಾಂಶ ಪ್ರಕಟವಾಗಿ ಕೆಲವು ದಿನಗಳಲ್ಲಿಯೇ ಪ್ರೋತ್ಸಾಹ ಧನ ವಿತರಣೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಕೋವಿಡ್‌ ಬಿಕ್ಕಟ್ಟು ಇರುವುದರಿಂದ ವಿಳಂಬವಾಗಿದೆ. 15 ದಿನಗಳಲ್ಲಿ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ವಿತರಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದರು.

‘2019–20ನೇ ಸಾಲಿನಲ್ಲಿ ₹50 ಲಕ್ಷ, 2020–21ನೇ ಸಾಲಿನಲ್ಲಿ ₹50 ಲಕ್ಷವನ್ನು ಈ ಉದ್ದೇಶಕ್ಕಾಗಿ ಮೀಸಲಿಡಲಾಗಿತ್ತು. ಆದರೆ, ಅರ್ಹ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. 2020–21ನೇ ಸಾಲಿನಲ್ಲಿ ಪ್ರೋತ್ಸಾಹ ಧನ ಮತ್ತು ಶಿಷ್ಯವೇತನ ವಿತರಣೆಗಾಗಿಯೇ ₹1.10 ಕೋಟಿ ಮೀಸಲಿಡಲಾಗಿದೆ’ ಎಂದು ಬಿಬಿಎಂಪಿ ಶಿಕ್ಷಣ ವಿಭಾಗದ ನಿರ್ದೇಶಕ ಹನುಮಂತಯ್ಯ ಹೇಳಿದರು.

‘ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಕಲ ಪ್ರೋತ್ಸಾಹ ನೀಡಲಾಗುತ್ತಿದೆ. ಎಷ್ಟೇ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಪಡೆದರೂ ಅವರಿಗೆ ಪ್ರೋತ್ಸಾಹಧನ ವಿತರಿಸುವಷ್ಟು ಹಣ ಮೀಸಲಿಡಲಾಗುತ್ತಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಶಿಕ್ಷಣ) ರೆಡ್ಡಿ ಶಂಕರ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಬಿಎಂಪಿ ಶಾಲಾ–ಕಾಲೇಜುಗಳಲ್ಲಿ ಓದುತ್ತಿರುವವರಿಗೆ ವಿದ್ಯಾರ್ಥಿ ವೇತನ, ಶಿಷ್ಯ ವೇತನ, ಪ್ರೋತ್ಸಾಹ ಧನ ಸೇರಿದಂತೆ ಹಲವು ಸೌಲಭ್ಯಗಳನ್ನು ಬಿಬಿಎಂಪಿ ನೀಡುತ್ತಿದೆ. ಈ ವರ್ಷ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವೂ ಹೆಚ್ಚಾಗಿದೆ’ ಎಂದು ಮುಖ್ಯಶಿಕ್ಷಕಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT