ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾರ್ಥಿಗಳೇ ಗಮನಿಸಿ...

Last Updated 27 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಅವಸರದಲ್ಲಿ ಕೆಲವು ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಪ್ರಶ್ನೆ ಸಂಖ್ಯೆ ಹಾಕುವುದನ್ನೇ ಮರೆತು ಉತ್ತರ ಬರೆಯುತ್ತಾರೆ. ಆದರೆ ಮೌಲ್ಯ ಮಾಪನ ಮಾಡುವವರು, ಪ್ರತಿಪ್ರಶ್ನೆ ಸಂಖ್ಯೆಗೂ ಎಷ್ಟು ಅಂಕ ಪಡೆದಿರುವರೆಂದು ನಮೂದಿಸಬೇಕು. ಪ್ರಶ್ನೆ ಸಂಖ್ಯೆ ಹಾಕದೆ ಬರೆದರೆ ಯಾವ ಪ್ರಶ್ನೆಗೆ ಈ ಉತ್ತರ ಎಂದು ಪರಿಗಣಿಸಲು ಕಷ್ಟ ಆಗುತ್ತದೆ. ಆದ್ದರಿಂದ ಪ್ರಶ್ನೆ ಸಂಖ್ಯೆಯನ್ನು ನಮೂದಿಸಲೇಬೇಕು. ಇನ್ನು ಕೆಲವರು ಒಂದು ಪ್ರಶ್ನೆ ಸಂಖ್ಯೆಯನ್ನು ನಮೂದಿಸುತ್ತಾರೆ. ನಂತರ, ಇನ್ನೊಂದು ಪ್ರಶ್ನೆಗೆ ಉತ್ತರ ಸುಲಭ ಎನಿಸಿ ಆ ಪ್ರಶ್ನೆಯ ಉತ್ತರವನ್ನು ಬರೆಯುತ್ತಾರೆ. ಆದರೆ ನಮೂದಿಸಿರುವ ಪ್ರಶ್ನೆ ಸಂಖ್ಯೆಯನ್ನು ಬದಲಿಸಲು ಮರೆಯುತ್ತಾರೆ. ಆಗ ಅವರು ಬರೆದ ಉತ್ತರ ಸರಿ ಇದ್ದರೂ, ಅದು ನಮೂದಿಸಿದ ಪ್ರಶ್ನೆ ಸಂಖ್ಯೆಯ ಪ್ರಶ್ನೆಗೆ ಅದು ಸರಿ ಉತ್ತರವಾಗಿರುವುದಿಲ್ಲ. ಈ ಸಮಸ್ಯೆ ಆಗದಂತೆ ಎಚ್ಚರವಿರಲಿ. ಯಾವ ಪ್ರಶ್ನೆ ಸಂಖ್ಯೆ ಹಾಕಿರುತ್ತೀರೋ, ಅಲ್ಲಿ ಬರೆದ ಉತ್ತರವೂ ಆ ಪ್ರಶ್ನೆಯದ್ದೇ ಆಗಿರುವಂತೆ ಗಮನಿಸಿಕೊಳ್ಳಬೇಕು.

ರೋಮನ್ ನಂಬರ್ ಮತ್ತು ಪ್ರಶ್ನೆ ಸಂಖ್ಯೆಯನ್ನು ಮಾರ್ಜಿನ್‌ನ ಹೊರಗೆ ಬರೆಯಬೇಕು. ಉಳಿದಂತೆ ಉತ್ತರದಲ್ಲಿ ಪಾಯಿಂಟ್‌ಗಳನ್ನು ಬರೆಯುವಾಗ ಅವುಗಳಿಗೆ ನಂಬರನ್ನೊ, a,b,c,d ಯನ್ನೊ ಹಾಕಬೇಕಿದ್ದರೆ, ಅದು ಮಾರ್ಜಿನ್ ಒಳಗೆ ಇರಬೇಕು.

ಸ್ಫುಟವಾಗಿರಲಿ ಬರಹ

ಅಕ್ಷರಗಳನ್ನು ಈ ಕ್ಷಣದಲ್ಲಿ ಸುಂದರಗೊಳಿಸಲು ಸಾಧ್ಯವಿಲ್ಲ. ಅದು ‘ಕಾಪಿ ರೈಟಿಂಗ್‌’ ಪುಸ್ತಕದಲ್ಲಿ ಬರೆದು ಬರೆದು ದೀರ್ಘಕಾಲ ಅಭ್ಯಾಸ ಮಾಡಬೇಕಾಗುತ್ತದೆ. ಅದು ತಕ್ಷಣಕ್ಕೆ ಆಗುವುದಿಲ್ಲ. ಹಾಗಾಗಿ, ಪರೀಕ್ಷೆ ಉತ್ತರವನ್ನು ಸ್ಫುಟವಾಗಿ ಬರೆಯಬಹುದು. ಪದಗಳ ನಡುವೆ ಜಾಗ (ಸ್ಪೇಸ್) ಕೊಟ್ಟರೆ ಸ್ಪುಟವಾಗಿ ಕಾಣುತ್ತದೆ. ಒಟ್ಟಿನಲ್ಲಿ ಅಕ್ಷರಗಳು ಸುಲಭವಾಗಿ ಓದಲು ಸಾಧ್ಯವಾಗುವಂತಿರಬೇಕು.

ಕೆಲವು ವಿದ್ಯಾರ್ಥಿಗಳು ಅತೀ ಚಿಕ್ಕ ಅಕ್ಷರದಲ್ಲಿ ಬರೆಯುತ್ತಾರೆ. ಸಣ್ಣ ಅಕ್ಷರದ ಬರಹ ಸ್ಫುಟವಾಗಿ ಕಾಣಬೇಕಾದರೆ ಬಹಳ ನಿಧಾನವಾಗಿ ಬರೆಯಬೇಕಾಗುತ್ತದೆ. ಆದರೆ ಪರೀಕ್ಷೆಯಲ್ಲಿ ಅದು ಸಾಧ್ಯವಿಲ್ಲ. ಚಿಕ್ಕ ಗಾತ್ರದ ಅಕ್ಷರದಲ್ಲಿ ಸ್ವಲ್ಪ ವೇಗವಾಗಿ ಬರೆದರೆ ಬರೆದದ್ದು ಏನೆಂದೇ ಗೊತ್ತಾಗುವುದಿಲ್ಲ. ಆದ್ದರಿಂದ ತೀರಾ ಚಿಕ್ಕ ಅಕ್ಷರದ ಬರಹ ಸೂಕ್ತವಲ್ಲ.

‘ಸಮಯ’ ಬಳಸಿಕೊಳ್ಳಿ

ಇತ್ತೀಚಿನ ದಿನಗಳಲ್ಲಿ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಮಕ್ಕಳಿಗೆ ಸವಾಲಾಗುತ್ತಿದೆ. ಸಮಾಜ ವಿಜ್ಞಾನ ಪಠ್ಯಕ್ಕೂ ವಿಪರೀತ ಪಾಠಗಳು ಸೇರಿಕೊಂಡು ಕಲಿಕಾ ಹೊರೆ ನಿರ್ಮಾಣವಾಗಿದೆ. ಈ ನಡುವೆ, ‘ಗಣಿತ ಮತ್ತು ಇಂಗ್ಲಿಷ್ ಕಷ್ಟ’ ಎಂಬ ಹಳೇ ನಂಬಿಕೆಗೆ ಹೆಚ್ಚು ಒತ್ತು ಕೊಟ್ಟು ವಿದ್ಯಾರ್ಥಿಗಳು ಅಭ್ಯಾಸ ನಡೆಸಿದ್ದಾರೆ. ಆದರೆ, ಗಣಿತದಲ್ಲಿ ಸೂತ್ರ ಮತ್ತು ತಾಂತ್ರಿಕ ಅಂಶಗಳು, ಇಂಗ್ಲಿಷ್‌ನಲ್ಲಿ ಕತೆಗಳು ಮತ್ತು ವ್ಯಾಕರಣಗಳು ಮಕ್ಕಳು ಉತ್ತೀರ್ಣವಾಗಲು ತುಸು ನೆರವಾಗುತ್ತವೆ. ವಿಜ್ಞಾನ‌ ಮತ್ತು ಸಮಾಜ ವಿಜ್ಞಾನ ಹಾಗಲ್ಲ. ಇವುಗಳಲ್ಲಿ ಈಗ ಬ್ಯಾಂಕ್ ರೇಟ್ ಪಾಲಿಸಿ, ರೆಪೊದಂತಹ ಸ್ವಲ್ಪ ಪ್ರಯತ್ನ‌ಪಟ್ಟು ಅರ್ಥ ಮಾಡಿಕೊಳ್ಳಬೇಕಾದ ಉನ್ನತ ಪರಿಕಲ್ಪನೆಗಳು 10ನೇ ತರಗತಿಯಲ್ಲೇ ಬರುತ್ತವೆ. ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಇಲ್ಲದಿದ್ದರೆ ಇಂಥವನ್ನೆಲ್ಲ ಅರ್ಥ ಮಾಡಿಕೊಳ್ಳುವುದು ಸವಾಲಾಗುತ್ತದೆ.

ಹಾಗೆಂದು ಭಯಪಡಬೇಕಾಗಿಲ್ಲ. ಪ್ರತಿ ಪರೀಕ್ಷೆಗೂ ಒಂದು ದಿನವಂತೂ ರಜೆ ಇದೆ. ಸವಾಲು ಎನಿಸುವ ಪರಿಕಲ್ಪನೆಗಳನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಿ. ಆಮೇಲೆ ಆ ಇಡೀ ಪಾಠ ಸುಲಭವಾಗಿ ಗೊತ್ತಾಗುತ್ತದೆ. ಇಷ್ಟನ್ನು ಮಾಡಲು ಆರು ಗಂಟೆ ಸಾಕು. ಆಗ ವಿಜ್ಞಾನ, ಸಮಾಜ ವಿಜ್ಞಾನವೂ ಸಲೀಸು.

ಪರೀಕ್ಷೆಗೆ ನಿರಾಳವಾಗಿ ಹೋಗಿ. ಅತಿಯಾದ ಮಾನಸಿಕ ಒತ್ತಡ ಮತ್ತು ಹಿಂಸೆಯಾಗದಂತೆ ನೋಡಿಕೊಳ್ಳಿ. ಕೆಲವೊಮ್ಮೆ ಒಂದು ಪರೀಕ್ಷೆಯಲ್ಲಿ ಸ್ವಲ್ಪ ಹಿನ್ನಡೆಯಾದರೆ ಅದರ ಬಗ್ಗೆಯೇ ಚಿಂತಿಸಬೇಡಿ. ಇದರಿಂದ ಉಳಿದ ಪತ್ರಿಕೆಗಳನ್ನು ಬರೆಯಲು ತೊಂದರೆಯಾಗುತ್ತದೆ. ಈ ಬಗ್ಗೆ ಪಾಲಕರು ಶೈಕ್ಷಣಿಕ ಸುಗಮಕಾರರ ರೀತಿಯಲ್ಲಿ ಮಕ್ಕಳೊಂದಿಗೆ ವರ್ತಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT