ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಂಗಿ ಕಟ್ಟಿದ ಸುಬ್ಬೇಗೌಡ್ರು!

Last Updated 17 ಜೂನ್ 2019, 19:30 IST
ಅಕ್ಷರ ಗಾತ್ರ

‘ಅಭಿವೃದ್ಧಿ’ ಎಂದಾಗ ಕನ್ನಂಗಿ ಗ್ರಾಮಸ್ಥರಿಗೆ ಥಟ್ಟನೆ ಸುಬ್ಬೇಗೌಡ್ರ ಹೆಸರು ನೆನಪಾಗುತ್ತದೆ. ಅವರ ಚಿತ್ರ ಕಣ್ಣೆದರು ತೆರೆದುಕೊಳ್ಳುತ್ತದೆ. ಮುಕ್ಕಾಲು ಶತಮಾನಗಳ ಹಿಂದೆ ಸುಬ್ಬಯ್ಯ ಗೌಡರು ಊರನ್ನು ಅಭಿವೃದ್ಧಿಪಡಿಸಿರುವುದು ಈಗಲೂ ಜನರ ಮನದಲ್ಲಿ ಹಸಿರಾಗಿಯೇ ಇದೆ. ಹಾಗೆಯೇ ಜನರ ಮನದಲ್ಲಿ ಪ್ರೀತಿಯಿಂದ ‘ಸುಬ್ಬೇಗೌಡ್ರು’ ಆಗಿಯೇ ಉಳಿದಿದ್ದಾರೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿರುವ ಈ ಕನ್ನಂಗಿ ಗ್ರಾಮವನ್ನು ಮೂರ್ನಾಲ್ಕು ದಶಕಗಳ ಕಾಲ ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ದಿದ್ದಾರೆ ‌ಸುಬ್ಬೇಗೌಡ್ರು. ಹೀಗಾಗಿ ‘ಬೆಂಗಳೂರಿಗೊಬ್ರೇ ಕೆಂಪೇಗೌಡ್ರು.. ಕನ್ನಂಗಿಗೊಬ್ಬರೇ ಸುಬ್ಬೇಗೌಡ್ರು’ ಎಂದು ಜನರು ಆಡುವ ಮಾತು.

ಸಾಮಾನ್ಯವಾಗಿ, ಎಲ್ಲರೂ ಊರು ಇರುವ ಜಾಗದಲ್ಲಿ ಮನೆ ಕಟ್ಟಿಕೊಳ್ಳುತ್ತಾರೆ. ಆದರೆ, ಗೌಡ್ರು, ತಾವಿರುವ ಜಾಗದಲ್ಲೇ ಕನ್ನಂಗಿಯಂತಹ ಊರು ಕಟ್ಟಿದ್ದಾರೆ. ‘ಈ ಕಾರಣಕ್ಕಾಗಿಯೇ ಸುಬ್ಬೇಗೌಡ್ರು ನಮ್ಮಂತಹ ಆಡಳಿತಗಾರರಿಗೆ ಒಂದು ಮಾದರಿ’ ಎಂದು ಶಾಸಕ ಆರಗ ಜ್ಞಾನೇಂದ್ರ ಇತ್ತೀಚೆಗಿನ ಕಾರ್ಯಕ್ರಮದಲ್ಲಿ ಅವರನ್ನು ನೆನಪಿಸಿಕೊಂಡರು.

1904ರಲ್ಲಿ ಹುಟ್ಟಿದ ಗೌಡ್ರು, 1980ರಲ್ಲಿ ನಿಧನರಾದರು. ಬದುಕಿದ್ದ 76 ವರ್ಷಗಳ ಮುಕ್ಕಾಲು ಪಾಲು ಆಯಸ್ಸನ್ನು ಊರ ಅಭಿ
ವೃದ್ಧಿಗೆ ಮುಡಿಪಾಗಿಟ್ಟಿದ್ದಾರೆ. ಆಗ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಜನರ ಮನಸ್ಸಿನಲ್ಲಿ ಅಚ್ಚಾಗಿ ಉಳಿದಿದೆ. ಅವರ ದೂರ
ಗಾಮಿ ಮತ್ತು ಯೋಜನಾಬದ್ಧ ನಿಲುವುಗಳಿಂದಾಗಿ ಈ ಊರು ಅಭಿವೃದ್ಧಿಯಾಗಲು ಸಾಧ್ಯವಾಗಿದೆ ಎಂಬುದು ಜನರ ನಂಬಿಕೆ.

ಸುಬ್ಬೇಗೌಡ್ರು ಐದು ಗ್ರಾಮಗಳ ಪಟೇಲರಾಗಿದ್ದರು. ಜತೆಗೆ ರಾಜಕೀಯ ಸಂಪರ್ಕವೂ ಇತ್ತು. ಹೀಗಾಗಿ ಊರಿಗೆ ಬೇಕಾದ ರಸ್ತೆ, ಸೇತುವೆ, ಆಸ್ಪತ್ರೆ, ಹೆರಿಗೆ ವಾರ್ಡು, ಜಾನುವಾರು ಆಸ್ಪತ್ರೆ, ದೊಡ್ಡಿಗಳನ್ನು ಮಂಜೂರು ಮಾಡಿಸಿಕೊಂಡಿದ್ದರು. ಅಷ್ಟೇ ಅಲ್ಲ, ಅವೆಲ್ಲವನ್ನೂ ಕಾರ್ಯರೂಪಕ್ಕೆ ತರಲು ಪಟ್ಟು ಹಿಡಿದು, ಕೆಲಸ ಮಾಡಿಸುತ್ತಿದ್ದರು. ಆ ಕಾಲದಲ್ಲಿ ಕನ್ನಂಗಿ-ಹಣಗೆರೆಯ ರಸ್ತೆ ನಿರ್ಮಾಣಕ್ಕೆ ₹10 ಸಾವಿರ ಮಂಜೂರು ಮಾಡಿ ಮಂಜಪ್ಪನವರು ಬರೆದಿದ್ದ ಪತ್ರ ಈಗಲೂ ಇದೆ!.

ಸೇತುವೆ ಕಟ್ಟಿಸಿದ ನೆನಪು

ಗೌಡ್ರ ಅಭಿವೃದ್ಧಿ ವಿಚಾರಗಳಲ್ಲಿ ಹಳ್ಳಿಯವರು ಪ್ರಮುಖವಾಗಿ ನೆನಪಿಸಿಕೊಳ್ಳುವುದು ಕುಂಟೆಹಳ್ಳಕ್ಕೆ ಶಿಲೇಕುಣಿ ಸೇತುವೆ ಕಟ್ಟಿದ್ದು. ಈ ಸೇತುವೆ ಕಟ್ಟುವ ಮುನ್ನ ಈ ಹಳ್ಳದಲ್ಲಿ ಬೇಸಿಗೆಯಲ್ಲೂ ಬಟ್ಟೆ ಎತ್ತಿಕೊಂಡು ನೀರಿಗಿಳಿದು ಹೊಳೆ ದಾಟಬೇಕಿತ್ತು. ಮಳೆಗಾಲ ದಲ್ಲಂತೂ ಈ ಹಳ್ಳ ತೀರ್ಥಹಳ್ಳಿ ಭಾಗದ ಸಂಪರ್ಕವೇ ತುಂಡಾಗು ತ್ತಿತ್ತು. ಆಗೆಲ್ಲಾ ಗಾಡಿ ಹಾದಿಯಂತಹ ರಸ್ತೆಗಳ ಮೇಲೆ ಜೋಡೆತ್ತಿನ ಗಾಡಿಯೇ ಪ್ರಮುಖ ವಾಹನ. ಇಂಥ ಹಳ್ಳಕ್ಕೆ ಸೇತುವೆ ಕಟ್ಟಿಸಿದರು ಗೌಡರು. ರಸ್ತೆ– ಸೇತುವೆಯಾದ ಮರುದಿನವೇ ‘ಇಲಾಹಿ’ ಎಂಬ ಬಸ್ಸೊಂದು ಸಂಚಾರ ಆರಂಭಿಸಿತು. ಇದು ಆ ಕಾಲದ ಬೆರಗು!

‘ಓದುವ ವರ್ಗವೇ ಬೇರೆ. ಓದು, ಸಗಣಿ ಎತ್ತುವಾ, ಗದ್ದೆ ಹೂಡುವಾ ನಮಗಲ್ಲ’ ಅಂತ ಬಡವರು ಗಂಭೀರವಾಗಿ ಭಾವಿಸಿದ್ದರು. ಹಳ್ಳಿ ಮಕ್ಕಳ ಕಲಿಕೆಗೆ ಆಸ್ಪದವೇ ಇಲ್ಲದ ಕಾಲವದು. ಇಂಥ ಸೂಕ್ಷ್ಮಗಳನ್ನೆಲ್ಲ ಗಮನಿಸಿದ್ದ ಗೌಡ್ರು, ತಮ್ಮ ಮನೆಯಂಗಳದಲ್ಲೇ ಶಾಲೆಯ ಕಲ್ಪನೆ ಹುಟ್ಟುಹಾಕಿದ್ದರು. ತಮ್ಮ ಮಗಳ ಓದಿಗಾಗಿ ಮನೆಯಂಗಳದಲ್ಲೇ ಶಾಲೆ ತೆರೆದು ಮೇಷ್ಟ್ರನ್ನು ನಿಯೋಜಿಸಿದ್ದರು. ಪಾಠ ಕೇಳಲು ಮಗಳೊಟ್ಟಿಗೆ ಅಕ್ಕಪಕ್ಕದ ಕೂಲಿಕಾರ್ಮಿಕರ ಮಕ್ಕಳನ್ನೆಲ್ಲಾ ಸೇರಿಸಿಕೊಂಡರು. ಪಾಪ, ಉಳಿದ ಮಕ್ಕಳಿಗೆ ಪಾಠಕ್ಕಿಂತ ಹೆಚ್ಚಾಗಿ ಬೇಕಿದ್ದುದು ಗೌಡರ ಮನೆಯಲ್ಲೇ ಸಿಗುತ್ತಿದ್ದ ಮಧ್ಯಾಹ್ನದ ಊಟ.

ಗೌಡರ ಪರಿಶ್ರಮದಿಂದ ದಿನ ಕಳೆದಂತೆ ಶಾಲೆ ತನ್ನ ಸ್ವತಂತ್ರ ನೆಲೆ ಕಂಡುಕೊಂಡಿತು. 1939ರಲ್ಲಿ ಸರ್ಕಾರದ ಅಧಿಕೃತ ಮುದ್ರೆ ಪಡೆಯಿತು. ಆಗೆಲ್ಲಾ ಮೇಷ್ಟ್ರಿಗೆ ನಿತ್ಯವೂ ಗೌಡರ ಮನೆಯಲ್ಲೇ ಊಟ. ಉಳಿದುಕೊಳ್ಳಲು ಅವರಿಗೆ ವಸತಿಗೃಹಗಳನ್ನು ನಿರ್ಮಾಣ ಮಾಡಿದ್ದರು. ಸಾವಿರಾರು ವಿದ್ಯಾರ್ಥಿಗಳಿಗೆ ಬೆಳಕು ತೋರಿದ ಈ ಸರ್ಕಾರಿ ಶಾಲೆ ಇತ್ತೀಚೆಗೆ ‘ಅಮೃತ ಮಹೋತ್ಸವ’ವನ್ನು ಕಂಡಿದೆ. ‘ಗೌಡ್ರು ಕಟ್ಟಿಕೊಟ್ಟ ಶಾಲೆ ಯಲ್ಲಿ ಕಲಿತವಳು. ಅವರು ನಮ್ಮ ಶಾಲೆಗೆ ಆಗಾಗ ಭೇಟಿ ನೀಡಿ, ಗಣಿತ, ಸಾಮಾನ್ಯ ಜ್ಞಾನ ವಿಷಯದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಮೇಷ್ಟ್ರಿಗೂ ಭೂಮಿಗೂ ಸೂರ್ಯನಿಗೂ ಇರುವ ದೂರವೆಷ್ಟು ಎನ್ನುವಂತಹ ಪ್ರಶ್ನೆಯೊಂದಿಗೆ ಜಾಗೃತಿ ಮೂಡಿಸುತ್ತಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ ಕನ್ನಂಗಿ ಶಾಲೆಯ ಹಿರಿಯ ವಿದ್ಯಾರ್ಥಿನಿ ಹೆಬ್ರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ವೈ.ಎಂ.ಸುಧಾ.

ಜಮೀನು ಮಾರಿ ಆಸ್ಪತ್ರೆ ಕಟ್ಟಿಸಿದರು

ಆ ದಿನಗಳಲ್ಲಿ ಮಂಗನ ಕಾಯಿಲೆ ತೀವ್ರಗೊಂಡು ಮೂವರನ್ನು ಬಲಿ ಪಡೆದಿತ್ತು. ಆ ವೇಳೆ ಸ್ನೇಹಿತರೂ, ಸರ್ಕಾರದ ಕಾನೂನು ಕಾರ್ಯದರ್ಶಿಯೂ ಆಗಿದ್ದ ನ್ಯಾ.ಎನ್.ಡಿ.ವೆಂಕಟೇಶರ ಸಹಾಯದಿಂದ ಗ್ರಾಮದ ಆಸ್ಪತ್ರೆಯನ್ನು ಸಂಯುಕ್ತ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಆಸ್ಪತ್ರೆಗೆ ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ ತಮ್ಮ ಸಣ್ಣ ಜಮೀನನ್ನು ಮಾರಿ 24 ಹಾಸಿಗೆಗಳ ವಾರ್ಡ್‌ ಕಟ್ಟಿಸಿದ್ದರು. ಪಶು ಆಸ್ಪತ್ರೆ, ದೊಡ್ಡಿಯನ್ನೂ ಕಟ್ಟಿಸಿದ್ದರು. ಸಹಕಾರ ಸಂಘ ಸ್ಥಾಪಿಸಿದರು.

ಊರಿನಲ್ಲಿ ಜಗಳ– ಗುದ್ದಾಟದಂತಹ ವ್ಯಾಜ್ಯಗಳಿಗೆ ಕೋರ್ಟ್‌, ಪೊಲೀಸ್‌ ಬಳಿ ಹೋಗುವಂತಿರಲಿಲ್ಲ. ತಾವೇ ಸರ್ವಹಿತ ತೀರ್ಪಿತ್ತು ಬಗೆಹರಿಸುತ್ತಿದ್ದರು. ಊರಿನಲ್ಲೇ ಹೋಟೆಲ್‍ ಮತ್ತು ಅಂಗಡಿ ತೆರೆಸಿದರು. ಅದೊಂದು ದಿನ ಪಕ್ಕದ ಕೆರೆಗದ್ದೆಯಲ್ಲಿ ಆಕಸ್ಮಿಕವಾಗಿ ಬಿದ್ದ ಬೆಂಕಿಗೆ ಐದಾರು ಮನೆಗಳು ಸುಟ್ಟುಹೋಗಿದ್ದವು. ತಕ್ಷಣವೇ ಜೊತೆಗಾರರನ್ನು ಕೂಡಿಕೊಂಡು ಎತ್ತಿನಗಾಡಿಗಳಲ್ಲಿ ಖುದ್ದಾಗಿ ಹೋಗಿ, ಬೆಂಕಿ ನಂದಿಸಿದ್ದರು. ಸಂತ್ರಸ್ತರಿಗೆ ತಮ್ಮ ಮನೆಯಲ್ಲೇ ಆಶ್ರಯ ನೀಡಿದ್ದರು. ವಾರದೊಳಗೆ ಅದೇ ಜಾಗದಲ್ಲಿ ಅವರಿಗೆಲ್ಲ ಮನೆ ಕಟ್ಟಿಸಿಕೊಟ್ಟಿದ್ದರು.

ಕೃಷಿ ಪ್ರಯೋಗ

ಕೆರೆಕಟ್ಟೆಗಳನ್ನು ಕಟ್ಟಿಸಿದ್ದ ಗೌಡರು, ಕೃಷಿ ಕ್ಷೇತ್ರದಲ್ಲಿ ಹೊಸಬೆಳೆಗಳನ್ನು ಪರಿಚಯಿಸಿದ್ದರು. ಅದರ ಮುಂದುವರಿದ ಭಾಗವಾಗಿಯೇ ಪುತ್ರ ಕೆ.ಎಸ್.ಶೇಷಾದ್ರಿ ಮತ್ತು ಸೊಸೆ ಆಶಾ ಶೇಷಾದ್ರಿ ಅನುಕ್ರಮವಾಗಿ ವೆನಿಲಾ ಮತ್ತು ಆಂಥೋರಿಯಂ ಕೃಷಿಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ‘ರೈತರಿಗೆ ಹೊಸ ಸಾಧ್ಯತೆಗಳ ಹುಡುಕಾಟದ ಭಾಗವಾಗಿ ಸಹಕಾರ ಸಂಘವನ್ನೂ ಸ್ಥಾಪಿಸಿದ್ದರು. ಆ ಸಂಘದ ನೌಕರನಾಗಿ ನಾನು 40 ವರ್ಷಗಳ ಕಾಲ ದುಡಿದಿದ್ದೇನೆ’ ಎಂದು ನೆನಪಿಸಿಕೊಳ್ಳುತ್ತಾರೆ ಜಿ.ಕೃಷ್ಣಪ್ಪ ಹೊನಾಸಗದ್ದೆ. ಶಿಕ್ಷಣ, ಕೃಷಿ ಜತೆಗೆ, ಸಂಸ್ಕೃತಿಯ ಬಗ್ಗೆಯೂ ಅಷ್ಟೇ ಪ್ರೀತಿ ಹೊಂದಿದ್ದ ಗೌಡ್ರು ಗಣಪತಿ ಉತ್ಸವ ಆರಂಭಿಸಿದ್ದರು. ಅದು ಈಗ ‘ಸುವರ್ಣ ಮಹೋತ್ಸವ’ ಕಂಡಿದೆ.

ದಿ. ಸುಬ್ಬಯ್ಯಗೌಡ್ರು ತೀರಿ ಹೋಗಿ ಎರಡೂ ಮುಕ್ಕಾಲು ದಶಕಗಳಾಗಿವೆ. ಆದರೆ, ಅವರು ಊರಿ ಹೋದ ಕನಸಿನ ಬೀಜವೀಗ ಹೆಮ್ಮರವಾಗಿ ಬೆಳೆದು ನಿಂತಿದೆ. ಮಾಡಿದ ಬಹುಮುಖ ಜನಸೇವಾ ಕಾರ್ಯಗಳು ಇವತ್ತಿಗೂ ಅವರ ಹೆಸರು ಹೇಳುತ್ತಿವೆ. ಸ್ವಾರ್ಥದ ಪರಧಿಯಾಚೆಗೆ ಬಂದು ಸಮಾಜಮುಖಿಯಾಗಿ ನಿಂತು ಊರನ್ನು ಕಟ್ಟಿ ಬೆಳೆಸಿದ ಗೌಡರ ಅನನ್ಯ ವ್ಯಕ್ತಿತ್ವದ ಮಾದರಿಯನ್ನು ಬಿಚ್ಚಿಡುವ ಹಿನ್ನೋಟವನ್ನು ಹಂಚಿಕೊಳ್ಳುವುದರಲ್ಲಿ ಊರವರಿಗೆ ತಣ್ಣನೆಯ ಹಿತಾನುಭವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT