ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಗರ ಉಷ್ಣದ್ವೀಪ’ಗಳೂ ಹವಾಮಾನ ಬದಲಾವಣೆಯೂ...

Last Updated 8 ಜೂನ್ 2022, 19:30 IST
ಅಕ್ಷರ ಗಾತ್ರ

ಯುಪಿಎಸ್‌ಸಿ– ಪ್ರಿಲಿಮ್ಸ್‌ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ –2, ಕೆಪಿಎಸ್‌ಸಿ ಪ್ರಿಲಿಮ್ಸ್‌ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ –2 ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಸುದ್ದಿಯಲ್ಲಿರುವ ಪರಿಸರ ಬಿಕ್ಕಟ್ಟಿನ ಕುರಿತ ಕುರಿತ ಮಾಹಿತಿ ಇಲ್ಲಿದೆ.

ಇತ್ತೀಚೆಗೆ ದೇಶದ ವಿವಿಧ ಭಾಗಗಳು ತೀವ್ರ ಬಿಸಿ ಗಾಳಿಯ (Heat Wave) ಪರಿಣಾಮವನ್ನು ಅನುಭವಿ ಸಿದ್ದನ್ನು ಗಮನಿಸಲಾಗಿದೆ. ಅದರಲ್ಲೂ, ನಗರಗಳು, ತಮ್ಮ ಸನಿಹದ ಕೆಲವು ಪ್ರದೇಶಗಳಿಗಿಂತ ಮತ್ತು ವಿಶೇಷವಾಗಿ ಸುತ್ತಲಿನ ಗ್ರಾಮೀಣ ಪ್ರದೇಶಗಳಿಗಿಂತ ಹೆಚ್ಚು ಬಿಸಿಯಾಗಿರುವುದನ್ನು ಗುರುತಿಸಲಾಗಿದೆ. ಈ ವಿದ್ಯಮಾನಗಳನ್ನು ‘ನಗರ ಉಷ್ಣ ದ್ವೀಪಗಳು (Urban Heat Island)’ ಎಂದು ಕರೆಯಲಾಗುತ್ತದೆ.

ಕಾರಣಗಳು ಮತ್ತು ಪರಿಣಾಮಗಳು

ಅನಿಯಂತ್ರಿತ ನಿರ್ಮಾಣ ಚಟುವಟಿಕೆಗಳು ಮತ್ತು ಕಾರ್ಬನ್-ಹೀರಿಕೊಳ್ಳುವಿಕೆ: ನಗರಗಳಲ್ಲಿ ರಸ್ತೆ ಮತ್ತು ಕಟ್ಟಡ ನಿರ್ಮಾಣಕ್ಕೆ ಕಾಂಕ್ರಿಟ್‌, ಡಾಂಬರು ಮತ್ತು ಟಾರ್‌ನಂತಹ ವಸ್ತುಗಳನ್ನು ಬಳಸಲಾಗುತ್ತದೆ. ಅವು ಸಾಕಷ್ಟು ಶಾಖವನ್ನು ಹಿಡಿದಿಟ್ಟುಕೊಳ್ಳುತ್ತಾ ನಗರಗಳ ಮೇಲ್ಮೈ ತಾಪಮಾನವನ್ನು ಸರಾಸರಿ ಹೆಚ್ಚಿಸುತ್ತವೆ.

ಆಲ್ಬೆಡೋದಲ್ಲಿನ ಕಡಿತ

ಅನೇಕ ನಗರ ಪ್ರದೇಶಗಳಲ್ಲಿನ ಕಟ್ಟಡಗಳು ಕಪ್ಪು ಗಾಜು ಅಳವಡಿಸಿರುವುದು ಅಥವಾ ಕಪ್ಪು ಗೋಡೆ ಬಣ್ಣದ ಮೇಲ್ಮೈಯನ್ನು ಹೊಂದಿರುವ ಕಾರಣ, ಇದು ಆಲ್ಬೆಡೊವನ್ನು(ಭಾಗಶಃ ಪ್ರತಿಫಲನ ಶಕ್ತಿಯನ್ನು) ಕಡಿಮೆ ಮಾಡುತ್ತದೆ ಮತ್ತು ಶಾಖ ಹೀರಿಕೊಳ್ಳುವ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ.

‘ನಗರ ಕಣಿವೆ’ ಪರಿಣಾಮ

ಎತ್ತರದ ಕಟ್ಟಡಗಳಿಂದ ತುಂಬಿದ ನಗರಗಳ ಮಧ್ಯೆ ಇರುವ ಸಣ್ಣ ಬೀದಿಗಳಲ್ಲಿ ಗಾಳಿಯ ಪ್ರಸರಣಕ್ಕೆ ಅವಕಾಶವಿರುವುದಿಲ್ಲ. ಎತ್ತರದಲ್ಲಿ ವ್ಯತ್ಯಾಸವಿರುವ ಕಟ್ಟಡಗಳಿಂದಾಗಿ ಗಾಳಿಯ ಸಂಚಾರಕ್ಕೆ ತಡೆಯಾಗುತ್ತದೆ. ಅಲ್ಲಿನ ಗಾಳಿಯು ಬಿಸಿಯಾಗುತ್ತಾ ಹಗುರವಾಗುತ್ತಾ ಮೇಲ್ಮುಖವಾಗಿ ಚಲಿಸುತ್ತದೆ. ಕಟ್ಟಡಗಳ ಗೋಡೆಗಳು ಗಾಳಿಯ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತವೆ. ಬಿಸಿಗಾಳಿ ಒಂದೆಡೆ ಶೇಖರಣೆಗೊಂಡು ಕಣಿವೆಗಳೊಳಗಿನ ಬಿಸಿಗಾಳಿಯ ಅನುಭವವನ್ನು ನೀಡುತ್ತವೆ. ಇವು ವಾತಾವರಣ ನೈಸರ್ಗಿಕವಾಗಿ ತಂಪಾಗಿಸುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತವೆ. ಈ ಪರಿಣಾಮವನ್ನು ‘ನಗರ ಕಣಿವೆಯ ಪರಿಣಾಮ’ ಎಂದು ಕರೆಯಲಾಗುತ್ತದೆ.

ಪಳೆಯುಳಿಕೆ ಇಂಧನಗಳ ಬಳಕೆ: ಸಾರಿಗೆ ವ್ಯವಸ್ಥೆಗೆ, ಕೈಗಾರಿಕೆಗಳಿಗೆ ಪಳೆಯುಳಿಕೆ ಇಂಧನಗಳ ನಿರಂತರ ಬಳಕೆಯು ಶಾಖದ ಪರಿಣಾಮವನ್ನು ಹೆಚ್ಚಿಸುತ್ತದೆ.

ಹವಾನಿಯಂತ್ರಣ ವ್ಯವಸ್ಥೆಗಳು: ನಗರ ಪ್ರದೇಶದಲ್ಲಿನ ತಾಪಮಾನ ಹೆಚ್ಚಾಗುವುದು ಹವಾನಿಯಂತ್ರಣ ವ್ಯವಸ್ಥೆಗಳ ಬಳಕೆ ಹೆಚ್ಚಲು ಕಾರಣವಾಗುತ್ತದೆ. ಇದು ಒಂದು ವಿಷಚಕ್ರದ ರೀತಿಯಲ್ಲಿ ಸಾಗುತ್ತದೆ.

ಹವಾನಿಯಂತ್ರಕಗಳು ವಾತಾವರಣದ ಗಾಳಿಯನ್ನು ಹೀರಿಕೊಂಡು ತಂಪಾಗಿಸಿ ತಿರುಗಿ ಶಾಖಮಯ ಗಾಳಿಯನ್ನು ವಾತಾವರಣಕ್ಕೆ ಕಳಿಸುತ್ತವೆ. ಇದು ಮತ್ತಷ್ಟು ಸ್ಥಳೀಯ ತಾಪಮಾನದ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಕಡಿಮೆಯಾದ ಮರಗಳ ಹೊದಿಕೆ ಮತ್ತು ಹಸಿರು ಪ್ರದೇಶಗಳು: ಹೆಚ್ಚುತ್ತಿರುವ ಅರಣ್ಯನಾಶ, ಮರಗಳ ಕಡಿಯುವಿಕೆ, ಹಸಿರು ಹೊದಿಕೆಯ ಕೊರತೆ, ಕೆರೆಗಳ ಅತಿಕ್ರಮಣ ಇತ್ಯಾದಿಗಳು ನಗರ ಉಷ್ಣ ದ್ವೀಪಗಳಿಗೆ ನೇರ ಕಾರಣಗಳಾಗಿವೆ.

ನಗರಗಳ ಮಾಲಿನ್ಯಗಳ ಕಾರಣದಿಂದ ವಾತಾವರಣ ಬಿಸಿಯಾಗಿ ಉಷ್ಣತೆ ಹೆಚ್ಚಾಗಿ ಬಾಷ್ಪೀಕರಣವಾಗಿ ಮಳೆ ಸುರಿಯುತ್ತದೆ. ಆದರೆ ಆ ಮಳೆಯ ನೀರು ಸಮರ್ಪಕವಾಗಿ ವಿಲೇವಾರಿಯಾಗುವ ರೀತಿಯಲ್ಲಿ ನಗರಗಳನ್ನು ವಿನ್ಯಾಸಗೊಳಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT