ಶುಕ್ರವಾರ, ಸೆಪ್ಟೆಂಬರ್ 17, 2021
22 °C

ವಿದೇಶಿ ಭಾಷೆ: ಯಾವುದಕ್ಕೆ ಹೆಚ್ಚು ಬೇಡಿಕೆ?

ಪ್ರೊ. ಎಸ್‌.ಕೆ.ಜಾರ್ಜ್‌ Updated:

ಅಕ್ಷರ ಗಾತ್ರ : | |

Prajavani

ವಿದೇಶಗಳಲ್ಲಿ ವ್ಯಾಸಂಗಕ್ಕಾಗಿ ಸಾಕಷ್ಟು ವಿದ್ಯಾರ್ಥಿಗಳು ತೆರಳುವುದು ಇತ್ತೀಚಿನ ಕೆಲವು ವರ್ಷಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಕೋವಿಡ್‌ ಸ್ವಲ್ಪ ಕಡಿಮೆಯಾಗುತ್ತಿದ್ದಂತೆಯೇ ಮತ್ತೆ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳತ್ತ ಮುಖ ಮಾಡುತ್ತಿದ್ದಾರೆ. ಇದರ ಜೊತೆಗೆ ಜಾಗತೀಕರಣ ಎನ್ನುವುದು ವಿದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಿದೆ. ವಿದ್ಯಾರ್ಥಿಗಳೇ ಇರಲಿ, ಉದ್ಯೋಗಸ್ಥರೇ ಇರಲಿ ವಿದೇಶಗಳಿಗೆ ಹೋಗಬೇಕಾದರೆ ಅಲ್ಲಿಯ ಭಾಷೆಯನ್ನು ಕರಗತ ಮಾಡಿಕೊಂಡರೆ ಅನುಕೂಲ. ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ ಸೇರಿದಂತೆ ದೇಶದ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ವಿದೇಶಿ ಭಾಷೆಗಳಲ್ಲಿ ಅಲ್ಪಾವಧಿ ಹಾಗೂ ದೀರ್ಘಾವಧಿ ಕೋರ್ಸ್‌ ಅಭ್ಯಸಿಸಬಹುದು. ದೀರ್ಘಾವಧಿ ಕೋರ್ಸ್‌ ಮಾಡಿದರೆ ಆಯಾ ಭಾಷೆಯನ್ನು ಕಲಿಸುವ ಪ್ರಾಧ್ಯಾಪಕರಾಗಿಯೂ ಉದ್ಯೋಗಕ್ಕೆ ಸೇರಿಕೊಳ್ಳಬಹುದು.

ಹೆಚ್ಚು ಬೇಡಿಕೆಯಿರುವ ಕೆಲವು ವಿದೇಶಿ ಭಾಷೆಗಳ ಬಗ್ಗೆ ವಿವರಗಳು ಇಲ್ಲಿವೆ.

ಮ್ಯಾಂಡರಿನ್‌/ ಚೈನೀಸ್‌ ಭಾಷೆ: ಜಾಗತಿಕವಾಗಿ 1.19 ಶತಕೋಟಿಗಿಂತಲೂ ಅಧಿಕ ಮಂದಿ ಚೈನೀಸ್‌ ಭಾಷೆ ಮಾತನಾಡುತ್ತಿದ್ದು, ಇವರಲ್ಲಿ 8 ಲಕ್ಷಕ್ಕಿಂತಲೂ ಹೆಚ್ಚಿನ ಜನ ಮ್ಯಾಂಡರಿನ್‌ ಮಾತನಾಡುತ್ತಾರೆ. ಚೀನಾ ವಿಶ್ವವಿದ್ಯಾಲಯಗಳಲ್ಲಿ ಓದಲು ಹೋಗುವ ವಿದ್ಯಾರ್ಥಿಗಳಲ್ಲದೇ, ಅಲ್ಲಿರುವ ವ್ಯಾಪಾರ– ವಹಿವಾಟಿನ ಅವಕಾಶಗಳಿಂದಾಗಿ ಇತರರೂ ಈ ಭಾಷೆಯನ್ನು ಕಲಿಯಲು ಉತ್ಸುಕತೆ ತೋರುತ್ತಿದ್ದಾರೆ. ವಾಹನ ಹಾಗೂ ಎಲೆಕ್ಟ್ರಾನಿಕ್ಸ್‌ ಉದ್ಯಮವು ಹೆಚ್ಚಿನ ಜನರನ್ನು ಚೀನಾಗೆ ಸೆಳೆಯುತ್ತಿದೆ. ಹಾಗೆಯೇ ಇಲ್ಲಿರುವ ಚೀನಾ ಮೂಲದ ಕಂಪನಿಗಳಲ್ಲಿ ಉದ್ಯೋಗಕ್ಕೆ ಸೇರಲೂ ಚೈನೀಸ್‌ ಭಾಷೆ ಸಹಾಯಕ.

ಸ್ಪಾನಿಷ್‌: ಯೂರೋಪ್‌ನ 20ಕ್ಕೂ ಅಧಿಕ ದೇಶಗಳಲ್ಲಿ 53 ಕೋಟಿಯಷ್ಟು ಜನ ಈ ಭಾಷೆ ಮಾತನಾಡುತ್ತಾರೆ. ಚೈನೀಸ್‌/ ಮ್ಯಾಂಡರಿನ್‌ ನಂತರ ಅತಿ ಹೆಚ್ಚು ಜನ ಮಾತನಾಡುವ ಭಾಷೆಯೆಂದರೆ ಸ್ಪಾನಿಷ್‌. ಹಾಗೆಯೇ ಪ್ರವಾಸೋದ್ಯಮ, ಭಾಷಾಂತರ, ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ಸ್ಪೇನ್‌ ಕಂಪನಿಗಳು ಹೂಡಿಕೆ ಮಾಡಿವೆ. ಅಲ್ಲಿಯ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಲು ತೆರಳುವ ವಿದ್ಯಾರ್ಥಿಗಳ ಸಂಖ್ಯೆಯೂ ಸಾಕಷ್ಟಿದೆ.

ಜರ್ಮನ್‌: ಯೂರೋಪ್‌ನಲ್ಲಿ ಇಂಗ್ಲಿಷ್‌, ಬಿಟ್ಟರೆ ಅತ್ಯಂತ ಜನಪ್ರಿಯ ಭಾಷೆಯೆಂದರೆ ಜರ್ಮನ್‌. ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ. ಜರ್ಮನಿಯ ಕಂಪನಿಗಳಲ್ಲಿ ಉದ್ಯೋಗಾವಕಾಶಗಳು ಸಾಕಷ್ಟಿದ್ದು, ಅಮೆರಿಕಕ್ಕೆ ತೆರಳಿದರೂ ಕೂಡ ಅಲ್ಲಿರುವ ಜರ್ಮನ್‌ ಕಂಪನಿಗಳಲ್ಲಿ ಅವಕಾಶ ಗಿಟ್ಟಿಸಲು ಭಾಷೆ ಬಂದರೆ ಸೂಕ್ತ.

ಫ್ರೆಂಚ್‌: ಈ ಭಾಷೆಯಲ್ಲಿ ತಜ್ಞತೆ ಸಾಧಿಸಿದರೆ ಫ್ರಾನ್ಸ್‌ನಲ್ಲಿರುವ ವಿಶ್ವವಿದ್ಯಾಲಯಗಳು ಹಾಗೂ ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌ ಕಾಲೇಜುಗಳಲ್ಲಿ ಅಧ್ಯಯನ ನಡೆಸಲು ಸಹಾಯಕ. ಉನ್ನತ ಅಧ್ಯಯನ ನಡೆಸಲು ಅಲ್ಲಿಯ ಸರ್ಕಾರ ನೀಡುವ ಫೆಲೋಶಿಪ್‌ ಪಡೆಯಲು ಫ್ರೆಂಚ್‌ ಭಾಷೆಯಲ್ಲಿ ಪರಿಣತಿ ಸಾಧಿಸಬೇಕಾಗುತ್ತದೆ. ಹೋಟೆಲ್‌, ಫ್ಯಾಷನ್‌, ದೃಶ್ಯಕಲೆ ಮೊದಲಾದ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಈ ಭಾಷೆ ಬಂದರೆ ಅನುಕೂಲ.

ರಷ್ಯನ್‌: ಯೂರೋಪ್‌ನಲ್ಲಿ ಸ್ಥಳೀಯವಾಗಿ ಈ ಭಾಷೆಯಲ್ಲಿ ಮಾತನಾಡುವವರ ಸಂಖ್ಯೆ ಸಾಕಷ್ಟಿದೆ. ಜಾಗತಿಕವಾಗಿ 300 ದಶಲಕ್ಷ ಮಂದಿ ಈ ಭಾಷೆಯನ್ನು ಮಾತನಾಡುತ್ತಾರೆ. ಎಂಜನಿಯರಿಂಗ್‌, ವಿಜ್ಞಾನ ಮತ್ತು ತಂತ್ರಜ್ಞಾನ, ತೈಲ ಮತ್ತು ಅನಿಲ ಮೊದಲಾದ ಕ್ಷೇತ್ರಗಳಲ್ಲದೇ ರಕ್ಷಣಾ ಕ್ಷೇತ್ರದಲ್ಲೂ ರಷ್ಯಾದ ಕಂಪನಿಗಳಲ್ಲಿ ಭಾರತೀಯರಿಗೆ ವಿಪುಲ ಅವಕಾಶಗಳಿವೆ. ಹೀಗಾಗಿ ಈ ಭಾಷೆಯಲ್ಲಿ ಪರಿಣತಿ ಪಡೆದರೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು.

ಜಪಾನೀಸ್‌: ಇಂಗ್ಲಿಷ್‌ ಮತ್ತು ಚೈನೀಸ್‌ ನಂತರ ಅಂತರ್ಜಾಲದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಲ್ಲಿರುವ ಭಾಷೆಯಿದು. ಇದಲ್ಲದೇ ಜಪಾನ್‌ನ ಬಹಳಷ್ಟು ಕಂಪನಿಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿವೆ. ಸೋನಿ, ಹೋಂಡಾ, ಟೊಯೋಟ, ಮಿಷುಬಿಶಿ ಮೊದಲಾದ ದೊಡ್ಡ ದೊಡ್ಡ ಬ್ರ್ಯಾಂಡ್‌ನ ಕಂಪನಿಗಳು ಭಾರತೀಯ ಮಾರುಕಟ್ಟೆಗೆ ಚಿರಪರಿಚಿತ. ಹೀಗಾಗಿ ಜಪಾನೀಸ್‌ ಭಾಷೆ ಕಲಿತರೆ ಇಂತಹ ಕಂಪನಿಗಳಲ್ಲಿ ಕೆಲಸ ಮಾಡುವ ಅವಕಾಶ ಪಡೆಯಬಹುದು.

ಈ ಭಾಷೆಗಳಲ್ಲದೇ ಕೊರಿಯನ್‌, ಅರೇಬಿಕ್‌, ಇಟಾಲಿಯನ್‌ ಮೊದಲಾದ ಭಾಷೆಗಳನ್ನು ಕಲಿತರೆ ಸಾಕಷ್ಟು ಬೇಡಿಕೆಗಳಿವೆ. ಈಗ ಆನ್‌ಲೈನ್‌ನಲ್ಲೂ ಸರ್ಟಿಫಿಕೇಟ್‌ ಕೋರ್ಸ್‌ಗಳಿದ್ದು, ಉತ್ತಮ ಆನ್‌ಲೈನ್‌ ಕಲಿಕಾ ಸಂಸ್ಥೆಗಳನ್ನು ಸೇರಿಕೊಂಡರೆ ಭವಿಷ್ಯದ ದೃಷ್ಟಿಯಿಂದ ಅನುಕೂಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.