ಮಂಗಳವಾರ, ಅಕ್ಟೋಬರ್ 27, 2020
19 °C

ಕಲ್ಯಾಣ ಕರ್ನಾಟಕ ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿಗೆ ಸಿಕ್ಕೀತೇ ಪರಿಹಾರ?

ಗಣೇಶ ಡಿ.ಚಂದನಶಿವ Updated:

ಅಕ್ಷರ ಗಾತ್ರ : | |

Prajavani

ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಮೀಸಲಾತಿ ನೀಡಿರುವಂತೆ, ಶಿಕ್ಷಕರ ನೇಮಕಾತಿ ನಿಯಮಗಳಲ್ಲಿಯೂ ವಿನಾಯಿತಿ ನೀಡಬೇಕು ಎಂಬ ಕೂಗು ಈ ಭಾಗದಲ್ಲಿ ಕೇಳಿ ಬರುತ್ತಿದೆ. ‘ಅರ್ಹತೆಯೇ ಮಾನದಂಡವಾಗಲಿ’ ಎಂಬ ವಾದವೂ ಇದೆ. 

ಸರ್ಕಾರಿ ಶಾಲೆಗಳ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿ ತಂದು ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲೇ ನೇಮಕಾತಿಗೆ ಅವಕಾಶ ಕಲ್ಪಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‌ ಕುಮಾರ್‌ ಅವರು ವಿಧಾನ ಪರಿಷತ್‌ನಲ್ಲಿ ನೀಡಿರುವ ಭರವಸೆ ಈ ಭಾಗದ ಶಿಕ್ಷಕ ಆಕಾಂಕ್ಷಿಗಳಲ್ಲಿ ಹೊಸ ಆಶಾಭಾವ ಮೂಡಿಸಿದೆ.

ಕಲ್ಯಾಣ ಕರ್ನಾಟದಲ್ಲಿ ಹೆಚ್ಚು ಹುದ್ದೆಗಳು ಇವೆ ಎಂಬ ಕಾರಣಕ್ಕೆ ಶಿಕ್ಷಕರ ನೇಮಕಾತಿಯ ಸಂದರ್ಭದಲ್ಲಿ ಈ ಜಿಲ್ಲೆಗಳನ್ನು ಆಯ್ಕೆಮಾಡಿಕೊಳ್ಳುವ ಕಲ್ಯಾಣ ಕರ್ನಾಟಕೇತರ ಅಭ್ಯರ್ಥಿಗಳು, ನೇಮಕವಾದ ಕೆಲ ವರ್ಷಗಳಲ್ಲಿಯೇ ವರ್ಗಾವಣೆ ಮಾಡಿಸಿಕೊಂಡು ತಮ್ಮ ಜಿಲ್ಲೆಗಳಿಗೆ ಹೋಗುತ್ತಾರೆ. ಇಲ್ಲಿಗೆ ವರ್ಗವಾಗಿ ಬರಲು ಯಾರೂ ಸಿದ್ಧರಿರುವುದಿಲ್ಲ. ಸರ್ಕಾರ ಭರ್ತಿ ಮಾಡಿದರೂ ಕೆಲವೇ ವರ್ಷಗಳಲ್ಲಿ ಹುದ್ದೆಗಳು ಖಾಲಿ ಉಳಿಯಲು ಇದು ಕಾರಣ ಎಂಬುದು ಈ ಭಾಗದಲ್ಲಿ ಎಲ್ಲರೂ ದಶಕಗಳಿಂದ ಹೇಳುವ ಮಾತು. 

2013ರಲ್ಲಿ ಕೇಂದ್ರ ಸರ್ಕಾರ ಸಂವಿಧಾನದ 371 (ಜೆ) ಕಲಂಗೆ ತಿದ್ದುಪಡಿ ತಂದ ನಂತರ ರಾಜ್ಯ ಸರ್ಕಾರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಈ ಭಾಗದವರಿಗೆ ಮೀಸಲಾತಿ ಕಲ್ಪಿಸಿದೆ. ಇಲ್ಲಿಯ ಖಾಲಿ ಹುದ್ದೆಗಳಲ್ಲಿ ಸ್ಥಳೀಯರಿಗೇ ಸಿಂಹಪಾಲು ಸಿಗುತ್ತಿವೆ. ಶಿಕ್ಷಕರ ನೇಮಕಾತಿಯಲ್ಲಿಯೂ ಶೇ 80ರಷ್ಟು ಸೀಟುಗಳು ಸ್ಥಳೀಯರಿಗೆ ಮೀಸಲಿವೆ. ಈ ನಿಯಮ ಜಾರಿಯಾದ ನಂತರ ‘ಇಲ್ಲಿ ನೇಮಕವಾಗಿ ವರ್ಗಮಾಡಿಸಿಕೊಂಡು ಹೋಗುವವರ’ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಅದಕ್ಕೆ ಶಿಕ್ಷಕರ ವರ್ಗಾವಣೆಯಲ್ಲಿಯ ಬಿಗಿ ನಿಯಮಗಳೂ ಕಾರಣ. 

‘ವರ್ಗಾವಣೆ’ ಹಾವಳಿ ಒಂದೆಡೆಯಾದರೆ, ಈ ಭಾಗದ ಶಿಕ್ಷಕ ಹುದ್ದೆಗಳಿಗೆ ಅರ್ಹರೇ ಸಿಗುತ್ತಿಲ್ಲ ಎಂಬ ವಾದ ಸರ್ಕಾರದ್ದು. ಇದು ಹೀಗೇಕೆ ಎಂದು ಕೇಳಿದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಳೆದ ಬಾರಿಯ ಶಿಕ್ಷಕರ ನೇಮಕಾತಿಯ ಅಂಕಿ–ಅಂಶಗಳನ್ನು ಮುಂದಿಡುತ್ತಾರೆ.

2018ರಲ್ಲಿ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿಯ 3,966 ಶಿಕ್ಷಕ ಹುದ್ದೆಗಳಿಗೆ ಕೇವಲ 943 ಅಭ್ಯರ್ಥಿಗಳು ನೇಮಕಗೊಂಡರು. ಅರ್ಹತಾ ಪರೀಕ್ಷೆಯಲ್ಲಿ ಈ ಭಾಗದ ಹೆಚ್ಚಿನ ಅಭ್ಯರ್ಥಿಗಳು ಉತ್ತೀರ್ಣ ಆಗಲಿಲ್ಲ ಎಂಬ ಕಾರಣಕ್ಕೆ ಉಳಿದ ಹುದ್ದೆಗಳು ಖಾಲಿ ಉಳಿದವು.

‘ಶಿಕ್ಷಕರ ಹುದ್ದೆಗಳಿಗೆ ಮೂರು ವರ್ಷಗಳಿಂದ ನೇಮಕಾತಿ ನಡೆಸಲಾಗುತ್ತಿದೆ. ಆದರೆ, ನಿರೀಕ್ಷಿತ ಸಂಖ್ಯೆಯಲ್ಲಿ ಅರ್ಹ ಶಿಕ್ಷಕರು ಸಿಗುತ್ತಿಲ್ಲ. 2018ರಲ್ಲಿ 10 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಕೇವಲ 3 ಸಾವಿರ ಶಿಕ್ಷಕರು ನೇಮಕಾತಿಗೆ ಅರ್ಹತೆ ಪಡೆದಿದ್ದರು’ ಎಂದು ಸಚಿವರು ವಿಧಾನ ಪರಿಷತ್‌ನಲ್ಲಿ ಹೇಳಿದ್ದು ಇದೇ ಕಾರಣಕ್ಕೆ.

ಕಲ್ಯಾಣ ಕರ್ನಾಟಕದಲ್ಲಿಯ ಖಾಲಿ ಹುದ್ದೆಗಳಲ್ಲಿ 371 (ಜೆ) ಅಡಿ ಶೇಕಡ 80ರಷ್ಟು ಹುದ್ದೆಗಳು ಸ್ಥಳೀಯರಿಗೆ ಮೀಸಲು. ಈ ಮೀಸಲಾತಿ ಅನ್ವಯವೇ ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆಸಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಬೇಕಾದ ಡಿ.ಇಡಿ, ಬಿ.ಇಡಿ ಶಿಕ್ಷಣ ಪಡೆದವರಿಗೆ ಕೊರತೆ ಇಲ್ಲ. ಆದರೆ, ರಾಜ್ಯ ಸರ್ಕಾರ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯಲ್ಲಿ ಇಂಗ್ಲಿಷ್‌, ಗಣಿತ/ ವಿಜ್ಞಾನ ವಿಷಯದ ಅಭ್ಯರ್ಥಿಗಳ ಸಾಧನೆ ನಗಣ್ಯ ಎನ್ನುವಂತಿತ್ತು. ಈ ಕಾರಣಕ್ಕಾಗಿಯೇ ಮಂಜೂರಾದ ಹುದ್ದೆಗಳಲ್ಲಿ ಬಹುಪಾಲು ಭರ್ತಿಯಾಗದೇ ಉಳಿದವು.


ಔರಾದ್ ತಾಲ್ಲೂಕಿನ ಶೆಂಬೆಳ್ಳಿ ಸರ್ಕಾರಿ ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದ ವಿದ್ಯಾರ್ಥಿಗಳನ್ನು ಹೊರಗೆ ಕೂಡಿಸಿ ಪಾಠ ಮಾಡುತ್ತಿರುವುದು

ಈ ಭಾಗದ ಆರು ಜಿಲ್ಲೆಗಳಲ್ಲಿ ಸ್ಥಳೀಯ ವೃಂದದ 3,966 ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. 5,738 ಅಭ್ಯರ್ಥಿಗಳು ಟಿಇಟಿ ಪಾಸಾಗಿದ್ದವರು ಅರ್ಜಿ ಸಲ್ಲಿಸಿದ್ದರು. ಆದರೆ, ಬಹುತೇಕರು ಕನ್ನಡ/ ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದವರು. ಈ ವಿಷಯಗಳ ಬಹುತೇಕ ಹುದ್ದೆಗಳು ಭರ್ತಿಯಾದವು.

ಇಂಗ್ಲಿಷ್‌, ಗಣಿತ/ ವಿಜ್ಞಾನ ಶಿಕ್ಷಕರ ನೇಮಕಾತಿಯ ಕಳಪೆ ಸಾಧನೆಯಲ್ಲಿ ಯಾದಗಿರಿ ಜಿಲ್ಲೆ ಮೊದಲ ಸ್ಥಾನದಲ್ಲಿತ್ತು. ಈ ಜಿಲ್ಲೆಯಲ್ಲಿ 198 ಗಣಿತ/ ವಿಜ್ಞಾನ, 211 ಇಂಗ್ಲಿಷ್‌ ಶಿಕ್ಷಕರ ಹುದ್ದೆಗಳು ಖಾಲಿ ಇದ್ದವು. ಆಯ್ಕೆಯಾದವರು ಕ್ರಮವಾಗಿ 11 ಮತ್ತು 19 ಮಾತ್ರ. ಇತರೆ ಜಿಲ್ಲೆಗಳ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇರಲಿಲ್ಲ.

ರಾಷ್ಟ್ರವ್ಯಾಪಿ ಏಕರೂಪ ಗುಣಾತ್ಮಕ ಶಿಕ್ಷಣ ನೀಡಲು ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) 2009ರ ಪ್ರಕಾರ ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ. ರಾಜ್ಯ ಸರ್ಕಾರ ಟಿಇಟಿ ನಡೆಸಿದರೆ, ಕೇಂದ್ರ ಸರ್ಕಾರ ಸಿಟಿಇಟಿ ನಡೆಸುತ್ತದೆ. ಇಂಗ್ಲಿಷ್‌ ಮತ್ತು ವಿಜ್ಞಾನ/ ಗಣಿತದಲ್ಲಿ ಟಿಇಟಿ ಅರ್ಹ ಅಭ್ಯರ್ಥಿಗಳು ದೊರೆಯದೇ ಇರುವುದರಿಂದ ಕಲ್ಯಾಣ ಕರ್ನಾಟಕ ಅಷ್ಟೇ ಅಲ್ಲ, ರಾಜ್ಯದ ಇತರೆ ಭಾಗದಲ್ಲಿಯೂ ಸರ್ಕಾರಿ ಶಾಲೆಗಳಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ ಎನ್ನುವುದು ಶಿಕ್ಷಣ ಇಲಾಖೆಯ ವಾದ. 

ಈಗ ಅಕ್ಟೋಬರ್‌ 4ರಂದು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆಯಲಿದೆ. ರಾಜ್ಯ ಸರ್ಕಾರ ಹೇಳಿದಂತೆ ನೇಮಕಾತಿ ನಿಯಮಕ್ಕೆ ತಿದ್ದುಪಡಿ ಮಾಡುವ ಕೆಲಸ ಇನ್ನೂ ಆಗಿಲ್ಲ. ಟಿಇಟಿ ಫಲಿತಾಂಶದ ನಂತರ ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆಯುತ್ತದೆಯೇ? ನಿಯಮಕ್ಕೆ ತಿದ್ದುಪಡಿ ತರುವ ನೆಪದಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡಲಾಗುತ್ತಿದೆಯೇ ಎಂಬ ಜಿಜ್ಞಾಸೆ ಶಿಕ್ಷಕ ಆಕಾಂಕ್ಷಿಗಳಲ್ಲಿ ಶುರುವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು