ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಕೆಟ್‌ ಇನ್ನು ಉಳ್ಳವರ ಶಿವಾಲಯ! ಶ್ಯಾಣಮ್ಮ ಬದುಕಿಗೆ ಪರ್ಯಾಯವೇನು?

Last Updated 2 ಏಪ್ರಿಲ್ 2019, 19:46 IST
ಅಕ್ಷರ ಗಾತ್ರ

ಬೆಳಿಗ್ಗೆ ತರಕಾರಿ ಮಾರಲು ಬಂದಿದ್ದ ಶ್ಯಾಣಮ್ಮ, ಕೈಯಲ್ಲಿ ನುಗ್ಗೇಕಾಯಿಗಳನ್ನು ಹಿಡಿದು ಗ್ರಾಹಕರ ನಿರೀಕ್ಷೆಯಲ್ಲಿದ್ದರು. ಯಾಕಮ್ಮ, ನಿಂತ್ಕೊಂಡೇ ವ್ಯಾಪಾರ ಮಾಡ್ತಿದೀರಿ ಎಂದು ಮಾತಿಗೆಳೆದಾಗ ಕ್ಷಣಹೊತ್ತು ಮಾತೇ ಇಲ್ಲದಂತೆ ನಿಂತಿದ್ದರು..

ಅವತ್ತು ಬುಲ್ಡೋಜರ್‌ ಸದ್ದಿಗೆ ಇಡೀ ಕೆ.ಆರ್‌. ಮಾರ್ಕೆಟ್‌ ಅದರುತ್ತಿತ್ತು. ಬೀದಿ ಬದಿಯ ತರಕಾರಿ ವ್ಯಾಪಾರಿಗಳ ಮೇಲೆ ಅಬ್ಬರಿಸಿ ಓಡಿಸತೊಡಗಿತ್ತು. ನಾನೂ ಕೈಯಲ್ಲಿ ಸಿಕ್ಕಷ್ಟು ನುಗ್ಗೇಕಾಯಿಗಳನ್ನು ಹಿಡಿದುಕೊಂಡು ಸಿಕ್ಕ ಜಾಗದೆಡೆಗೆ ಓಡಿದ್ದೆ ಎನ್ನುವಾಗ ದನಿ ನಡುಗಿತ್ತು.

ದೂರದ ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಖೈನೂರು ಗ್ರಾಮದಿಂದ ಹತ್ತು ವರ್ಷಗಳ ಹಿಂದೆ ನಗರಕ್ಕೆ ಬಂದವರು ಶ್ಯಾಣಮ್ಮ. ಆಗ ಕೆ.ಆರ್. ಮಾರುಕಟ್ಟೆಯ ಮುಖ್ಯದ್ವಾರ ಕಟ್ಟಡದ ರಿಪೇರಿ ಕೆಲಸ ನಡೆಯುತ್ತಿತ್ತು. ಕಟ್ಟಡ ಕಾರ್ಮಿಕರಾಗಿ ಬಂದ ಶ್ಯಾಣಮ್ಮ, ಮರಳಿ ಹಳ್ಳಿಗೆ ಹೋಗಲಿಲ್ಲ. ನುಗ್ಗೇಕಾಯಿ ವ್ಯಾಪಾರದಲ್ಲಿ ಬದುಕು ಕಟ್ಟಿಕೊಂಡರು. ಇವರಿಗೆ ಜತೆಯಾದವರು ಯಲ್ಲಮ್ಮ ಮತ್ತು ಭೀಮವ್ವ.

ಶ್ಯಾಣಮ್ಮ ದಿನಚರಿ ಮುಂಜಾನೆ 5ಕ್ಕೆ ಹೆಬ್ಬಾಳದಿಂದ ಶುರುವಾಗುತ್ತದೆ. ಸುಮಾರು 6 ಗಂಟೆ ಹೊತ್ತಿಗೆ ಕಲಾಸಿಪಾಳ್ಯದ ಮಾರುಕಟ್ಟೆಯಲ್ಲಿ ಒಂದು ಮೂಟೆ ನುಗ್ಗೇಕಾಯಿ ಖರೀದಿಸುತ್ತಾರೆ. ಅಲ್ಲಿಂದ ಕೆ.ಆರ್. ಮಾರ್ಕೆಟ್‌ನ ಹೊಸ ಕಟ್ಟಡದ ಎದುರಿನ ಬೀದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಾರೆ. ಬೇಸಿಗೆ ಕಾಲದಲ್ಲಿ ನುಗ್ಗೇಕಾಯಿ ದರ ಅಗ್ಗ. ಖರೀದಿಸುವವರ ಸಂಖ್ಯೆಯೂ ಕಡಿಮೆ. ಶ್ಯಾಣಮ್ಮ ಖರೀದಿಸುವವರ ಹುಡುಕಾಟ ನಡೆಸಿ ಸುಸ್ತಾಗಿದ್ದರು. ಪಕ್ಕದ ಹೆಂಗಸರ ಜತೆಗೆ ಪೈಪೋಟಿ ಬೇರೆ. ಎದುರಿಗೆ ಬಂದವರತ್ತ ನುಗ್ಗೇಕಾಯಿ ಹಿಡಿದು ಖರೀದಿಸಿ ಅಂತ ಕೋರುತ್ತಲೇ ಇದ್ದರು.

ಹೈಕೋರ್ಟ್ ಆದೇಶದಂತೆ ಬಿಬಿಎಂಪಿ ಶುಕ್ರವಾರದಿಂದ ಆರಂಭಿಸಿರುವ ಕಾರ್ಯಾಚರಣೆ ಅವರಲ್ಲಿ ಆತಂಕ ಮೂಡಿಸಿದ್ದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ‘ಹತ್ತು ವರ್ಷ ಇದೇ ಜಾಗದಲ್ಲಿ ಕುತ್ಕೊಂಡು ಯಾಪಾರ ಮಾಡೀನ್ರೀ. ಈಗ ನೋಡಿದ್ರ ಇವ್ರು ಹಿಂಗ ಖಾಲೀ ಮಾಡ್ಸಾಕ ನಿಂತಾರ. ನಾವು ಎಲ್ಲಿ ಹೋಗಬೇಕ್ರಿ?’ ಎನ್ನುವ ಅವರ ಮುಗ್ಧ ಪ್ರಶ್ನೆಯಲ್ಲಿ ಬದುಕಿನ ಅಭದ್ರತೆಯೇ ಎದ್ದು ಕಾಣಿಸುತ್ತಿತ್ತು.

ಬಿಬಿಎಂಪಿನವರು ನಿಮಗ ಗುರುತಿನ ಕಾರ್ಡ್, ಬೇರೆ ಜಾಗ ಕೊಟ್ಟರೂ ಯಾಕೆ ಹೋಗಲ್ಲಾ ಎಂದು ಕೆಣಕಿದರೆ, ‘ಅಯ್ಯೋ ಮೂರಂತಸ್ತಿನ ಈ ಬಿಲ್ಡಿಂಗ್‌ನ್ಯಾಗ ಯಾರ್ ಬಂದ್ ವ್ಯಾಪಾರ ಮಾಡ್ತಾರ‍್ರಿ. ಜನ ಅಲ್ಲಿಗೆ ಬರಬೇಕಲ್ಲ.. ತಿಂಡಿ, ಊಟಕ್ಕಂತ ಆಗಾಗ ನಾವು ಕೆಳಗ ಬಂದು ಹೋಗಬೇಕಲ್ರೀ’ ಅಂತ ನ್ಯಾಯದ ತಕ್ಕಡಿ ಹಿಡಿಯುತ್ತಾರೆ.

ನುಗ್ಗೇಕಾಯಿ ವ್ಯಾಪಾರ ಒಂದರಿಂದಲೇ ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗನ ಮದುವೆ ಖರ್ಚನ್ನೂ ನಿಭಾಯಿಸಿದ್ದಾರೆ ಶ್ಯಾಣಮ್ಮ. ಈಗ ಹೆಬ್ಬಾಳದಲ್ಲಿ ಬಾಡಿಗೆ ಗುಡಿಸಲೇ ಅವರ ವಾಸಸ್ಥಾನ. ‘ತಿಂಗಳಿಗೆ ₹ 300 ಗುಡಿಸಲು ಬಾಡಿಗೆ, ₹ 200 ನೀರಿನ ಬಾಡಿಗೆ ಕೊಡಬೇಕ್ರಿ. ದಿನಕ್ಕೆ ₹ 300 ರಿಂದ ₹ 500 ರತನಕ ಯಾಪಾರ ಆಗತೈತ್ರಿ. ಅದರಾಗ ಬಸ್‌ಚಾರ್ಚ್‌ಗೆ ₹ 40, ತಿಂಡಿ–ಊಟಕ್ಕ ₹ 90 ಖರ್ಚ್ ಐತ್ರಿ. ಇನ್ನು ಒಮ್ಮಿ ಬಾತ್‌ರೂಂಗೆ ಹೋದ್ರ ₹5 ರೊಕ್ಕ ಕೊಡಬೇಕ್ರಿ. ದಿನಕ್ಕ ಮೂರ್ನಾಲ್ಕು ಸಲ ಬಾತ್ ರೂಂಗೆ ಹೋದ್ರ ರೊಕ್ಕ ಎಷ್ಟ್ ಖರ್ಚ್ ಆಗತೈತ್ರಿ? ಇನ್ನು ಈ ಖರ್ಚೆಲ್ಲಾ ಕಳೆದು ನನ್ನ ಕೈಯ್ಯಾಗ ಎಷ್ಟು ರೊಕ್ಕ ಉಳಿತೈತಿ ಅಂತ ನೀವ್ ಲೆಕ್ಕಾ ಮಾಡಿಕೊಳ್ರಿ..’ ಎಂದು ಬಿಡದೇ ಮುಖ ನೋಡುತ್ತ ನಿಂತ ಶ್ಯಾಣಮ್ಮಳ ಬದುಕಿನ ಲೆಕ್ಕ ದಂಗು ಬಡಿಸುತ್ತದೆ.

‘ಗಂಡ ಸತ್ತು 15 ವರ್ಷ ಆತು. ಆಗ ಕೊನೀ ಮಗಳು 12 ದಿನದ ಕೂಸು. ಊರಾಗ ಹೊಲ–ಮನಿ ಇಲ್ಲ. ಕೂಲಿನೂ ಸಿಗಲ್ಲ. ಮಗ ಕುಡುಕ. ಸೊಸಿ ಗಂಡು ಮಕ್ಕಳ ಬೇಕೂಂತ ಆರು ಹೆಣ್ಣುಮಕ್ಕಳನ ಹಡದಾಳ.. ಅವರೆಲ್ಲರಿಗೂ ನನ್ನ ಗುಡಿಸಲೇ ಗತಿ. ರಟ್ಟೆಯೊಳಗ ಶಕ್ತಿ ಇರೋ ತನ ದುಡೀತಿನಿ. ಆಮೇಲೆ ಪರಮಾತ್ಮನ ಇಚ್ಛೆ...’ ಎನ್ನುತ್ತಾ ಆಕಾಶದತ್ತ ಮುಖ ಮಾಡಿ ನಿಂತರು ಶ್ಯಾಣಮ್ಮ. ಬಿಸಿಲಿಲ್ಲಿ ಮೂಡಿದ ಅವಳುದ್ದದ ನೆರಳು ದಾರುಣ ವಾಸ್ತವದ ಚಿತ್ರಣ ಕಟ್ಟಿಕೊಡುತ್ತಿತ್ತು.

ಶ್ಯಾಣಮ್ಮ, ಚಿತ್ರ: ಮಂಜುಶ್ರೀ
ಶ್ಯಾಣಮ್ಮ, ಚಿತ್ರ: ಮಂಜುಶ್ರೀ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT