ಮುದ್ದೇಬಿಹಾಳ ಟು ಪ್ಯಾರಿಸ್‌...ದಲಿತ ಯುವತಿಯ ಭೀಮಹೆಜ್ಜೆ!

7

ಮುದ್ದೇಬಿಹಾಳ ಟು ಪ್ಯಾರಿಸ್‌...ದಲಿತ ಯುವತಿಯ ಭೀಮಹೆಜ್ಜೆ!

Published:
Updated:
Deccan Herald

ಒಡಲ ಉರಿಯೇ ಹಾಗೆ. ಬದುಕನ್ನೇ ಸುಟ್ಟು ಬೂದಿ ಮಾಡುವಂತಹ ಗುಣ ಅದರದು. ನಾವೊಂದು ವೇಳೆ ಆ ಉರಿಯನ್ನು ಪಳಗಿಸಿ ಕೈದೀವಿಗೆಯನ್ನಾಗಿ ಮಾಡಿಕೊಂಡುಬಿಟ್ಟರೆ? ಆಗ ಬದುಕಿನ ಗತಿ ಚಿತ್ರಣವೇ ಬದಲಾಗಿ, ಅದೇ ಉರಿ, ಸುತ್ತಲಿನ ಸಮಾಜವೆಲ್ಲ ನಮ್ಮನ್ನು ನಿಬ್ಬೆರಗಾಗಿ ನೋಡುವಷ್ಟು ಎತ್ತರಕ್ಕೆ ಒಯ್ದು ಕೂರಿಸುತ್ತದೆ. ಸಾಕ್ಷಿ ಬೇಕೆ? ರಾಜ್ಯದ ಮುದ್ದೇಬಿಹಾಳದಂತಹ ಪುಟ್ಟ ಊರಿನಿಂದ ಪ್ಯಾರಿಸ್‌ಗೆ ಹಾರಿ, ಲಕ್ಷುರಿ ಬ್ರ್ಯಾಂಡ್‌ಗಳ ಜಗತ್ತಿನಲ್ಲಿ  ಹೆಜ್ಜೆ ಗುರುತು ಮೂಡಿಸಿರುವ ದಲಿತ ಹುಡುಗಿ ಮೇಘಾ ಮಾಲಗತ್ತಿ.

ಈ ಕನ್ನಡದ ಹುಡುಗಿಯ ಯಶೋಗಾಥೆಯನ್ನು ಹಾರ್ವರ್ಡ್‌ ವಿಶ್ವವಿದ್ಯಾಲಯ ಪುಸ್ತಕದ ರೂಪದಲ್ಲಿ ಹೊರತಂದಿದ್ದು, ಅಲ್ಲಿನ ಮ್ಯಾನೇಜ್‌ಮೆಂಟ್‌ ವಿದ್ಯಾರ್ಥಿಗಳ ಪಾಲಿಗೆ ಅದೀಗ ಸ್ಫೂರ್ತಿಯ ಚಿಲುಮೆಯಾಗಿದೆ. ಅಂದಹಾಗೆ, ಅಲ್ಲಿನ ಸ್ಟಡಿ ಸರ್ಕಲ್‌ಗಳಲ್ಲಿ ‘ಮೇಘಾ ಕಥೆ’ ಚರ್ಚೆಗಳ ದೊಡ್ಡ ‘ಮಳೆ’ಯನ್ನೇ ಸುರಿಸಿದೆ!

ಲಕ್ಷುರಿ ಬ್ರ್ಯಾಂಡ್‌ಗಳಲ್ಲಿ ಪ್ರಪಂಚದ ತುಂಬೆಲ್ಲ ಖ್ಯಾತಿ ಗಳಿಸಿದ ಎಸ್‌.ಟಿ. ಡ್ಯುಪೊಂಟ್‌ ಕಂಪನಿ ಬಗೆಗೆ ಗೊತ್ತೆ? ಫ್ರಾನ್ಸ್‌ನ ಒಂದೂವರೆ ಶತಮಾನಗಳಷ್ಟು ಹಳೆಯದಾದ ಈ ಕಂಪನಿಯು ತಯಾರಿಸುವ ಲೈಟರ್‌ನ ಕನಿಷ್ಠ ಬೆಲೆಯೇ ₹ 20 ಸಾವಿರ. ಅದರ ಮತ್ತೊಂದು ಉತ್ಪನ್ನವಾದ ಚರ್ಮದ ಬ್ಯಾಗ್‌ನ ಕಿಟ್‌ಗೆ ₹ 44 ಕೋಟಿ ಮೌಲ್ಯ! ಡ್ಯುಪೊಂಟ್‌ ಬ್ರ್ಯಾಂಡ್‌ ಎಂದರೆ ಜಗತ್ತಿನ ಐಷಾರಾಮಿ ಸರಕುಗಳ ಪ್ರಿಯರೆಲ್ಲ ಕಣ್ಣರಳಿಸುತ್ತಾರೆ. ಇಂತಹ ಪ್ರತಿಷ್ಠಿತ ಸಂಸ್ಥೆಯ ಅಂತರರಾಷ್ಟ್ರೀಯ ನಿರ್ದೇಶಕಿಯಾದ ಹೆಮ್ಮೆ ಮೇಘಾ ಅವರದು.

ದಲಿತ ಸಮುದಾಯದಿಂದ ಬಂದರೂ ಅಪ್ಪ ಬಸವರಾಜ ಮಾಲಗತ್ತಿ ಒಬ್ಬ ಪೊಲೀಸ್‌ ಅಧಿಕಾರಿ ಆಗಿದ್ದರಿಂದ ಸಾಮಾಜಿಕ ಸಮಸ್ಯೆಗಳೇನೂ ಈ ಹುಡುಗಿಗೆ ಅಷ್ಟಾಗಿ ಬಾಧಿಸಲಿಲ್ಲ. ಓದಿದ್ದು ಗದುಗಿನಂತಹ ಪುಟ್ಟ ನಗರದಲ್ಲಾದರೂ ಶೈಕ್ಷಣಿಕವಾಗಿ ಹಿಂದೆ ಬೀಳಲಿಲ್ಲ. ಆದರೆ, ಇಷ್ಟಪಟ್ಟು ಮಾಡಿಕೊಂಡ ಮದುವೆ ಮುರಿದುಬಿದ್ದಾಗ ಮಾತ್ರ ಅದರ ಬಿಸಿ ಚೆನ್ನಾಗಿಯೇ ತಟ್ಟಿತು. ಬಿ.ಇ. ಪದವೀಧರೆಯಾಗಿದ್ದ ಈ ಪ್ರತಿಭಾನ್ವಿತೆಗೆ, ‘ಡೈವೋರ್ಸಿ’ ಎಂಬ ಒಂದೇ ಕಾರಣಕ್ಕೆ, ಕೆಲವು ಕಂಪನಿಗಳು ಕೆಲಸ ಕೊಡಲು ಹಿಂದೆ– ಮುಂದೆ ನೋಡಿದವು. ಸಂಬಂಧಿಗಳು ಸಹ ಈ ಹುಡುಗಿಯನ್ನು ವಿಚಿತ್ರವಾಗಿ ನೋಡಲು ಶುರು ಮಾಡಿದರು. ಎಲ್ಲಿಗೆ ಹೋದರೂ ಒಂದು ರೀತಿಯಲ್ಲಿ ಮುಜುಗರದ ಅನುಭವ ಕಾಡುತ್ತಿತ್ತು.

‘ಡೈವೋರ್ಸ್‌ ಮಾಡಿಕೊಂಡ ಮಹಿಳೆಯ ಸಂಕಷ್ಟಗಳನ್ನೆಲ್ಲ ನಾನೂ ಅನುಭವಿಸಿದೆ. ಆದರೆ, ಅದೇ ನಿರಾಸೆಯಲ್ಲಿ ಬಿದ್ದು ಒದ್ದಾಡದೇ ಪುಟಿದೆದ್ದು ನಿಲ್ಲಬೇಕು ಎಂಬ ದೃಢ ನಿರ್ಧಾರದಿಂದ ‘ಹೌದು, ನಾನು ಡೈವೋರ್ಸಿ; ಏನೀಗ? ಎಂಬ ಪ್ರಶ್ನೆ ಹಾಕಿಕೊಂಡೆ’ ಎಂದು ಮೇಘಾ, ಎಂಟು ವರ್ಷಗಳ ಹಿಂದಿನ ಘಟನೆಗಳನ್ನು ನೆನಪು ಮಾಡಿಕೊಳ್ಳುತ್ತಾರೆ.

‘ಡೈವೋರ್ಸ್‌ ಪಡೆದ ಮೇಲೆ ಮುಂದೇನು ಎಂಬ ಪ್ರಶ್ನೆಯಲ್ಲಿ ನಿದ್ದೆಗಳಿಲ್ಲದ ರಾತ್ರಿಗಳನ್ನು ಕಳೆದಿದ್ದು ನಿಜ. ನಾನು ಚಿಕ್ಕವಳಿದ್ದಾಗ ಹೃದ್ರೋಗತಜ್ಞೆ ಆಗಬೇಕು, ಇಲ್ಲದಿದ್ದರೆ ಫ್ಯಾಷನ್‌ ಕ್ಷೇತ್ರದಲ್ಲಿ ವಿನ್ಯಾಸಕಿಯಾಗಬೇಕು ಎಂಬ ಕನಸು ಕಂಡಿದ್ದೆ. ಎಂಜಿನಿಯರಿಂಗ್‌ ಶಿಕ್ಷಣ ಪೂರೈಸಿದ್ದರಿಂದ ಮತ್ತೆ ಎಂ.ಬಿ.ಬಿ.ಎಸ್‌ ಓದುವುದು ಸರಿ ಕಾಣಲಿಲ್ಲ. ಹೀಗಾಗಿ ಫ್ಯಾಷನ್‌ ಜಗತ್ತಿನಲ್ಲೇ ಭವಿಷ್ಯವನ್ನು ಹುಡುಕಿಕೊಳ್ಳಬೇಕು ಎಂಬ ನಿರ್ಧಾರ ಮಾಡಿದೆ’ ಎಂದು ಹೇಳುತ್ತಾರೆ.

ಲಕ್ಷುರಿ ಬ್ರ್ಯಾಂಡ್‌ಗಳ ಮ್ಯಾನೇಜ್‌ಮೆಂಟ್‌ ಕೌಶಲವನ್ನು ಹೇಳಿಕೊಡಲು ಇಡೀ ಜಗತ್ತಿನಲ್ಲಿ ಇರುವುದು ಒಂದೇ ಒಂದು ಸಂಸ್ಥೆ. ಅದು ಪ್ಯಾರಿಸ್‌ನ ಎಸೆಕ್‌ ಬ್ಯುಜಿನೆಸ್‌ ಸ್ಕೂಲ್‌. ಪ್ರತಿವರ್ಷ 20 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ. ಯುರೋಪ್‌, ಅಮೆರಿಕ ಮತ್ತು ಏಷ್ಯಾದ ಎಲ್ಲ ದೇಶಗಳ ಜಾಣ– ಜಾಣೆಯರೆಲ್ಲ ಅಲ್ಲಿ ಪ್ರವೇಶ ಪಡೆಯಲು ಮುಗಿಬೀಳುತ್ತಾರೆ. ಮೇಘಾ ಮೊದಲ ಯತ್ನದಲ್ಲೇ ಅಲ್ಲಿನ ಎಂ.ಬಿ.ಎ ಸೀಟು ಗಿಟ್ಟಿಸಿದರು. ಎಂಜಿನಿಯರಿಂಗ್‌ ಶಿಕ್ಷಣ ಬೆನ್ನಿಗಿದ್ದಿದ್ದರಿಂದ ಬ್ರ್ಯಾಂಡ್‌ಗಳಿಗೆ ಮಾರುಕಟ್ಟೆ ಮೌಲ್ಯ ತಂದುಕೊಡುವ ಕೌಶಲ ಬಹುಬೇಗ ಕರಗತವಾಯಿತು.

ಎಸೆಕ್‌ ಬ್ಯುಜಿನೆಸ್‌ ಸ್ಕೂಲ್‌ನಲ್ಲಿ ಪ್ರವೇಶ ಪಡೆಯಲು ಸುಮಾರು ₹ 65 ಲಕ್ಷ ಭರಿಸಬೇಕಿತ್ತು. ಅಪ್ಪ ಕೊಟ್ಟ ₹ 25 ಲಕ್ಷದ ಜತೆಗೆ ಅಪೊಲೊ ಹೆಲ್ತ್‌ಹೈವೇ, ಸಿಸ್ಕೊ ಸಿಸ್ಟಮ್‌ ಸಂಸ್ಥೆಗಳಲ್ಲಿ ಕೆಲಸ ಮಾಡಿ ಒಂದಿಷ್ಟು ದುಡ್ಡಿನ ವ್ಯವಸ್ಥೆ ಮಾಡಿಕೊಂಡ ಆಕೆ, ಮಿಕ್ಕ ಹಣಕ್ಕೆ ಸಾಲ ಮಾಡಿದರು.

‘ಕೋರ್ಸ್‌ನ ಪ್ರವೇಶ ಶುಲ್ಕ ಬಲು ದುಬಾರಿಯಾದ ಕಾರಣ ನನ್ನ ಉಳಿದ ಅಗತ್ಯಗಳಿಗೆ ಅಪ್ಪನಿಂದ ಕಾಸು ಕೇಳಲಿಲ್ಲ. ಅಲ್ಲಿ ಸೆಕೆಂಡ್‌ ಹ್ಯಾಂಡ್‌ ಶೂಗಳನ್ನು ಖರೀದಿಸಿದೆ. ಪಾಸ್ತಾ, ಬೆಣ್ಣೆ, ಉಪ್ಪು ಇಷ್ಟೇ ನಿತ್ಯದ ಊಟವಾಯ್ತು. ಪಾರ್ಟ್‌ ಟೈಮ್‌ ಕೆಲಸ ಮಾಡಿದೆ. ಇದೊಂದು ವರ್ಷ ಕಷ್ಟಪಟ್ಟರೆ ಉಜ್ವಲ ಭವಿಷ್ಯವಿದೆ ಎಂದು ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ...’ ನೆನಪುಗಳನ್ನು ಹೆಕ್ಕಿ ತೆಗೆಯುತ್ತಾರೆ ಈ ಸಾಧಕಿ.

ಎಸೆಕ್‌ ಸ್ಕೂಲ್‌ನಿಂದ ಎಂ.ಬಿ.ಎ ಪದವಿ ಸಿಕ್ಕಾಗ ಪ್ಯಾರಿಸ್‌, ಲಂಡನ್‌, ದುಬೈ ಮತ್ತು ಹಾಂಗ್‌ಕಾಂಗ್‌ – ಹೀಗೆ ನಾಲ್ಕು ಕಡೆಗಳಿಂದ ಒಟ್ಟೊಟ್ಟಿಗೆ ಅವಕಾಶಗಳು ಹುಡುಕಿಕೊಂಡು ಬಂದವು. ಕೊನೆಗೆ ಮೇಘಾ ಆಯ್ದುಕೊಂಡಿದ್ದು ಜಗತ್ತಿನ ಫ್ಯಾಷನ್‌ ಲೋಕದ ಕಾಶಿ ಎನಿಸಿದ ಪ್ಯಾರಿಸ್‌ ನಗರವನ್ನೇ.

ಎಸ್‌.ಟಿ. ಡ್ಯುಪೊಂಟ್‌ ಕಂಪನಿಯಲ್ಲಿ ಏರಿಯಾ ಮ್ಯಾನೇಜರ್‌ (ಮಾರ್ಕೆಟಿಂಗ್‌– ಸೌತ್‌ ಏಷ್ಯಾ) ಆಗಿ ಸೇರಿಕೊಂಡ ಈ ಹುಡುಗಿ, ಬ್ರ್ಯಾಂಡ್‌ಗಳನ್ನು ಬೆಳೆಸಿದ ಪರಿಯನ್ನು ನೋಡಿ ಸ್ವತಃ ಆಡಳಿತ ಮಂಡಳಿಗೆ ಸೋಜಿಗ. ಕಾರ್ಯಕಾರಿ ಸಮಿತಿಯಲ್ಲಿ ಅಂತರರಾಷ್ಟ್ರೀಯ ನಿರ್ದೇಶಕಿಯನ್ನಾಗಿ (ಮಾರ್ಕೆಟಿಂಗ್‌ ಅಂಡ್‌ ಪ್ರೊಡಕ್ಟ್ಸ್‌) ಬಡ್ತಿ ನೀಡುವ ಮೂಲಕ ಆ ಶ್ರಮಕ್ಕೆ ತಕ್ಕ ಬಕ್ಷೀಸನ್ನೂ ನೀಡಿತು. ಈ ಹುದ್ದೆಗೇರಿದ ಅತ್ಯಂತ ಚಿಕ್ಕವಯಸ್ಸಿನ ಮಹಿಳೆ ಎಂಬ ಕಿರೀಟವನ್ನು ತೊಟ್ಟ ಆಕೆ, ಅಂತಹ ಸ್ಥಾನ ಗಳಿಸಿದ ಮೊದಲ ಭಾರತೀಯ ಪ್ರಜೆ ಎಂಬ ತುರಾಯಿಯನ್ನೂ ಅದರಲ್ಲಿ ಸಿಕ್ಕಿಸಿಕೊಂಡರು. ಈಗ ಹೊಸ ಉತ್ಪನ್ನಗಳನ್ನು ಸೃಜಿಸುವ, ಅವುಗಳಿಗೆ ಮಾರುಕಟ್ಟೆ ಒದಗಿಸುವ ಸಂಪೂರ್ಣ ಹೊಣೆ ಆಕೆಯ ಮೇಲಿದೆ.


ತಂದೆ ಬಸವರಾಜ ಮಾಲಗತ್ತಿ ಅವರೊಡನೆ ಮೇಘಾ ಮಾಲಗತ್ತಿ

‘ನನ್ನ ಈ ಯಶಸ್ಸಿನ ಯಾತ್ರೆಯಲ್ಲಿ ನಮ್ಮ ಕಂಪನಿಯ ಸಿ.ಇ.ಒ ಅಲೆನ್‌ ಕ್ರೇವಿಟ್‌ ಮತ್ತು ಆಡಳಿತ ಮಂಡಳಿ ಮುಖ್ಯಸ್ಥೆ ಶರೂನ್‌ ಫ್ಲಡ್‌ ಅವರ ಪಾತ್ರ ದೊಡ್ಡದು’ ಎಂದು ವಿನೀತರಾಗಿ ನೆನೆಯುತ್ತಾರೆ ಆಕೆ. ‘ಪ್ಯಾರಿಸ್‌ನಲ್ಲಿ ಎಂಟು ವರ್ಷಗಳ ಹಿಂದೆ ಎಂ.ಬಿ.ಎ ಕೋರ್ಸ್‌ಗೆ ಸೇರಿದಾಗ ನನಗೆ ಅಲ್ಲಿನ ಭಾಷೆಯ ಗಂಧ– ಗಾಳಿ ಗೊತ್ತಿರಲಿಲ್ಲ. ಆದರೆ ಈಗ ಫ್ರೆಂಚ್‌ನಲ್ಲಿ ಸೊಗಸಾಗಿ ಮಾತನಾಡುತ್ತೇನೆ’ ಎಂದು ದೊಡ್ಡ ನಗುವಿನೊಂದಿಗೆ ಹೇಳುತ್ತಾರೆ.

‘ಬ್ರ್ಯಾಂಡ್‌ ಬಿಲ್ಡಿಂಗ್ ಎನ್ನುವುದು ಕಥೆ ಹೇಳುವ (ಸ್ಟೋರಿ ಟೆಲ್ಲಿಂಗ್‌) ಒಂದು ಸುಂದರ ಪ್ರಕ್ರಿಯೆ. ಎಷ್ಟು ಚೆನ್ನಾಗಿ ಕಥೆ ಹೇಳಿ, ನಿಮ್ಮ ಬ್ರ್ಯಾಂಡ್‌ಗೆ ಎಂತಹ ಮಾರುಕಟ್ಟೆ– ಮೌಲ್ಯ ತಂದುಕೊಡುತ್ತೀರಿ ಎನ್ನುವುದೇ ಇಲ್ಲಿ ಮುಖ್ಯ’ ಎನ್ನುತ್ತಾರೆ ಮೇಘಾ. ‘ಲಕ್ಷುರಿ ಬ್ರ್ಯಾಂಡ್‌ಗಳಿಗೆ ಅಷ್ಟೊಂದು ದುಬಾರಿ ಬೆಲೆ ಏಕೆ’ ಎಂದು ಪ್ರಶ್ನಿಸಿದರೆ, ‘ಬ್ರ್ಯಾಂಡೆಡ್‌ ಕಂಪನಿಗಳು ಸರಕುಗಳನ್ನು ಮಾತ್ರವಲ್ಲದೆ ಕನಸಗಳನ್ನೂ ಮಾರುತ್ತವಲ್ಲ, ಅದಕ್ಕೆ’ ಎಂದು ಕಣ್ಣು ಮಿಟುಕಿಸುತ್ತಾರೆ.

ವಾರ್ಷಿಕ ಕೋಟ್ಯಂತರ ರೂಪಾಯಿಗಳ ವೇತನದ ಪ್ಯಾಕೇಜ್‌ ಹೊಂದಿರುವ ಮೇಘಾ ಅವರಿಗೆ, ವಕೀಲನಾಗಿರುವ ತಮ್ಮ ಮಾಜಿ ಪತಿಗಿಂತಲೂ ಈಗ ತಾವು ಹೆಚ್ಚಿನ ಸಂಪಾದನೆ ಮಾಡುತ್ತಿರುವ ಹೆಮ್ಮೆಯಿದೆ. ಪ್ಯಾರಿಸ್‌ನಲ್ಲಿ ಅಪಾರ್ಟ್‌ಮೆಂಟ್‌ ಖರೀದಿಸಿರುವ ಅವರು, ಅಲ್ಲಿಯೇ ಹೊಸ ಬಾಳ ಸಂಗಾತಿಯನ್ನೂ ಆಯ್ದುಕೊಂಡಿದ್ದಾರೆ. ಸಾಹಿತ್ಯದ ವಿದ್ಯಾರ್ಥಿನಿ ಆಗಿರುವ ಆಕೆಗೆ ವಿನ್ಸೆಂಟ್‌ ಚರ್ಚಿಲ್‌ ಅವರ ‘ನರಕದ ಮೂಲಕ ಹೊರಟಿದ್ದೀರಾ? ಹೋಗಿ, ಆದರೆ, ಹೆಜ್ಜೆ ಹಾಕುವುದನ್ನು ಮಾತ್ರ ನಿಲ್ಲಿಸಬೇಡಿ’ ಎಂಬ ಮಾತು ತುಂಬಾ ಉತ್ತೇಜನ ಕೊಟ್ಟಿದೆಯಂತೆ.

‘ಭಾರತೀಯ ಮಹಿಳೆಯರು ತುಂಬಾ ಬುದ್ಧಿವಂತರು, ಅಷ್ಟೇ ಕಷ್ಟಜೀವಿಗಳು. ಅವರಿಗೆ ಬೇಕಿರುವುದು ಪ್ರೋತ್ಸಾಹ ಮತ್ತು ತರಬೇತಿ ಅಷ್ಟೆ. ಇವೆರಡೂ ಸಿಕ್ಕರೆ ಜಗತ್ತಿನ ಎಂತಹ ಸವಾಲುಗಳನ್ನೂ ಅವರು ಮೆಟ್ಟಿ ನಿಲ್ಲಬಲ್ಲರು. ಆದರೆ, ಪತಿ ಎಂದರೆ ದೇವರು. ಆತ ಹೊಡೆದರೂ ಸಹಿಸಿಕೊಳ್ಳಬೇಕಮ್ಮ ಎಂಬಂತಹ ಬುದ್ಧಿಮಾತು ಹೇಳುವ ಕಾಲ ಇನ್ನೂ ಬದಲಾಗಿಲ್ಲ ನೋಡಿ’ ಎಂದು ಮೇಘಾ ಹೇಳುತ್ತಾರೆ.

‘ಭಾರತೀಯ ಸಮಾಜದಲ್ಲಿರುವುದು ಕಟ್ಟುಪಾಡುಗಳ ಸಂಕೋಲೆ. ಅದೇ ಅಮೆರಿಕದಲ್ಲಿ ಲಂಗು ಲಗಾಮಿಲ್ಲದ ವ್ಯಕ್ತಿಗತ ಬದುಕು. ಎರಡೂ ವಿರುದ್ಧ ದಿಕ್ಕುಗಳ ಕೊನೆಯ ಬಿಂದುಗಳಲ್ಲಿರುವ ವಿಪರೀತಗಳು. ಅದೇ ಯುರೋಪ್‌ನಲ್ಲಿ ಹಾಗಿಲ್ಲ. ಅಲ್ಲಿನ ಸಾಮಾಜಿಕ ವಿನ್ಯಾಸ ತುಂಬಾ ಸಮತೋಲಿತ. ಸಂಬಂಧಗಳಿಗೆ ಅಲ್ಲಿ ಹೆಚ್ಚಿನ ಬೆಲೆ. ಮಕ್ಕಳು ವೈನ್‌ ಕುಡಿಯಲು ಮನಸ್ಸು ಮಾಡಿದರೆ ಪಾಲಕರು ಬೇಡ ಎನ್ನುವುದಿಲ್ಲ. ಅದರ ಸಾಧಕ–ಬಾಧಕಗಳ ಕುರಿತು ತಿಳಿಹೇಳುತ್ತಾರೆ. ಹಿತ– ಮಿತವಾಗಿ ಕುಡಿಯುವಂತೆ ಸೂಚಿಸುತ್ತಾರೆ. ಸ್ವಾತಂತ್ರ್ಯ ನೀಡಿದರೂ ದಾರಿ ತಪ್ಪದಂತೆ ಬೆಳೆಸುತ್ತಾರೆ’ ಎಂದು ಜಗತ್ತಿನ ವಿವಿಧ ನಾಗರಿಕತೆಗಳ ಭಿನ್ನತೆಗಳನ್ನು ಅವರು ಸ್ಪಷ್ಟವಾಗಿ ಗುರುತಿಸುತ್ತಾರೆ.

‘ಬದುಕಿನಲ್ಲಿ ಕಳೆದುಕೊಂಡಿದ್ದನ್ನು ಮತ್ತೆ ಗಳಿಸಿದ್ದೇನೆ. ಈ ಯಾತ್ರೆಯನ್ನು ಒಮ್ಮೆ ಹಿಂದಿರುಗಿ ಅವಲೋಕಿಸಿದಾಗ ಸಂತ್ರಸ್ತರಿಗೆ ದುಡ್ಡಿಗಿಂತಲೂ ಮಾನಸಿಕ ಮತ್ತು ನೈತಿಕ ಬೆಂಬಲದ ಅಗತ್ಯ ಹೆಚ್ಚಾಗಿರುತ್ತದೆ ಎಂದೆನಿಸುತ್ತದೆ. ಒಮ್ಮೊಮ್ಮೆ ನಾನೂ ಈ ಬೆಂಬಲಗಳಿಂದ ವಂಚಿತಳಾಗಿದ್ದಿದೆ. ಹೊಸ ಕನಸು ಹೊತ್ತು ನಿಂತಾಗ ನನ್ನಮ್ಮ ಕೂಡ ಸಾಂಪ್ರದಾಯಿಕವಾಗಿ ಯೋಚಿಸಿದ್ದಿದೆ. ಇದೇನು ಅಮ್ಮನ ಮೇಲೆ ನನ್ನ ದೂರಲ್ಲ. ನನ್ನಂತಹ ಸನ್ನಿವೇಶ ಎದುರಿಸುವ ಯುವತಿಯರ ಕುರಿತು ಉಳಿದ ಅಮ್ಮಂದಿರು ಯೋಚಿಸುವ ದಿಕ್ಕು ಇನ್ನಾದರೂ ಬದಲಾಗಬೇಕು ಎಂಬ ಕಳಕಳಿ ಅಷ್ಟೆ’ ಎಂದು ಖಡಕ್‌ ಮಾತುಗಳಲ್ಲಿ ಹೇಳುತ್ತಾರೆ.

‘ಬೆಂಕಿ ಬೆಳದಿಂಗಳು’ ಮತ್ತು ‘ಭೀಮ ನಡೆಯಬೇಕು’ – ಇವು ಮೇಘಾ ಅವರ ಚಿಕ್ಕಪ್ಪ ಅರವಿಂದ ಮಾಲಗತ್ತಿಯವರ ಎರಡು ಮಹತ್ವದ ಕೃತಿಗಳು. ಈ ಯುವತಿಯ ಪಾಲಿಗೆ ಮದುವೆಯೆಂಬ ‘ಬೆಳದಿಂಗಳು’ ‘ಬೆಂಕಿ’ಯಾಗಿ ಪರಿಣಮಿಸಿದಾಗ, ಅದರಿಂದ ಹೊರಬಂದು ಆಕೆ ಹಾಕಿದ್ದು ಭೀಮ ಹೆಜ್ಜೆಯನ್ನೇ. ‘ಆಗಿದ್ದಕ್ಕೆ ಅತ್ತು ಏನು ಪ್ರಯೋಜನ? ಭವಿಷ್ಯದ ಬಗೆಗೆ ಚಿಂತಿಸಿ; ಗುರಿಯನ್ನು ಸ್ಪಷ್ಟಪಡಿಸಿಕೊಂಡು, ಅದರ ಈಡೇರಿಕೆಗಾಗಿ ಶೇ 100ರಷ್ಟು ಪರಿಶ್ರಮ ಹಾಕಿ’ ಎಂದು ತಮ್ಮ ಓರಗೆಯ ಯುವತಿಯರಿಗೆ ಕಿವಿಮಾತು ಹೇಳುತ್ತಾರೆ.

ರಜೆ ಕಳೆಯಲು ಭಾರತಕ್ಕೆ ಬಂದಿರುವ ಮೇಘಾ, ಸುದೀರ್ಘ ಹೊತ್ತು ಹರಟೆ ಹೊಡೆದು ಹೊರಡುವ ಮುನ್ನ ‘ನೋಡ್ತಾ ಇರಿ, ಮುಂದೆ ಲಕ್ಷುರಿ ಬ್ರ್ಯಾಂಡ್‌ ಕಂಪನಿಯ ಸಿ.ಇ.ಒ ಆಗ್ತೀನಿ’ ಎಂದು ಹೇಳುವಾಗ ಅವರ ಮೊಗದಲ್ಲಿ ಆತ್ಮ ವಿಶ್ವಾಸ ಪುಟಿದೇಳುತ್ತಿತ್ತು.

ಬರಹ ಇಷ್ಟವಾಯಿತೆ?

 • 72

  Happy
 • 0

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !